ಪುಷ್ಪಕ್ ನೌಕೆ 3ನೇ ಸಲ ಉಡಾವಣೆ; ಕೈಗೆಟುಕುವ ವೆಚ್ಚದ ಬಾಹ್ಯಾಕಾಶ ಪ್ರವೇಶಕ್ಕೆ ಇಸ್ರೋ ದೈತ್ಯಹೆಜ್ಜೆ, ಚಳ್ಳಕೆರೆಯಲ್ಲೇ ಪ್ರಯೋಗ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪುಷ್ಪಕ್ ನೌಕೆ 3ನೇ ಸಲ ಉಡಾವಣೆ; ಕೈಗೆಟುಕುವ ವೆಚ್ಚದ ಬಾಹ್ಯಾಕಾಶ ಪ್ರವೇಶಕ್ಕೆ ಇಸ್ರೋ ದೈತ್ಯಹೆಜ್ಜೆ, ಚಳ್ಳಕೆರೆಯಲ್ಲೇ ಪ್ರಯೋಗ

ಪುಷ್ಪಕ್ ನೌಕೆ 3ನೇ ಸಲ ಉಡಾವಣೆ; ಕೈಗೆಟುಕುವ ವೆಚ್ಚದ ಬಾಹ್ಯಾಕಾಶ ಪ್ರವೇಶಕ್ಕೆ ಇಸ್ರೋ ದೈತ್ಯಹೆಜ್ಜೆ, ಚಳ್ಳಕೆರೆಯಲ್ಲೇ ಪ್ರಯೋಗ

ಬಾಹ್ಯಾಕಾಶ ಕ್ಷೇತ್ರದ ಮಟ್ಟಿಗೆ ಮಹತ್ವದ್ದೆನಿಸಿದ ಪುಷ್ಪಕ್ ನೌಕೆಯ 3ನೇ ಉಡಾವಣೆ ಯಶಸ್ವಿಯಾಗಿದೆ. ಕೈಗೆಟುಕುವ ವೆಚ್ಚದ ಬಾಹ್ಯಾಕಾಶ ಪ್ರವೇಶಕ್ಕೆ ಇಸ್ರೋ ದೈತ್ಯಹೆಜ್ಜೆ ಇದಾಗಿದ್ದು. ಚಳ್ಳಕೆರೆಯಲ್ಲೇ ಪ್ರಯೋಗ ನಡೆಯಿತು. ಇದರ ವಿವರ ಇಲ್ಲಿದೆ.

ಇಸ್ರೋದಿಂದ 3ನೇ ಪುಷ್ಪಕ್ ಮಿಷನ್ ಉಡಾವಣೆ ಪ್ರಯೋಗ ಚಳ್ಳಕೆರೆಯಲ್ಲೇ ನಡೆಯಿತು.
ಇಸ್ರೋದಿಂದ 3ನೇ ಪುಷ್ಪಕ್ ಮಿಷನ್ ಉಡಾವಣೆ ಪ್ರಯೋಗ ಚಳ್ಳಕೆರೆಯಲ್ಲೇ ನಡೆಯಿತು. (ISRO)

ಬೆಂಗಳೂರು/ನವದೆಹಲಿ: ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ಬಾಹ್ಯಾಕಾಶ ನೌಕೆ (ಸ್ಪೇಸ್‌ಶಿಪ್‌) 'ಪುಷ್ಪಕ್‌'ನ ಮೂರನೇ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿರುವುದಾಗಿ ಇಸ್ರೋ ಶುಕ್ರವಾರ (ಮಾರ್ಚ್ 22) ಹೇಳಿಕೊಂಡಿದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ರನ್‌ವೇನಲ್ಲಿ ಈ ಪ್ರಯೋಗ ನಡೆದಿರುವುದು ವಿಶೇಷ.

ರಾಮಾಯಣದ ಪೌರಾಣಿಕ ಬಾಹ್ಯಾಕಾಶ ನೌಕೆ “ಪುಷ್ಪಕ” ವಿಮಾನದ ಹೆಸರನ್ನೇ ಈ ಬಾಹ್ಯಾಕಾಶ ನೌಕೆಗೆ ಇಡಲಾಗಿದೆ. ಚಳ್ಳಕೆರೆಯಲ್ಲಿರುವ ರನ್‌ವೇನಲ್ಲಿ ಇಂದು (ಮಾರ್ಚ್‌ 22) ಬೆಳಗ್ಗೆ 7 ಗಂಟೆಗೆ ಪರೀಕ್ಷೆ ಯಶಸ್ವಿಯಾಗಿ ನಡೆಯಿತು ಎಂದು ಇಸ್ರೋ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.

“ಆರ್‌ಎಲ್‌ವಿ - ಎಲ್‌ಇಎಕ್ಸ್‌ 02 ಪರೀಕ್ಷೆ; ಇಸ್ರೋ ಮತ್ತೆ ಸಾಧನೆ ತೋರಿತು. ಪುಷ್ಪಕ್‌ (ಆರ್‌ಎಲ್‌ವಿ-ಟಿಡಿ) ಉಡವಾಣೆ ಬಳಿಕ ಅದರಷ್ಟಕ್ಕೇ ನಿಖರವಾಗಿ ನಿಗದಿತ ಸ್ಥಳದಲ್ಲಿ ಇಳಿಯಿತು” ಎಂದು ಇಸ್ರೋ ಟ್ವೀಟ್‌ ಮಾಡಿದೆ.

ಕಡಿಮೆ ವೆಚ್ಚದಲ್ಲಿ ಗುರಿ ಸಾಧಿಸುವ ಪ್ರಯತ್ನದ ಭಾಗ

ಪುಷ್ಪಕ್‌ ಬಾಹ್ಯಾಕಾಶ ನೌಕೆಯ ಪ್ರಯೋಗವು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದಲ್ಲಿ ಪ್ರವೇಶಿಸಿ ಅಗತ್ಯ ಸಾಧನೆ ಮಾಡುವ ಉದ್ದೇಶದ್ದಾಗಿದೆ. ಇದು ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಕ್ಕೆ ಅಗತ್ಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಇಸ್ರೋದ ನಿರಂತರ ಪ್ರಯತ್ನಗಳ ಒಂದು ಭಾಗವಾಗಿದೆ. ಪುಷ್ಪಕ್ ಆರ್‌ಎಲ್‌ವಿಯನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿ.ಮೀ ಎತ್ತರಕ್ಕೆ ಕೊಂಡೊಯ್ದು, ಪೂರ್ವನಿರ್ಧರಿತ ಪರಿಸ್ಥಿತಿಗಳನ್ನು ಸಾಧಿಸಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಆಲ್ ಇಂಡಿಯಾ ರೇಡಿಯೋ ವರದಿ ಮಾಡಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ನಿರ್ಣಾಯಕ ಪ್ರಯೋಗ - ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್

"ಪುಷ್ಪಕ್ ಉಡಾವಣಾ ವಾಹನವು ಬಾಹ್ಯಾಕಾಶಕ್ಕೆ ಪ್ರವೇಶವನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಭಾರತದ ದಿಟ್ಟ ಪ್ರಯತ್ನವಾಗಿದೆ" ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದರು. ಆ ಮೂಲಕ ಈ ಮಿಷನ್‌ನ ಮಹತ್ವವನ್ನು ಎತ್ತಿ ತೋರಿಸಿದರು.

ಆರ್‌ಎಲ್‌ವಿ ಭಾರತದ ಭವಿಷ್ಯದ ವಿಧಾನವನ್ನು ಪ್ರತಿನಿಧಿಸುತ್ತದೆ. ಅಲ್ಲಿ ಅತ್ಯಂತ ದುಬಾರಿ ಘಟಕ, ನಿರ್ಣಾಯಕ ಎಲೆಕ್ಟ್ರಾನಿಕ್ಸ್ ಹೊಂದಿರುವ ಮೇಲಿನ ಹಂತವನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವ ಮೂಲಕ ಮರುಬಳಕೆ ಮಾಡಲಾಗುತ್ತದೆ. ಈ ತಂತ್ರಜ್ಞಾನವು ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ತುಂಬಿಸಲು ಅಥವಾ ನವೀಕರಣಕ್ಕಾಗಿ ಉಪಗ್ರಹಗಳನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ, ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ ಎಂದು ಅವರು ವಿವರಿಸಿದರು.

ವರದಿಗಳ ಪ್ರಕಾರ, ಪುಷ್ಪಕ್ ಆರ್‌ಎಲ್‌ವಿಯನ್ನು ಸಂಪೂರ್ಣ ರಾಕೆಟ್‌ ಮತ್ತು ಪೂರ್ಣ ಪ್ರಮಾಣದಲ್ಲಿ ಮರುಬಳಕೆ ಮಾಡಬಹುದಾದ ಸಿಂಗಲ್-ಸ್ಟೇಜ್-ಟು-ಆರ್ಬಿಟ್ (ಎಸ್ಎಸ್ಟಿಒ) ವಾಹನವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಹಿಂದಿನ ಆರ್‌ಎಲ್‌ವಿಗಳಾದ ಎಕ್ಸ್ -33, ಎಕ್ಸ್ -34 ಮತ್ತು ನವೀಕರಿಸಿದ ಡಿಸಿ-ಎಕ್ಸ್ಎಗಳಿಗಿಂತ ಹೆಚ್ಚು ಸುಧಾರಿತ ಅಂಶಗಳನ್ನು ಒಳಗೊಂಡಿದೆ. ಈ ವಾಹನವು ವಿಮಾನದ ಚೌಕಟ್ಟು, ಮೂಗಿನ ಕ್ಯಾಪ್, ಡಬಲ್ ಡೆಲ್ಟಾ ರೆಕ್ಕೆಗಳು, ಅವಳಿ ಲಂಬ ಬಾಲಗಳು ಮತ್ತು ಎಲಿವೊನ್ಸ್ ಮತ್ತು ರಡ್ಡರ್ ಎಂದು ಕರೆಯಲ್ಪಡುವ ಸಕ್ರಿಯ ನಿಯಂತ್ರಣ ಮೇಲ್ಮೈಗಳನ್ನು ಹೊಂದಿದೆ.

ಇಸ್ರೋ ಈ ಹಿಂದೆ 2016 ಮತ್ತು ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಆರ್‌ಎಲ್‌ವಿ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿತ್ತು. ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಸುಮಾರು 100 ಕೋಟಿ ರೂಪಾಯಿ ವೆಚ್ಚದ ಆರ್‌ಎಲ್‌ವಿ ಮಿಷನ್ ಬಗ್ಗೆ ಸೋಮನಾಥ್ ವಿವರಿಸಿದ್ದರು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.