Train Accident: ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, 4 ಪ್ರಯಾಣಿಕರ ಸಾವು, ಹಲವರಿಗೆ ಗಾಯ, ರಕ್ಷಣೆ ಶುರು
Indian Railways ಭಾರತೀಯ ರೈಲ್ವೆಯ ಚಂಡೀಗಢ ದೀಬ್ರುಗಢ(Chandigarh Dibrugarh Express) ರೈಲು ಹಳಿ ತಪ್ಪಿ ನಾಲ್ವರು ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಲಕ್ನೋ: ಉತ್ತರ ಪ್ರದೇಶದಲ್ಲಿ ಭಾರೀ ರೈಲು ದುರಂತ ಸಂಭವಿಸಿದೆ. ಚಂಡೀಗಢ ದಿಬ್ರುಗಡ್ ಎಕ್ಸ್‌ಪ್ರೆಸ್(Chandigarh Dibrugarh Express) ರೈಲು ಗುರುವಾರ ಮಧ್ಯಾಹ್ನ ಹಳಿ ತಪ್ಪಿಸಿದ್ದರಿಂದ 12 ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದ ಪರಿಣಾಮ ನಾಲ್ವರು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಪಂಜಾಬ್‌ನಿಂದ ಉತ್ತರ ಪ್ರದೇಶ ಮಾರ್ಗವಾಗಿ ಅಸ್ಸಾಂ ಕಡೆಗೆ ರೈಲು ಹೊರಟಿದ್ದಾಗ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ಪಿಕೌರಾ(Pikaura) ಎಂಬಲ್ಲಿ ದುರ್ಘಟನೆ ನಡೆದಿದೆ. ಇದು ಗೋಂಡಾ ಹಾಗೂ ಜಿಲಾಯ್ ನಡುವಿನ ನಿಲ್ದಾಣ. ಈಗಾಗಲೇ ರೈಲ್ವೆ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನಿರತವಾಗಿವೆ. ಘಟನೆಯಲ್ಲಿ ಇನ್ನೂ ಸಾವಿನ ಪ್ರಕರಣ ಹೆಚ್ಚಾಗುವ ಸಾಧ್ಯತೆಗಳಿವೆ.
ಬುಧವಾರ ಪಂಜಾಬ್‌ನ ಚಂಡೀಗಢದಿಂದ ಹೊರಟಿದ್ದ ರೈಲು ಶುಕ್ರವಾರ ಅಸ್ಸಾಂ ಅನ್ನು ತಲುಪಬೇಕಿತ್ತು. ಗೋಂಡಾ ನಿಲ್ದಾಣ ದಾಟಿ ಇನ್ನೇನು ಜಿಲಾಯ್ ನಿಲ್ದಾಣಕ್ಕೆ ರೈಲು ತಲುಪಬೇಕಿತ್ತು. ಈ ವೇಳೆ ರೈಲು ಹಳಿ ತಪ್ಪಿ ಉರುಳಿ ಬಿದ್ದಿತು. ಒಟ್ಟು 12 ಬೋಗಿಗಳು ಉರುಳಿ ಬಿದ್ದವು. ಇದರಲ್ಲಿ ನಾಲ್ಕು ಎಸಿ ಬೋಗಿಗಳು. ರೈಲಿನ ಬೋಗಿಗಳು ಉರುಳಿ ಬಿದ್ದ ರಭಸಕ್ಕೆ ಅದರಲ್ಲಿದ್ದ ನಾಲ್ವರು ಮೃತಪಟ್ಟರೆ ಇಪ್ಪತ್ತು ಮಂದಿ ಗಾಯಗೊಂಡರು. ಕೂಡಲೇ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿತು.
ಮಾಹಿತಿ ತಿಳಿದ ತಕ್ಷಣವೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋಂಡಾ ಜಿಲ್ಲಾಧಿಕಾರಿ ಹಾಗೂ ಹಿರಿಯರಕ್ಷಣಾಧಿಕಾರಿಗೆ ಕೂಡಲೇ ಸ್ಥಳಕ್ಕೆ ತೆರಳುವಂತೆ ಸೂಚಿಸಿದರು. ಬಳಿಕ ಆ ಭಾಗದ ಸಿಬ್ಬಂದಿಗಳನ್ನು ರಕ್ಷಣಾ ಕಾರ್ಯಕ್ಕೆ ತೊಡಗಿಸಲಾಯಿತು.ರೈಲ್ವೆ ರಕ್ಷಣಾ ದಳದ ಸಿಬ್ಬಂದಿಯೂ ಧಾವಿಸಿದ್ದು. ರೈಲಿನಲ್ಲಿದ್ದವರನ್ನ ಸುರಕ್ಷಿತವಾಗಿ ಕೆಳಗಿಳಿಸುತ್ತಿದ್ದಾರೆ. ಪರ್ಯಾಯ ರೈಲುಗಳ ಮೂಲಕ ಪ್ರಯಾಣಿಕರನ್ನು ಅವರ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ರೈಲು ಸಹಜವಾಗಿ ಹೋಗುತ್ತಿತ್ತು. ಮಳೆಯೂ ಇರಲಿಲ್ಲ. ಏಕಾಏಕಿ ಹಳಿಗಳು ಉರುಳಿಬಿದ್ದು ಏನಾಯಿತೋ ಗೊತ್ತಾಗಲಿಲ್ಲ. ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದರು. ಸ್ವಲ್ಪದರಲ್ಲೇ ಪಾರಾದೆವು ಎಂದು ಪ್ರಯಾಣಿಕರು ತಮಗಾದ ಅನುಭವ ಹಂಚಿಕೊಂಡರು.
ರೈಲು ಹಳಿ ತಪ್ಪಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿರುವುದು ಬೇಸರ ತಂದಿದೆ. ಈಗಾಗಲೇ ರಕ್ಷಣಾ ಕಾರ್ಯವೂ ನಡೆದಿದ್ದು. ಗಾಯಾಳುಗಳಿಗೆ ಚಿಕಿತ್ಸೆ ಶುರುವಾಗಿದೆ. ಬೋಗಿಗಳನ್ನು ಸರಿಪಡಿಸುವ ಕೆಲಸವೂ ನಡೆದಿದೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಹೇಳಿದ್ಧಾರೆ.
ಸಹಾಯವಾಣಿ ಆರಂಭ
ಘಟನೆ ಹಿನ್ನೆಲೆಯಲ್ಲಿ ಗೋಂಡಾ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ.
- Commercial Control: 9957555984
- Furkating (FKG): 9957555966
- Mariani (MXN): 6001882410
- Simalguri (SLGR): 8789543798
- Tinsukia (NTSK): 9957555959
- Dibrugarh (DBRG): 9957555960
-Lucknow - 8957409292
-Gonda - 8957400965