ಕನ್ನಡ ಸುದ್ದಿ  /  Nation And-world  /  India News Haryana New Cm Bjp Obc Leader Lok Sabha Member Nayab Singh Saini Will Be Manohar Lal Khattar Successor Kub

Breaking News: ಹರಿಯಾಣದಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕ ನಯಾಬ್‌ ಸಿಂಗ್‌ ಸೈನಿಗೆ ಸಿಎಂ ಪಟ್ಟ

Bjp politics ಹರಿಯಾಣದಲ್ಲಿ ಮನೋಹರ ಲಾಲ್‌ ಖಟ್ಟರ್‌ ಅವರ ಉತ್ತರಾಧಿಕಾರಿಯಾಗಿ ಬಿಜೆಪಿ ಹಿಂದುಳಿದ ವರ್ಗಗಳ ನಾಯಕ ನಯಾಬ್‌ ಸಿಂಗ್‌ ಸೈನಿ ಅವರನ್ನು ನೇಮಿಸಲಾಗಿದ್ದು. ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವರು

ಹರಿಯಾಣ ನೂತನ ಸಿಎಂ ನಯಾಬ್‌ ಸಿಂಗ್‌ ಸೈನಿ
ಹರಿಯಾಣ ನೂತನ ಸಿಎಂ ನಯಾಬ್‌ ಸಿಂಗ್‌ ಸೈನಿ

ಚಂಢೀಗಡ: ಹರಿಯಾಣದಲ್ಲಿ ಮನೋಹರಲಾಲ್‌ ಖಟ್ಟರ್‌ ಅವರ ಮುಖ್ಯಮಂತ್ರಿ ಅವಧಿ ಮುಕ್ತಾಯವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಖಟ್ಟರ್‌ ಅವರನ್ನು ಬದಲಾಯಿಸಲಾಗಿದ್ದು. ಹರಿಯಾಣದಲ್ಲಿ ಹಿಂದುಳಿದ ವರ್ಗಗಳ ನಾಯಕ ನಯಾಬ್‌ ಸಿಂಗ್‌ ಸೈನಿ ಅವರನ್ನು ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿ ಘೋಷಣೆ ಮಾಡಿದೆ. ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿರುವ ಜತೆಗೆ ವಿಧಾನಸಭೆ ಚುನಾವಣೆಗೆ ಇನ್ನೂ ಆರು ತಿಂಗಳು ಇರುವಾಗ ನಾಯಕತ್ವವನ್ನು ಬಿಜೆಪಿ ಬದಲಿಸಿದೆ. ಈ ಮೂಲಕ ಹೊಸ ಮುಖ ಹಾಗೂ ಖಟ್ಟರ್‌ ಅವರ ಬೆಂಬಲಿತ ನಾಯಕನಿಗೆ ಮಣೆ ಹಾಕಲಾಗಿದೆ.

ಹರಿಯಾಣದಲ್ಲಿ ಬಿಜೆಪಿ ಹಾಗೂ ಜೆಜೆಪಿ ಸರ್ಕಾರದ ಮೈತ್ರಿ ಅಂತ್ಯಗೊಂಡು ಮನೋಹರ ಲಾಲ್‌ ಖಟ್ಟರ್‌ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂಪುಟದ ಸದಸ್ಯರು ಕೂಡ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಸಿಎಂ ಅವರೊಂದಿಗೆ ರಾಜೀನಾಮೆ ಸಲ್ಲಿಸಿದ್ದರು. ಕೂಡಲೇ ಹರಿಯಾಣಕ್ಕೆ ಧಾವಿಸಿದ ಬಿಜೆಪಿ ನಾಯಕರಾದ ಅರ್ಜುನ್‌ ಮುಂಡಾ ಹಾಗೂ ತರುಣ್‌ ಚುಗ್‌ ಅವರು ಶಾಸಕರ ಸಭೆ ನಡೆಸಿದರು. ವರಿಷ್ಠರಿಂದ ಬಂದ ಸೂಚನೆ ಮೇರೆಗೆ ಮನೋಹರಲಾಲ್‌ ಖಟ್ಟರ್‌ ಅವರ ಉತ್ತರಾಧಿಕಾರಿಯಾಗಿ ಹರಿಯಾಣ ಬಿಜೆಪಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ನಯಾಬ್‌ ಸಿಂಗ್‌ ಸೈನಿ ಅವರ ಹೆಸರು ಘೋಷಿಸಿದರು.

ಪಕ್ಷದಲ್ಲಿಯೇ ಮೂರು ದಶಕದಿಂದ ಇರುವ ಸೈನಿ ಅವರು ಜಿಲ್ಲಾಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಧ ಮೋರ್ಚಾಗಳಲ್ಲಿ ಕೆಲಸ ಮಾಡಿದವರು. ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದವರು. ದಶಕದ ಹಿಂದೆ ಹರಿಯಾಣದಲ್ಲಿ ಶಾಸಕರಾಗಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಐದು ವರ್ಷದ ಹಿಂದೆ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿ ಗೆದ್ದಿದ್ದರು. ನಾಲ್ಕು ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರು. ಆರು ತಿಂಗಳ ಹಿಂದೆ ಅವರನ್ನು ಹರಿಯಾಣ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢದಲ್ಲೂ ಜಯಭೇರಿ ಬಾರಿಸಿದ್ದ ಬಿಜೆಪಿ ಅಲ್ಲಿಯೂ ಪಕ್ಷ ನಿಷ್ಠರು ಹಾಗೂ ಹೊಸಬರಿಗೆ ಬಿಜೆಪಿ ಮಣೆ ಹಾಕಿತ್ತು. ಎರಡು ಕಡೆ ಹಿಂದುಳಿದ ವರ್ಗದ ನಾಯಕರಿಗೆ ಸಿಎಂ ಸ್ಥಾನ ನೀಡಲಾಗಿತ್ತು. ಬಿಜೆಪಿ ಈಗ ಮತ್ತೊಂದು ರಾಜ್ಯದಲ್ಲಿ ಅದೇ ಸೂತ್ರ ಅನುಸರಿಸಿದೆ. ಇಲ್ಲಿಯೂ ಇಬ್ಬರು ಡಿಸಿಎಂಗಳು ಅಧಿಕಾರ ಪದಗ್ರಹಣವನ್ನು ಸಿಎಂ ಜತೆ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.

ವಿಭಾಗ