ಹತ್ರಾಸ್ ಕಾಲ್ತುಳಿತ ದುರಂತ; ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು, ಪೊಲೀಸ್ ಆಗಿದ್ದವ ಸಂತನಾದ ಕಥೆ
ಹತ್ರಾಸ್ ಕಾಲ್ತುಳಿತ ದುರಂತ; ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಂಗಳವಾರ ನಡೆದ ಸತ್ಸಂಗ ಕಾಲ್ತುಳಿತ ದುರಂತದಲ್ಲಿ 107 ಜನ ಮೃತಪಟ್ಟಿದ್ದಾರೆ. ಈ ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು, ಪೊಲೀಸ್ ಆಗಿದ್ದವ ಸಂತನಾದ ಕಥೆ ಮತ್ತು ಪೂರಕ ವಿವರ ಇಲ್ಲಿದೆ.
ಲಖನೌ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಮಂಗಳವಾರ (ಜುಲೈ 2) ನಡೆದ ಸತ್ಸಂಗ ಕಾರ್ಯಕ್ರಮದ ಕೊನೆಯಲ್ಲಿ ನೂಕುನುಗ್ಗಲು ಉಂಟಾಗಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಸತ್ಸಂಗವನ್ನು ನಾರಾಯಣ ಸಾಕಾರ್ ಹರಿ ಅಥವಾ ಸಾಕಾರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಅವರು ಸಂಘಟಿಸಿದ್ದರು. ಕಾಲ್ತುಳಿತದ ಮಾಹಿತಿ ಲಭ್ಯವಾದ ಕೂಡಲೇ ತುರ್ತು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸ್ವಯಂ ಘೋಷಿತ ಸಂತ ನಾರಾಯಣ ಸಕರ್ ಹರಿ ಅಥವಾ ಸಕರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಅವರಿಗೆ ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ, ದೆಹಲಿ ಸೇರಿದಂತೆ ದೇಶಾದ್ಯಂತ ಭೋಲೆ ಬಾಬಾಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ. ಫೇಸ್‌ಬುಕ್‌ನಲ್ಲಿ 3 ಲಕ್ಷಕ್ಕೂ ಹೆಚ್ಚು ಪಾಲೋಯರ್ಸ್ ಇರುವುದು ಕಂಡುಬಂದಿದೆ. ಆದರೆ ಇದು ಅವರ ಅಧಿಕೃತ ಖಾತೆಯಲ್ಲ.
ಹತ್ರಾಸ್ ಕಾಲ್ತುಳಿತ ದುರಂತ; ಭೋಲೆ ಬಾಬಾ ಯಾರು?
ಸ್ವಯಂ ಘೋಷಿತ ಸಂತ ನಾರಾಯಣ ಸಕರ್ ಹರಿ ಅಥವಾ ಸಾಕರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಪಟಿಯಾಲಿ ತಹಸಿಲ್‌ನ ಬಹದ್ದೂರ್ ಗ್ರಾಮದಲ್ಲಿ ಜನಿಸಿದರು. ಭೋಲೆ ಬಾಬಾ ತಮ್ಮ ಪ್ರವಚನಗಳಲ್ಲಿ, ತನ್ನನ್ನು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮಾಜಿ ಉದ್ಯೋಗಿ ಎಂದು ಬಣ್ಣಿಸಿಕೊಳ್ಳುತ್ತಾರೆ.
ಅವರು ನಾರಾಯಣ ಸಕರ್ ವಿಶ್ವ ಹರಿ ಅಥವಾ ಭೋಲೆ ಬಾಬಾ ಆಗುವ ಮೊದಲು, ಸೂರಜ್ ಪಾಲ್ ಸಿಂಗ್ ಆಗಿದ್ದರು. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸ್ಥಳೀಯ ಗುಪ್ತಚರ ಘಟಕದಲ್ಲಿ ಕಾನ್‌ಸ್ಟೆಬಲ್ ಆಗಿ 18 ವರ್ಷ ಕೆಲಸ ಮಾಡಿದ್ದರು. ಅವರ ಕೊನೆಯ ಪೋಸ್ಟಿಂಗ್ ಆಗ್ರಾದಲ್ಲಿ ಇತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಆಜ್‌ತಕ್ ವರದಿ ಮಾಡಿದೆ.
ಉದ್ಯೋಗ ತೊರೆದ ನಂತರ ಅಲಿಘರ್ ವಿಭಾಗದ ಕಾಸ್‌ಗಂಜ್ ಜಿಲ್ಲೆಯ ಹಳ್ಳಿಯೊಂದರಿಂದ ಬಂದ ಬಾಬಾ ಅವರಿಗೆ ಧರ್ಮೋಪದೇಶವನ್ನು ನೀಡಲು ಮತ್ತು 'ಸತ್ಸಂಗ'ವನ್ನು ಆಯೋಜಿಸಲು ಪ್ರಾರಂಭಿಸಿದರು ಎಂದು ಬಾಬಾ ಬಗ್ಗೆ ಅರಿವು ಇರುವಂಥವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಆರ್ಥಿಕವಾಗಿ ಹಿಂದುಳಿದವರೇ ಭೋಲೇ ಬಾಬಾ ಅನುಯಾಯಿಗಳು
'ಸಕರ್ ವಿಶ್ವ ಹರಿ ಬಾಬಾ' ಎಂದು ಹೆಚ್ಚು ಜನಪ್ರಿಯವಾಗಿರುವ ಬಾಬಾ, ಸಾರ್ವಜನಿಕವಾಗಿ ಸದಾ ಬಿಳಿ ಉಡುಪುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಸತ್ಸಂಗ ನಡೆಸುವಾಗ ಪತ್ನಿಯೊಂದಿಗೆ ಬರುತ್ತಾರೆ.
ಕಳೆದ 26 ವರ್ಷಗಳ ಹಿಂದೆ ಬಾಬಾ ಅವರು ತಮ್ಮ ಸರ್ಕಾರಿ ಕೆಲಸವನ್ನು ತೊರೆದು ಧಾರ್ಮಿಕ ಪ್ರವಚನ ನೀಡಲು ಪ್ರಾರಂಭಿಸಿದರು. ‘ನರೇನ್ ಸಕಾರ ಹರಿ’ ಎಂದು ಸಂಬೋಧಿಸಲು ಇಷ್ಟಪಡುವ ಬಾಬಾ ಅವರ ಜನಪ್ರಿಯತೆ ಕಾಲಾನುಕ್ರಮದಲ್ಲಿ ಬೆಳೆಯಿತು. ಅವರಿಗೆ ಲಕ್ಷಾಂತರ ಅನುಯಾಯಿಗಳು ಉಂಟಾದರು.
ಭೋಲೇ ಬಾಬಾ ಅವರ ಅನುಯಾಯಿಗಳು ಹೆಚ್ಚಾಗಿ ಬ್ರಜ್ ಪ್ರದೇಶದ ಆಗ್ರಾ ಮತ್ತು ಅಲಿಗಢ ವಿಭಾಗಕ್ಕೆ ಸೇರಿದ ಕೆಳ ಆರ್ಥಿಕ ಸ್ತರದ ಜನರು. ಯಾವುದೇ 'ಗುರು'ವಿನ ಅನುಯಾಯಿ ನಾನಲ್ಲ ಎಂದು ಹೇಳುವ ಭೋಲೇ ಬಾಬಾ, ದೇವರೇ ನನಗೆ ಬೋಧನೆ ಮಾಡಿರುವಂಥದ್ದು ಎಂದು ಪ್ರತಿಪಾದಿಸುತ್ತಾ ಬಂದವರು. ಜನಪ್ರಿಯತೆ ಇದ್ದರೂ ಅವರು ಸೋಷಿಯಲ್ ಮೀಡಿಯಾ ಖಾತೆಗಳನ್ನು ಹೊಂದಿಲ್ಲ. ಅವರ ವೈಯಕ್ತಿಕ ವಿವರಗಳು ಎಲ್ಲೂ ಬಹಿರಂಗವಾಗಿಲ್ಲ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.