ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India Vs Nda Bypolls: ಪಂಚ ರಾಜ್ಯ ಚುನಾವಣೆಗೆ ಮುನ್ನ 6 ರಾಜ್ಯಗಳಲ್ಲಿ ಉಪಚುನಾವಣೆ ತಾಲೀಮು; ಶುಕ್ರವಾರ ಫಲಿತಾಂಶ

INDIA vs NDA bypolls: ಪಂಚ ರಾಜ್ಯ ಚುನಾವಣೆಗೆ ಮುನ್ನ 6 ರಾಜ್ಯಗಳಲ್ಲಿ ಉಪಚುನಾವಣೆ ತಾಲೀಮು; ಶುಕ್ರವಾರ ಫಲಿತಾಂಶ

INDIA vs NDA bypolls: ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಮತ್ತು ಎನ್‌ಡಿಎ ನಡುವೆ ನೇರ ಹಣಾಹಣಿಗೆ ಪಂಚರಾಜ್ಯ ಚುನಾವಣೆ ಇದೆ. ಇದಕ್ಕೂ ಮೊದಲು ಇಂದು ಆರು ರಾಜ್ಯಗಳ ಉಪಚುನಾವಣೆ ನಡೆದಿದೆ. ಇದರ ಫಲಿತಾಂಶ ಶುಕ್ರವಾರ ಪ್ರಕಟವಾಗಲಿದೆ.

ಆರು ರಾಜ್ಯಗಳ ಏಳು ಕ್ಷೇತ್ರಗಳ ಉಪಚುನಾವಣೆ ಇಂದು (ಸೆ.5) ನಡೆದಿದ್ದು, ಶುಕ್ರವಾರ (ಸೆ.8) ಫಲಿತಾಂಶ ಪ್ರಕಟವಾಗಲಿದೆ. (ಸಾಂಕೇತಿಕ ಚಿತ್ರ)
ಆರು ರಾಜ್ಯಗಳ ಏಳು ಕ್ಷೇತ್ರಗಳ ಉಪಚುನಾವಣೆ ಇಂದು (ಸೆ.5) ನಡೆದಿದ್ದು, ಶುಕ್ರವಾರ (ಸೆ.8) ಫಲಿತಾಂಶ ಪ್ರಕಟವಾಗಲಿದೆ. (ಸಾಂಕೇತಿಕ ಚಿತ್ರ) (HT)

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತ್ರಿಪುರಾ, ಕೇರಳ, ಜಾರ್ಖಂಡ್ ಮತ್ತು ಉತ್ತರಾಖಂಡದ ಏಳು ವಿಧಾನಸಭಾ ಸ್ಥಾನಗಳಿಗೆ ಮಂಗಳವಾರ (ಸೆ.5) ಮತದಾನ ನಡೆಯುತ್ತಿದೆ. ಈ ಉಪಚುನಾವಣೆಯು ಸದ್ಯ ಇಂಡಿಯಾ ಮೈತ್ರಿಕೂಟ ಮತ್ತು ಎನ್‌ಡಿಎಗಳಿಗೆ ಎಷ್ಟರ ಮಟ್ಟಿಗೆ ಜನಬೆಂಬಲ ಇದೆ ಎಂಬುದಕ್ಕೆ ದಿಕ್ಸೂಚಿ ಎಂದು ಹೇಳಲಾಗುತ್ತಿದೆ. ಈ ಮತದಾನದ ಫಲಿತಾಂಶ ಶುಕ್ರವಾರ ಪ್ರಕಟವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಉತ್ತರ ಪ್ರದೇಶದ ಘೋಸಿ, ಪಶ್ಚಿಮ ಬಂಗಾಳದ ಧೂಪಗುರಿ, ಜಾರ್ಖಂಡ್‌ನ ದುಮ್ರಿ, ತ್ರಿಪುರಾದ ಬೋಕ್ಸಾನಗರ ಮತ್ತು ಧಾನಪುರ್‌, ಉತ್ತರಾಖಂಡದ ಬಾಗೇಶ್ವರ, ಕೇರಳದ ಪೂತ್ತುಪಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆಯುತ್ತಿದೆ.

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈ ಉಪಚುನಾವಣೆ ಗೆಲುವಿಗಾಗಿ ಬಿರುಸಿನ ಪ್ರಚಾರ ನಡೆಸಿದ್ದವು. ಇದು ಇಂಡಿಯಾ ಮೈತ್ರಿಕೂಟಕ್ಕೆ ಲಿಟ್ಮಸ್ ಟೆಸ್ಟ್‌ ಮಾದರಿಯಲ್ಲಿ ಗೋಚರಿಸುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣಗಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಉಪಚುನಾವಣೆ ನಡೆಯುತ್ತಿರುವುದರಿಂದ ಗಮನಸೆಳೆದಿದೆ. ಈ ಚುನಾವಣೆಗಳು ಲೋಕಸಭೆಗೆ ಮುಂಚಿನ ಸೆಮಿಫೈನಲ್ ಎಂಬಂತೆ ವ್ಯಾಖ್ಯಾನಿಸಲ್ಪಡುತ್ತಿದೆ.

ಉಪಚುನಾವಣೆಗೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಿವರು:

ಜಾರ್ಖಂಡ್‌: ಹೇಮಂತ್ ಸೊರೆನ್ ಸರ್ಕಾರದಲ್ಲಿ ಸಚಿವರಾಗಿದ್ದ ಹಾಲಿ ಶಾಸಕ ಜಾಗರನಾಥ್ ಮಹತೋ ಅವರ ನಿಧನದ ಕಾರಣ ದುಮ್ರಿ ವಿಧಾನಸಭಾ ಸ್ಥಾನ ಖಾಲಿ ಆಗಿತ್ತು. ಇದರ ಉಪಚುನಾವಣೆಯಲ್ಲಿ ಮೃತ ನಾಯಕನ ಪತ್ನಿ ಬೇಬಿ ದೇವಿ ಅವರನ್ನು I.N.D.I.A ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟದ (ಎಜೆಎಸ್‌ಯು) ನಾಯಕಿ ಯಶೋದಾ ದೇವಿ ಅವರನ್ನು ಎನ್‌ಡಿಎ ಕಣಕ್ಕೆ ಇಳಿಸಿದೆ. ಯಶೋದಾ ದೇವಿ ಅವರು 2019 ರ ವಿಧಾನಸಭಾ ಚುನಾವಣೆಯಲ್ಲಿ ಎಜೆಎಸ್‌ಯು ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು ಮತ್ತು ಮಹತೋ ವಿರುದ್ಧ ಸೋತರು ಮತ್ತು ಎರಡನೇ ಸ್ಥಾನದಲ್ಲಿದ್ದರು.

ತ್ರಿಪುರಾ: ಹಾಲಿ ಶಾಸಕ ಸಂಸುಲ್ ಹಕ್ ನಿಧನ ಮತ್ತು ಕೇಂದ್ರ ಸಚಿವೆ ಪ್ರತಿಮಾ ಭೂಮಿಕ್ ರಾಜೀನಾಮೆಯಿಂದ ತೆರವಾದ ತ್ರಿಪುರಾದ ಬೊಕ್ಸಾನಗರ ಮತ್ತು ಧನ್‌ಪುರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಬೊಕ್ಸಾನಗರವನ್ನು ಸಿಪಿಐ(ಎಂ) ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಇಲ್ಲಿ ನಿಧನರಾದ ಶಾಸಕ ಹಕ್ ಅವರ ಪುತ್ರ ಮಿಜಾನ್ ಹುಸೇನ್ ಅವರನ್ನು ಎಡಪಕ್ಷಗಳು ಕಣಕ್ಕಿಳಿಸಿದೆ. ಇದೇ ವೇಳೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೊಕ್ಸಾನಗರದಿಂದ ಸ್ಪರ್ಧಿಸಿ ಸೋತಿದ್ದ ತಫಜ್ಜಲ್ ಹುಸೇನ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.

ಧನಪುರದಲ್ಲಿ ಬಿಜೆಪಿಯ ಬಿಂದು ದೇಬನಾಥ್ ಮತ್ತು ಸಿಪಿಐ(ಎಂ)ನ ಕೌಶಿಕ್ ದೇಬನಾಥ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಈ ಕ್ಷೇತ್ರವನ್ನು ಎಡಪಕ್ಷಗಳ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. ಆದರೆ ಏಳು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಈ ಕ್ಷೇತ್ರವನ್ನು ಗೆದ್ದಿದೆ.

ಪಶ್ಚಿಮ ಬಂಗಾಳ: ಹಾಲಿ ಶಾಸಕ ಬಿಷ್ಣು ಪದಾ ರೇ ಅವರ ನಿಧನದ ಹಿನ್ನೆಲೆಯಲ್ಲಿ ಇಲ್ಲಿನ ಧುಪ್ಗುರಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಇಲ್ಲಿ ಕುತೂಹಲಕಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್-ಸಿಪಿಐ(ಎಂ) ಮೈತ್ರಿಕೂಟದ ವಿರುದ್ಧ ತೃಣಮೂಲ ಕಾಂಗ್ರೆಸ್ ಸ್ಪರ್ಧಿಸುತ್ತಿರುವುದರಿಂದ ಇಂಡಿಯಾ ಒಗ್ಗಟ್ಟಿನ ಪರೀಕ್ಷೆಗೆ ಮುಂದಾಗಿದೆ. ಸದ್ಯ ಈ ಸ್ಥಾನ ಬಿಜೆಪಿ ವಶದಲ್ಲಿದೆ. ಕಾಂಗ್ರೆಸ್-ಎಡ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಿಪಿಐ (ಎಂ)ನ ಈಶ್ವರಚಂದ್ರ ರಾಯ್ ಸ್ಪರ್ಧಿಸಿದ್ದರೆ, ಆಡಳಿತಾರೂಢ ಟಿಎಂಸಿ ವೃತ್ತಿಯಲ್ಲಿ ಶಿಕ್ಷಕ ನಿರ್ಮಲ್ ಚಂದ್ರ ರಾಯ್ ಅವರನ್ನು ಕಣಕ್ಕಿಳಿಸಿದೆ. ಏತನ್ಮಧ್ಯೆ, ಕೆಲವು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದ ಸಿಆರ್‌ಪಿಎಫ್ ಯೋಧನ ಪತ್ನಿ ತಾಪಸಿ ರಾಯ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.

ಉತ್ತರ ಪ್ರದೇಶ: ಇಂಡಿಯಾ ಮೈತ್ರಿಕೂಟ ಮತ್ತು ಎನ್‌ಡಿಎ ನಡುವೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮೊದಲ ನೇರ ಹಣಾಹಣಿ ಘೋಸಿ ಉಪಚುನಾವಣೆ. ಸಮಾಜವಾದಿ ಪಕ್ಷದ ದಾರಾ ಸಿಂಗ್ ಚೌಹಾಣ್ ಅವರು ಬಿಜೆಪಿ ಸೇರಲು ರಾಜೀನಾಮೆ ನೀಡಿದ ನಂತರ ಈ ಶಾಸಕ ಸ್ಥಾನ ತೆರವಾಗಿತ್ತು. ಇಂಡಿಯಾ ಮಿತ್ರಪಕ್ಷಗಳು ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಧಾಕರ್ ಸಿಂಗ್ ಅವರಿಗೆ ತಮ್ಮ ಬೆಂಬಲವನ್ನು ನೀಡಿವೆ. ಪಕ್ಷಾಂತರದ ಬಳಿಕ ದಾರಾ ಸಿಂಗ್ ಚೌಹಾಣ್‌ ಅವರು ಸುಧಾಕರ್‌ ಸಿಂಗ್‌ಗೆ ಎದುರಾಳಿಯಾಗಿದ್ದಾರೆ.

ಉತ್ತರಾಖಂಡ: ಹಾಲಿ ಶಾಸಕ ಚಂದನ್‌ ರಾಮ್‌ ದಾಸ್‌ ಅವರ ನಿಧನದಿಂದ ಗುಡ್ಡಗಾಡು ಪ್ರದೇಶದ ಬಾಗೇಶ್ವರ ಕ್ಷೇತ್ರ ತೆರವಾಗಿತ್ತು. ಬಿಜೆಪಿ ಅಭ್ಯರ್ಥಿ ಪಾರ್ವತಿ ದಾಸ್ ಅವರು ತಮ್ಮ ಪತಿಯ ಸ್ಥಾನವನ್ನು ಉಳಿಸಿಕೊಳ್ಳಲು ಉಪಚುನಾವಣೆಯಲ್ಲಿ ಹೋರಾಡುತ್ತಿದ್ದು. ಕಾಂಗ್ರೆಸ್ ಪಕ್ಷ ಬಸಂತ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ.

ಕೇರಳ: ಕಾಂಗ್ರೆಸ್ ಹಿರಿಯ ನಾಯಕ ಊಮ್ಮನ್ ಚಾಂಡಿ ಅವರ ನಿಧನವು ಕೇರಳದ ಪೂತ್ತುಪಳ್ಳಿ ಕ್ಷೇತ್ರದಲ್ಲಿ ಉಪಚುನಾವಣೆೆ ನಡೆಯುತ್ತಿದೆ. 50 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದಿವಂಗತ ಮಾಜಿ ಮುಖ್ಯಮಂತ್ರಿ ಅವರ ಪುತ್ರ ಚಾಂಡಿ ಉಮ್ಮನ್ ಈ ಸ್ಥಾನದಲ್ಲಿ ಕಾಂಗ್ರೆಸ್-ಯುಡಿಎಫ್ ಅಭ್ಯರ್ಥಿಯಾಗಿದ್ದಾರೆ. ಏತನ್ಮಧ್ಯೆ, ಆಡಳಿತ ಪಕ್ಷ ಸಿಪಿಐ(ಎಂ) ಈ ಕ್ಷೇತ್ರದಿಂದ ಜ್ಯಾಕ್‌ ಸಿ ಥಾಮಸ್ ಅವರನ್ನು ಕಣಕ್ಕಿಳಿಸಿದೆ.

ಟಿ20 ವರ್ಲ್ಡ್‌ಕಪ್ 2024