PM Modi Top quotes: ಸಂಸತ್ತಿನ ವಿಶೇಷ ಅಧಿವೇಶನ ಶುರು, ನೆಹರು ಭಾಷಣ ನೆನಪಿಸಿಕೊಂಡ ಪ್ರಧಾನಿ ಮೋದಿ, ಟಾಪ್ 5 ಹೇಳಿಕೆಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Top Quotes: ಸಂಸತ್ತಿನ ವಿಶೇಷ ಅಧಿವೇಶನ ಶುರು, ನೆಹರು ಭಾಷಣ ನೆನಪಿಸಿಕೊಂಡ ಪ್ರಧಾನಿ ಮೋದಿ, ಟಾಪ್ 5 ಹೇಳಿಕೆಗಳು

PM Modi Top quotes: ಸಂಸತ್ತಿನ ವಿಶೇಷ ಅಧಿವೇಶನ ಶುರು, ನೆಹರು ಭಾಷಣ ನೆನಪಿಸಿಕೊಂಡ ಪ್ರಧಾನಿ ಮೋದಿ, ಟಾಪ್ 5 ಹೇಳಿಕೆಗಳು

PM Modi Top quotes: ಸಂಸತ್‌ ಕಲಾಪದ 75 ವರ್ಷಗಳ ಪಯಣವನ್ನು ಸ್ಮರಿಸುವ ಸಂಸತ್ತಿನ ವಿಶೇಷ ಅಧಿವೇಶನ ಇಂದು (ಸೆ.18) ಶುರುವಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದ ಪ್ರಮುಖಾಂಶಗಳು ಇಲ್ಲಿವೆ.

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಸಂಸತ್ತಿನ ವಿಶೇಷ ಅಧಿವೇಶನ (Parliament Special Session) ಇಂದು (ಸೆ.18) ಶುರುವಾಗಿದೆ. ಇಂದಿನಿಂದ 5 ದಿನಗಳ ಕಾಲ ನಡೆಯುವ ಈ ವಿಶೇಷ ಅಧಿವೇಶನ ಸಂಸತ್ ಕಲಾಪದ 75 ವರ್ಷಗಳ ಪಯಣವನ್ನು (Parliament Journey of 75 years) ಸ್ಮರಿಸುವಂಥದ್ದು ಮತ್ತು ಪ್ರಮುಖ ಮಸೂದೆಗಳನ್ನು ಅಂಗೀಕರಿಸುವುದಕ್ಕೆ ಸಂಬಂಧಿಸಿದ್ದಾಗಿದೆ.

ಶಾಸಕಾಂಗದ ಮೇಲೆ ನಾಗರಿಕರ ವಿಶ್ವಾಸ ಹೆಚ್ಚಾಗಿರುವುದೇ ಭಾರತದ ಸಂಸದೀಯ ಪಯಣದ ದೊಡ್ಡ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆಯಲ್ಲಿ ಹೇಳಿದರು.

ಪ್ರಸ್ತುತ ಸಂಸತ್ತಿನ ಕಟ್ಟಡಕ್ಕೆ ಮೊದಲ ಬಾರಿಗೆ ತಮ್ಮ ಪ್ರವೇಶವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಇದು ಭಾವನಾತ್ಮಕ ಕ್ಷಣ. ಜನರಿಂದ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದು ಹೇಳಿದರು.

ಜಿ 20 ಶೃಂಗಸಭೆಯ ಯಶಸ್ಸನ್ನು ಎತ್ತಿ ತೋರಿಸಿದ ಪ್ರಧಾನಿ ನರೇಂದ್ರ ಮೋದಿ, ಇದು 140 ಕೋಟಿ ನಾಗರಿಕರ ಯಶಸ್ಸು. ಒಬ್ಬ ವ್ಯಕ್ತಿ ಅಥವಾ ಪಕ್ಷದಲ್ಲ ಎಂದು ಹೇಳಿದರು.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖ ಅಂಶಗಳು ಹೀಗಿವೆ

75 ವರ್ಷಗಳ ಸಂಸದೀಯ ಪಯಣವನ್ನು ಸಂಕ್ಷಿಪ್ತವಾಗಿ ಅವಲೋಕಿಸಿದ ಪ್ರಧಾನಿ ಮೋದಿ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪ್ರಸಿದ್ಧ “ಟ್ರಿಸ್ಟ್‌ ವಿತ್ ಡೆಸ್ಟಿನಿ” ಭಾಷಣವನ್ನು ನೆನಪಿಸಿಕೊಂಡು ಅದು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಜಿ20 ಶೃಂಗದ ವಿಚಾರ

ಜಿ20ಯ ಯಶಸ್ಸು 140 ಕೋಟಿ ಭಾರತೀಯರದ್ದು, ಇದು ಭಾರತದ ಯಶಸ್ಸು. ಇದು ಒಬ್ಬ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಯಶಸ್ಸಲ್ಲ. ಅನೇಕರಲ್ಲಿ ಭಾರತವನ್ನು ಅನುಮಾನಿಸುವ ಪ್ರವೃತ್ತಿ ಇದೆ. ಇದು ಸ್ವಾತಂತ್ರ್ಯದ ನಂತರವೂ ಮುಂದುವರೆದಿದೆ. ಈ ಬಾರಿಯೂ (ಜಿ20) ಘೋಷಣೆ ಇರುವುದಿಲ್ಲ ಎಂದು ಅವರು ನಂಬಿದ್ದರು. ಆದಾಗ್ಯೂ, ಜಿ20 ಘೋಷಣೆ ಸಂಭವಿಸಿದೆ. ಅದು ಭಾರತದ ಶಕ್ತಿ ಎಂದು ಪ್ರಧಾನಿ ಮೋದಿ ಅತ್ಯಂತ ವಿಶ್ವಾಸದೊಂದಿಗೆ ಹೇಳಿದರು.

ಹಳೆಯ ಸಂಸತ್‌ ಭವನ ಕಟ್ಟಡಕ್ಕೆ ವಿದಾಯ

"ನಾನು ಸಂಸದನಾಗಿ ಮೊದಲ ಬಾರಿಗೆ ಈ ಭವನವನ್ನು (ಸಂಸತ್ತು) ಪ್ರವೇಶಿಸಿದಾಗ, ನಾನು ಪ್ರಜಾಪ್ರಭುತ್ವದ ಮಂದಿರಕ್ಕೆ ನಮಸ್ಕರಿಸಿ ಗೌರವಿಸಿದೆ. ಅದು ನನಗೆ ಭಾವನಾತ್ಮಕ ಕ್ಷಣವಾಗಿತ್ತು. ರೈಲ್ವೆ ಪ್ಲಾಟ್‌ಫಾರಂನಲ್ಲಿ ಬದುಕು ರೂಪಿಸಿಕೊಳ್ಳುತ್ತಿದ್ದ ಬಡಕುಟುಂಬಕ್ಕೆ ಸೇರಿದ ಮಗುವಾಗಿ ಈ ಸಂಸತ್‌ ಭವನಕ್ಕೆ ಪ್ರವೇಶಿಸುವುದು ಸಾಧ್ಯವಾಗುವುದು ಎಂದು ಊಹಿಸಿಯೂ ಇರಲಿಲ್ಲ. ಜನರಿಂದ ಇಷ್ಟೊಂದು ಪ್ರೀತಿಯನ್ನು ಪಡೆಯುತ್ತೇನೆ ಎಂದೂ ಗೊತ್ತಿರಲಿಲ್ಲ.

ಈ ಕಟ್ಟಡಕ್ಕೆ ವಿದಾಯ ಹೇಳುವುದು ಒಂದು ಭಾವನಾತ್ಮಕ ಕ್ಷಣ...ಅನೇಕ ಕಹಿ-ಸಿಹಿ ನೆನಪುಗಳು ಇದರೊಂದಿಗೆ ಸೇರಿಕೊಂಡಿವೆ. ನಾವೆಲ್ಲರೂ ಸಂಸತ್ತಿನಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿಗೆ ಸಾಕ್ಷಿಯಾಗಿದ್ದೇವೆ ಆದರೆ ಅದೇ ಸಮಯದಲ್ಲಿ ನಾವು 'ಪರಿವಾರ ಭಾವ'ವನ್ನೂ ನೋಡಿದ್ದೇವೆ. ಈ ಎಲ್ಲಾ ನೆನಪುಗಳು ನಮ್ಮ ಹಂಚಿಕೊಂಡ ನೆನಪುಗಳು, ನಮ್ಮ ಹಂಚಿಕೆಯ ಪರಂಪರೆ ಮತ್ತು ಆದ್ದರಿಂದ, ಅದರ ಹೆಮ್ಮೆಯೂ ನಮ್ಮ ನಡುವೆ ಹಂಚಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಜಿ20ಯಲ್ಲಿ ಆಫ್ರಿಕನ್ ಯೂನಿಯನ್ ಸೇರ್ಪಡೆ ಕುರಿತು

ಜಿ20ಯಲ್ಲಿ ಭಾರತದ ಅಧ್ಯಕ್ಷತೆ ಇರುವಾಗ ಆಫ್ರಿಕನ್ ಯೂನಿಯನ್ ತನ್ನ ಸದಸ್ಯತ್ವ ಪಡೆಯಿತು ಎಂಬುದು ಹೆಮ್ಮೆಯ ವಿಚಾರ. ಅದನ್ನು ಘೋ‍ಷಿಸಿದ ಭಾವನಾತ್ಮಕ ಕ್ಷಣವನ್ನು ಮರೆಯಲಾಗದು. ಆಫ್ರಿಕನ್ ಯೂನಿಯನ್ ಅಧ್ಯಕ್ಷರು ಆ ಸಂದರ್ಭದಲ್ಲಿ ಅತ್ಯಂತ ಭಾವುಕರಾಗಿದ್ದರು, ಬಹುಶಃ ಅವರು ಮಾತನಾಡುವಾಗಲೂ ಗದ್ಗದಿತರಾಗಿದ್ದರು. ಅಂತಹ ದೊಡ್ಡ ಭರವಸೆ ಮತ್ತು ನಿರೀಕ್ಷೆಗಳು ಭಾರತದ ಮೇಲಿದೆ. ಅದನ್ನು ಊಹಿಸುವುದು ಕೂಡ ಕಷ್ಟ. ಅದು ಭಾರತದ ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೆಹರು, ವಾಜಪೇಯಿ ಅವರ ಪ್ರಸಿದ್ಧ ಭಾಷಣಗಳನ್ನು ಸ್ಮರಿಸಿದ ಪ್ರಧಾನಿ

ಇದೇ ಸಂಸತ್‌ನಲ್ಲಿ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರು ಮಾಡಿದ ಮಧ್ಯರಾತ್ರಿಯ ಭಾಷಣ ಪ್ರತಿಧ್ವನಿಸುತ್ತಿದೆ. ಅದರ ಪ್ರೇರಣೆ ನಮ್ಮ ಮೇಲೆ ಸದಾ ಇದ್ದೇ ಇರುತ್ತದೆ. ಅದೇ ರೀತಿ ಅಟಲ್ ಬಿಹಾರ್ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಇದೇ ಸಂಸತ್ತಿನಲ್ಲಿ ಹೇಳಿದ, “ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಸರ್ಕಾರ ರಚನೆಯಾಗುತ್ತವೆ, ಪತನವಾಗುತ್ತವೆ, ಆದರೆ ಈ ದೇಶ ಉಳಿಯಬೇಕು” ಮಾತುಗಳು ಕೂಡ ಸದಾ ಸ್ಮರಣೀಯ.

ಸಂಸತ್ ಮೇಲೆ ಉಗ್ರ ದಾಳಿ ವಿಚಾರ

ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಇದು ಕಟ್ಟಡದ ಮೇಲಿನ ದಾಳಿಯಲ್ಲ. ಒಂದು ರೀತಿಯಲ್ಲಿ ಇದು ಪ್ರಜಾಪ್ರಭುತ್ವದ ತಾಯಿಯ ಮೇಲೆ, ನಮ್ಮ ಜೀವಾತ್ಮನ ಮೇಲೆ ನಡೆದ ದಾಳಿ. ಆ ಘಟನೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಸಂಸತ್ತಿನ ಮತ್ತು ಅದರ ಎಲ್ಲಾ ಸದಸ್ಯರನ್ನು ರಕ್ಷಿಸುವುದಕ್ಕಾಗಿ ಹುತಾತ್ಮರಾದವರಿಗೆ ನಾನು ನಮಸ್ಕರಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.