Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಭಾರತಕ್ಕೆ ಈ ಬಾರಿಯ ಮಾನ್ಸೂನ್( Monsoon) ಬೇಗನೇ ಪ್ರವೇಶಿಸಬಹುದು ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( imd) ನೀಡಿದೆ. ಅಧಿಕೃತವಾಗಿ ಮುಂದಿನ ವಾರ ಮಾನ್ಸೂನ್ ವಿವರ ಪ್ರಕಟಿಸಲಿದೆ.
ದೆಹಲಿ: ಈಗಾಗಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೂರ್ವ ಮುಂಗಾರು( pre Monsoon) ಚುರುಕಾಗಿದೆ. ಹತ್ತು ದಿನದಿಂದ ಕರ್ನಾಟಕದ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಲೇ ಇದೆ. ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಹಾಸನ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಪೂರ್ವ ಮುಂಗಾರಿನ ಅಬ್ಬರದ ನಡುವೆ ಮುಂಗಾರು ಆರಂಭದ ಖುಷಿಯ ವಿಚಾರವೂ ಇದೆ. ಈ ಬಾರಿ ನೈಋತ್ಯ ಮಾನ್ಸೂನ್ ಮೇ 19 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಗಮಿಸಿ ಭಾರತದ ಇತರೆಡೆಗೆ ನಿಧಾನವಾಗಿ ಹಂಚಿಕೆಯಾಗುವ ಸಾಧ್ಯತೆಯಿದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ( IMD) ಮುಂಗಾರು ಮಳೆ ಆರಂಭದ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.
ಮೇ 19, 20 ಮತ್ತು 21 ರಂದು ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮಾದರಿಗಳು ಸೂಚಿಸುತ್ತಿವೆ. ಅಂಡಮಾನ್ ಪ್ರದೇಶವನ್ನು ತಲುಪಿದ ನಂತರ ಮಾನ್ಸೂನ್ ಕೇರಳವನ್ನು ತಲುಪಲು ಸಾಮಾನ್ಯವಾಗಿ ಸುಮಾರು 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಬಾರಿಯೂ ಕರ್ನಾಟಕದಲ್ಲೂ ಬೇಗನೇ ಮುಂಗಾರು ಪ್ರವೇಶಿಸಬಹುದು. ಅದು ಮೇ ಕೊನೆಯ ವಾರದಲ್ಲಿಯೇ ಆಗಬಹುದು ಎನ್ನುವ ಅಂದಾಜಿದೆ ಎಂದು ಸ್ಕೈಮೆಟ್ ವೆದರ್‌ನ ಮಹೇಶ್ ಪಲಾವತ್ ಹೇಳುತ್ತಾರೆ.
ಮುಂಗಾರು ಮಾಹಿತಿ ಏನು
ನೈಋತ್ಯ ಮಾನ್ಸೂನ್ ಮೇ 19 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ (ಭಾರತ ಹವಾಮಾನ ಇಲಾಖೆ) ತಿಳಿಸಿದೆ.
ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರ ಸುಮಾರಿಗೆ ಆರಂಭಗೊಂಡು ನಂತರ ಕೇರಳ ಕಡೆಗೆ ಸಾಗುತ್ತದೆ. ನಂತರ ಅದು ಉತ್ತರದ ಕಡೆಗೆ ಮುಂದುವರಿಯುತ್ತದೆ, ಜೂನ್ ನಲ್ಲಿ ಸಾಮಾನ್ಯವಾಗಿ ಹೆಚ್ಚುತ್ತಾ ಹೋಗಿ ಜುಲೈ 15 ರ ಸುಮಾರಿಗೆ ಇಡೀ ದೇಶವನ್ನು ಆವರಿಸುತ್ತದೆ.
ಜೂನ್ ನಿಂದ ಸೆಪ್ಟೆಂಬರ್ ನಡುವೆ ದೇಶಾದ್ಯಂತ ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿಯ (LPA) ಶೇ.106 ರಷ್ಟು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮೇ 15 ರಂದು ತನ್ನ ದೀರ್ಘಾವಧಿ ಮುನ್ಸೂಚನೆಯಲ್ಲಿ ತಿಳಿಸಿದೆ.
ಯಾವ ರಾಜ್ಯದಲ್ಲಿ ಹೇಗೆ
ಮುಂದಿನ ಐದು ದಿನಗಳಲ್ಲಿ ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಗುಡುಗು, ಮಿಂಚು ಮತ್ತು ಗಾಳಿಯೊಂದಿಗೆ ಚದುರಿದ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
ಮೇ 16 ರಿಂದ ವಾಯುವ್ಯ ಭಾರತದಲ್ಲಿ ಹೊಸ ಬಿಸಿಗಾಳಿ ಬೀಸಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ವಾಯುವ್ಯ ಮತ್ತು ಪೂರ್ವ ಭಾರತದ ಅನೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸುಮಾರು 3-5 ಡಿಗ್ರಿ ಸೆಲ್ಸಿಯಸ್ ಕ್ರಮೇಣ ಏರಿಕೆಯಾಗುವ ಸಾಧ್ಯತೆಯಿದೆ.
ದೆಹಲಿ ಸೇರಿದಂತೆ ವಾಯುವ್ಯ ಭಾರತದಲ್ಲಿ ತಾಪಮಾನವು ಈಗ ಹೆಚ್ಚಾಗುವ ನಿರೀಕ್ಷೆಯಿದೆ. ಈ ಪ್ರದೇಶದಲ್ಲಿ ತಕ್ಷಣವೇ ಯಾವುದೇ ಪೂರ್ವ ಮುಂಗಾರು ಚಟುವಟಿಕೆಯನ್ನು ನಾವು ನಿರೀಕ್ಷಿಸುತ್ತಿಲ್ಲ. ಈ ಪ್ರದೇಶದ ಮೇಲೆ ಬಿಸಿ, ಶುಷ್ಕ ವಾಯುವ್ಯ ಮಾರುತಗಳು ಬೀಸುವ ನಿರೀಕ್ಷೆಯಿದೆ; ಸ್ಪಷ್ಟ ಆಕಾಶವು ಶಾಖವನ್ನು ಹೆಚ್ಚಿಸುತ್ತದೆ ಎನ್ನುವುದು ಸ್ಕೈಮೆಟ್ ವೆದರ್‌ನ ಮಹೇಶ್ ಪಲಾವತ್ ವಿವರಣೆ.
ಮುಂದಿನ ವಾರ ಅಧಿಕೃತ ಘೋಷಣೆ
ಮೇ ಮೂರನೇ ವಾರದಲ್ಲಿ ಮುಂಗಾರು ಕುರಿತು ನಿರ್ದಿಷ್ಠ ಮುನ್ಸೂಚನೆಯನ್ನು ನೀಡಲಾಗುವುದು, ಇದು ವಾಯುವ್ಯ ಭಾರತ, ಮಧ್ಯ ಭಾರತ, ದಕ್ಷಿಣ ಪರ್ಯಾಯ ದ್ವೀಪ ಮತ್ತು ಈಶಾನ್ಯ ಭಾರತ ಸೇರಿ ಭಾರತದ ನಾಲ್ಕು ಏಕರೂಪದ ಪ್ರದೇಶಗಳಲ್ಲಿ ಮತ್ತು ಮಾನ್ಸೂನ್ ಕೋರ್ ವಲಯ (MCZ) ಮೇಲೆ ಸಮಯಾಧಾರಿತ ಮಳೆಯ ಮುನ್ಸೂಚನೆಯನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಅದೇ ಸಮಯದಲ್ಲಿ, ಐಎಂಡಿ ಕೇರಳದಲ್ಲಿ ಮಾನ್ಸೂನ್ ಪ್ರಾರಂಭದ ದಿನಾಂಕವನ್ನು ಪ್ರಕಟಿಸಲಿದೆ
ನೈಋತ್ಯ ಮಾನ್ಸೂನ್ 2024 ರ ಮೇ 19 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂದುವರಿಯುವ ಸಾಧ್ಯತೆಯಿದೆ. ಮುಂದಿನ ಏಳು ದಿನಗಳಲ್ಲಿ ಉಪ ಹಿಮಾಲಯನ್ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇದೇ ಅವಧಿಯಲ್ಲಿ ತಮಿಳುನಾಡು, ಪುದುಚೇರಿ, ಕೇರಳ, ಮಾಹೆ ಮತ್ತು ಕರ್ನಾಟಕದಲ್ಲಿ ಮಿಂಚು ಮತ್ತು ಬಿರುಗಾಳಿ ಬೀಸುವ ನಿರೀಕ್ಷೆಯಿದೆ. ಈ ಕುರಿತು ಸದ್ಯವೇ ವಿವರವಾದ ಮಾಹಿತಿ ಪ್ರಕಟಿಸಲಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ.
ವಿಭಾಗ