Ayodhya Ram Mandir: ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ದಿನಗಣನೆ; ರೈಲ್ವೆ ಇಲಾಖೆಯಿಂದ ತಯಾರಿ, ಹೊಸ ರೈಲುಗಳು ಆರಂಭವಾಗುವ ನಿರೀಕ್ಷೆ
Indian Railways: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ರಾಮಮಂದಿರ ಉದ್ಘಾಟನೆಗೆ ಬರುವ ಭಕ್ತರಿಗೆ ಪ್ರಯಾಣದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ರೈಲ್ವೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಲವು ಹೊಸ ರೈಲುಗಳು ಆರಂಭವಾಗುವ ನಿರೀಕ್ಷೆಯಿದೆ.
Ayodhya Ram Mandir: ಕೇಂದ್ರ ಸರ್ಕಾರವು ಭಾರತೀಯ ರೈಲ್ವೆ ಇಲಾಖೆಯನ್ನು ಸಾಕಷ್ಟು ಅಭಿವೃದ್ಧಿಪಡಿಸಿದೆ ಎನ್ನುವುದು ತಿಳಿದಿರುವ ವಿಚಾರ. ಇದೀಗ ಭಾರತೀಯ ರೈಲ್ವೆ ಇಲಾಖೆಗೆ ಇನ್ನಷ್ಟು ಬಲ ಸಿಗುತ್ತಿದ್ದು ಈ ವರ್ಷದ ಅಂತ್ಯದ ವೇಳೆಗೆ ಐದು ಹೊಸ ವಂದೇ ಭಾರತ್ ಹಾಗೂ 2 ಹೊಸ ಅಮೃತ್ ಭಾರತ್ ರೈಲುಗಳನ್ನು ಸೇರಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇವುಗಳನ್ನು ಅಯೋಧ್ಯಾ ರಾಮಮಂದಿರ ಉದ್ಘಾಟನಾ ಸಂದರ್ಭದಲ್ಲಿ ರೈಲುಗಳಲ್ಲಿ ಉಂಟಾಗುವ ಜನದಟ್ಟಣೆಯನ್ನು ತಪ್ಪಿಸಲು ಬಳಕೆ ಮಾಡಲಾಗುತ್ತದೆ ಎನ್ನಲಾಗಿದೆ.
5 ಹೊಸ ವಂದೇ ಭಾರತ್ ರೈಲುಗಳ ವ್ಯವಸ್ಥೆ
5 ಹೊಸ ವಂದೇ ಭಾರತ್ ರೈಲುಗಳಲ್ಲಿ ಒಂದು ರೈಲು ದೆಹಲಿ - ಲಖ್ನೌ- ಅಯೋಧ್ಯೆ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನುಳಿದ ರೈಲುಗಳು ಮಂಗಳೂರು-ಗೋವಾ, ಕತ್ರಾ- ದೆಹಲಿ, ಚಂಡೀಘಡ- ದೆಹಲಿ ಹಾಗೂ ಬೆಂಗಳೂರು - ಕೊಯಂಬತ್ತೂರು ಮಾರ್ಗವಾಗಿ ಕ್ರಮಿಸಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೂ ಮೊದಲು ಅಂದರೆ ಜನವರಿ 15ರ ಒಳಗಾಗಿ ಪುನಾರಾಭಿವೃದ್ಧಿ ಹೊಂದಿರುವ ಅಯೋಧ್ಯೆ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಹೊಸ ರೈಲು ನಿಲ್ದಾಣದಲ್ಲಿ ಅದ್ಭುತ ವಾಸ್ತುಶಿಲ್ಪ ಕಲೆಗಳನ್ನು ಬಳಸಲಾಗಿದೆ. ಭಗವಾನ್ ರಾಮನಿಗೆ ಸಂಬಂಧಿಸಿದ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ. ರಾಮಮಂದಿರ ಉದ್ಘಾಟನೆಯ ದಿನದಿಂದ ಹಾಗೂ ಅದರ ನಂತರವೂ ಹೆಚ್ಚಿನ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗುವ ರೀತಿಯಲ್ಲಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯಾ ಯಾತ್ರಾರ್ಥಿಗಳ ಪ್ರಯಾಣಕ್ಕೆ ಯಾವುದೇ ರೀತಿಯ ತೊಂದರೆ ಎದುರಾಗದಂತೆ ನೋಡಿಕೊಳ್ಳಲು ಭಾರತೀಯ ರೈಲ್ವೆ ಇಲಾಖೆಯು 1000ಕ್ಕೂ ಅಧಿಕ ರೈಲುಗಳನ್ನು ಬಿಡಲು ಪ್ಲಾನ್ ರೂಪಿಸಿದೆ ಎನ್ನಲಾಗಿದೆ. ರೈಲ್ವೆ ನಿಲ್ದಾಣಕ್ಕೆ ಹೆಚ್ಚಿನ ಲೈನ್ಗಳು ಹಾಗೂ ಫ್ಲಾಟ್ಫಾರಂಗಳನ್ನು ನಿರ್ಮಿಸಲಾಗಿದ್ದು ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಎಲ್ಲಾ ರೀತಿಯಿಂದಲೂ ಸುಧಾರಿಸಲಾಗಿದೆ. ರೈಲ್ವೆ ಬೋರ್ಡ್ ಚೇರ್ಪರ್ಸನ್ ಜಯವರ್ಮ ಸಿನ್ಹಾ ಮಾಹಿತಿ ನೀಡಿದ್ದಾರೆ.
ಅಮೃತ್ ರೈಲುಗಳೂ ಸೇರ್ಪಡೆ
ವಂದೇ ಭಾರತ್ ರೈಲುಗಳ ಜೊತೆಯಲ್ಲಿ ಎರಡು ಅಮೃತ್ ರೈಲುಗಳು ಸಹ ಅಯೋಧ್ಯಾ ಸೇವೆಗೆ ನಿಯೋಜನೆಗೊಳ್ಳಲಿವೆ. ಈ ರೈಲುಗಳು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿವೆ. ಈ ರೈಲುಗಳಲ್ಲಿ ಮುಂಭಾಗ ಹಾಗೂ ಹಿಂಭಾಗ ಎರಡೂ ಕಡೆಗಳಲ್ಲಿ ಇಂಜಿನ್ಗಳನ್ನು ಅಳವಡಿಸಲಾಗಿರುತ್ತದೆ. ಇವುಗಳಿಗೆ ಸ್ವಯಂಚಾಲಿತ ಬಾಗಿಲುಗಳ ವ್ಯವಸ್ಥೆ ಇರುವುದಿಲ್ಲ. ಎರಡೆರಡು ಎಂಜಿನ್ಗಳು ಇರುವುದರಿಂದ ಈ ರೈಲುಗಳು ಮಿಂಚಿನ ವೇಗದಲ್ಲಿ ಸಂಚರಿಸುತ್ತವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಂದೇ ಭಾರತ್ ರೈಲುಗಳು ಭಾರತೀಯ ರೈಲ್ವೆ ಇಲಾಖೆಗೆ ಹೊಸ ಮೈಲಿಗಲ್ಲನ್ನು ನೀಡಿವೆ. ಇತ್ತೀಚಿಗೆ ಭಾರತೀಯ ರೈಲ್ವೆ ಇಲಾಖೆಯು ಕಾಶ್ಮೀರದಲ್ಲಿಯೂ ವಂದೇ ಭಾರತ್ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಕಾಶ್ಮೀರ ಕಣಿವೆಯಲ್ಲಿ ವಂದೇಭಾರತ್ ರೈಲುಗಳು ಮಿಂಚಿನ ಸಂಚಾರ ನಡೆಸುತ್ತಿವೆ. ಗರಿಷ್ಟ ಬೇಡಿಕೆಯನ್ನು ಹೊಂದಿರುವ ಮಾರ್ಗಗಳಿಗೆ ವಂದೇ ಭಾರತ್ ರೈಲುಗಳನ್ನು ನಿಯೋಜಿಸಲು ಕೇಂದ್ರ ರೈಲ್ವೆ ಸಚಿವಾಲಯ ಪ್ಲಾನ್ ರೂಪಿಸುತ್ತಿದೆ.