Covid Updates: ಭಾರತದಲ್ಲಿ 756 ಹೊಸ ಪ್ರಕರಣ, 5 ಮಂದಿ ಸಾವು: ಮಹಾರಾಷ್ಟ್ರ, ಕರ್ನಾಟಕದಲ್ಲಿ ಅಧಿಕ
ಒಂದೇ ದಿನ ಭಾರತದಲ್ಲಿ 756 ಮಂದಿಗೆ ಕೋವಿಡ್ ಸೋಂಕು ಇರುವುದು ಕಂಡು ಬಂದಿದೆ. 5 ಮಂದಿಗೆ ಕೋವಿಡ್‌ಗೆ ಬಲಿಯಾಗಿದ್ದಾರೆ.
ದೆಹಲಿ: ಭಾರತದಲ್ಲಿ ಕೋವಿಡ್ ನ ಪ್ರಕರಣಗಳು ನಿಧಾನವಾಗಿ ಏರುತ್ತಲೇ ಇವೆ. ಶನಿವಾರ ಒಂದೇ ದಿನ ಇಡೀ ದೇಶದಲ್ಲಿ 756ಪ್ರಕರಣಗಳು ದಾಖಲಾಗಿವೆ. ಒಟ್ಟು 5 ಮಂದಿ ಕೋವಿಡ್‌ನಿಂದ ಶನಿವಾರ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಕದಲ್ಲಿಯೇ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ದೈನಂದಿನ ಕೋವಿಡ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಮ್ಮು ಕಾಶ್ಮೀರದಲ್ಲೂ ಕೋವಿಡ್ ಪ್ರಕರಣದಲ್ಲಿ ಒಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ.
ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಏರಿಳಿತ ಕಾಣುತ್ತಲೇ ಇದೆ. ಶನಿವಾರ ಒಂದೇ ದಿನ 756 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಇಡೀ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 4,049ಕ್ಕೆ ಏರಿಕೆಯಾದಂತಾಗಿದೆ. ಮೂರು ದಿನದಲ್ಲಿ ಪ್ರಕರಣಗಳಲ್ಲಿ ಕೊಂಚ ಇಳಿಕೆ ಕಂಡು ಬಂದಿತ್ತಾದರೂ ಮತ್ತೆ ಏರಿಕೆ ಕಾಣುತ್ತಿದೆ.
ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 154 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಒಬ್ಬರು ಕೋವಿಡ್‌ನಿಂದ ಜೀವ ಕಳೆದುಕೊಂಡಿದ್ದಾರೆ. ಮುಂಬೈ ಹಾಗೂ ನಾಗ್ಪುರದಲ್ಲಿ ಈ ಸಾವಿನ ವರದಿಗಳು ಆಗಿವೆ. ಮುಂಬೈ ಮಹಾನಗರದಲ್ಲಿ 21 ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರದಲ್ಲಿಯೇ ಒಂದೇ ದಿನ 14,790 ಮಂದಿಯ ತಪಾಸಣೆ ಮಾಡಲಾಗಿದೆ. 12,369ರಷ್ಟು ರಾಪಿಡ್ ಆಂಟಿಜೆನ್ ಟೆಸ್ಟ್, ಹಾಗೂ 2,421ಆರ್‌ಟಿಪಿಸಿಆರ್ ಅಡಿ ತಪಾಸಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿಯೇ 29 ಜೆಎನ್ 1 ಪ್ರಕರಣಗಳು ಬೆಳಕಿಗೆ ಬಂದಿದ್ದು, ಪುಣೆಯಲ್ಲೇ ಅಧಿಕ. ಒಟ್ಟು ಮಹಾರಾಷ್ಟ್ರದಲ್ಲಿ 139 ಜೆಎನ್ 1 ಪ್ರಕರಣಗಳು ದಾಖಲಾದಂತಾಗಿದೆ.
ಕರ್ನಾಟಕದಲ್ಲೂ ಕೋವಿಡ್‌ನ 297 ಪ್ರಕರಣಗಳು ವರದಿಯಾಗಿದ್ದು, ಯಾವುದೇ ಸಾವಿನ ಪ್ರಕರಣಗಳು ಕಂಡು ಬಂದಿಲ್ಲ. ಈವರೆಗೂ ಕರ್ನಾಟಕದಲ್ಲಿ 1136 ಪ್ರಕರಣಗಳು ಇವೆ.
ಕೇರಳ ಹಾಗೂ ತಮಿಳುನಾಡಿನಲ್ಲೂ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆದರೆ ತಮಿಳುನಾಡಿನಲ್ಲಿ ಇಬ್ಬರು ಮೃತಪಟ್ಟಿದ್ಧಾರೆ. ಅದೇ ರೀತಿ ಜಮ್ಮು ಮತ್ತು ಕಾಶ್ಮೀರದಲ್ಲೂ ಕೋವಿಡ್ ಪ್ರಕರಣಗಳು ಸಕ್ರಿವಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.
ಈ ನಡುವೆ ಕರ್ನಾಟಕವು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಆದೇಶ ಹೊರಡಿಸಿದೆ.
ಕರ್ನಾಟದಲ್ಲಿ ಪ್ರತಿದಿನ 7,000 ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕೋವಿಡ್ ಪಾಸಿಟಿವ್ ದರ ಶೇ.3.82 ರಷ್ಟಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಇಂತವರಿಗೆ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.