ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಂಬೇಡ್ಕರ್ ಜಯಂತಿ; ಏಕರೂಪ ನಾಗರಿಕ ಸಂಹಿತೆ ಮತ್ತು ಶರೀಯತ್ ಕಾನೂನು ಬಗ್ಗೆ ಡಾ ಬಿಆರ್ ಅಂಬೇಡ್ಕರ್ ಹೇಳಿರುವುದಿಷ್ಟು

ಅಂಬೇಡ್ಕರ್ ಜಯಂತಿ; ಏಕರೂಪ ನಾಗರಿಕ ಸಂಹಿತೆ ಮತ್ತು ಶರೀಯತ್ ಕಾನೂನು ಬಗ್ಗೆ ಡಾ ಬಿಆರ್ ಅಂಬೇಡ್ಕರ್ ಹೇಳಿರುವುದಿಷ್ಟು

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಹೊತ್ತು. ಈ ಬಾರಿ ಲೋಕಸಭಾ ಚುನಾವಣೆ ಕೂಡ ನಡೆಯುತ್ತಿದ್ದು, ಏಕರೂಪ ನಾಗರಿಕ ಸಂಹಿತೆ ವಿಚಾರ ಪ್ರಸ್ತಾಪವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅಭಿಪ್ರಾಯ ಏನಿತ್ತು ಎಂಬುದರ ಕಡೆಗೆ ಗಮನಹರಿಸಲು ಇದು ಸಕಾಲ, ನಿಮಿತ್ತ. ಏಕರೂಪ ನಾಗರಿಕ ಸಂಹಿತೆ ಮತ್ತು ಶರೀಯತ್ ಕಾನೂನು ಬಗ್ಗೆ ಡಾ ಬಿಆರ್ ಅಂಬೇಡ್ಕರ್ ಹೇಳಿರುವುದಿಷ್ಟು.

ಅಂಬೇಡ್ಕರ್ ಜಯಂತಿ 2024; ಡಾ ಬಿಆರ್ ಅಂಬೇಡ್ಕರ್ (ಸಾಂಕೇತಿಕ ಚಿತ್ರ)
ಅಂಬೇಡ್ಕರ್ ಜಯಂತಿ 2024; ಡಾ ಬಿಆರ್ ಅಂಬೇಡ್ಕರ್ (ಸಾಂಕೇತಿಕ ಚಿತ್ರ)

ನವದೆಹಲಿ/ ಬೆಂಗಳೂರು: ಲೋಕಸಭಾ ಚುನಾವಣೆಯ ಹೊತ್ತು. ಆಗೊಮ್ಮೆ ಈಗೊಮ್ಮೆ ಏಕರೂಪದ ನಾಗರಿಕ ಸಂಹಿತೆ ವಿಚಾರ ಪ್ರಸ್ತಾಪವಾಗುತ್ತಿದೆ. ಈ ಬಗ್ಗೆ ಚರ್ಚೆಯೂ ಆಗುತ್ತಿದೆ. ವಿಶೇಷ ಎಂದರೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಇದೇ ವಿಚಾರವಾಗಿ ದಶಕಗಳ ಹಿಂದೆ ಮಾತನಾಡಿದ್ದರು. ಅವರು ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡುತ್ತ, ಈಗಾಗಲೇ ದೇಶದಲ್ಲಿ ಅದು ಹಲವು ಕಾನೂನುಗಳ ರೂಪದಲ್ಲಿ ಜಾರಿಯಲ್ಲಿದೆ ಎಂದು ಪ್ರತಿಪಾದಿಸಿದ್ದರು. ಅಷ್ಟೇ ಅಲ್ಲ, ಶರೀಯತ್ ಕಾನೂನು ಕುರಿತು ಒಂದಷ್ಟು ವಿಚಾರಗಳನ್ನು ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಇವುಗಳ ವಿವರ ಲೋಕಸಭೆ ಸಚಿವಾಲಯ ಪ್ರಕಟ ಮಾಡಿರುವ ಡಾ.ಬಿಆರ್ ಅಂಬೇಡ್ಕರ್ ಪುಸ್ತಕದಲ್ಲಿದೆ. ಇದನ್ನು ಕರ್ನಾಟಕ ವಿಧಾನಮಂಡಲ ಸಚಿವಾಲಯವು 1998ರಲ್ಲಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ. ಇದರ ಪಿಡಿಎಫ್‌ ಪ್ರತಿ ಕರ್ನಾಟಕ ವಿಧಾನಸಭೆಯ ಇಗ್ರಂಥಾಲಯದಲ್ಲಿ ಲಭ್ಯ ಇದೆ. ಈ ಪುಸ್ತಕದಲ್ಲಿ “ಏಕರೂಪ ನಾಗರಿಕ ಸಂಹಿತೆಯನ್ನು ಕುರಿತು” ಎಂಬ ಶೀರ್ಷಿಕೆಯಲ್ಲಿ ಭಾಷಣದ ತುಣುಕು ಪ್ರಕಟವಾಗಿದೆ.

ಏಕರೂಪ ನಾಗರಿಕ ಸಂಹಿತೆಯನ್ನು ಕುರಿತು

ಡಾ.ಬಿಆರ್ ಅಂಬೇಡ್ಕರ್ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಕುರಿತು ಮಾಡಿದ ಭಾಷಣದ ತುಣುಕು ಇದು.

"ನನ್ನ ಮಿತ್ರರಾದ ಶ್ರೀ ಹುಸೇನ್ ಇಮಾಮ್‌ರವರು, 35ನೇ ಅನುಚ್ಛೇದದ ತಿದ್ದುಪಡಿಗಳನ್ನು ಬೆಂಬಲಿಸುತ್ತಾ, ನಮ್ಮ ದೇಶದಂಥ ವಿಶಾಲ ದೇಶಕ್ಕೆ ಕಾನೂನುಗಳ ಒಂದು ಏಕರೂಪ ಸಂಹಿತೆಯನ್ನು ಹೊಂದುವುದು ಸಾಧ್ಯವೇ ಮತ್ತು ಅಪೇಕ್ಷಣೀಯವೇ ಎಂದು ಕೇಳಿದರು. ನಿಜ ಹೇಳಬೇಕೆಂದರೆ, ಮಾನವ ಸಂಬಂಧದ ಪ್ರತಿಯೊಂದು ವಿಷಯವನ್ನು ಒಳಗೊಂಡಿರುವಂತೆ ನಮ್ಮ ದೇಶದಲ್ಲಿ ಏಕರೂಪ ಸಂಹಿತೆಯಿರುವ ಕಾರಣದಿಂದಾಗಿ, ಆ ಹೇಳಿಕೆಯ ಬಗ್ಗೆ ನನಗೆ ಆಶ್ಚರ್ಯವಾಯಿತು. ದೇಶಾದ್ಯಂತ ಪ್ರಚಲಿತವಿರುವ ಏಕರೂಪದ ಹಾಗೂ ಸಂಪೂರ್ಣ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯು ನಮ್ಮಲ್ಲಿದ್ದು, ಅದು ದಂಡ ಸಂಹಿತೆ ಹಾಗೂ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಲ್ಲಿ ಒಳಗೊಂಡಿದೆ. ಸ್ವತ್ತಿಗೆ ಸಂಬಂಧಿಸಿದ ಹಾಗೂ ದೇಶಾದ್ಯಂತ ಪ್ರಚಲಿತವಿರುವ ಸ್ವತ್ತಿನ ವರ್ಗವಣೆ ಕಾನೂನು ನಮ್ಮಲ್ಲಿದೆ. ಅಲ್ಲದೇ ವರ್ಗಾವಣೆಯ ಲಿಖಿತಗಳ ಅಧಿನಿಯಮಗಳೂ ಸಹ ಇವೆ. ರೀತಿಯಲ್ಲಿ ನಮ್ಮ ದೇಶದಲ್ಲಿ ಕಾರ್ಯತಃ ಸಿವಿಲ್ ಸಂಹಿತೆಯಿದ್ದು, ಅವು ಏಕರೂಪವಾಗಿದ್ದು ಇಡೀ ದೇಶಕ್ಕೆ ಅನ್ವಯಿಸಬಹುದಾದ ಅಸಂಖ್ಯಾತ ಕಾನೂನುಗಳ ಬಗ್ಗೆ ನಾನು ಉದಾಹರಣೆಗಳನ್ನು ಕೊಡಬಲ್ಲೆ, ವಿವಾಹ ಮತ್ತು ಉತ್ತರಾಧಿಕಾರದ ಬಗೆಗಿನ ಸಿವಿಲ್ ಕಾನೂನುಗಳಿಗೆ ಮಾತ್ರ ಏಕರೂಪತೆಯನ್ನು ತರಲು ಇನ್ನು ಸಾಧ್ಯವಾಗಿಲ್ಲ. ಈ ಒಂದು ಚಿಕ್ಕ ಕ್ಷೇತ್ರದಲ್ಲಿ ನಾವು ಬದಲಾವಣೆಯನ್ನು ಇನ್ನೂ ತರಲು ಸಾಧ್ಯವಾಗಿಲ್ಲ. 35ನೇ ಅನುಚ್ಛೇದವು ಸಂವಿಧಾನದ ಒಂದು ಭಾಗವಾಗಿರಬೇಕೆಂದು ಅಪೇಕ್ಷಿಸುವವರ ಆಶಯವು ಸಹ ಬದಲಾವಣೆ ತರಬೇಕೆಂಬುದೇ ಆಗಿದೆ. ಆದ್ದರಿಂದ, ಏಕರೂಪ ಸಂಹಿತೆಯನ್ನು ತರುವ ಪ್ರಯತ್ನ ಮಾಡಬೇಕೆ, ಬೇಡವೇ ಎಂಬ ವಾದವೇ ಅನುಚಿತವಾಗಿದೆ. ಏಕೆಂದರೆ ಈ ದೇಶದಲ್ಲಿ ಕಾನೂನಿನ ಪ್ರತಿಯೊಂದು ಕ್ಷೇತ್ರವು ಏಕ ರೂಪ ಸಿವಿಲ್ ಸಂಹಿತೆಯಿಂದ ಒಳಗೊಂಡಿದೆ. ಆದ್ದರಿಂದ ಏಕರೂಪ ಸಂಹಿತೆಯನ್ನು ತರಲು ಸಾಧ್ಯವೇ ಎಂದು ಪ್ರಶ್ನಿಸುವುದೇ ತೀರಾ ವಿಳಂಬವಾಗಿದೆ. ನನ್ನ ಪ್ರಕಾರ ನಾವು ಈಗಾಗಲೇ ಅದನ್ನು ಸಾಧಿಸಿದ್ದೇವೆ.

ತಿದ್ದುಪಡಿಗಳನ್ನು ಕುರಿತು ಹೇಳಬೇಕೆಂದರೆ, ನಾನು ಈ ವಿಷಯದಲ್ಲಿ ಕೇವಲ ಎರಡು ವಿಷಯಗಳ ಬಗ್ಗೆ ಗಮನ ಹರಿಸಿದ್ದೇನೆ. ನಾನು ಮೊದಲು ಗಮನಿಸಿದ ವಿಷಯವೆಂದರೆ, ತಿದ್ದುಪಡಿಗಳನ್ನು ತರಲು ಇಚ್ಛಿಸುವ ಸದಸ್ಯರ ಪ್ರಕಾರ, ಈ ದೇಶಕ್ಕೆ ಸಂಬಂಧಿಸಿದಷ್ಟರಮಟ್ಟಿಗೆ, ಮುಸ್ಲಿಂ ಮತೀಯ ಸಂಬಂಧಿ ಕಾನೂನು ಇಡೀ ಭಾರತದಲ್ಲಿ ಬದಲಾಯಿಸಲಾರದಂಥವು ಮತ್ತು ಏಕರೂಪದವು. ಈ ಹೇಳಿಕೆಯನ್ನು ನಾನು ಆಕ್ಷೇಪಿಸುತ್ತೇನೆ. ಈ ತಿದ್ದುಪಡಿಯ ಬಗ್ಗೆ ಮಾತನಾಡಿರುವ ನನ್ನ ಬಹುತೇಕ ಮಿತ್ರರು, 1935ರ ತನಕ ವಾಯುವ್ಯ ಸರಹದ್ದು ಪ್ರಾಂತವು ಶರೀಯತ್ ಕಾನೂನಿಗೆ ಒಳಪಟ್ಟಿರಲಿಲ್ಲವೆಂಬ ವಿಷಯವನ್ನು ಮರೆತಂತೆ ಕಾಣುತ್ತದೆ. ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನು ಹಾಗೂ ಇತರ ಕಾನೂನುಗಳಿಗೆ ಸಂಬಂಧಿಸಿದಂತೆ, ಅದು ಹಿಂದೂ ಕಾನೂನನ್ನು ಅನುಸರಿಸಿತು.

1930ರ ತನಕ ಅದು ಹೀಗೆ ನಡೆದುಬಂದು, ವಾಯುವ್ಯ ಸರಹದ್ದು ಪ್ರಾಂತದ ಮುಸ್ಲಿಂಮರು ಹಿಂದೂ ಕಾನೂನನ್ನು ಅನ್ವಯಿಸುವುದನ್ನು ರದ್ದುಗೊಳಿಸಿ, ಅವರಿಗೆ ಶರೀಯತ್ ಕಾನೂನು ಅನ್ವಯಿಸುವಂತೆ ಮಾಡಲು ಈ ವಿಷಯದಲ್ಲಿ ಕೇಂದ್ರ ವಿಧಾನ ಮಂಡಲವು ಮಧ್ಯೆ ಪ್ರವೇಶಿಸಬೇಕಾಯಿತು, ಅಷ್ಟೇ ಅಲ್ಲ ವಾಯುವ್ಯ ಸರಹದ್ದು ಪ್ರಾಂತವಲ್ಲದೇ, 1937ರ ತನಕ, ಭಾರತದ ಉಳಿದ ಭಾಗಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ, ಅಂದರೆ ಸಂಯುಕ್ತ ಪ್ರಾಂತಗಳು, ಕೇಂದ್ರಿಯ ಪ್ರಾಂತಗಳು ಮತ್ತು ಬಾಂಬೆ- ಇವುಗಳಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು, ಉತ್ತರಾಧಿಕಾರ ಕಾನೂನಿಗೆ ಸಂಬಂಧಿಸಿದಂತೆ ಹಿಂದೂ ಕಾನೂನೇ ಅವರಿಗೆ ಅನ್ವಯವಾಗುತ್ತಿತ್ತೆಂಬುದನ್ನು ನನ್ನ ಮಾನ್ಯ ಸ್ನೇಹಿತರುಗಳು ಮರೆತು ಬಿಟ್ಟಿದ್ದಾರೆ. ಶರೀಯತ್‌ ಕಾನೂನನ್ನು ಪಾಲಿಸುತ್ತಿದ್ದ ಇತರ ಮುಸ್ಲಿರಿಗೆ ಸಂಬಂಧಿಸಿದಂತೆ, ಅವರನ್ನು ಏಕರೂಪದ ತಳಹದಿಯಲ್ಲಿ ತರುವ ಸಲುವಾಗಿ, 1937ರಲ್ಲಿ ವಿಧಾನ ಮಂಡಲವು ಮಧ್ಯೆ ಪ್ರವೇಶಿಸಬೇಕಾಯಿತು ಮತ್ತು ಭಾರತದ ಉಳಿದ ಭಾಗದಲ್ಲಿ ಶರೀಯತ್ ಕಾನೂನನ್ನು ಅನ್ವಯಿಸಿ ಶಾಸನವನ್ನು ಅನುಮೋದಿಸಬೇಕಾಯಿತು.

ಉತ್ತರ ಮಲಬಾರಿನಲ್ಲಿ ಮರುಮಕ್ಕತ್ತಾಯಮ್‌ ಕಾನೂನು ಕೇವಲ ಹಿಂದೂಗಳಿಗಲ್ಲದೆ, ಮುಸ್ಲಿಮರಿಗೂ ಅನ್ವಯವಾಗುತ್ತಿತ್ತೆಂಬುದರ ಬಗ್ಗೆ ನನ್ನ ಮಿತ್ರರಾದ ಶ್ರೀ ಕರುಣಾಕರನ್ ಮೆನನ್‌ರವರಿಂದ ನನಗೆ ತಿಳಿದು ಬಂದಿದೆ, ಮರುಮಕ್ಕತ್ತಾಯಮ್ ಕಾನೂನು ಪಿತೃಪ್ರಧಾನ ರೂಪದ ಕಾನೂನಾಗಿರದೇ ಮಾತ್ರ ಪ್ರಧಾನ ರೂಪದ ಕಾನೂನಾಗಿತ್ತೆಂಬುದನ್ನು ನಾವು ಮರೆಯಬಾರದು. ಹೀಗಾಗಿ, ಇಲ್ಲಿಯವರೆಗೂ ಉತ್ತರ ಮಲಬಾರಿನಲ್ಲಿ ಮುಸ್ಲಿಂಮರು ಮರು ಮುಕ್ಕತ್ತಾಯಮ್ ಕಾನೂನನ್ನು ಅನುಸರಿಸುತ್ತಿದ್ದರು. ಆದ್ದರಿಂದ ಮುಸ್ಲಿಮ್ ಕಾನೂನು ಬದಲಾಯಿಸಲಾರದಂಥದಾಗಿದ್ದು, ಅದನ್ನು ಅವರು ಪ್ರಾಚೀನ ಕಾಲದಿಂದ ಅನುಸರಿಸುತ್ತಾ ಬಂದಿದ್ದಾರೆಂದು ಒಂದು ನಿಸ್ಸಂದಿಗ್ಧ ಹೇಳಿಕೆ ನೀಡುವುದರಿಂದ ಏನೂ ಪ್ರಯೋಜನವಿಲ್ಲ.

ಹಾಗೆ ನೋಡಿದರೆ ಆ ಕಾನೂನು ಕೆಲವು ಪ್ರದೇಶಗಳಿಗೆ ಅನ್ವಯಿಸುತ್ತಿರಲಿಲ್ಲ. ಕೇವಲ ಹತ್ತು ವರ್ಷಗಳಿಂದೀಚೆಗೆ, ಅದು ಆ ಭಾಗಗಳಿಗೆ ಅನ್ವಯಿಸುವಂತೆ ಮಾಡಲಾಗಿದೆ. ಆದ್ದರಿಂದ ಧರ್ಮವನ್ನು ಗಣನೆಗೆ ತಾರದೇ, ಎಲ್ಲಾ ನಾಗರೀಕರಿಗೂ ಅನ್ವಯವಾಗುವಂಥ ಒಂದು ಸಿವಿಲ್ ಸಂಹಿತೆಯನ್ನು ರೂಪಿಸುವ ಉದ್ದೇಶದಿಂದ, ಹಿಂದೂ ಕಾನೂನಿನ ಕೆಲವು ಭಾಗಗಳನ್ನು ಅವು ಹಿಂದೂ ಕಾನೂನಿನಲ್ಲಿ ಒಳಗೊಂಡಿದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲದೇ, ಅವು ಅತ್ಯಂತ ಸೂಕ್ತವೆಂದು ಕಂಡುಬಂದುದರಿಂದ ಅವುಗಳನ್ನು 35ನೇ ಅನುಚ್ಛೇದದಿಂದ ಹೊರಹೊಮ್ಮಿರುವ ಹೊಸ ಸಿವಿಲ್ ಸಂಹಿತೆಯಲ್ಲಿ ಸೇರಿಸುವುದು ಅವಶ್ಯಕವೆಂದು ಕಂಡು ಬಂದಿತು. ಆದ್ದರಿಂದ ಮುಸ್ಲಿಂ ಸಮುದಾಯದ ಜನರ ಭಾವನೆಗಳಿಗೆ ಹಾನಿಯುಂಟು ಮಾಡಿರುವರೆಂದು ಯಾರೇ ಮುಸ್ಲಿಮ್‌ನು ಹೇಳಲು ಸಾಧ್ಯವಿಲ್ಲವೆಂದು ನಾನು ನಂಬಿದ್ದೇನೆ.

ನನ್ನ ಎರಡನೇ ಅಭಿಪ್ರಾಯವೆಂದರೆ, ಅವರಿಗೆ ಭರವಸೆ ನೀಡುವುದು. ಈ ವಿಷಯದಲ್ಲಿ ಅವರ ಭಾವನೆಗಳನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಆದರೆ ಸಂಹಿತೆಯನ್ನು ಒದಗಿಸುವುದಕ್ಕೆ ರಾಜ್ಯವು ಒಂದು ಸಿವಿಲ್ ಪ್ರಯತ್ನಿಸಬೇಕೆಂಬುದಷ್ಟನ್ನು ಮಾತ್ರ 35ನೇ ಅನುಚ್ಛೇದವು ಪ್ರಸ್ತಾವಿಸುತ್ತದೆಯೆಂಬುದರ ಬಗ್ಗೆ ಅವರು ಅತಿ ರಂಜಿತ ಅರ್ಥ ಕಲ್ಪಿಸಿದ್ದಾರೆಂದು ನಾನು ಭಾವಿಸುತ್ತೇನೆ. ಸಂಹಿತೆಯನ್ನು ರಚಿಸಿದ ತರುವಾಯ, ರಾಜ್ಯವು, ಎಲ್ಲಾ ನಾಗರೀಕರ ಮೇಲೆ, ಅವರು ಕೇವಲ ನಾಗರಿಕತೆಯ ಕಾರಣಕ್ಕಾಗಿ ಮಾತ್ರ, ಅದನ್ನು ಅವರ ಮೇಲೆ ಹೇರಲಾಗುವುದೆಂದು ಅದರಲ್ಲಿ ಎಲ್ಲೂ ಹೇಳಿಲ್ಲ. ಭವಿಷ್ಯದ ಸಂಸತ್, ಪ್ರಾರಂಭದ ಹಂತವೆಂಬಂತೆ, ತಾವು ಅದಕ್ಕೆ ಬದ್ಧರಾಗಲು ಫಯಾರಿದ್ದೇವೆಂದು ಘೋಷಿಸುವಂಥ ವ್ಯಕ್ತಿಗಳಿಗೆ ಮಾತ್ರ ಸಂಹಿತೆಯು ಅನ್ವಯಿಸತಕ್ಕದ್ದೆಂದು ಒಂದು ಉಪಬಂಧ ಉಪಬಂಧ ಕಲ್ಪಿಸುವುದು ಸಹ ಸಾಧ್ಯವಿದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲಿ ಸಂಹಿತೆಯ ಅನ್ವಯವು ಸ್ವಇಚ್ಛೆಯದಾಗಿರುತ್ತದೆ. ಸಂಸತ್‌ ಅಂಥ ಯಾವುದೇ ವಿಧಾನದಿಂದ ಇದನ್ನು ಬಗೆಹರಿಸಬಹುದು.

ಇದೇನು ವಿನೂತನ ವಿಷಯವಲ್ಲ, 1937 ರಲ್ಲಿ ಶರೀಯತ್ ಕಾನೂನುಗಳು ವಾಯುವ್ಯ ಸರಹದ್ದು ಪ್ರಾಂತವನ್ನು ಹೊರತುಪಡಿಸಿ ಇತರ ಪ್ರದೇಶಗಳಿಗೆ ಅನ್ವಯಿಸುವಾಗ ಈ ಮಾರ್ಗವನ್ನು ಅನುಸರಿಸಲಾಗಿತ್ತು. ಮುಸ್ಲಿಮರಿಗೆ ಅನ್ವಯವಾಗುವ ಶರೀಯತ್ ಕಾನೂನು ಇದ್ದು, ಶರೀಯತ್ ಕಾನೂನಿನಿಂದ ಬದ್ಧರಾಗಲೂ ಇಚ್ಛಿಸುವ ಮುಸ್ಲಿಮ್‌ರನ್ನು ರಾಜ್ಯದ ಒಂದು ಕಚೇರಿಗೆ ತೆರಳಿ ತಾನು ಶರೀಯತ್ ಕಾನೂನಿಗೆ ಬದ್ಧನಾಗಿರಲು ಇಚ್ಚುಸುತ್ತೇನೆಂಬ ಒಂದು ಘೋಷಣೆಯನ್ನು ನೀಡಿದ ತರುವಾಯ, ಅವನು ಹಾಗೂ ಅವನ ಉತ್ತರಾಧಿಕಾರಿಗಳು ಈ ಕಾನೂನಿಗೆ ಬದ್ದರಾಗುತ್ತಾರೆಂದು ಕಾನೂನು ಹೇಳಿದೆ. ಸಂಸತ್ತಿಗೆ ಆ ರೀತಿಯ ಒಂದು ಉಪಬಂಧವನ್ನು ಕಲ್ಪಿಸುವುದು ಖಂಡಿತ ಸಾಧ್ಯ. ಹೀಗಾಗಿ ನನ್ನ ಮಿತ್ರರು ಇಲ್ಲಿ ವ್ಯಕ್ತಪಡಿಸಿರುವ ಭಯವು ಸಂಪೂರ್ಣವಾಗಿ ನಿರಾಧಾರವಾಗಿದೆಂದು ನಾನು ಹೇಳಬಯಸುತ್ತೇನೆ."

ಈ ಭಾಷಣವನ್ನು ಡಾ ಬಿಆರ್ ಅಂಬೇಡ್ಕರ್ ಎಲ್ಲಿ ಯಾವಾಗ ಮಾತನಾಡಿದ್ದು ಎಂಬ ವಿವರ ಸರ್ಕಾರ ಪ್ರಕಟಿಸಿದ ಪುಸ್ತಕದಲ್ಲಿ ಇಲ್ಲ. ಆದಾಗ್ಯೂ, ಇದು ಸಂಸತ್‌ನಲ್ಲಿ ಮಾತನಾಡಿರುವಂತೆ ಭಾಸವಾಗತ್ತಿದೆ.

ಡಾ.ಬಿ ಆರ್ ಅಂಬೇಡ್ಕರ್ ಪುಸ್ತಕದ ಪಿಡಿಎಫ್‌

ಕರ್ನಾಟಕ ವಿಧಾನ ಮಂಡಲ ಪ್ರಕಟಿಸಿರುವ ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆಯ ಸರಣಿಯಲ್ಲಿ “ಡಾ.ಬಿ.ಆರ್ ಅಂಬೇಡ್ಕರ್” ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗಿದೆ. ಈ ಪುಸ್ತಕದಲ್ಲಿ ಡಾ.ಬಿಆರ್ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಗಣ್ಯರ ಚಿತ್ರಿಸಿದ್ದು, ಕೆಲವು ಲೇಖನಗಳಿವೆ. ಇವುಗಳ ಜೊತೆಗೆ, ಡಾ. ಬಿಆರ್ ಅಂಬೇಡ್ಕರ್ ಅವರ ಭಾಷಣಗಳ ಆಯ್ದ ಭಾಗಗಳನ್ನೂ ಸೇರಿಸಲಾಗಿದೆ. ಇಲ್ಲಿದೆ ಅಂಬೇಡ್ಕರ್ ಜೀವನ ಚರಿತ್ರೆ pdf

IPL_Entry_Point