Haryana politics: ಹರಿಯಾಣದಲ್ಲಿ ಮೂವರು ಪಕ್ಷೇತರ ಶಾಸಕರ ಬೆಂಬಲ ವಾಪಾಸ್‌, ಬಿಜೆಪಿ ಸರ್ಕಾರಕ್ಕೆ ಸಂಕಷ್ಟ, ಸದಸ್ಯ ಬಲ ಎಷ್ಟಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Haryana Politics: ಹರಿಯಾಣದಲ್ಲಿ ಮೂವರು ಪಕ್ಷೇತರ ಶಾಸಕರ ಬೆಂಬಲ ವಾಪಾಸ್‌, ಬಿಜೆಪಿ ಸರ್ಕಾರಕ್ಕೆ ಸಂಕಷ್ಟ, ಸದಸ್ಯ ಬಲ ಎಷ್ಟಿದೆ

Haryana politics: ಹರಿಯಾಣದಲ್ಲಿ ಮೂವರು ಪಕ್ಷೇತರ ಶಾಸಕರ ಬೆಂಬಲ ವಾಪಾಸ್‌, ಬಿಜೆಪಿ ಸರ್ಕಾರಕ್ಕೆ ಸಂಕಷ್ಟ, ಸದಸ್ಯ ಬಲ ಎಷ್ಟಿದೆ

ಪಕ್ಷೇತರ ಶಾಸಕರು ಬೆಂಬಲ ವಾಪಾಸ್‌ ಪಡೆದಿದ್ದರಿಂದ ಹರಿಯಾಣದ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.

ಹರಿಯಾಣದಲ್ಲಿ ರಾಜೀನಾಮೆ ಘೋಷಿಸಿದ ಮೂವರು ಶಾಸಕರು.
ಹರಿಯಾಣದಲ್ಲಿ ರಾಜೀನಾಮೆ ಘೋಷಿಸಿದ ಮೂವರು ಶಾಸಕರು.

ದೆಹಲಿ: ಕನಿಷ್ಠ ಮೂವರು ಪಕ್ಷೇತರ ಶಾಸಕರು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಪಕ್ಷಕ್ಕೆ ವಿಸ್ತರಿಸಿದ್ದರಿಂದ ಹರಿಯಾಣದಲ್ಲಿ ಮಂಗಳವಾರ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಮೂವರು ಸ್ವತಂತ್ರ ಶಾಸಕರು ಹರಿಯಾಣ ರಾಜ್ಯಪಾಲರಿಗೆ ಪತ್ರ ಬರೆದು ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಹರಿಯಾಣದಲ್ಲಿ ಮನೋಹರಲಾಲ್‌ ಖಟ್ಟರ್‌ ಅವರನ್ನು ಬದಲಿಸಿದ ಬಿಜೆಪಿ ಹೈಕಮಾಂಡ್‌ ಅಲ್ಲಿ ನಯಾಬ್‌ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನಿಯೋಜಿಸಲಾಗಿತ್ತು. ಈಗಾಗಲೇ ಮೈತ್ರಿ ಪಕ್ಷವಾಗಿದ್ದ ಜನನಾಯಕ ಜನತಾ ಪಕ್ಷ( jjp) ಕೂಡ ಈಗಾಗಲೇ ಬೆಂಬಲ ವಾಪಾಸ್‌ ಪಡೆದಿದೆ. ಈಗ ಮೂವರು ಪಕ್ಷೇತರರು ಕೂಡ ಬೆಂಬಲ ವಾಪಾಸ್‌ ಪಡೆದಿದ್ದರಿಂದ ಸೈನಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಹರಿಯಾಣ ಮುಂದಿನ ಡಿಸೆಂಬರ್‌ ನಲ್ಲಿ ವಿಧಾನಸಭೆ ಚುನಾವಣೆಗೆ ಎದುರಿಸಲಿರುವ ರಾಜ್ಯ. ಈ ನಡುವೆ ಅಲ್ಲಿನ ಬೆಳವಣಿಗೆಗಳು ಸಾಕಷ್ಟು ರಾಜಕೀಯಕ್ಕೂ ದಾರಿ ಮಾಡಿಕೊಡಲಿವೆ.

ಬಲಾಬಲ ಹೇಗಿದೆ

90 ಸದಸ್ಯ ಬಲದ ಹರಿಯಾಣದಲ್ಲಿ ಎರಡು ಸ್ಥಾನ ಖಾಲಿಯಿದ್ದು, 88 ಸದಸ್ಯರ ಬಲವನ್ನು ವಿಧಾನಸಭೆ ಹೊಂದಿದೆ. ಬಿಜೆಪಿ 40 ಶಾಸಕರನ್ನು ಹೊಂದಿದ್ದು, ಇಬ್ಬರು ಸ್ವತಂತ್ರ ಶಾಸಕರಾದ ಪೃಥ್ವಿಯ ನಯನ್ ಪಾಲ್ ರಾವತ್ ಮತ್ತು ಬಾದ್ಶಾಪುರದ ರಾಕೇಶ್ ದೌಲ್ತಾಬಾದ್ ಮತ್ತು ಹರಿಯಾಣ ಜನಹಿತ ಪಕ್ಷದ ಗೋಪಾಲ್ ಕಾಂಡಾ ಅವರ ಬೆಂಬಲವನ್ನು ಹೊಂದಿದೆ. ಇದು ಸೇರಿದರೂ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಬರಲಿದೆ. ಕಾಂಗ್ರೆಸ್‌, ಜೆಜೆಪಿ ಹಾಗೂ ಪಕ್ಷೇತರರ ಬೆಂಬಲ ದೊರೆತರೂ ಮೈತ್ರಿ ಬಲ 45ಕ್ಕೆ ಏರಿಕೆಯಾಗಲಿದೆ. ಈ ನಡುವೆ ಜೆಜೆಪಿಯ ಮತ್ತೊಬ್ಬ ಶಾಸಕ ಬಿಜೆಪಿ ಬೆಂಬಲಿಸುವುದಾಗಿ ಹೇಳಿರುವುದರಿಂದ ಬಲಾಬಲ 44 ಆಗಬಹುದು. ಇದರಿಂದ ಸಾಕಷ್ಟು ಕುತೂಹಲ ಅಲ್ಲಿ ಮೂಡಿದೆ.

ಮಂಗಳವಾರ ಸುದ್ದಿಗೋಷ್ಟಿ ನಡೆಸಿದ ಪುಂಡ್ರಿಯ ಶಾಸಕ ರಣಧೀರ್ ಗೋಲನ್, ನಿಲೋಖೇರಿಯ ಧರಂಪಾಲ್ ಗೊಂಡರ್ ಮತ್ತು ದಾದ್ರಿಯ ಸೋಮ್ಬೀರ್ ಸಿಂಗ್ ಸಾಂಗ್ವಾನ್ ರೋಹ್ಟಕ್‌ ನಲ್ಲಿ ಬೆಂಬಲ ವಾಪಾಸ್‌ ಪಡೆದಿರುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಬಾದ್ ಶಾಪುರದ ರಾಕೇಶ್ ದೌಲ್ತಾಬಾದ್ ಕೂಡ ಅವರೊಂದಿಗೆ ಸೇರುವ ನಿರೀಕ್ಷೆಯಿತ್ತು ಆದರೆ ಸಮಯಕ್ಕೆ ಸರಿಯಾಗಿ ಸ್ಥಳವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಸಾಂಗ್ವಾನ್ ಹೇಳಿದ್ದಾರೆ.

ಶಾಸಕರ ಅಸಮಾಧಾನ

ಈ ವೇಳೆ ಮಾತನಾಡಿದ ಧರಂ ಪಾಲ್ ಗೊಂಡೇರ್, ಬಿಜೆಪಿ ಸರ್ಕಾರವು ವಿವಿಧ ಸಮಸ್ಯೆಗಳನ್ನು ನಿಭಾಯಿಸಿದ ರೀತಿಯ ಬಗ್ಗೆ ಅಸಮಾಧಾನ ಹೊರ ಹಾಕಿದರು.

ಸರ್ಕಾರ ರಚಿಸಲು ಅವರಿಗೆ ನಮ್ಮ ಬೆಂಬಲ ಅಗತ್ಯವಿರುವ ಸಮಯದಲ್ಲಿ ನಮ್ಮನ್ನು ಮತ್ತೆ ಮತ್ತೆ ಕರೆಯಲಾಯಿತು. ಮನೋಹರ್ ಲಾಲ್ ಖಟ್ಟರ್ ಅಧಿಕಾರದಲ್ಲಿ ಇರುವವರೆಗೂ ನಾವು ಬೆಂಬಲಿಸುತ್ತೇವೆ ಎಂದು ನಾವು ನಿರ್ಧರಿಸಿದ್ದೆವು. ಅವರು ಇನ್ನು ಮುಂದೆ ಅಧಿಕಾರದಲ್ಲಿಲ್ಲ ಎಂದು ನಮಗೆ ಬೇಸರವಾಗಿದೆ. ರೈತರ ಹಿತದೃಷ್ಟಿಯಿಂದ ನಾವು ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಮಾಡಿದ್ದೇವೆ ಎಂದು ಅವರು ಹೇಳಿದರು.

ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಗೋಲನ್, ಹರಿಯಾಣದಲ್ಲಿ ಬಿಜೆಪಿಯ ಅಧಿಕಾರಾವಧಿಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರವು ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರದಲ್ಲಿ ಪ್ರಮುಖ ಕಾರಣಗಳಾಗಿವೆ. ಕಳೆದ ನಾಲ್ಕೂವರೆ ವರ್ಷಗಳಿಂದ ನಾವು ಬಿಜೆಪಿಗೆ ಬೆಂಬಲ ನೀಡಿದ್ದೇವೆ. ಇಂದು ನಿರುದ್ಯೋಗ ಮತ್ತು ಹಣದುಬ್ಬರವು ಗರಿಷ್ಠ ಮಟ್ಟದಲ್ಲಿದೆ. ಇದನ್ನು ನೋಡಿ, ನಾವು ನಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.

ಸಿಎಂ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ಈ ನಡುವೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಅವರು ಪಕ್ಷೇತರ ಶಾಸಕರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅವರು ಕಾಂಗ್ರೆಸ್‌ ಗೆ ಬೆಂಬಲ ಸೂಚಿಸುತ್ತಿರುವುದನ್ನು ಧನ್ಯವಾದ. ಇದು ಪ್ರಸ್ತುತ ಸರ್ಕಾರದ ಮೇಲಿನ ವಿಶ್ವಾಸದ ಕೊರತೆ ಮತ್ತು ಜನರಲ್ಲಿ ಕಾಂಗ್ರೆಸ್‌ಗೆ ಹರಿಯಾಣದಲ್ಲಿ ಹೆಚ್ಚುತ್ತಿರುವ ಬೆಂಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರಸ್‌ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್, "ಮೂವರು ಸ್ವತಂತ್ರ ಶಾಸಕರಾದ ಸೋಮ್ಬೀರ್ ಸಾಂಗ್ವಾನ್, ರಣಧೀರ್ ಸಿಂಗ್ ಗೊಲ್ಲನ್ ಮತ್ತು ಧರಂಪಾಲ್ ಗೊಂಡರ್ ಅವರು ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ. ನಯಾಬ್ ಸಿಂಗ್ ಸೈನಿ ಸರ್ಕಾರ ಈಗ ಅಲ್ಪಮತದ ಸರ್ಕಾರವಾಗಿದೆ. ಸೈನಿ ಅವರಿಗೆ ಒಂದು ನಿಮಿಷವೂ ಉಳಿಯುವ ಹಕ್ಕಿಲ್ಲದ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.