ನೇಪಾಳದಲ್ಲಿ ಪ್ರಬಲ ಭೂಕಂಪ: ದೆಹಲಿ, ಅಸ್ಸಾಂ ಸೇರಿ ಹಲವೆಡೆ ನಸುಕಿನಲ್ಲಿಯೇ ನಡುಗಿತು ಭೂಮಿ, ಜನರಲ್ಲಿ ಭೀತಿ
ನೇಪಾಳದಲ್ಲಿ ಇಂದು ನಸುಕಿನ ಜಾವ 7.1 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಭಾರತದ ಉತ್ತರ ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ. ದೆಹಲಿ, ಅಸ್ಸಾಂನಲ್ಲಿ ಭೂಮಿ ಕಂಪಿಸಿದ್ದು, ಜನರು ಮನೆ–ಅಪಾರ್ಟ್‌ಮೆಂಟ್‌ಗಳಿಂದ ಹೊರಗೋಡಿ ಬಂದಿದ್ದಾರೆ. ಭೂಕಂಪನದಿಂದ ಯಾವುದೇ ಸಾವು–ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ನವದೆಹಲಿ: ನೇಪಾಳದ ಗಡಿ ಬಳಿ ಇಂದು (ಜನವರಿ 7) ಬೆಳಿಗ್ಗೆ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ನೇಪಾಳ-ಟಿಬೆಟ್ ಗಡಿಯ ಬಳಿ ಲೊಬುಚೆಯಿಂದ ಈಶಾನ್ಯಕ್ಕೆ 93 ಕಿಮೀ ದೂರದಲ್ಲಿ ಬೆಳಿಗ್ಗೆ 6.35 ಕ್ಕೆ ಭೂಕಂಪ ಸಂಭವಿಸಿರುವ ಬಗ್ಗೆ ಎಂದು ವರದಿ ಮಾಡಿದೆ.
ನಸುಕಿನ ವೇಳೆ ಸಂಭವಿಸಿದ ಭೂಕಂಪದ ಪರಿಣಾಮ ದೆಹಲಿ, ಬಿಹಾರ, ಅಸ್ಸಾಂ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಬಿಹಾರದಲ್ಲಿ ಹೆಚ್ಚು ಭೂಮಿ ಕಂಪಿಸಿದ ಅನುಭವವಾಗಿದೆ. ಅಲ್ಲಿನ ಜನರು ಭಯಭೀತರಾಗಿ ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಹೊರಗೆ ಕಾಣಿಸಿಕೊಂಡರು. ಭೂಕಂಪದಿಂದಾಗಿ ಯಾವುದೇ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ನೇಪಾಳವು ಭೌಗೋಳಿಕವಾಗಿ ಭೂಕಂಪ ಸಕ್ರಿಯವಾಗಿರುವ ಪ್ರದೇಶದಲ್ಲಿ ನೆಲೆಸಿದೆ. ಅಲ್ಲಿ ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳು ಘರ್ಷಣೆಯಾಗಿ ಹಿಮಾಲಯವನ್ನು ರೂಪಿಸುತ್ತವೆ. ಹಾಗಾಗಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ.
ಲೋಬುಚೆ ನೇಪಾಳದಲ್ಲಿ ಕಠ್ಮಂಡುವಿನ ಪೂರ್ವಕ್ಕೆ, ಖುಂಬು ಗ್ಲೇಸಿಯರ್ ಬಳಿ ಇದೆ. ಇದು ರಾಜಧಾನಿಯಿಂದ ಸುಮಾರು 150 ಕಿಲೋಮೀಟರ್ ಮತ್ತು ಎವರೆಸ್ಟ್ ಬೇಸ್ ಕ್ಯಾಂಪ್‌ನ ನೈಋತ್ಯಕ್ಕೆ 8.5 ಕಿಲೋಮೀಟರ್ ದೂರದಲ್ಲಿದೆ.
ಭೂಕಂಪನದ ರಾಷ್ಟ್ರೀಯ ಕೇಂದ್ರದ (NCS) ಪ್ರಕಾರ, ಭೂಕಂಪವು 6:35 AM (IST) ಕ್ಕೆ ದಾಖಲಾಗಿದೆ. ಅದರ ಕೇಂದ್ರಬಿಂದುವು 28.86 ಡಿಗ್ರಿ ಉತ್ತರ ಅಕ್ಷಾಂಶ ಮತ್ತು ರೇಖಾಂಶ 87.51 ಡಿಗ್ರಿ ಪೂರ್ವದಲ್ಲಿ 10 ಕಿಲೋಮೀಟರ್ ಆಳದಲ್ಲಿದೆ. ಕಂಪನದ ಸ್ಥಳವನ್ನು ನೇಪಾಳ ಸಮೀಪದ ಕ್ಸಿಜಾಂಗ್ (ಟಿಬೆಟ್ ಸ್ವಾಯತ್ತ ಪ್ರದೇಶ) ಎಂದು ಗುರುತಿಸಲಾಗಿದೆ.
ವಿಭಾಗ