ಹರಿಯಾಣ ಶಾಲಾಬಸ್ ಅಪಘಾತ; 6 ಮಕ್ಕಳ ದುರ್ಮರಣ, 15 ವಿದ್ಯಾರ್ಥಿಗಳಿಗೆ ಗಾಯ, ಪೊಲೀಸ್ ವಶಕ್ಕೆ ಚಾಲಕ- ವಿಡಿಯೋ
ಹರಿಯಾಣದ ಮಹೇಂದ್ರಗಢ ಜಿಲ್ಲೆಯ ಉನ್ಹಾನಿ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಶಾಲಾಬಸ್ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 6 ಮಕ್ಕಳ ದುರ್ಮರಣವಾಗಿದ್ದು, 15 ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಚಂಡೀಗಢ: ಹರಿಯಾಣದ ಮಹೇಂದ್ರಗಡದಲ್ಲಿ ಗುರುವಾರ ಸಂಭವಿಸಿದ ಭಾರಿ ಅಪಘಾತದಲ್ಲಿ 6 ಶಾಲಾ ಮಕ್ಕಳು ಮೃತಪಟ್ಟಿದ್ದು, ಕನಿಷ್ಠ 20 ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ಮಹೇಂದ್ರಗಡದ ಉನ್ಹಾನಿ ಗ್ರಾಮದ ಸಮೀಪ ಕನಿನಾ ಎಂಬಲ್ಲಿ ಶಾಲಾ ಬಸ್ ಮಗುಚಿಬಿದ್ದು ಈ ದುರಂತ ಸಂಭವಿಸಿದೆ. ಮದ್ಯಪಾನ ಮಾಡಿ ಬಸ್ ಚಲಾಯಿಸಿದ್ದ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮಹೇಂದ್ರಗಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ಷ್ ಶರ್ಮಾ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಪ್ರಾಥಮಿಕ ತನಿಖೆಯ ವೇಳೆ ಚಾಲಕ ಮದ್ಯಪಾನ ಮಾಡಿದ ಆರೋಪ ಎದುರಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆತನ ನಿಜಕ್ಕೂ ಮದ್ಯಪಾನ ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಲಿದೆ ಎಂದು ಆರ್ಷ್ ಶರ್ಮಾ ಹೇಳಿದ್ದಾರೆ.
ಇನ್ನು ಕೆಲವರ ಪ್ರಕಾರ, ಚಾಲಕ ಅಜಾಗರೂಕತೆ ಮತ್ತು ಅತಿವೇಗದಲ್ಲಿ ಬಸ್ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ದುರಂತದಲ್ಲಿ ಗಾಯಗೊಂಡಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಆರ್ಷ್ ಶರ್ಮಾ ವಿವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
