ದೆಹಲಿ ಚಲೋ; ಮಧ್ಯ ಪ್ರದೇಶದಲ್ಲಿ ಹುಬ್ಬಳ್ಳಿಯ ರೈತರ ಬಂಧನ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಚಲೋ; ಮಧ್ಯ ಪ್ರದೇಶದಲ್ಲಿ ಹುಬ್ಬಳ್ಳಿಯ ರೈತರ ಬಂಧನ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ

ದೆಹಲಿ ಚಲೋ; ಮಧ್ಯ ಪ್ರದೇಶದಲ್ಲಿ ಹುಬ್ಬಳ್ಳಿಯ ರೈತರ ಬಂಧನ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ

ದೆಹಲಿ ಚಲೋ ಪ್ರತಿಭಟನೆಗಾಗಿ ತೆರಳುತ್ತಿದ್ದ ಹುಬ್ಬಳ್ಳಿಯ ರೈತರನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ಈ ಕುರಿತು ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.

ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದ ಹುಬ್ಬಳ್ಳಿಯ ರೈತರನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ಈ ವಿಚಾರವಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.
ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದ ಹುಬ್ಬಳ್ಳಿಯ ರೈತರನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ಈ ವಿಚಾರವಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ಭೋಪಾಲ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ (ಫೆ.13) ನಿಗದಿಯಾಗಿರುವ ರೈತರ ಪ್ರತಿಭಟನೆಗೆ ಮುಂಚಿತವಾಗಿ ಕರ್ನಾಟಕದ ಹುಬ್ಬಳ್ಳಿಯಿಂದ ದೆಹಲಿಗೆ ತೆರಳುತ್ತಿದ್ದ ರೈತರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದರು.

ರಾಜ್ಯಗಳ ಗಡಿಭಾಗದಲ್ಲಿ ಕಟ್ಟಿನಿಟ್ಟಿನ ನಿಗಾವಹಿಸಿರುವ ಪೊಲೀಸರು, ರೈತರು ದೆಹಲಿ ಕಡೆಗೆ ಹೋಗದಂತೆ ತಡೆಯುತ್ತಿದ್ದಾರೆ. ಈ ನಡುವೆ, ದೆಹಲಿಯಲ್ಲೂ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಹರಿಯಾಣದೊಂದಿಗಿನ ದೆಹಲಿಯ ಗಡಿಗಳ ಸುತ್ತಲೂ ಟಿಕ್ರಿ, ಸಿಂಘು ಮತ್ತು ಗಾಜಿಪುರದಲ್ಲಿ ಪೊಲೀಸರು ಹೆಚ್ಚುವರಿ ಪಿಕೆಟ್‌ಗಳು, ಬ್ಯಾರಿಕೇಡ್‌ಗಳು, ರಸ್ತೆ ತಡೆಗಳು ಮತ್ತು ಇತರ ತಾತ್ಕಾಲಿಕ ಮತ್ತು ಅರೆ ಶಾಶ್ವತ ರಚನೆಗಳನ್ನು ನಿರ್ಮಿಸಿದ್ದಾರೆ.

ಗುಪ್ತಚರ ಮಾಹಿತಿ ಆಧರಿಸಿ ಕರ್ನಾಟಕದ ರೈತರ ಬಂಧನ

ದೆಹಲಿಯ ಪ್ರತಿಭಟನೆಗೆ ಸಂಬಂಧಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕರ್ನಾಟಕದ ರೈತರನ್ನು ಭಾನುವಾರ ರಾತ್ರಿ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರದೇಶದ ರೈತ ಮುಖಂಡ ಅನಿಲ್ ಯಾದವ್ ಅವರು ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ ಸಂದೇಶ ಪ್ರಕಾರ, ಭಾನುವಾರ ರಾತ್ರಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಮತ್ತು ಪೊಲೀಸರು ಇನ್ನೊಬ್ಬ ರೈತ ನಾಯಕನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.

ಭೋಪಾಲ್ ಉಪ ಪೊಲೀಸ್ ಆಯುಕ್ತ ಅವದೇಶ್ ಗೋಸ್ವಾಮಿ ಅವರು ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ದೆಹಲಿಯಲ್ಲಿ ಸಭೆಗಳನ್ನು ನಿಷೇಧಿಸಿರುವುದರಿಂದ ಪೊಲೀಸರು ರೈತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದೆಹಲಿಗೆ ಹೋಗಲು ಅವರಿಗೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರದೇಶದ ನರ್ಮದಾಪುರಂನ ಪೊಲೀಸ್ ವರಿಷ್ಠಾಧಿಕಾರಿ ಗುರು ಕರಣ್ ಸಿಂಗ್ ಮಾತನಾಡಿ, ರೈತ ಮುಖಂಡರಾದ ಶಿವರಾಜ್ ರಾಜೋರಿಯಾ, ಮಹೇಶ್ ಉಪಾಧ್ಯಾಯ ಮತ್ತು ಸಚಿನ್ ಶರ್ಮಾ ಅವರನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಜೈಲಿಗೆ ಕಳುಹಿಸಿದ್ದಾರೆ. "ಪ್ರತಿಭಟನೆಯಲ್ಲಿ ಭಾಗವಹಿಸಲು ಮೂವರು ನಾಯಕರು ದೆಹಲಿಗೆ ಹೋಗುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆದ್ದರಿಂದ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 (ಶಾಂತಿಗೆ ಭಂಗ) ಪ್ರಕಾರ ಬಂಧಿಸಲಾಗಿದೆ" ಎಂದು ಅವರು ಹೇಳಿದರು.

ಗ್ವಾಲಿಯರ್, ಜಬಲ್ಪುರ್ ಮತ್ತು ಚಿಂದ್ವಾರಾದಲ್ಲಿಯೂ ರೈತ ಮುಖಂಡರನ್ನು ಬಂಧಿಸಲಾಗಿದೆ.

ರೈತರ ಬಂಧನ ಖಂಡಿಸಿದ ಕರ್ನಾಟಕ ಸಿಎಂ

ಮಧ್ಯಪ್ರದೇಶದಲ್ಲಿ ರೈತ ಮುಖಂಡರ ಮೇಲೆ ನಡೆದ ಹಲ್ಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.

"ನಾಳೆ ದೆಹಲಿಯಲ್ಲಿ ಪ್ರತಿಭಟನೆಗೆ ತೆರಳುತ್ತಿದ್ದ ಹುಬ್ಬಳ್ಳಿ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿರುವುದು ಅತ್ಯಂತ ಖಂಡನೀಯ" ಎಂದು ಅವರು ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಮ್ಮ ರಾಜ್ಯದ ಎಲ್ಲ ರೈತರನ್ನು ತತ್‌ಕ್ಷಣ ಬಿಡುಗಡೆ ಮಾಡುವಂತೆ ಮತ್ತು ದೆಹಲಿಯ ಜಂತರ್ ಮಂತರ್‌ನ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಅವರು ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿದರು.

"ಮಧ್ಯಪ್ರದೇಶ ಸರ್ಕಾರವು ಬಂಧನಗಳನ್ನು ಮಾಡಿದ್ದರೂ, ಈ ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವಾಗಿದೆ ಎಂಬುದು ಸ್ಪಷ್ಟವಾಗಿದೆ" ಎಂದು ಅವರು ಟೀಕಿಸಿದರು.

ಬಿಜೆಪಿ ಯಾವಾಗಲೂ ರೈತರನ್ನು ಗುರಿಯಾಗಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

"ಕೇಂದ್ರದಲ್ಲಿರಲಿ ಅಥವಾ ರಾಜ್ಯಗಳಲ್ಲಿರಲಿ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ, ಅವರ ಮೊದಲ ಆಕ್ರಮಣಕಾರಿ ಕೃತ್ಯವು ರೈತರ ವಿರುದ್ಧವಾಗಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ, ರಸಗೊಬ್ಬರ ಕೇಳುವ ರೈತರನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರ್ದಯವಾಗಿ ಹೊಡೆದುರುಳಿಸಿತು. ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರವು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ನಡೆಸಿದ ಹಿಂಸಾಚಾರದಿಂದಾಗಿ ಹಲವಾರು ರೈತರು ಸಾವನ್ನಪ್ಪಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಪ್ರಸ್ತುತ ಕ್ರಮಗಳನ್ನು ನೋಡಿದರೆ, ರೈತರನ್ನು ಬೆದರಿಸುವುದು ಅವರ ಮುಖ್ಯ ಉದ್ದೇಶವೆಂದು ತೋರುತ್ತದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರವು 2020ರ ಸೆಪ್ಟೆಂಬರ್‌ನಲ್ಲಿ ಮೂರು ಕೃಷಿ ಸುಧಾರಣಾ ಕಾನೂನು ಜಾರಿಗೊಳಿಸಿದ ಬಳಿಕ ರೈತರು ಅತಿ ದೀರ್ಘಾವಧಿಯ ಪ್ರತಿಭಟನೆ ನಡೆಸಿ ಅದನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅಂದಿನಿಂದ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕಾನೂನುಗಳನ್ನು ವಿರೋಧಿಸುವ ಸಾವಿರಾರು ರೈತರು ಸುಮಾರು 14 ತಿಂಗಳು ಕಾಲ ಹಲವಾರು ರಾಜ್ಯಗಳ ಹೆದ್ದಾರಿಗಳ ಬದಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅವರು ವಾಸ್ತವ್ಯಕ್ಕಾಗಿ ಗಾಜಿಪುರ, ಸಿಂಘು ಮತ್ತು ಟಿಕ್ರಿ ಸೇರಿದಂತೆ ಐದು ಸ್ಥಳಗಳಲ್ಲಿ ಪ್ರತಿಭಟನಾ ಟೌನ್‌ಶಿಪ್‌ಗಳನ್ನು ಸ್ಥಾಪಿಸಲಾಗಿತ್ತು.

(This copy first appeared in Hindustan Times Kannada website. To read more like this please logon to kannada.hindustantime.com)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.