India AI Mission: ಭಾರತದಿಂದಲೂ ಡೀಪ್‌ಸೀಕ್, ಚಾಟ್‌ಜಿಪಿಟಿ ಪ್ರತಿಸ್ಪರ್ಧಿ ಎಐ ಮಾದರಿ ಅಭಿವೃದ್ಧಿ; ಐಟಿ ಸಚಿವ ಅಶ್ವಿನಿ ವೈಷ್ಣವ್ ಹೀಗಂದ್ರು
India AI Mission: ಚೀನಾದ ಡೀಪ್‌ಸೀಕ್ ಎಐ ಆಗಮನದ ಬಳಿಕ ಜಾಗತಿಕವಾಗಿ ಎಐ ರೇಸ್ ಆರಂಭವಾಗಿದೆ. ಇದೇ ಸಮಯದಲ್ಲಿ ಭಾರತವೂ ಎಐ ಮಾಡೆಲ್ ಅಭಿವೃದ್ಧಿಪಡಿಸುವ ಮಹಾತ್ವಕಾಂಕ್ಷೆಯ ಮಾತುಗಳನ್ನು ಆಡಿದೆ. ಭಾರತದಿಂದಲೂ ಡೀಪ್‌ಸೀಕ್, ಚಾಟ್‌ಜಿಪಿಟಿ, ಜೆಮಿನಿ ಪ್ರತಿಸ್ಪರ್ಧಿ ಎಐ ಅಭಿವೃದ್ಧಿ ಕುರಿತು ಐಟಿ ಸಚಿವ ಅಶ್ವಿನಿ ವೈಷ್ಣವ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಚೀನಾದ ಡೀಪ್‌ಸೀಕ್ ಎಐ ಆಗಮನದ ಬಳಿಕ ಜಾಗತಿಕವಾಗಿ ಎಐ ರೇಸ್ ಆರಂಭವಾಗಿದೆ. ಇದೇ ಸಮಯದಲ್ಲಿ ಭಾರತವೂ ಎಐ ಮಾದರಿ ಅಭಿವೃದ್ಧಿಪಡಿಸುವ ಮಹಾತ್ವಕಾಂಕ್ಷೆಯ ಮಾತುಗಳನ್ನು ಆಡಿದೆ. ಭಾರತದಿಂದಲೂ ಡೀಪ್‌ಸೀಕ್, ಚಾಟ್‌ಜಿಪಿಟಿ, ಜೆಮಿನಿ ಪ್ರತಿಸ್ಪರ್ಧಿ ಎಐ ಅಭಿವೃದ್ಧಿ ಕುರಿತು ಐಟಿ ಸಚಿವ ಅಶ್ವಿನಿ ವೈಷ್ಣವ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಾಟ್‌ಜಿಪಿಟಿ, ಡೀಪ್‌ಸೀಕ್ ಆರ್1 ಮತ್ತು ಇತರೆ ಎಐ ಶಕ್ತಿಗಳಿಗೆ ಎದುರಾಗಿ ತನ್ನದೇ ಆದ 'ಫೌಂಡೇಶನಲ್ ಮಾದರಿʼಯನ್ನು ನಿರ್ಮಿಸುವ ಯೋಜನೆಯನ್ನು ಭಾರತ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಆಪಲ್‌ನ ಆಪ್‌ಸ್ಟೋರ್‌ನಲ್ಲಿ ಚಾಟ್‌ಜಿಪಿಟಿಯನ್ನು ಚೀನಾದ ಡೀಪ್‌ಸೀಕ್ ಎಐ ಹಿಂದಿಕ್ಕಿ ಮೊದಲ ಸ್ಥಾನ ಪಡೆದು ಉತ್ತಮ ರೇಟಿಂಗ್‌ನ ಉಚಿತ ಅಪ್ಲಿಕೇಶನ್ ಆಗಿ ಹೊರಹೊಮ್ಮಿದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ. ಸಿಲಿಕಾನ್ ವ್ಯಾಲಿಯ ಓಪನ್ ಎಐ ಪ್ರಾಬಲ್ಯಕ್ಕೆ ಭಾರತವೂ ಸೆಡ್ಡು ಹೊಡೆಯುವ ನಿರೀಕ್ಷೆಯಿದೆ.
"ಭಾರತವು ವಿಶ್ವದರ್ಜೆಯ ಫೌಂಡೇಶನಲ್ ಮಾದರಿಯನ್ನು ನಿರ್ಮಿಸುತ್ತದೆ. ಜಗತ್ತಿನಾದ್ಯಂತ ಇರುವ ಅತ್ಯುತ್ತಮ ಮಾದರಿಗಳ ಜತೆ ಸ್ಪರ್ಧಿಸಲು ಇದರಿಂದ ಸಾಧ್ಯವಾಗುತ್ತದೆ" ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ತನ್ನ ಎಐ ಬ್ಲೂಪ್ರಿಂಟ್‌ನ ಮುಂದಿನ ಹಂತಗಳ ಕುರಿತು ಭಾರತ ಘೋಷಿಸಿದೆ. ಎಂಪನೇಲ್ಡ್ ಬಿಡ್ಡರ್‌ಗಳು ನೀಡುವ 18,693 ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ ಅಥವಾ ಜಿಪಿಯು ನಿರ್ಮಾಣವೂ ಸೇರಿದೆ. ಇದಕ್ಕಾಗಿ ಜಿಯೋ ಪ್ಲಾಟ್‌ಫಾರ್ಮ್‌ಗಳು, ಸಿಎಂಎಸ್ ಕಂಪ್ಯೂಟರ್‌ಗಳು, ಟಾಟಾಆ ಕಮ್ಯುನಿಕೇಷನ್ಸ್, ಇ2ಇ ನೆಟ್‌ವರ್ಕ್‌ಗಳು, ಯೊಟ್ಟಾ ಡೇಟಾ ಸೇವೆಗಳು ಮತ್ತು ಇತರ ಸೇವೆಗಳನ್ನೂ ಇದು ಒಳಗೊಂಡಿದೆ. ಇದರೊಂದಿಗೆ ಎಐ ಸೇಫ್ಟಿ ಯೂನಿವರ್ಸಿಟಿ ಸ್ಥಾಪಿಸಲಿದೆ. ಇದರಡಿಯಲ್ಲಿ ಎಂಟು ಪ್ರಾಜೆಕ್ಟ್‌ಗಳಿಗೆ ಅನುಮತಿ ನೀಡಲಿದೆ.
"ಭಾರತವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಭಾಷೆಗಳು, ಸಂಸ್ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ಎಐ ಮಾಡೆಲ್ ರಚಿಸಲಾಗುತ್ತದೆ. ನಮ್ಮ ದೇಶ ಮತ್ತು ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ದತ್ತಾಂಶಗಳು ಇರಲಿವೆ. ಇದೇ ಸಮಯದಲ್ಲಿ ಭಾರತದ ಎಐನಲ್ಲಿ ಬಯಾಸ್ ಅಥವಾ ಪಕ್ಷಪಾತದ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
"ಆಧುನಿಕ ತಂತ್ರಜ್ಞಾನ ಎಲ್ಲರಿಗೂ ಸಿಗುವಂತೆ ಆಗಬೇಕು. ಇದದು ಪ್ರಧಾನಮಂತ್ರಿಯವರ ಆರ್ಥಿಕ ಚಿಂತನೆಯಾಗಿದೆ. ನಾವು ಕೂಡ ಎಲ್ಲರ ಕೈಗೆ ಎಟುಕಬಹುದಾದ ಸೌಲಭ್ಯವನ್ನು ಒದಗಿಸುವ ಕುರಿತು ಆಲೋಚಿಸುತ್ತಿದ್ದೇವೆ" ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
"ಮುಂದಿನ 8-10 ತಿಂಗಳಲ್ಲಿ ನಮ್ಮಲ್ಲಿ ಕನಿಷ್ಠ 6 ಪ್ರಮುಖ ಡೆವಲಪರ್‌ಗಳು/ಸ್ಟಾರ್ಟಪ್‌ಗಳು ಫೌಂಡೇಶನಲ್ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸಲಿವೆ. ಇದು 4-6 ತಿಂಗಳಲ್ಲಿ ಸಾಧ್ಯವಾದರೂ ಅಚ್ಚರಿಯಿಲ್ಲ" ಎಂದು ಅವರು ಹೇಳಿದ್ದಾರೆ.
"ಕ್ರಮಾವಳಿಯ (Algorithmic) ದಕ್ಷತೆಯು ಬಹಳ ಮುಖ್ಯ. ಇದು ಜಗತ್ತು ಇಂದು ನೋಡುವುದಕ್ಕಿಂತಲೂ ಕಡಿಮೆ ವೆಚ್ಚ ಮತ್ತು ಕಡಿಮೆ ಸಮಯದಲ್ಲಿ ಸಾಧ್ಯವಾಗಲಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ ಭಾರತವು ವಿಶ್ವದರ್ಜೆಯ ಎಐ ಮಾದರಿಯ ಅಡಿಪಾಯ ಹೊಂದಿರಲಿದೆ" ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಎಐ ಮಿಷನ್‌ನಡಿ ಭಾರತ ಸರಕಾರವು ಎಐ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು 10,372 ಕೋಟಿ ರೂಗೆ ಅನುಮೋದನೆ ನೀಡಿತ್ತು.
