Delhi Rains: ದೆಹಲಿ ಭಾರೀ ಮಳೆ, ಯುಪಿಎಸ್‌ಸಿ ತರಬೇತಿಗೆ ಹೋಗಿದ್ದ ಮೂವರು ಅಭ್ಯರ್ಥಿಗಳು ನೀರಿನಲ್ಲಿ ಸಿಲುಕಿ ಸಾವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Rains: ದೆಹಲಿ ಭಾರೀ ಮಳೆ, ಯುಪಿಎಸ್‌ಸಿ ತರಬೇತಿಗೆ ಹೋಗಿದ್ದ ಮೂವರು ಅಭ್ಯರ್ಥಿಗಳು ನೀರಿನಲ್ಲಿ ಸಿಲುಕಿ ಸಾವು

Delhi Rains: ದೆಹಲಿ ಭಾರೀ ಮಳೆ, ಯುಪಿಎಸ್‌ಸಿ ತರಬೇತಿಗೆ ಹೋಗಿದ್ದ ಮೂವರು ಅಭ್ಯರ್ಥಿಗಳು ನೀರಿನಲ್ಲಿ ಸಿಲುಕಿ ಸಾವು

Upsc Aspirants ದೆಹಲಿಯ ಪ್ರತಿಷ್ಠಿತ ರಾವು ಐಎಎಸ್‌ ತರಬೇತಿ ಕೇಂದ್ರದ(Rau's IAS Study Circle) ಕಟ್ಟಡಕ್ಕೆ ಮಳೆ ನೀರು( Delhi rains) ನುಗ್ಗಿ ಅಭ್ಯಾಸ ನಿರತ ಮೂವರು ಮೃತಪಟ್ಟಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಗೆ ತಯಾರಿಗೆ ಬಂದು ಮಳೆ ಅನಾಹುತದಲ್ಲಿ ಮೃತಪಟ್ಟ ಅಭ್ಯರ್ಥಿಗಳು.
ಯುಪಿಎಸ್‌ಸಿ ಪರೀಕ್ಷೆಗೆ ತಯಾರಿಗೆ ಬಂದು ಮಳೆ ಅನಾಹುತದಲ್ಲಿ ಮೃತಪಟ್ಟ ಅಭ್ಯರ್ಥಿಗಳು.

ದೆಹಲಿ: ದೆಹಲಿಯಲ್ಲಿ ಎಡಬಿಡದೇ ಮಳೆ( Delhi Rains) ಸುರಿಯುತ್ತಿದ್ದು ಭಾರೀ ಅನಾಹುತವೇ ಆಗಿದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳಿಗೆ ತಯಾರಿ ನಡೆಸಲು ಹೋಗಿದ್ದ ಮೂವರು ಅಭ್ಯರ್ಥಿಗಳು ಮಳೆಯಿಂದಾಗಿ ಜೀವ ಕಳೆದುಕೊಂಡಿದ್ದಾರೆ. ದೆಹಲಿಯ ರಾವು ಕೋಚಿಂಗ್‌ ಸೆಂಟರ್‌ ನಲ್ಲಿ(Rau's IAS Study Circle) ತರಬೇತಿ ಪಡೆಯುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಅದರಲ್ಲೂ ಬೇಸ್‌ಮೆಂಟ್‌ ನಲ್ಲಿ ತರಬೇತಿಗಳು ನಡೆಯುತ್ತಿದ್ದವು. ಈ ವೇಳೆ ಏಕಾಏಕಿ ನೀರು ನುಗ್ಗಿದ್ದರಿಂದ ಅವರು ಅಲ್ಲಿಯೇ ಸಿಲುಕಿ ನಾಲ್ಕು ತಾಸಿನ ಪ್ರಯತ್ನದ ನಡುವೆಯೂ ಉಳಿಸಿಕೊಳ್ಳಲು ಆಗದೇ ಜೀವ ಕಳೆದುಕೊಂಡಿದ್ದಾರೆ. ಮೃತರನ್ನು ತಾನ್ವಿ ಸೋನಿ, ಶ್ರೇಯಾ ಯಾದವ್‌ ಹಾಗೂ ನವಿನ್‌ ದೆಲ್ವಿನ್‌ ಎಂದು ಗುರುತಿಸಲಾಗಿದೆ. ತಾನಿಯಾ ತೆಲಂಗಾಣ ರಾಜ್ಯದವರು. ಶ್ರೇಯಾ ಯಾದವ್‌ ಉತ್ತರ ಪ್ರದೇಶ ಮೂಲದವರು ಹಾಗೂ ನವೀನ್‌ ಕೇರಳದವರು ಎನ್ನಲಾಗಿದೆ.

ದೆಹಲಿಯಲ್ಲಿ ಈಗ ಯುಪಿಎಸ್ಸಿ ಪರೀಕ್ಷೆಗೆ ತರಬೇತಿಗಳು ನಡೆಯುವ ಸಮಯ. ಭಾರತದ ನಾನಾ ಭಾಗಗಳಿಂದ ನೂರಾರು ಅಭ್ಯರ್ಥಿಗಳು ದೆಹಲಿಯಲ್ಲಿಯೇ ಬೀಡು ಬಿಟ್ಟು ತಯಾರಿ ಆರಂಭಿಸಿದ್ದಾರೆ. ದೆಹಲಿಯಲ್ಲಿ ಹಳೆಯ ಹಾಗೂ ವಿಶ್ವಾಸಾರ್ಹ ತರಬೇತಿ ಅಕಾಡೆಮಿಯಲ್ಲಿ ಒಂದಾದ, ರಾಜೇಂದ್ರನಗರದಲ್ಲಿರುವ ರಾವು ಐಎಎಸ್‌ ಸ್ಟಡಿ ಸರ್ಕಲ್‌( Rau's IAS Study )ನಲ್ಲೂ ತರಗತಿಗಳು ನಡೆದಿವೆ. ಪಶ್ಚಿಮ ದೆಹಲಿಯಲ್ಲಿರುವ ಈ ಸಂಸ್ಥೆಯ ತರಗತಿಗಳು ನೆಲ ಮಹಡಿಯಲ್ಲಿ ನಡೆಯುತ್ತವೆ. ಶನಿವಾರ ಸಂಜೆಯೂ ತರಗತಿಗಳು ನಡೆಯುತ್ತದ್ದಾಗಲೇ ಏಕಾಏಕಿ ನೀರು ನೆಲ ಮಳಿಗೆಗೆ ನುಗ್ಗಿದೆ. ಆಗ ಕೆಲವರು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದರೆ ಇನ್ನು ಕೆಲವರು ಅಲ್ಲಿಯೇ ಸಿಲುಕಿಕೊಂಡರು. ಕೂಡಲೇ ಧಾವಿಸಿದ ರಕ್ಷಣಾ ಪಡೆಗಳು ಕೆಲವರನ್ನು ರಕ್ಷಿಸುವಲ್ಲಿ ಯಶಸ್ವಿಯೂ ಆದರು. ಆದರೆ ಮೂವರು ಮಾತ್ರ ಪತ್ತೆಯಾಗಲಿಲ್ಲ. ಕೆಳ ಮಹಡಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ರಕ್ಷಣೆ ಕಷ್ಟವಾಯಿತು. ಅದರಲ್ಲೂ ಅಗ್ನಿ ಶಾಮಕ ದಳದ ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ( NDRF) ಕೂಡ ಧಾವಿಸಿ ಕಾರ್ಯಾಚರಣೆಗೆ ಇಳಿಯಿತು. ಆದರೂ ಉಪಯೋಗವಾಗಲಿಲ್ಲ. ಮೂವರು ಸಿಲುಕಿ ಮೃತಪಟ್ಟರು ಎಂದು ರಾವ್‌ ಅಕಾಡೆಮಿಯವರು ತಿಳಿಸಿದ್ದಾರೆ. ಈಗಾಗಲೇ ಕುಟುಂಬವರಿಗೂ ಮಾಹಿತಿ ನೀಡಲಾಗಿದೆ.

ನೆಲಮಹಡಿಯ ಕಟ್ಟಡದಲ್ಲಿ 150 ವಿದ್ಯಾರ್ಥಿಗಳು ಕುಳಿತುಕೊಂಡು ಅಧ್ಯಯನ ಮಾಡುವಷ್ಟು ಸ್ಥಳವಿದೆ. ಸಮೀಪದಲ್ಲಿರುವ ಹರಿಯುತ್ತಿರುವ ದೊಡ್ಡ ಮೋರಿ ಒಡೆದು ನೀರು ನೆಲ ಮಹಡಿಗೆ ಮಳೆ ನೀರು ನುಗ್ಗಿ ಈ ಅನಾಹುತವಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ನೀರು ಏಕಾಏಕಿ ನುಗ್ಗಿದ್ದರಿಂದ ಅನಾಹುತವಾಗಿದೆ ಎನ್ನುವುದು ಸ್ಥಳೀಯರ ವಿವರಣೆ.

ಸತತ ಏಳು ಗಂಟೆಗಳ ಕಾಲ ನಾವು ಕಾರ್ಯಾಚರಣೆ ವೇಳೆ ಹಾಜರಿದ್ದವು. ನೀರು ನುಗ್ಗಿದ್ದರಿಂದ ಅಲ್ಲಿದ್ದ ಪೀಠೋಪಗಳು ತೇಲಿ ಬಂದವು. ಇದರಿಂದ ಕಾರ್ಯಾಚರಣೆ ವಿಳಂಬವಾಯಿತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದರು.

ದೆಹಲಿಯಲ್ಲಿ ನೂರಕ್ಕೂ ಹೆಚ್ಚು ಐಎಎಸ್‌ ತರಬೇತಿ ಅಕಾಡೆಮಿಗಳಿವೆ. ಕೆಲವು ನೆಲಮಹಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಮಳೆ ನೀರು ಮೊದಲ ಬಾರಿ ಹೀಗೆ ನುಗ್ಗಿದೆ. ಆದರೂ ಸಹಪಾಠಿಗಳು ಮೃತಪಟ್ಟಿರುವುದು ಬೇಸರ ತಂದಿದೆ. ಆತಂಕವೂ ಆಗುತ್ತಿದೆ ಎಂದು ಅಭ್ಯರ್ಥಿಯೊಬ್ಬರು ಹೇಳಿಕೊಂಡರು.

ಎರಡು ದಿನದ ಹಿಂದೆ ಇದೇ ರೀತಿ ಐಎಎಸ್‌ ಪರೀಕ್ಷೆಯ ತಯಾರಿಯಲ್ಲಿದ್ದ ಇನ್ನೊಬ್ಬ ಅಭ್ಯರ್ಥಿ ನೀರಿನ ಪ್ರವಾಹ ದಾಟುವಾಗ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟಿದ್ದರು. ಇದಾದ ನಂತರ ಮತ್ತೊಂದು ದುರ್ಘಟನೆಯಲ್ಲಿ ಮೂವರು ಮೃತಪಟ್ಟಿರುವುದು ಅಭ್ಯರ್ಥಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಘಟನೆ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರ ಅಭಿಷೇಕ್‌ ಗುಪ್ತ, ಕೋರ್ಸ್‌ ಕೋಆರ್ಡಿನೇಟರ್‌ ದೇಶ್‌ ಪಾಲ್‌ ಸಿಂಗ್‌ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಅನುಮತಿ ನೀಡಿದ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿ ವಿರುದ್ದವೂ ಕ್ರಮ ಆಗುವ ಸಾಧ್ಯತೆಯಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.