LPG subsidy: ಉಜ್ವಲ ಯೋಜನೆ ಎಲ್‌ಪಿಜಿ ಸಬ್ಸಿಡಿ 100 ರೂಪಾಯಿ ಹೆಚ್ಚಳ, ಫಲಾನುಭವಿಗೆ ಅಡುಗೆ ಸಿಲಿಂಡರ್ 603 ರೂಪಾಯಿಗೆ ಲಭ್ಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lpg Subsidy: ಉಜ್ವಲ ಯೋಜನೆ ಎಲ್‌ಪಿಜಿ ಸಬ್ಸಿಡಿ 100 ರೂಪಾಯಿ ಹೆಚ್ಚಳ, ಫಲಾನುಭವಿಗೆ ಅಡುಗೆ ಸಿಲಿಂಡರ್ 603 ರೂಪಾಯಿಗೆ ಲಭ್ಯ

LPG subsidy: ಉಜ್ವಲ ಯೋಜನೆ ಎಲ್‌ಪಿಜಿ ಸಬ್ಸಿಡಿ 100 ರೂಪಾಯಿ ಹೆಚ್ಚಳ, ಫಲಾನುಭವಿಗೆ ಅಡುಗೆ ಸಿಲಿಂಡರ್ 603 ರೂಪಾಯಿಗೆ ಲಭ್ಯ

ಕೇಂದ್ರ ಸಚಿವ ಸಂಪುಟ ಇಂದು (ಅ.4) ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳು ಖರೀದಿಸುವ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಯನ್ನು 100 ರೂಪಾಯಿ ಹೆಚ್ಚಿಸಿದೆ. ಇದರ ವಿವರ ಇಲ್ಲಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಸಾಂಕೇತಿಕ ಚಿತ್ರ)
ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಸಾಂಕೇತಿಕ ಚಿತ್ರ) (ಚಿತ್ರಕೃಪೆ - ಪೆಟ್ರೋಲಿಯಂ ಸಚಿವಾಲಯ)

ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ (ಎಲ್‌ಪಿಜಿ ಕನೆಕ್ಷನ್) ಪಡೆದ ಬಡ ಮಹಿಳೆಯರಿಗೆ ನೀಡುವ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್‌ಗೆ ಪ್ರಸ್ತುತ ಇರುವ 200 ರೂಪಾಯಿಯನ್ನು 300 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ (ಅ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಉಜ್ವಲ ಫಲಾನುಭವಿಗಳು ಈಗ ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ 14.2 ಕಿಲೋ ತೂಕದ ಸಿಲಿಂಡರ್ ಅನ್ನು 703 ರೂಪಾಯಿ ನೀಡಿ ಖರೀದಿಸಬಹುದಾಗಿದೆ. ಇದರ ಮಾರುಕಟ್ಟೆ ದರ 903 ರೂಪಾಯಿ ಇದೆ ಎಂದು ಪಿಟಿಐ ವರದಿ ಮಾಡಿದೆ.

ಕೇಂದ್ರ ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಇನ್ನೂ 100 ರೂಪಾಯಿ ಸಬ್ಸಿಡಿ ನೀಡಲು ತೀರ್ಮಾನಿಸಿದ ಕಾರಣ, ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಿಲಿಂಡರ್ 603 ರೂಪಾಯಿಗೆ ಸಿಗಲಿದೆ.

ಎಲ್‌ಪಿಜಿ ಸಬ್ಸಿಡಿ ಹೆಚ್ಚಳದ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್

ಸರ್ಕಾರವು ಆಗಸ್ಟ್‌ನಲ್ಲಿ 14.2 ಕಿಲೋಗ್ರಾಂನ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಿತ್ತು. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ 200 ರೂಪಾಯಿ ಬೆಲೆ ಇಳಿಕೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. ಇದರಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳಿಗೆ 7,500 ಕೋಟಿ ರೂಪಾಯಿ ನಷ್ಟ ಆಗಲಿದ್ದು, ಅದನ್ನು ಸರ್ಕಾರ ಭರಿಸಲಿದೆ.

ದೇಶೀಯ ಗ್ರಾಹಕರ ಹಣದುಬ್ಬರದ ಪರಿಣಾಮವನ್ನು ತಗ್ಗಿಸಲು, ಕೇಂದ್ರ ಸಚಿವ ಸಂಪುಟವು ಆಗಸ್ಟ್ 29 ರಂದು ಎಲ್‌ಪಿಜಿ ಮೇಲಿನ ಬೆಲೆ ಕಡಿತವನ್ನು ಘೋಷಿಸಿತು. ತೈಲ ಮಾರುಕಟ್ಟೆ ಕಂಪನಿಗಳು ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಆರಂಭದಲ್ಲಿ ಆತಂಕವನ್ನು ವ್ಯಕ್ತಪಡಿಸಿದವು, ಇದು ಸುಮಾರು 7,500 ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟವನ್ನು ಉಂಟುಮಾಡಲಿವೆ ಎಂದು ಅಂದಾಜಿಸಿದ್ದವರು.

ಉದಾಹರಣೆಗೆ, ಕೇಂದ್ರ ಸರ್ಕಾರದ ಈ ನಿರ್ಧಾರವು ದೆಹಲಿಯಲ್ಲಿ, 14.2 ಕೆಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ಅಸ್ತಿತ್ವದಲ್ಲಿರುವ 1,103 ರೂಪಾಯಿಯಿಂದ 903 ರೂಪಾಯಿಗೆ ಇಳಿಸಿತು. ಉಜ್ವಲ ಯೋಜನೆಯವರಿಗೆ ಇನ್ನೂ 200 ರೂಪಾಯಿ ಇಳಿಕೆಯಾಗಿ 703 ರೂಪಾಯಿಗೆ ತಲುಪಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.