Bullet Train: ಭಾರತದ ಮೊದಲ ಬುಲೆಟ್ ರೈಲು 2026ಕ್ಕೆ, ಯಾವ ಮಾರ್ಗದಲ್ಲಿ ಸಂಚರಿಸಲಿದೆ
ಭಾರತದಲ್ಲಿ ಇನ್ನೆರಡು ವರ್ಷದಲ್ಲಿ ಮೊದಲ ಬುಲೆಟ್ ರೈಲು ಸಂಚರಿಸಲಿದೆ. ಗುಜರಾತ್‌ನ ಸೂರತ್ ಬಿಲಿಮೋರಾ ಮಾರ್ಗದಲ್ಲಿ ಆರಂಭವಾಗುವ ಸಾಧ್ಯತೆಗಳಿವೆ.
ದೆಹಲಿ: ಭಾರತದ ಬಹು ನಿರೀಕ್ಷಿತ ಬುಲೆಟ್ ರೈಲು ಸಂಚಾರಕ್ಕೆ ಇನ್ನೆರಡು ವರ್ಷ ಕಾಯಬೇಕು. ಒಂದು ದಶಕದಿಂದಲೂ ಭಾರತದಲ್ಲಿ ಬುಲೆಟ್ ರೈಲು ಸಂಚರಿಸುವ ಕುರಿತು ಚರ್ಚೆಗಳು ನಡೆದಿವೆ. ಇದಕ್ಕಾಗಿ 7 ಬುಲೆಟ್ ರೈಲು ಮಾರ್ಗಗಳನ್ನು ಗುರುತಿಸಲಾಗಿತ್ತು. ಇದರಲ್ಲಿ ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಮಾರ್ಗದ ಕೆಲಸ ಭರದಿಂದ ಸಾಗಿದೆ. ಎಲ್ಲವೂ ಅಂದುಕೊಂಡಂತೆ ಅದರೆ ಗುಜರಾತ್‌ನ ಸೂರತ್‌ನಿಂದ ಬಿಲಿಮೋರಾವರೆಗಿನ ಬುಲೆಟ್ ರೈಲು ಮಾರ್ಗದ ಸಂಚಾರ 2026ಕ್ಕೆ ಶುರುವಾಗಲಿದೆ.
ದೆಹಲಿಯಲ್ಲಿ ನಡೆಯುತ್ತಿರುವ ನ್ಯೂಸ್ 18ನ ರೈಸಿಂಗ್ ಭಾರತ್ ಎನ್ನುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್ ರೈಲು ಪ್ರಗತಿಯ ವಿವರವನ್ನು ನೀಡಿದರು.
ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಇನ್ನು ಎರಡು ವರ್ಷದಲ್ಲಿ ಓಡಾಟ ಆರಂಭಿಸುವುದು ನಿಶ್ಚಿತ. ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಯು ಈಗಾಗಲೇ ಮುಂಬೈನಿಂದ ಅಹಮದಾದ್ ವರೆಗಿನ 508 ಕಿ.ಮಿ ಹೈಸ್ಪೀಡ್ ರೈಲು ಮಾರ್ಗದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಯೋಜನೆ ಮುಗಿದು ಇಲ್ಲಿ ಬುಲೆಟ್ ರೈಲು ಸಂಚಾರ ಶುರುವಾಗಬೇಕಿತ್ತು. ನಾನಾ ಕಾರಣಗಳಿಂದ ವಿಳಂಬವಾಗಿರುವುದು ನಿಜ. ಆದರೆ 2026ಕ್ಕೆ ಸೂರತ್ ಬಿಲಿಮೋರಾ ಮಾರ್ಗ ಇನ್ನೆರಡು ವರ್ಷದಲ್ಲಿ ಅಣಿಯಾಗಲಿದೆ ಎನ್ನುವುದು ಅವರ ವಿವರಣೆ.
ಮುಂಬೈನಿಂದ ಅಹಮದಾಬಾದ್‌ವರೆಗಿನ ಒಟ್ಟಾರೆ ಯೋಜನೆ 2028ಕ್ಕೆ ಮುಕ್ತಾಯವಾಗುವ ಗುರಿ ಇಟ್ಟುಕೊಳ್ಳಲಾಗಿದೆ. ಅಂದರೆ 2022ಕ್ಕೆ ಮುಗಿಯಬೇಕಿದ್ದ ಈ ಯೋಜನೆ ಆರು ವರ್ಷ ವಿಳಂಬವಾದಂತೆ ಆಗಲಿದೆ. ಇದರೊಟ್ಟಿಗೆ ಇತರೆ ಏಳು ಮಾರ್ಗದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ದೆಹಲಿ ವಾರಣಾಸಿ( (813 ಕಿ.ಮಿ), ದೆಹಲಿ ಅಹಮದಾಬಾದ್((878 ಕಿ.ಮಿ.), ಮುಂಬೈ ನಾಗಪುರ(765 ಕಿ.ಮಿ.), ಮುಂಬೈ ಹೈದ್ರಾಬಾದ್( 671 ಕಿ.ಮಿ). ಚೆನ್ನೈ- ಬೆಂಗಳೂರು- ಮೈಸೂರು( 435 ಕಿ.ಮಿ.), ಚಂಡೀಗಢ ಅಮೃತಸರ( 459 ಕಿ.ಮಿ.), ವಾರಣಾಸಿ- ಹೌರಾ(760 ಕಿ.ಮಿ.) ಮಾರ್ಗಗಳನ್ನೂ ಬುಲೆಟ್ ರೈಲು ಆರಂಭಕ್ಕೆ ಗುರುತಿಸಲಾಗಿದೆ. ಇಲ್ಲಿ ಸಮೀಕ್ಷೆ ಮತ್ತಿತರರ ಕಾರ್ಯ ನಡೆದಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರವೂ ಹೇಳಿತ್ತು.
ಭಾರತದಲ್ಲಿ ರೈಲ್ವೆ ತ್ವರಿತ ಉನ್ನತೀಕರಣಕ್ಕೆ ಕ್ರಮ ವಹಿಸಲಾಗಿದೆ. ತಂತ್ರಜ್ಞಾನ, ಅನುದಾನದ ನೆರವು ಹಾಗೂ ಭವಿಷ್ಯದ ವ್ಯವಸ್ಥಿತ ಯೋಜನೆ, ರಾಜಕೀಯದಿಂದ ದೂರ ಇರಿಸಿರುವ ಕಾರಣಕ್ಕೆ ರೈಲ್ವೆ ವಲಯ ಉತ್ತಮವಾಗಿ ಬೆಳೆದಿದೆ. ರೈಲ್ವೆ ನೌಕರರಂತೂ ಬೆಳವಣಿಗೆಗಳ ಕುರಿತು ಸಂತಸಗೊಂಡಿದ್ದಾರೆ. ಅದರಲ್ಲೂ ರೈಲ್ವೆಯ ಭವಿಷ್ಯದ ಯೋಜನೆಗಳು, ಜಾರಿಯಾಗುತ್ತಿರುವ ರೀತಿಯಿಂದ ಬಹುತೇಕರಿಗೆ ಖುಷಿಯಿದೆ. ಹಿಂದಿನ ಸರ್ಕಾರಗಳು ರೈಲ್ವೆಯನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಂಡಿದ್ದರಿಂದ ಅಭಿವೃದ್ದಿಯಾಗಿರಲಿಲ್ಲ ಎಂದು ಸಚಿವ ಅಶ್ವಿನಿ ವೈಷ್ಣವ್ ಸಮಾವೇಶದಲ್ಲಿ ಹೇಳಿದರು.
ಈಗಾಗಲೇ ಬುಲೆಟ್ ರೈಲುಗಳ ಖರೀದಿಗೆ ಸಂಬಂಧಿಸಿದಂತೆ ಮಾತುಕತೆಗಳನ್ನೂ ಭಾರತೀಯ ರೈಲ್ವೆ ನಡೆಸಿದೆ. ಕಳೆದ ವರ್ಷ ಜಪಾನ್‌ಗೆ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಬುಲೆಟ್ ರೈಲುಗಳನ್ನು ವೀಕ್ಷಿಸಿ ಬಂದಿದ್ದರು.