ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hemanth Soren: ಜೈಲಿನಿಂದ ಬಿಡುಗಡೆಯಾದ ಹೇಮಂತ್‌ ಸೋರೆನ್‌ ಮತ್ತೆ ಜಾರ್ಖಂಡ್‌ ಸಿಎಂ, ರಾಜೀನಾಮೆಗೆ ಮುಂದಾದ ಹಾಲಿ ಸಿಎಂ

Hemanth Soren: ಜೈಲಿನಿಂದ ಬಿಡುಗಡೆಯಾದ ಹೇಮಂತ್‌ ಸೋರೆನ್‌ ಮತ್ತೆ ಜಾರ್ಖಂಡ್‌ ಸಿಎಂ, ರಾಜೀನಾಮೆಗೆ ಮುಂದಾದ ಹಾಲಿ ಸಿಎಂ

Jharkhand politics ಜಾರ್ಖಂಡ್‌ನಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಹೇಮಂತ್‌ ಸೋರೆನ್‌ ಮತ್ತೆ ಸಿಎಂ ಆಗಲಿದ್ದು, ಸಿಎಂ ಆಗಿದ್ದ ಚಂಪಾ ಸೋರೆನ್‌ ರಾಜೀನಾಮೆ ನೀಡಿದ್ದಾರೆ.

ಜಾರ್ಖಂಡ್‌ ಮುಖ್ಯಮಂತ್ರಿ ಚಂಪೈ ಸೊರೇನ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜಾರ್ಖಂಡ್‌ ಮುಖ್ಯಮಂತ್ರಿ ಚಂಪೈ ಸೊರೇನ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಂಚಿ: ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ( Jharkhand CM) ಬದಲಾಗಲಿದ್ದಾರೆ. ಹಗರಣವೊಂದರಲ್ಲಿ ಸಿಲುಕಿ ಐದು ತಿಂಗಳು ಜೈಲು ಸೇರಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್‌ಮುಕ್ತಿ ಮೋರ್ಚಾದ ಮುಖ್ಯಸ್ಥ ಹೇಮಂತ್‌ ಸೋರೆನ್‌ ( Hemanth Soren) ಮುಖ್ಯಮಂತ್ರಿಯಾಗುವುದು ನಿಕ್ಕಿಯಾಗಿದೆ. ಇವರ ಸಂಬಂಧಿ, ಐದು ತಿಂಗಳಿನಿಂದ ಮುಖ್ಯಮಂತ್ರಿ ಗಾದಿಯಲ್ಲಿದ್ದ ಚಂಪೈ ಸೋರೆನ್‌( Champai Soren) ಬುಧವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಹೇಮಂತ್‌ ಮುಖ್ಯಮಂತ್ರಿ ಗಾದಿಗೇರಲು ಅನುವು ಮಾಡಿಕೊಟ್ಟಿದ್ದಾರೆ.ಜಾರ್ಖಂಡ್‌ನಲ್ಲಿ ಬುಧವಾರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಹೇಮಂತ್‌ ಸೋರೆನ್‌ ಅವರನ್ನು ಮುಖ್ಯಮಂತ್ರಿಯಾಗಿಸುವ ಚಟುವಟಿಕೆಗಳು ನಡೆದವು. ಗುರುವಾರವೇ ಹೇಮಂತ್‌ ಪದಗ್ರಹಣ ಮಾಡಲಿದ್ದಾರೆ.

ನಾಲ್ಕೂವರೆ ವರ್ಷದ ಹಿಂದೆ ನಡೆದಿದ್ದ ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ ಬಿಜೆಪಿಯಲ್ಲಿ ಹಿಂದಿಕ್ಕಿ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್‌ ಹಾಗೂ ಆರ್‌ ಜೆಡಿ ಕೂಡ ಹೇಮಂತ್‌ ಸೋರೆನ್‌ ಬೆಂಬಲಿಸಿದ್ದರು. ಆನಂತರ ಹೇಮಂತ್‌ ಸಿಎಂ ಆಗಿದ್ದರು. ಆದರೆ ಹೇಮಂತ್‌ ಸೋರೆನ್‌ ವಿರುದ್ದ ಅಕ್ರಮ ಹಣ ಸಂಗ್ರಹಣೆ ಆರೋಪದ ಮೇಲೆ ಮೊಕದ್ದಮೆ ದಾಖಲಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಪ್ರಕರಣ ದಾಖಲಿಸಿದ್ದರಿಂದ ಈ ವರ್ಷದ ಜನವರಿಯಲ್ಲಿ ಬಂಧಿಸಲಾಗಿತ್ತು. ಆಗ ಸಿಎಂ ಹುದ್ದೆಗೆ ಸೋರೆನ್‌ ರಾಜೀನಾಮೆ ನೀಡಿದ್ದರು. ಈಗ ಜಾಮೀನು ಸಿಕ್ಕಿದ್ದರಿಂದ ಬಿಡುಗಡೆಯಾಗಿದ್ದರು.

ಬಿಡುಗಡೆಯಾಗಿ ಬಂದ ನಂತರ ಪಕ್ಷದ ಶಾಸಕರು ಹಾಗೂ ಮುಖಂಡರ ಸಭೆ ನಡೆಸಿ ಮತ್ತೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದರು. ಬುಧವಾರವೂ ಹಾಲಿ ಸಿಎಂ ಚಂಪೈ ಸೋರೆನ್‌ ನಿವಾಸದಲ್ಲಿ ಸಭೆ ನಡೆದಿತ್ತು. ಚಂಪೈ ಸೋರೆನ್‌ ಈ ವರ್ಷವೇ ಚುನಾವಣೆ ಇರುವುದರಿಂದ ಸಿಎಂ ಬದಲಾವಣೆ ಬೇಡ ಎಂದು ಹೇಳಿದ್ದರು. ಆದರೆ ಹೇಮಂತ್‌ ಸೋರೆನ್‌ ಬೆಂಬಲಿಗ ಶಾಸಕರು ಇದನ್ನು ಒಪ್ಪಿರಲಿಲ್ಲ. ಹೇಮಂತ್‌ ನಾಯಕತ್ವದಲ್ಲೇ ಚುನಾವಣೆ ಎದುರಿಸೋಣ. ಅವರು ಸಿಎಂ ಆಗಿದ್ದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಕೂಡ ಬೆಂಬಲ ಸೂಚಿಸಿದ್ದರಿಂದ ನಾಯಕರ ಅಣತಿಯಂತೆ ಚಂಪೈ ಸೋರೆನ್‌ ರಾಜೀನಾಮೆ ನೀಡಲು ಒಪ್ಪಿದ್ದರು. ಆನಂತರ ಹೇಮಂತ್‌ ಅವರನ್ನು ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಹೇಮಂತ್‌ ಸೋರೆನ್‌ ಸಹಿತ ಪ್ರಮುಖರೊಂದಿಗೆ ಭೇಟಿ ಮಾಡಿ ತ್ಯಾಗ ಪತ್ರವನ್ನು ಹಸ್ತಾಂತರಿಸಿದ್ದರು. ರಾಜ್ಯಪಾಲರು ಅವರ ರಾಜೀನಾಮೆ ಅಂಗೀಕರಿಸಿದ್ದರು.

ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವೇ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಈ ವರ್ಷದ ಡಿಸೆಂಬರ್‌ನಲ್ಲಿ ಜಾರ್ಖಂಡ್‌ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಬಿಜೆಪಿ ತಮ್ಮನ್ನು ಬಂಧಿಸಿ ಅನಗತ್ಯ ಆಡಳಿತಕ್ಕೆ ಅಡ್ಡಿಪಡಿಸಿದ್ದನ್ನೇ ಮುಖ್ಯ ವಿಷಯ ಮಾಡಿಕೊಂಡು ಚುನಾವಣೆಗೆ ಹೋಗಲು ಹೇಮಂತ್‌ ಸೋರೆನ್‌ ಹಾಗೂ ಇಂಡಿಯಾ ಒಕ್ಕೂಟದ ನಾಯಕರು ಅಣಿಯಾಗಿದ್ದಾರೆ.

ಹೇಮಂತ್‌ ಸೋರೆನ್‌ ಸಿಎಂ ಆಗುತ್ತಲೇ ಜನಪ್ರಿಯ ಯೋಜನೆಗಳನ್ನು ಸದ್ಯದಲ್ಲೇ ಘೋಷಿಸಿ ಚುನಾವಣೆಗೆ ಹೋಗುವ ತಯಾರಿಯಲ್ಲಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.