ಕನ್ನಡ ಸುದ್ದಿ  /  Nation And-world  /  India News India Changed To Bharat Rig Veda To Constitution Of India 5 Points Explainer Bharat News In Kannada Uks

Bharat vs India: ಭಾರತ್ vs ಇಂಡಿಯಾ, ನಮ್ಮದೇಶದ ಹೆಸರಿನ ವಿಚಾರದಲ್ಲೇಕೆ ಈ ಪರಿ ವಿವಾದ; ಇಲ್ಲಿದೆ 5 ಅಂಶಗಳ ವಿವರಣೆ

Bharat vs India row: ಭಾರತದ ರಾಜಧಾನಿ ನವದೆಹಲಿಯಲ್ಲಿ ಸೆ.8 ರಿಂದ 10ರ ತನಕ ಜಿ20 ಶೃಂಗ ನಡೆಯಲಿದೆ. ಈ ಶೃಂಗದ ಅತಿಥಿಗಳನ್ನು ರಾಷ್ಟ್ರಪತಿ ಔತಣಕ್ಕೆ ಆಹ್ವಾನಿಸಿದ್ದು, ಅದರ ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂಬ ಒಕ್ಕಣೆ ಇದೆ. ಇದಕ್ಕೆ ಇಂಡಿಯಾ ಮೈತ್ರಿಕೂಟ ಆಕ್ಷೇಪ ವ್ಯಕ್ತಪಡಿಸಿದ್ದು, ಎನ್‌ಡಿಎ ಸಮರ್ಥಿಸಿದೆ. ಇದರ ವಿವರ ಹೀಗಿದೆ.

ಇಂಡಿಯಾ ದ್ಯಾಟ್ ಈಸ್ ಭಾರತ್‌ ಎಂಬ ಉಲ್ಲೇಖವಿರುವ ಸಂವಿಧಾನದ ಪುಟ, ರಾಷ್ಟ್ರಪತಿಯವ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂಬ ಉಲ್ಲೇಖ.
ಇಂಡಿಯಾ ದ್ಯಾಟ್ ಈಸ್ ಭಾರತ್‌ ಎಂಬ ಉಲ್ಲೇಖವಿರುವ ಸಂವಿಧಾನದ ಪುಟ, ರಾಷ್ಟ್ರಪತಿಯವ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂಬ ಉಲ್ಲೇಖ.

ಭಾರತ್ vs ಇಂಡಿಯಾ (Bharat vs India) ಸದ್ಯ ದೇಶಾದ್ಯಂತ ಚರ್ಚೆಯಲ್ಲಿರುವ ಹಾಟ್ ಟಾಪಿಕ್. ನಮ್ಮ ದೇಶದ ಹೆಸರಿನ ವಿಚಾರದಲ್ಲಿ ಈ ಪರಿ ವಿವಾದ ಆಗುತ್ತಿರುವುದೇಕೆ? ಭಾರತ ಮತ್ತು ಇಂಡಿಯಾ ಹೆಸರುಗಳು ಯಾವಾಗ ಬಂತು, ಹೆಸರುಗಳ ಹಿನ್ನೆಲೆ ಏನು ಎಂಬಿತ್ಯಾದಿ ಸಹಜ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಒದಗಿಸುವ ವಿವರಣೆ ನೀಡುವ ಪ್ರಯತ್ನ ಇದು.

ಟ್ರೆಂಡಿಂಗ್​ ಸುದ್ದಿ

ಎರಡು ದಿನಗಳ ಹಿಂದೆ ರಾಷ್ಟ್ರಪತಿ ಕಚೇರಿಯಿಂದ ಜಿ20 ಅತಿಥಿಗಳನ್ನು ಔತಣಕ್ಕೆ ಆಹ್ವಾನಿಸಿ ಕಳುಹಿಸಿದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್‌ ಭಾರತ್ ಎಂಬ ಒಕ್ಕಣೆ ಇದೆ. ಪ್ರಧಾನಮಂತ್ರಿಯವರನ್ನೂ ಪ್ರೈಮ್ ಮಿನಿಸ್ಟರ್‌ ಆಫ್ ಭಾರತ್ ಎಂದು ಬಳಸಲಾಗಿದೆ. ಬಹುತೇಕವಾಗಿ ಈ ಜಿ20 ಶೃಂಗದ ಆತಿಥ್ಯವಹಿಸಿದ ಭಾರತ ಸರ್ಕಾರ, ದೇಶದ ಹೆಸರನ್ನು ಭಾರತ್ ಎಂದು ಅಧಿಕೃತವಾಗಿ ಇಂಗ್ಲಿಷ್‌ನಲ್ಲೂ ಬಳಸಲು ಶುರುಮಾಡಿತು.

1. ಭಾರತ್ ಹೆಸರು ಹೇಗೆ ಬಂತು?

"ಭಾರತ್‌", "ಭಾರತ", ಅಥವಾ "ಭಾರತವರ್ಷ"ದ ಬೇರುಗಳು ಪುರಾಣ ಸಾಹಿತ್ಯದಲ್ಲಿ ಮತ್ತು ಮಹಾಕಾವ್ಯವಾದ ಮಹಾಭಾರತದಲ್ಲಿ ಕಂಡುಬರುತ್ತವೆ. ಪುರಾಣಗಳು ಭಾರತವನ್ನು "ದಕ್ಷಿಣದಲ್ಲಿ ಸಮುದ್ರ ಮತ್ತು ಉತ್ತರದಲ್ಲಿ ಹಿಮ ಪ್ರದೇಶ" ನಡುವಿನ ಭೂಮಿ ಎಂದು ವಿವರಿಸುತ್ತದೆ.

ಋಗ್ವೇದದ 18ನೇ ಶ್ಲೋಕವು 10 ರಾಜರ ಯುದ್ಧವನ್ನು ವಿವರಿಸುತ್ತದೆ. ಅದರಲ್ಲಿ ತೃತ್ಸು ಬುಡಕಟ್ಟಿನ ಭರತ ವಂಶದ ರಾಜ ಸುದಾಸನ ವಿರುದ್ಧದ 10 ರಾಜರು ಸಮರ ಸಾರಿದ್ದರ ವಿವರಣೆ ಅದರಲ್ಲಿದೆ. ಈ ಯುದ್ಧವು ಪಂಜಾಬ್‌ನ ರಾವಿ ನದಿಯ ದಂಡೆಯಲ್ಲಿ ನಡೆದಿರುತ್ತದೆ. ಈ ಯುದ್ಧದಲ್ಲಿ ರಾಜ ಸುದಾಸ ಗೆಲುವಿನ ನಗೆ ಬೀರುತ್ತಾನೆ. ಇದರ ಬಳಿಕ ಭರತ ವಂಶದ ಕೀರ್ತಿ ಪಸರಿಸುತ್ತದೆ. ಭರತ ವಂಶದ ರಾಜರು ಆಳ್ವಿಕೆ ನಡೆಸಿದ ಭೂಮಿ ಭಾರತ ವರ್ಷವಾಗಿ ಗುರುತಿಸಲ್ಪಡುತ್ತದೆ ಎಂಬ ಉಲ್ಲೇಖವನ್ನು ಹಿಸ್ಟರಿ ಆಫ್‌f ಇಂಡಿಯಾ’ಸ್ ಜಿಯಾಗ್ರಫಿ ನೀಡುತ್ತದೆ.

ಮಹಾಭಾರತದ ಪ್ರಕಾರ, ಭರತ ಚಕ್ರವರ್ತಿ ಆಳ್ವಿಕೆ ನಡೆಸಿದ ಭೂಪ್ರದೇಶವಾದ ಕಾರಣ ಭಾರತವೆನಿಸಿತು. ಭರತ ಸಾಮ್ರಾಜ್ಯದ ಸ್ಥಾಪಕ ಭರತ ಚಕ್ರವರ್ತಿ. ಈತ ಪಾಂಡವರು ಮತ್ತು ಕೌರವರ ಪೂರ್ವಜ. ದುಷ್ಯಂತ ಮತ್ತು ಶಕುಂತಲೆ ದಂಪತಿಯ ಪುತ್ರ. ಭರತ ಬಹುದೊಡ್ಡ ಭೂಭಾಗವನ್ನು ಆಳಿದ್ದ. ಆ ಪ್ರದೇಶವನ್ನು ಭರತವರ್ಷ ಎಂದು ಗುರುತಿಸಲಾಗಿದೆ.

ವಿಷ್ಣು ಪುರಾಣದಲ್ಲಿರುವ ವಿವರಣೆ

ಉತ್ತರಂ ಯತ್ಸಮುದ್ರಸ್ಯ ಹಿಮೇಂದ್ರೈಶ್ಚೈವ ದಕ್ಷಿಣಂ|

ವರ್ಷಂ ತದ್‌ಭಾರತಂ ನಾಮ ಭಾರತೀ ಯತ್ರ ಸಂತತಿ||

ಇಲ್ಲಿ ವರ್ಷಂ ಎಂದರೆ ದೇಶ ಎಂದು ಅರ್ಥ. ಸಾಗರದ ಉತ್ತರಕ್ಕೆ ಮತ್ತು ಹಿಮ ತುಂಬಿದ ಬೆಟ್ಟ ಪ್ರದೇಶದ ದಕ್ಷಿಣಕ್ಕೆ ಇರುವ ಪ್ರದೇಶವನ್ನು ಭಾರತಂ ಎಂದೂ, ಇಲ್ಲಿನ ನಿವಾಸಿಗಳನ್ನು ಭರತ ಕುಲದವರೆಂದು ಪರಿಗಣಿಸಲ್ಪಟ್ಟಿದ್ದಾರೆ. ಭರತ ವರ್ಷದಲ್ಲಿ ಈಗಿನ ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಇರಾನ್‌, ತಜಕಿಸ್ತಾನ್‌, ಉಜ್ಬೇಕಿಸ್ತಾನ್‌, ಕಿರ್ಗಿಸ್ತಾನ್‌, ರಷ್ಯಾ, ತುರ್ಕ್‌ಮೆನಿಸ್ತಾನ್‌, ಟಿಬೆಟ್‌, ನೇಪಾಳ ಮತ್ತು ಬಾಂಗ್ಲಾದೇಶ ಸೇರಿಕೊಂಡಿದ್ದವು.

ಜೈನ ಧರ್ಮದಲ್ಲೂ ಭರತ ಚಕ್ರವರ್ತಿಯ ಉಲ್ಲೇಖವಿದೆ. ಈ ಚಕ್ರವರ್ತಿಯು ಮೊದಲ ಜೈನ ತೀರ್ಥಂಕರನ ಹಿರಿಯ ಪುತ್ರ ಎಂದೂ, ಭರತನ ಕಾರಣ ಭಾರತ ಎಂಬ ಹೆಸರು ಬಂತೆಂದೂ ಹೇಳಲಾಗುತ್ತಿದೆ.

2.ಇಂಡಿಯಾ ಹೆಸರು ಹೇಗೆ ಬಂತು

ಹದಿನೆಂಟನೇ ಶತಮಾನದಿಂದೀಚೆಗೆ ಬ್ರಿಟಿಷ್ ಮ್ಯಾಪ್‌ಗಳಲ್ಲಿ ಇಂಡಿಯಾ ಮತ್ತು ಹಿಂದೂಸ್ತಾನ್‌ ಎಂದು ಬಳಸುವುದು ರೂಢಿಗೆ ಬಂತು. ಇಂಡಿಯಾ ನಾಮ ಬಳಕೆಯು ವಸಾಹತುಶಾಹಿಯ ದೃಷ್ಟಿಕೋನ ಮತ್ತು ಬ್ರಿಟಿಷ್ ಆಳ್ವಿಕೆಗೆ ರಾಜಕೀಯವಾಗಿ ಪ್ರದೇಶವನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ ಎಂಬುದರ ಕಡೆಗೆ ತಮ್ಮ ಸಂಶೋಧನಾ ಲೇಖನಗಳಲ್ಲಿ ಈ ಹಿಂದೆಯೇ ಜಾನ್ ಡಿ ಬಾರೋ ಗಮನಸೆಳೆದಿದ್ದಾರೆ.

ಹದಿನೆಂಟನೇ ಶತಮಾನಕ್ಕೂ ಮೊದಲು ಇಂಡಸ್‌ ನದಿಯ ಕಾರಣ ಸಿಂಧೂ ನದಿ ನಾಗರಿಕತೆ, ಹಿಂದುಸ್ತಾನ್‌ ಬಳಕೆಯಲ್ಲಿತ್ತು. ಗ್ರೀಕರು ಹಿಂದು ಎಂಬುದನ್ನು ಇಂಡಸ್‌ ಎಂದು ಹೇಳಿದರು. 3ನೇ ಶತಮಾನದಲ್ಲಿ ಮೆಕಡೋನಿಯನ್ ರಾಜ ಅಲೆಕ್ಸಾಂಡರ್ ದಂಡಯಾತ್ರೆ ಬಂದಾಗ ಇಂಡಸ್ ನದಿಯಾಚೆಗಿನ ಪ್ರದೇಶವನ್ನು ಇಂಡಿಯಾ ಎಂದು ಗುರುತಿಸಿದ್ದ. ಮೊಘಲರ ಕಾಲದಲ್ಲಿ ಇಂಡಿಯಾವನ್ನು ಹಿಂದುಸ್ತಾನ್ ಎಂದು ಹೇಳಲಾಗುತ್ತಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಇಂಡಿಯಾ ಪದ ಹೆಚ್ಚು ಪ್ರಚಲಿತಕ್ಕೆ ಬಂತು ಎಂಬ ಉಲ್ಲೇಖವಿದೆ.

3. ಭಾರತ್ ಮತ್ತು ಇಂಡಿಯಾ ಕುರಿತು ಸಂವಿಧಾನದಲ್ಲಿ ಏನು ಹೇಳಿದೆ?

ನಮ್ಮ ದೇಶದ ಸ್ವಾತಂತ್ರ್ಯ ಪಡೆದ ಬಳಿಕ ಸಂವಿಧಾನ ರಚನೆಯ ಸಂದರ್ಭದಲ್ಲಿ ಭಾರತ್ ಮತ್ತು ಇಂಡಿಯಾ ಹೆಸರಿನ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಕೊನೆಗೆ ಸಂವಿಧಾನದ ಭಾಗ 1ರಲ್ಲಿ ಇಂಡಿಯಾ ದ್ಯಾಟ್ ಈಸ್ ಭಾರತ್ ಎಂಬ ಉಲ್ಲೇಖ ಸೇರಿಸಲಾಗಿದೆ.

ಇಂಗ್ಲಿಷ್‌ನಲ್ಲಿ ನಮ್ಮ ದೇಶದ ಹೆಸರನ್ನು ಇಂಡಿಯಾ ಎಂದೂ ಹಿಂದಿ ಸೇರಿ ಉಳಿದ ಎಲ್ಲ ಅಧಿಕೃತ ಭಾಷೆಗಳಲ್ಲೂ ಭಾರತ್/ ಭಾರತ ಎಂದು ಬಳಸುವುದು ಎಂಬ ತೀರ್ಮಾನಕ್ಕೆ ಬರಲಾಗಿತ್ತು.

ಭಾರತದ ಮೊದ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ತಮ್ಮ ಡಿಸ್ಕವರಿ ಆಫ್ ಇಂಡಿಯಾ ಕೃತಿಯಲ್ಲಿ ಇಂಡಿಯಾ, ಭಾರತ, ಹಿಂದುಸ್ತಾನ್ ಎಂಬ ಪದಗಳನ್ನು ಹಲವೆಡೆ ಬಳಸಿದ್ದಾರೆ.

4. ಜವಾಹರಲಾಲ್ ನೆಹರು ಏನು ಹೇಳಿದ್ದರು…

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು, 1927ರ ಜನವರಿಯಲ್ಲಿ ಬರೆದ ಲೇಖನ ಪ್ರಕಾರ, ಇಂಡಿಯಾದ ಮೂಲಭೂತ ಏಕತೆಯನ್ನು ಬಹಳ ಪುರಾತನ ಕಾಲದಿಂದಲೇ ರೂಢಿಸಿಕೊಂಡು ಬರಲಾಗಿದೆ. ಒಂದು ಸಾಮಾನ್ಯ ನಂಬಿಕೆಯ ಮತ್ತು ಸಂಸ್ಕೃತಿಯ ಏಕತೆ ಇದು. ಇಂಡಿಯಾ ಭಾರತವಾಗಿತ್ತು. ಹಿಂದೂಗಳ ಪವಿತ್ರ ಭೂಮಿ. ಹಿಂದೂ ತೀರ್ಥಯಾತ್ರೆಯ ಶ್ರದ್ಧಾ ಕೇಂದ್ರಗಳು ದೇಶದ ನಾಲ್ಕೂ ಮೂಲೆಗಳಲ್ಲಿ ಅಂದರೆ ದಕ್ಷಿಣಕ್ಕೆ ನೋಡಿದರೆ ತುತ್ತ ತುದಿಗೆ ಸಿಲೋನ್‌, ಪಶ್ಚಿಮಕ್ಕೆ ನೋಡಿದರೆ ಅರಬ್ಬೀ ಸಮುದ್ರ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ಉತ್ತರದಲ್ಲಿ ಹಿಮಾಲಯಗಳ ನಡುವೆ ಪಸರಿಸಿಕೊಂಡಿವೆ. (ಆಯ್ದ ಕೃತಿಗಳು ಸಂಪುಟ 2ರ ಉಲ್ಲೇಖವನ್ನು ಇಂಡಿಯನ್‌ ಎಕ್ಸ್‌ಪ್ರೆಸ್ ನೀಡಿದೆ).

5. ಈಗ ಯಾಕೆ ಹೆಸರಿನ ವಿವಾದ?

ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯೇತರ ಪಕ್ಷಗಳ ಮೈತ್ರಿ ಬಲಪಡಿಸಿಕೊಳ್ಳಲು ಕಾಂಗ್ರೆಸ್‌ ಹಳೆಯ ಯುಪಿಎಯನ್ನು ಬಿಟ್ಟು ಹೊಸದೇ ಆದ ಮೈತ್ರಿಕೂಟ ರಚಿಸಿ ಅದಕ್ಕೆ ಇಂಡಿಯಾ ಎಂಬ ಹೆಸರು ನಾಮಕರಣ ಮಾಡಿತು. ಇಂಡಿಯಾ ಎಂಬುದು ದೇಶದ ಹೆಸರಾದ ಕಾರಣ ಆ ಪದ ಬಳಕೆಗೆ ಆರಂಭದಲ್ಲಿ ಕೆಲವು ಆಕ್ಷೇಪ ವ್ಯಕ್ತವಾಯಿತು. ಬಿಜೆಪಿ ನಾಯಕರು ಟೀಕೆಯನ್ನೂ ಮಾಡಿದರು.

ಇಂಡಿಯಾ ಎಂದು ದೇಶವನ್ನು ಉಲ್ಲೇಖಿಸಿದಾಗ ಸ್ಪಷ್ಟವಾಗಿ ದೇಶವನ್ನು ಹೇಳುತ್ತಿರುವುದು ಎಂದು ಜನರಿಗೆ ಮನದಟ್ಟು ಮಾಡಬೇಕಾದ ಅನಿವಾರ್ಯತೆ ಆಡಳಿತ ಪಕ್ಷಕ್ಕೆ ಎದುರಾಗಿದೆ. ಇಂಡಿಯಾ ಮೈತ್ರಿಕೂಟದವರೂ ಇಂಡಿಯಾ ಪದವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಲು ಶುರುಮಾಡಿರುವುದು ಸ್ಪಷ್ಟವಾಗಿ ವಿಪಕ್ಷ ನಾಯಕರ ವರ್ತನೆ, ಹೇಳಿಕೆಗಳ ಮೂಲಕ ಮನದಟ್ಟಾಗಿರುವ ವಿಚಾರ.

ಸಂವಿಧಾನದ ಚೌಕಟ್ಟಿನಲ್ಲೇ ಆಡಳಿತ ಪಕ್ಷ ಬಿಜೆಪಿ ಕೂಡ ಆಡುತ್ತಿದ್ದು, ಇಂಡಿಯಾ ಪದ ಬಳಸುವ ಬದಲು ಭಾರತ ಎಂಬ ಪದ ಬಳಸಲು ಶುರುಮಾಡಿದೆ ಎಂದು ರಾಜಕೀಯ ವಿಚಾರವಂತರ ವೇದಿಕೆಯ ಚರ್ಚೆಯ ಅಂಶ.