ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi News: ದೆಹಲಿಯಲ್ಲೂ ಘೋಷಣೆಯಾಯ್ತು ಗೃಹಲಕ್ಷ್ಮಿ ಗ್ಯಾರಂಟಿ, ಅಲ್ಲಿನ ಮಹಿಳೆಯರಿಗೆ ಮಾಸಿಕ ಎಷ್ಟು ಸಿಗಲಿದೆ

Delhi News: ದೆಹಲಿಯಲ್ಲೂ ಘೋಷಣೆಯಾಯ್ತು ಗೃಹಲಕ್ಷ್ಮಿ ಗ್ಯಾರಂಟಿ, ಅಲ್ಲಿನ ಮಹಿಳೆಯರಿಗೆ ಮಾಸಿಕ ಎಷ್ಟು ಸಿಗಲಿದೆ

ದೆಹಲಿಯ ಅರವಿಂದ ಕೇಜ್ರೀವಾಲ್‌ ಸರ್ಕಾರವೂ ಮಹಿಳೆಯರಿಗೆ ಮಾಸಿಕ ಗೌರವ ಧನ ನೀಡುವ ಯೋಜನೆಯನ್ನು ತನ್ನ ಬಜೆಟ್‌ನಲ್ಲಿ ಪ್ರಕಟಿಸಿದೆ.

ದೆಹಲಿ ಸಚಿವೆ ಅತಿಷಿ ಅವರು ಬಜೆಟ್‌ ಮಂಡಿಸಲು ಸಿಎಂ ಅರವಿಂದ ಕೇಜ್ರಿವಾಲ್‌ ಅವರೊಂದಿಗೆ ಬಂದರು.
ದೆಹಲಿ ಸಚಿವೆ ಅತಿಷಿ ಅವರು ಬಜೆಟ್‌ ಮಂಡಿಸಲು ಸಿಎಂ ಅರವಿಂದ ಕೇಜ್ರಿವಾಲ್‌ ಅವರೊಂದಿಗೆ ಬಂದರು.

ದೆಹಲಿ: ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ನೀಡುವ ಗ್ಯಾರಂಟಿ ಜಾರಿಯಾಗಿದೆ. ಈಗ ದೆಹಲಿ ಸರ್ಕಾರದ ಸರದಿ. ಆಮ್‌ಆದ್ಮಿ ನೇತೃತ್ವದ ಅರವಿಂದ ಕೇಜ್ರೀವಾಲ್‌ ಅವರ ಸರ್ಕಾರವು ದೆಹಲಿಯ ಮಹಿಳೆಯರಿಗೆ ಮಾಸಿಕ ತಲಾ 1ಸಾವಿರ ರೂ. ನೀಡುವ ಯೋಜನೆ ಘೋಷಿಸಿದೆ. ದೆಹಲಿ ವಿಧಾನಸಭೆಯಲ್ಲಿ ಸೋಮವಾರ ಬಜೆಟ್‌ ಮಂಡಿಸಿದ ಹಣಕಾಸು ಸಚಿವೆ ಅತಿಷಿ ಮಾರ್ಲೇನಾ ಸಿಂಗ್‌ ಅವರು ಮುಖ್ಯಮಂತ್ರಿ ಮಹಿಳಾ ಸಮ್ಮಾನ್‌ ಯೋಜನೆಯನ್ನು ಪ್ರಕಟಿಸಿದರು.

ಕೇಜ್ರಿವಾಲ್‌ ಅವರ ಸರ್ಕಾರವೂ ದೆಹಲಿಯಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣು ಮಕ್ಕಳಿಗೂ 1 ಸಾವಿರ ರೂ. ಮಾಸಿಕ ಸಹಾಯಧನ ನೀಡಲಿದೆ, ಇದರಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಅತಿಷಿ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಮುಖ್ಯಮಂತ್ರಿ ಮಹಿಳಾ ಸಮ್ಮಾನ್‌ ಯೋಜನೆಯಡಿ ಸಹಾಯಧನ ವಿತರಣೆಗೆಂದೇ ಈ ವರ್ಷದ ಬಜೆಟ್‌ನಲ್ಲಿ 2000 ಕೋಟಿ ರೂ.ಗಳನ್ನು ತೆಗೆದಿಡಲಾಗಿದೆ. ಇದಲ್ಲದೇ ಮಹಿಳೆಯರಿಗೆ ಇತರೆ ಯೋಜನೆಗಳನ್ನೂ ಪ್ರಕಟಿಸಲಾಗಿದೆ.

ದೆಹಲಿ ಮತದಾರರಾದವರು ಈ ಸೌಲಭ್ಯ ಪಡೆಯಲು ಅರ್ಹರು. ಅವರು ಆದಾಯ ತೆರಿಗೆ ಪಾವತಿ ಮಾಡುವಂತಿಲ್ಲ. ಸರ್ಕಾರಿ ನೌಕರರು ಇಲ್ಲವೇ ಯಾವುದೇ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದವರೂ ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದೂ ಸೇರಿದಂತೆ ಹಲವಾರು ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಏಪ್ರಿಲ್‌ 1 ರಿಂದ ಈ ಯೋಜನೆ ದೆಹಲಿಯಲ್ಲಿ ಜಾರಿಗೆ ಬರಲಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಕೆ ಸೇರಿದಂತೆ ನಾನಾ ಪ್ರಕ್ರಿಯೆಗಳು ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.

76,000 ಕೋಟಿ ರೂ.ಗಳ ಬಜೆಟ್‌ ಅನ್ನು ಮಂಡಿಸಿದ ಅತಿಷಿ ಮಾರ್ಲೇನಾ ಸಿಂಗ್‌ ಅವರು ಕೇಜ್ರೀವಾಲ್‌ ನೇತೃತ್ವದ ಸರ್ಕಾರವು ರಾಮರಾಜ್ಯದ ಕನಸು ನನಸು ಮಾಡುವ ನಿಟ್ಟಿನಲ್ಲಿಯೇ ಕಲಸ ಮಾಡುತ್ತಿದೆ ಎಂದು ಹೇಳಿದರು.

ಸತತ ಒಂಬತ್ತು ವರ್ಷದಿಂದ ದೆಹಲಿ ಜನರ ಆಶೋತ್ತರಗಳಿಗೆ ಹಗಲು ರಾತ್ರಿ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಜನರಿಗೆ ಸಂತಸ ಹಂಚುವುದನ್ನು ನಿಜಾರ್ಥದಲ್ಲಿ ಮಾಡಿದ್ದೇವೆ. ನಾವೆಲ್ಲರೂ ರಾಮನ ಪ್ರೇರಣೆಯಿಂದಲೇ ಸದನಕ್ಕೆ ಬಂದವರು. ರಾಮರಾಜ್ಯ ಆಗಲು ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ ಎನ್ನುವುದು ಅತಿಷಿ ಅವರ ನುಡಿ.

ಈಗಾಗಲೇ ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮಹಿಳೆಯರಿಗೆ ಸಹಾಯಧನ ನೀಡುವ ಯೋಜನೆ ಜಾರಿಯಾಗಿದೆ. ಮಧ್ಯಪ್ರದೇಶದಲ್ಲಿ ಲಾಡ್ಲಿ ಬೆಹನಾ ಯೋಜನೆಯಡಿ 1500 ರೂ.ಗಳನ್ನು ಮಾಸಿಕ ನೀಡಲಾಗುತ್ತಿದೆ.

ವಿಭಾಗ