ಹತ್ರಾಸ್ ಕಾಲ್ತುಳಿತ ದುರಂತ ಸಂಭವಿಸಲು ಕಾರಣವೇನು, ಸತ್ಸಂಗಿ, ಪ್ರತ್ಯಕ್ಷದರ್ಶಿಗಳು, ಪೊಲೀಸರು ಹೇಳಿದ್ದೇನು, 5 ಕಾರಣ; ಬಾಬಾ ಬೋಲೆನಾಥ್ ಎಲ್ಲಿ?
ಹತ್ರಾಸ್ ಕಾಲ್ತುಳಿತ ದುರಂತ ಸಂಭವಿಸಲು ಕಾರಣವೇನು ಎಂಬ ಪ್ರಶ್ನೆಗೆ ಹಲವು ರೀತಿಯ ಉತ್ತರಗಳು ಸಿಕ್ಕಿವೆ. ಎಲ್ಲವೂ ಸಕಾರಣಗಳಂತೆಯೇ ಕಾಣುತ್ತಿದೆ. ಆದರೂ, ಸತ್ಸಂಗಿ, ಪ್ರತ್ಯಕ್ಷದರ್ಶಿಗಳು, ಪೊಲೀಸರು ಹೇಳಿದ್ದೇನು, ಗಮನಸೆಳೆದ 5 ಕಾರಣಗಳು ಇದೀಗ ಚರ್ಚೆಗೆ ಒಳಗಾಗಿದೆ. ಈ ನಡುವೆ ಬಾಬಾ ಬೋಲೆನಾಥ್ ಎಲ್ಲಿ ಎಂದು ಪೊಲೀಸರು ಶೋಧ ನಡೆಸಿದ್ದಾರೆ.

ಲಖನೌ: ಹತ್ರಾಸ್ ಜಿಲ್ಲೆಯ ಸಿಕಂದರಾ ರಾವ್‌ನಲ್ಲಿ ನಡೆದ 'ಸತ್ಸಂಗ' ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 121 ಜನರಲ್ಲಿ ಹೆಚ್ಚಿನವರ ಗುರುತನ್ನು ಉತ್ತರ ಪ್ರದೇಶ ಸರ್ಕಾರ ದೃಢಪಡಿಸಿದೆ. ಮೃತರಲ್ಲಿ 106 ಮಹಿಳೆಯರು ಮತ್ತು ಏಳು ಮಕ್ಕಳು ಸೇರಿದ್ದಾರೆ. ಹತ್ರಾಸ್ ಕಾಲ್ತುಳಿತಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಇದೀಗ ಹಲವು ವದಂತಿಗಳು ಹರಡುತ್ತಿವೆ. ಆದಾಗ್ಯೂ, ನಿಜವಾದ ಕಾರಣವನ್ನು ಪೊಲೀಸರು ದೃಢಪಡಿಸಿದ್ದಾರೆ.
ಹತ್ರಾಸ್ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ಸಂಘಟಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏತನ್ಮಧ್ಯೆ, 'ಭೋಲೆ ಬಾಬಾ' ಎಂದು ಜನಪ್ರಿಯರಾಗಿರುವ ನಾರಾಯಣ್ ಸಾಕಾರ್ ಹರಿ, ಸತ್ಸಂಗ ಕಾಲ್ತುಳಿತ ದುರಂತದ ಬಳಿಕ ತಲೆಮರೆಸಿಕೊಂಡಿದ್ದಾನೆ.
ಹತ್ರಾಸ್ ಕಾಲ್ತುಳಿತ ದುರಂತ; ಸತ್ಸಂಗ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಲು ಕಾರಣವೇನು
ಉತ್ತರ ಪ್ರದೇಶ ಮತ್ತು ನೆರೆಯ ರಾಜ್ಯಗಳ ಭಕ್ತರು ಸತ್ಸಂಗಕ್ಕೆ ಆಗಮಿಸಿದ್ದರು. ಭಕ್ತದಟ್ಟಣೆ ನಿರ್ವಹಿಸುವುದರಲ್ಲಿ ಎಡವಟ್ಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ದುರಂತದ ಗಾಂಭೀರ್ಯವನ್ನು ಇದು ಒತ್ತಿಹೇಳುತ್ತದೆ. ಹತ್ರಾಸ್ ಕಾಲ್ತುಳಿತ ದುರಂತದಲ್ಲಿ 116 ಜನರು ಸಾವನ್ನಪ್ಪಿದ್ದಾರೆ. ಇಟಾಹ್ ಮತ್ತು ಹತ್ರಾಸ್ ಪಕ್ಕದ ಜಿಲ್ಲೆಗಳಾಗಿದ್ದು, ಇಟಾಹ್‌ನ ಜನರು ಸಹ 'ಸತ್ಸಂಗ'ದಲ್ಲಿ ಪಾಲ್ಗೊಳ್ಳಲು ಬಂದಿದ್ದರು" ಎಂದು ಅಲಿಗಡ ವಲಯ ಪೊಲೀಸ್ ಮಹಾನಿರೀಕ್ಷಕ (ಐಜಿ) ಶಲಭ್ ಮಾಥುರ್ ತಿಳಿಸಿದ್ದಾರೆ.
1) ಭೋಲೆ ಬಾಬಾನ ಪಾದ ಧೂಳಿ ಎತ್ತಿಕೊಳ್ಳಲು ಮುಗಿಬಿದ್ದ ಭಕ್ತರು
ಹತ್ರಾಸ್ ಜಿಲ್ಲೆಯ ಸಿಕಂದರಾ ರಾವ್‌ನಲ್ಲಿ ನಡೆದ 'ಸತ್ಸಂಗ' ಕಾರ್ಯಕ್ರಮದಲ್ಲಿ ನೂಕುನುಗ್ಗಲು ಸಂಭವಿಸಿದ್ದು, ಭೋಲೆ ಬಾಬಾ ಅವರ ಅನುಯಾಯಿಗಳು ಭೋಲೆ ಭಾಬಾ ಅವರ ವಾಹನವು ಹಾದುಹೋಗುವ ಮಾರ್ಗದಿಂದ ಧೂಳು ಸಂಗ್ರಹಿಸಲು ಮುಗಿಬಿದ್ದರು. ಆಗ ಕಾಲ್ತುಳಿತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸತ್ಸಂಗದಲ್ಲಿ ಭಕ್ತಿ ಪರಾಕಾಷ್ಠೆ ತಲುಪಿದಾಗ ಉಂಟಾದ ದುರದೃಷ್ಟಕರ ಪರಿಣಾಮ ಇದು ಎಂದು ವಿಶ್ಲೇಷಿಸಲಾಗುತ್ತಿದೆ.
ಕಾರ್ಯಕ್ರಮ ಮುಗಿದ ನಂತರ ಭಕ್ತರು ಬಾಬಾನ ಪಾದ ಧೂಳು ಸಂಗ್ರಹಿಸಲು ಬಯಸಿದ್ದರು. ಹೀಗಾಗಿ, ಭೋಲೆ ಬಾಬಾನ ದರ್ಶನ ಪಡೆದು ಪಾದ ಧೂಳಿ ಸಂಗ್ರಹಿಸಲು ಬಗ್ಗಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಸಿಕಂದರಾ ರಾವ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
2) ಸತ್ಸಂಗದ ಟೆಂಟ್ ಒಳಗೆ ಉಸಿರುಕಟ್ಟಿಸುವ ವಾತಾವರಣ
ಲಕ್ನೋದಿಂದ ನೈಋತ್ಯಕ್ಕೆ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ಹತ್ರಾಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೆಂಟ್‌ನೊಳಗಿನ ಶಾಖ ಮತ್ತು ಉಸಿರುಗಟ್ಟುವಿಕೆ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂಬ ಅಂಶದ ಕಡೆಗೂ ಅಧಿಕಾರಿಗಳು ಗಮನಸೆಳೆದಿದ್ದಾರೆ.
ಪೊಲೀಸ್ ಅಧಿಕಾರಿ ರಾಜೇಶ್ ಸಿಂಗ್ ಮಾತನಾಡಿ, ಜನದಟ್ಟಣೆಯು ಗಮನಾರ್ಹ ಅಂಶವಾಗಿದೆ. ಆರಂಭಿಕ ವರದಿಗಳ ಪ್ರಕಾರ, ಸಂಘಟಕರು 5,000 ಜನರ ಭಾಗವಹಿಸುವಿಕೆಗೆ ಅನುಮತಿ ಪಡೆದಿದ್ದರು. ಅಷ್ಟೇ ಜನರಿಗೆ ಆಗುವಂತೆ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆದರೆ, ಸ್ಥಳದಲ್ಲಿ 15,000 ಕ್ಕೂ ಹೆಚ್ಚು ಜನರು ಆಗಮಿಸಿದರು.
3) ಸತ್ಸಂಗದಲ್ಲಿ ಪಾಲ್ಗೊಂಡವರು ಕೊಟ್ಟ ಕಾರಣಗಳಿವು
- ಸತ್ಸಂಗ ಮುಗಿಸಿ ಹೊರಡುವಾಗ ಅಲ್ಲಿದ್ದವರು ಒಬ್ಬರ ಮೇಲೊಬ್ಬರು ಮುಗಿಬಿದ್ದರು. ಆಗ ಅಲ್ಲಿ ಕಾಲ್ತುಳಿತ ಉಂಟಾಯಿತು. ಅದಾಗಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಲಾಯಿತು ಎಂದು ಶಕುಂತಲಾ ಎಂಬುವವರು ಪಿಟಿಐಗೆ ತಿಳಿಸಿದ್ದಾರೆ. ಅವರು ಸತ್ಸಂಗದಲ್ಲಿ ಭಾಗಿಯಾದವರು ಎಂದು ಪಿಟಿಐ ತಿಳಿಸಿದೆ.
- ಒಂದೂವರೆ ಗಂಟೆ ಸತ್ಸಂಗದ ಬಳಿಕ ಭೋಲೆ ಬಾಬಾ ಸ್ಥಳದಿಂದ ಹೊರಟಾಗ ಅಲ್ಲಿದ್ದವರು ಇದ್ದಕ್ಕಿದ್ದಂತೆ ಅವರ ಹಿಂದೆ ಓಡಲಾರಂಭಿಸಿದರು. ನೆಲ ಬಹಳ ಜಾರುತ್ತಿತ್ತು. ಅಲ್ಲಿ ಕೆಲವರು ಬಿದ್ದರು. ಇನ್ನು ಕೆಲವರು ಓಡುವ ಭರದಲ್ಲಿ ಅವರನ್ನು ತುಳಿದರು. ಅವರೂ ಬಿದ್ದರು. ಹೀಗೆ ಕಾಲ್ತುಳಿತ ಸಂಭವಿಸಿತು ಎಂದು ಇನೊಬ್ಬ ಸತ್ಸಂಗಿ ಸೋನುಕುಮಾರ್ ಹೇಳಿದ್ದಾಗಿ ವರದಿ ವಿವರಿಸಿದೆ.
ಹತ್ರಾಸ್ ಕಾಲ್ತುಳಿತ ದುರಂತ; ಭೋಲೆ ಬಾಬಾ ಎಲ್ಲಿ ಹೋದ
ಹತ್ರಾಸ್ ಕಾಲ್ತುಳಿತ ದುರಂತ ಸಂಭವಿಸಿದ ಬೆನ್ನಲ್ಲೆ ಭೋಲೆ ಬಾಬಾ ತಲೆಮರೆಸಿಕೊಂಡಿದ್ದಾನೆ. ಆತ ಎಲ್ಲಿ ಹೋದ ಎಂಬುದು ಯಾರಿಗೂ ಗೊತ್ತಿಲ್ಲ. ಉತ್ತರ ಪ್ರದೇಶ ಪೊಲೀಸರು ಮೈನ್‌ಪುರಿ ಜಿಲ್ಲೆಯಲ್ಲಿರುವ ಭೋಲೆ ಬಾಬಾನ ರಾಮ್ ಕುಟೀರ್ ಚಾರಿಟೆಬಲ್ ಟ್ರಸ್ಟ್‌ನ ಆಶ್ರಮದಲ್ಲಿ ಆತನಿಗಾಗಿ ಶೋಧ ನಡೆಸಿದರು. ಆದರೆ ಆತ ಅಲ್ಲಿ ಇರಲಿಲ್ಲ ಎಂದು ಡಿವೈಎಸ್‌ಪಿ ಸುನಿಲ್ ಕುಮಾರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
