Budget 2024: ನಿರ್ಮಲಾ ಸೀತಾರಾಮನ್‌ ಮಂಡಿಸುವ ಬಜೆಟ್‌ನಲ್ಲಿ 5 ಪ್ರಮುಖ ಅಂಶಗಳು ಏನಿರಬಹುದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024: ನಿರ್ಮಲಾ ಸೀತಾರಾಮನ್‌ ಮಂಡಿಸುವ ಬಜೆಟ್‌ನಲ್ಲಿ 5 ಪ್ರಮುಖ ಅಂಶಗಳು ಏನಿರಬಹುದು

Budget 2024: ನಿರ್ಮಲಾ ಸೀತಾರಾಮನ್‌ ಮಂಡಿಸುವ ಬಜೆಟ್‌ನಲ್ಲಿ 5 ಪ್ರಮುಖ ಅಂಶಗಳು ಏನಿರಬಹುದು

ಲೋಕಸಭೆ ಚುನಾವಣೆಗೆ ಹೋಗುತ್ತಿರುವಾಗ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುವ ಬಜೆಟ್‌ ಮಂಡಿಸುತ್ತಿದ್ದಾರೆ. ಹೇಗಿರಬಹುದು ಅವರ 2024-25ನೇ ಸಾಲಿನ ಬಜೆಟ್‌ ಎನ್ನುವ ಪ್ರಶ್ನೆಗಳಿವೆ.

ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಆರನೇ ಬಜೆಟ್‌ ಅನ್ನು ಫೆಬ್ರವರಿ 1ರಂದು ಮಂಡಿಸುವರು.
ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಆರನೇ ಬಜೆಟ್‌ ಅನ್ನು ಫೆಬ್ರವರಿ 1ರಂದು ಮಂಡಿಸುವರು.

ದೆಹಲಿ: ಇನ್ನೇನು ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೆ ಕಾಯುತ್ತಿರುವಾಗಲೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ಈ ಬಾರಿಯ ಮಧ್ಯಂತರ ಬಜೆಟ್‌ ಅನ್ನು ಮಂಡಿಸಲು ಅಣಿಯಾಗಿದ್ದಾರೆ. ಇದು ಚುನಾವಣೆ ಬಜೆಟ್‌ ಆಗಿರುವುದರಿಂದ ಅಷ್ಟೇನೂ ಮಹತ್ವ ಇರುವುದಿಲ್ಲ. ಬರೀ ಲೇಖಾನುದಾನಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆಗಳು ಮಾತ್ರ ನಡೆಯುತ್ತದೆ. ಈ ಕಾರಣದಿಂದ ವಿಶೇಷತೆಗಳೇನು ಇರುವುದಿಲ್ಲ. ಆದರೂ ಬಜೆಟ್‌ನಲ್ಲಿ ಕೆಲವು ವಲಯಗಳಿಗೆ ಶಕ್ತಿ ತುಂಬಿ ಜಿಡಿಪಿ ದರ ವೃದ್ದಿ. ವಿತ್ತೀಯ ಕೊರತೆ ನೀಗಿಸುವ ಕ್ರಮಗಳನ್ನು ನಿರ್ಮಲಾ ಸೀತಾರಾಮನ್‌ ಕೈಗೊಳ್ಳುವ ನಿರೀಕ್ಷೆಗಳಿವೆ.

ಈಗಾಗಲೇ ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ ಯಾವುದೇ ಭಾರೀ ಘೋಷಣೆಗಳಂತೂ ಈ ಬಜೆಟ್‌ನಲ್ಲಿ ಇರುವುದಿಲ್ಲ ಎನ್ನುವ ಮಾತುಗಳನ್ನಾಡಿದ್ದಾರೆ.

ಈ ಬಾರಿ ನಾನೇನು ಭರ್ಜರಿ ಆಟವನ್ನೇನೂ ಆಡುವುದಿಲ್ಲ. ಏಕೆಂದರೆ ಈ ಬಾರಿ ಮಂಡನೆ ಆಗಲಿರುವ ಬಜೆಟ್‌ ಬರೀ ಲೇಖಾನುದಾನಕ್ಕೆ ಅನುಮತಿ ಪಡೆಯುವ ಕ್ರಮ ಎನ್ನುವುದು ಎಲ್ಲರಿಗೂ ತಿಳಿದಿದೆ. ಚುನಾವಣೆ ಇರುವ ಕಾರಣದಿಂದ ಇದು ನಡೆದುಕೊಂಡು ಬಂದಿರುವ ಸಂಪ್ರದಾಯವೇ. ಹೊಸ ಸರ್ಕಾರ ಬರುವವರೆಗೂ ಖರ್ಚು ವೆಚ್ಚಗಳಿಗೆ ಅನುಮತಿ ಪಡೆಯುವ ಕೆಲಸ ಮಾಡುತ್ತೇವೆ ಎನ್ನುವುದು ನಿರ್ಮಲ ಸೀತಾರಾಮನ್‌ ಅಭಿಪ್ರಾಯ.

ಚುನಾವಣೆ ಮುಗಿದು ಹೊಸ ಸರ್ಕಾರ ಬಂದ ನಂತರ 2024-25 ನೇ ಸಾಲಿನ ಬಜೆಟ್‌ ಅನ್ನು ಜುಲೈನಲ್ಲಿ ಮಂಡಿಸಲಾಗುತ್ತದೆ. ಇದರ ನಡುವೆಯೂ ಐದು ಅಂಶಗಳ ಮೇಲೆ ಬಜೆಟ್‌ನಲ್ಲಿ ಒತ್ತು ನಿರೀಕ್ಷೆಗಳೂ ಇವೆ.

  1. ಬಂಡವಾಳ ವೆಚ್ಚ

ಆರ್ಥಿಕ ಬೆಳವಣಿಗೆಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರವು ಬಂಡವಾಳ ವೆಚ್ಚ ಪ್ರಮಾಣವನ್ನು ಹೆಚ್ಚಿಸಬಹುದು. ಅದರಲ್ಲು ವಿಶೇಷವಾಗಿ ಮೂಲಸೌಕರ್ಯ ವಲಯಕ್ಕೆ ಹೆಚ್ಚಿನ ಆದ್ಯತೆಯನ್ನು ಈ ಬಜೆಟ್‌ನಲ್ಲಿ ನೀಡುವ ಸಾಧ್ಯತೆಗಳು ಅಧಿಕವಾಗಿವೆ. ಈಗಾಗಲೇ ಬಜೆಟ್‌ ಪೂರ್ವ ನಿರೀಕ್ಷೆಗಳಲ್ಲಿ ಐಸಿಆರ್‌ಎ (ICRA Investment Information and Credit Rating Agency ) ಕೂಡ ಇದನ್ನೇ ಒತ್ತಿ ಹೇಳಿದೆ. ಈ ಬಾರಿ ಬಜೆಟ್‌ನಲ್ಲಿ ಮೂಲಸೌಕರ್ಯ ವಲಯಕ್ಕೆ ಕನಿಷ್ಠ 10.2 ಲಕ್ಷ ಕೋಟಿ ಗೂ.ಗಳಾಷ್ಟರೂ ಈ ವಲಯದ ಮೇಲೆ ಹಂಚಿಕೆಯಾದರೆ ಪ್ರಗತಿಗೆ ಸಹಕಾರಿಯಾಗಲಿದೆ. ಕೋವಿಡ್‌ ವೇಳೆ ಈ ವಲಯದ ಮೇಲೆ ಹೂಡಿಕೆ ತಗ್ಗಿ ಆನಂತರದ ಎರಡು ವರ್ಷದಲ್ಲಿ ಶೇ. 20 ರ ದರದಲ್ಲಿ ಹೂಡಿಕೆ ಪ್ರಮಾಣ ಏರಿಕೆಯಾಗಿದೆ. ಈ ಬಾರಿಯೂ ಹೆಚ್ಚಿನ ಒತ್ತು ಮೂಲಸೌಕರ್ಯದ ಮೇಲೆ ದೊರೆತರೆ ಆರ್ಥಿಕ ಚಟುವಟಿಕೆ ಹಿಗ್ಗಲಿದೆ. ಇದು ಜಿಡಿಪಿ ಪ್ರಗತಿಗೂ ದಾರಿಯಾಗಲಿದೆ ಎನ್ನುವುದು ಐಸಿಆರ್‌ಎ ವಿವರಣೆ.

2. ಉದ್ಯೋಗ ಸೃಷ್ಟಿ

ಉದ್ಯೋಗ ಸೃಷ್ಟಿಯ ಸವಾಲುಗಳಿಗೆ ಈ ಬಾರಿ ಬಜೆಟ್‌ನಲ್ಲಿ ಕೆಲ ಪರಿಹಾರಗಳನ್ನು ಕಂಡುಕೊಳ್ಳಬಹುದು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ಕೊಡಬಹುದು. ಉತ್ಪಾದನಾ ಆಧರಿತ ಪ್ರೋತ್ಸಾಹಕಗಳನ್ನು ಘೋಷಿಸಿ ಈ ಗ್ರಾಮೀಣ ಮೂಲಸೌಕರ್ಯ ವೃದ್ದಿಗೆ ಹೂಡಿಕೆಗಳನ್ನು ಹೆಚ್ಚಿಸಲು ದಾರಿ ಮಾಡಿಕೊಡಬಹುದು. ಅದರಲ್ಲೂ ರಾಸಾನಿಯಕಗಳು ಹಾಗೂ ಸೇವಾ ವಲಯದ ಮೇಲೆ ಗಮನ ನೀಡಬಹುದು.

ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ವೃದ್ದಿಗೆ ಪೂರಕವಾಗಿ ಹೆಚ್ಚಿನ ಹೂಡಿಕೆಗೆ ವಿಶೇಷ ಒತ್ತು ನೀಡುವುದು ಉದ್ಯೋಗ ಕಲ್ಪಿಸಲು ಇರುವ ಒಂದು ಮಾರ್ಗ, ಅದರಲ್ಲೂ ಪ್ರೋತ್ಸಾಹಕಗಳನ್ನು ಈ ವಲಯಕ್ಕೆ ನೀಡಲೇಬೇಕಾಗುತ್ತದೆ. ಅದರಲ್ಲೂ ರಾಸಾಯನಿಕ ಹಾಗೂ ಸೇವಾ ವಲಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ವಲಯದಲ್ಲಿ ಉತ್ಪಾದನೆ ಅಧಿಕಗೊಳಿಸಿ ಬೇಡಿಕೆಯನ್ನೂ ಹೆಚ್ಚಿಸಬಹುದು ಎನ್ನುವುದು ಡೆಲೋಯಿಟ್ಟೆ ನೀಡುವ ವಿವರಣೆ.

3. ವಿತ್ತೀಯ ಕೊರತೆ

ಚುನಾವಣೆ ಒತ್ತಡಗಳು ಇರುವಾಗ ನಿರ್ಮಲಾ ಸೀತಾರಾಮನ್‌ ಅವರು ವಿತ್ತೀಯ ಕೊರತೆ ತಗ್ಗಿಸುವ ಪ್ರಯತ್ನಗಳನ್ನು ಬಜೆಟ್‌ ಮೂಲಕ ಮಾಡಬಹುದು. ಸದ್ಯ ಭಾರತದ ಜಿಡಿಪಿ ದರ 5.3 ರಷ್ವಕ್ಕೆ ಇಳಿಸುವ ಕಡಿಮೆ ಮಾಡಲು ಯತ್ನಿಸಬಹುದು.

ಎಂತಹ ಚುನಾವಣೆ ಒತ್ತಡಗಳಿದ್ದರೂ ಕೇಂದ್ರ ಸರ್ಕಾರವು ವ ಇತ್ತೀಯ ಕೊರತೆಯನ್ನು 5.3ಕ್ಕೆ ಇಳಿಸುವ ಯತ್ನ ಮಾಡಬಹುದು. ಕೇಂದ್ರ ಸರ್ಕಾರವು ಹಿಂದಿನ ಸಾಲಿನ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು 5.9 ಕ್ಕೆ ಇಳಿಸುವ ಭರವಸೆ ನೀಡಿತ್ತು. ಇದನ್ನು ಈ ಬಜೆಟ್‌ ಮೂಲಕ ಸರಿದೂಗಿಸಬಹುದು ಎನ್ನುವ ನಿರೀಕ್ಷೆಗಳಿವೆ.

ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ (Fiscal Deficit) ಎಂದರೆ, ಸರ್ಕಾರದ ಒಟ್ಟು ಖರ್ಚು ಹಾಗೂ ಅದರ ಆದಾಯದ ನಡುವೆ ಇರುವ ವ್ಯತ್ಯಾಸ. ಈ ಆದಾಯದಲ್ಲಿ ಸಾಲ ಪಡೆದ ಹಣ ಒಳಗೊಂಡಿರುವುದಿಲ್ಲ. ವಿತ್ತೀಯ ಕೊರತೆ ಹೆಚ್ಚಾದರೆ ಏನಾಗುತ್ತದೆ? ಸರ್ಕಾರವು ಹೆಚ್ಚು ಸಾಲ ಮಾಡಬೇಕಾಗುತ್ತದೆ ಅಥವಾ ಹೆಚ್ಚು ಹಣವನ್ನು ಟಂಕಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕೇಳಿಕೊಳ್ಳಬಹುದು.

4. ಸಾಮಾಜಿಕ ಭದ್ರತಾ ಯೋಜನೆಗಳು

ಈ ಬಾರಿಯೂ ಕೇಂದ್ರ ಸರ್ಕಾರವೂ ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ಹೆಚ್ಚಿನ ಅನುದಾನವನ್ನು ಮೀಸಲಿಡಬಹುದು. ಈಗಾಗಲೇ ದೇಶದಲ್ಲಿ ತೆರಿಗೆ ಸಂಗ್ರಹ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡು ಬಂದಿರುವುದರಿಂದ ಸಾಮಾಜಿಕ ಯೋಜನೆಗಳು ಹೆಚ್ಚಿನ ಶಕ್ತಿ ಪಡೆಯಬಹುದು. ಈ ಕುರಿತು ವರದಿ ಮಾಡಿರುವ ಪಿಟಿಐ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹಗಳು ಹೆಚ್ಚಳವಾಗಿದೆ. ಈ ವರ್ಷದ ನೇರ ತೆರಿಗೆ ಹೊಂದಾಣಿಕೆಗಳಿಂದ 1 ಲಕ್ಷ ಕೋಟಿ ರೂ. ಮೀಸಲಿಡಬಹುದು ಎನ್ನಲಾಗುತ್ತಿದೆ.

5. ಬಳಕೆ ಪ್ರಮಾಣ

ವಿಶೇಷವಾಗಿ ಕೃಷಿ ವಲಯಕ್ಕೆ ಒತ್ತು ನೀಡುವ ಭಾಗವಾಗಿ, ಬಳಕೆ ಬೇಡಿಕೆ ಅಧಿಕಗೊಳಿಸುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಬಜೆಟ್‌ನಲ್ಲಿ ತೆಗೆದುಕೊಳ್ಳಬಹುದು. ಭಾರತದಲ್ಲಿ ಕೃಷಿ ವಲಯದ ಪ್ರಗತಿ ಈ ಬಾರಿ ಶೇ1.8 ಕ್ಕೆ ಕುಸಿಯುವ ಆತಂಕಗಳೂ ಇವೆ. 2022-23ರಲ್ಲಿ ಕೃಷಿ ವಲಯದ ಪ್ರಗತಿ ಶೇ. 4ರಷ್ಟಿತ್ತು. ಈ ಕಾರಣದಿಂದ ಕೃಷಿ ವಲಯಕ್ಕೆ ಉತ್ತೇಜನ ಸಿಗಬಹದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.