ಕನ್ನಡ ಸುದ್ದಿ  /  Nation And-world  /  India News Explained What Is Rythu Bandhu Scheme Stopped By Election Commission Ahead Of Telangana Election Uks

Rythu Bandhu: ರೈತ ಬಂಧು ಯೋಜನೆ ಹಣ ಬಿಡುಗಡೆ ತಡೆಹಿಡಿದ ಚುನಾವಣಾ ಆಯೋಗ, ಯಾಕೆ, ಏನಿದು ಯೋಜನೆ

ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಈಗ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಕೆಸಿಆರ್ ನೇತೃತ್ವದ ತೆಲಂಗಾಣ ಸರ್ಕಾರದ ರೈತ ಬಂಧು ಯೋಜನೆಯ ಹಣ ಬಿಡುಗಡೆ ಮಾಡದಂತೆ ಚುನಾವಣಾ ಆಯೋಗ ತಡೆ ನೀಡಿದೆ. ಆಯೋಗ ಈ ಕ್ರಮ ತೆಗೆದುಕೊಂಡಿರುವುದೇಕೆ? ಏನಿದು ರೈತ ಬಂಧು ಯೋಜನೆ? ಇಲ್ಲಿದೆ ವಿವರ.

ಕೆಸಿಆರ್ ನೇತೃತ್ವದ ತೆಲಂಗಾಣ ಸರ್ಕಾರದ ರೈತ ಬಂಧು ಯೋಜನೆಯ ಹಣ ಬಿಡುಗಡೆ ಮಾಡದಂತೆ ಚುನಾವಣಾ ಆಯೋಗ ತಡೆ ನೀಡಿದೆ.
ಕೆಸಿಆರ್ ನೇತೃತ್ವದ ತೆಲಂಗಾಣ ಸರ್ಕಾರದ ರೈತ ಬಂಧು ಯೋಜನೆಯ ಹಣ ಬಿಡುಗಡೆ ಮಾಡದಂತೆ ಚುನಾವಣಾ ಆಯೋಗ ತಡೆ ನೀಡಿದೆ.

ತೆಲಂಗಾಣದಲ್ಲಿ ರಾಜ್ಯ ಸರ್ಕಾರದ ರೈತ ಬಂಧು ಯೋಜನೆ ಸ್ಥಗಿತಗೊಳಿಸುವಂತೆ ಭಾರತದ ಚುನಾವಣಾ ಆಯೋಗವು ಸೋಮವಾರ ಆದೇಶ ನೀಡಿದೆ. ಈ ಯೋಜನೆಯ ಮೂಲಕ ಹಂಚುವ ಆರ್ಥಿಕ ನೆರವು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂಬ ಕಾರಣಕ್ಕೆ ಈ ಆದೇಶ ನೀಡಿರುವುದಾಗಿ ಆಯೋಗ ವಿವರಿಸಿದೆ.

ರೈತ ಬಂಧು ಯೋಜನೆಯನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ಸರ್ಕಾರ ಜಾರಿಗೊಳಿಸಿದ್ದು, ರಬಿ ಬೆಳೆಗಳಿಗೆ ಸಂಬಂಧಿಸಿ ಆರ್ಥಿಕ ನೆರವು ವಿತರಿಸಲು ಕ್ರಮ ತೆಗೆದುಕೊಂಡಿತ್ತು. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರದಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿತ್ತು.

ತೆಲಂಗಾಣ ಚುನಾವಣೆ 2023 ರ ಕೆಲವೇ ದಿನಗಳ ಮೊದಲು, ಚುನಾವಣಾ ಆಯೋಗವು, "ತೆಲಂಗಾಣ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅದು ಕೊನೆಗೊಳ್ಳುವತನಕ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನಗಳ ವಿತರಣೆ ಇರುವುದಿಲ್ಲ" ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.

ರೈತ ಬಂಧು ಯೋಜನೆ ಎಂದರೇನು

ಕೃಷಿಕರ ಹೂಡಿಕೆ ಬೆಂಬಲ ಯೋಜನೆ (Farmer's Investment Support Scheme (FISS)) ಎಂದು ಗುರುತಿಸಲ್ಪಟ್ಟಿರುವ ಯೋಜನೆಯೇ ರೈತ ಬಂಧು ಯೋಜನೆ. ತೆಲಂಗಾಣ ಸರ್ಕಾರವು 2018 ರಲ್ಲಿ ಈ ರೈತ ಕಲ್ಯಾಣ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ತೆಲಂಗಾಣ ಸರ್ಕಾರವು ಈ ಯೋಜನೆ ಪ್ರಕಾರ, 58 ಲಕ್ಷ ರೈತರಿಗೆ 2 ಬೆಳೆಗಳಿಗೆ ಕೃಷಿ ಬಂಡವಾಳವಾಗಿ ಪ್ರತಿ ಎಕರೆ ಭೂಮಿಗೆ 5,000 ರೂಪಾಯಿಯನ್ನು ವರ್ಷಕ್ಕೆ ಎರಡು ಬಾರಿ ಅವರ ಖಾತೆಗೆ ಜಮೆ ಮಾಡುತ್ತದೆ. ರಬಿ ಮತ್ತು ಖಾರಿಫ್ ಬೆಳೆ ಸಂದರ್ಭದಲ್ಲಿ ಈ ಹಣ ರೈತರ ಖಾತೆಗೆ ಹೂಡಿಕೆಯ ಹಣವಾಗಿ ಜಮೆಯಾಗುತ್ತದೆ.

ರೈತ ಬಂಧು ಯೋಜನೆಯು ದೇಶದ ಮೊದಲ ನೇರ ರೈತ ಹೂಡಿಕೆ ಬೆಂಬಲದ ಯೋಜನೆಯಾಗಿದೆ. ಇಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲಾಗುತ್ತದೆ. ಈ ಯೋಜನೆಗಾಗಿ ತೆಲಂಗಾಣ ಸರ್ಕಾರ ಆರಂಭದಲ್ಲಿ 12,000 ಕೋಟಿ ರೂಪಾಯಿಯನ್ನು ಹಂಚಿಕೆ ಮಾಡಿತ್ತು.

ಚುನಾವಣಾ ಆಯೋಗ ಈ ರೈತ ಬಂಧು ಯೋಜನೆ ತಡೆದುದು ಯಾಕೆ

ಚುನಾವಣಾ ನೀತಿ ಸಂಹಿತೆಯ ಅನುಸಾರವಾಗಿ ಪ್ರಚಾರ ಮಾಡದೇ ಇದ್ದಲ್ಲಿ ಈ ಋತುವಿನಲ್ಲಿ ರಬಿ ಕೊಯ್ಲಿಗೆ ಹಣವನ್ನು ವಿತರಿಸಬಹುದು ಎಂದು ಸರ್ಕಾರಕ್ಕೆ ಚುನಾವಣಾ ಆಯೋಗವು ಅವಕಾಶ ನೀಡಿತ್ತು.

ಆದರೆ, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ತೆಲಂಗಾಣ ಸರ್ಕಾರದ ಹಣಕಾಸು ಸಚಿವರು ರೈತ ಬಂಧು ಯೋಜನೆಯ ಹಣವನ್ನು ಸೋಮವಾರ ವಿತರಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಿದರು.

“ರೈತ ಬಂಧು ಯೋಜನೆಯ ಹಣವನ್ನು ಸೋಮವಾರ ನೀಡಲಾಗುವುದು. ರೈತರು ಬೆಳಗಿನ ಉಪಾಹಾರ ಮತ್ತು ಚಹಾ ಸೇವಿಸುವ ಮೊದಲೇ ಅವರ ಖಾತೆಗೆ ಹಣ ಜಮೆಯಾಗಲಿದೆ” ಎಂದು ಸಾರ್ವಜನಿಕವಾಗಿ ಅವರು ಘೋಷಿಸಿದ್ದರು.

ಅವರ ಈ ನಡೆ, ಚುನಾವಣಾ ಆಯೋಗದ ಷರತ್ತು ಬದ್ಧ ಅವಕಾಶದ ಉಲ್ಲಂಘನೆಯಾಗಿತ್ತು. ಹೀಗಾಗಿ ಈ ಹಣ ಬಿಡುಗಡೆ ಮಾಡದಂತೆ ಆಯೋಗವು ಸರ್ಕಾರವನ್ನು ತಡೆದಿದೆ.