ISRO News: ಕಪ್ಪು ಕುಳಿಗಳ ಅಧ್ಯಯನಕ್ಕಾಗಿ ಇಸ್ರೋ ಎಕ್ಸ್‌ಪೋಸ್ಯಾಟ್‌ ಉಡಾವಣೆ ಇಂದು; ನೇರ ಪ್ರಸಾರದ ವಿವರ ಹೀಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Isro News: ಕಪ್ಪು ಕುಳಿಗಳ ಅಧ್ಯಯನಕ್ಕಾಗಿ ಇಸ್ರೋ ಎಕ್ಸ್‌ಪೋಸ್ಯಾಟ್‌ ಉಡಾವಣೆ ಇಂದು; ನೇರ ಪ್ರಸಾರದ ವಿವರ ಹೀಗಿದೆ

ISRO News: ಕಪ್ಪು ಕುಳಿಗಳ ಅಧ್ಯಯನಕ್ಕಾಗಿ ಇಸ್ರೋ ಎಕ್ಸ್‌ಪೋಸ್ಯಾಟ್‌ ಉಡಾವಣೆ ಇಂದು; ನೇರ ಪ್ರಸಾರದ ವಿವರ ಹೀಗಿದೆ

ಕಪ್ಪುಕುಳಿಗಳ ಅಧ್ಯಯನಕ್ಕಾಗಿ ಎಕ್ಸ್‌ಪೋಸ್ಯಾಟ್ ಎಂಬ ಉಪಗ್ರಹವನ್ನು ಇಸ್ರೋ ಇಂದು (ಜ.1) ಬೆಳಗ್ಗೆ 9.10ಕ್ಕೆ ಪಿಎಸ್‌ಎಲ್‌ವಿ ಸಿ -58ರ ಮೂಲಕ ಉಡಾವಣೆ ಮಾಡುತ್ತಿದೆ. ಉಡಾವಣೆಯ ನೇರ ಪ್ರಸಾರವನ್ನು ಎಲ್ಲಿ ಹೇಗೆ ವೀಕ್ಷಿಸುವುದು- ಇಲ್ಲಿದೆ ವಿವರ.

ಕಾಸ್ಮಿಕ್ ಎಕ್ಸ್-ಕಿರಣಗಳನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಐತಿಹಾಸಿಕ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಇಂದು ಉಡಾವಣೆ ಮಾಡುತ್ತಿದೆ.
ಕಾಸ್ಮಿಕ್ ಎಕ್ಸ್-ಕಿರಣಗಳನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಐತಿಹಾಸಿಕ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಇಂದು ಉಡಾವಣೆ ಮಾಡುತ್ತಿದೆ. (ISRO)

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಯನ್ನು ಇಂದು (ಜ.1) ನೆರವೇರಿಸಲು ಸಿದ್ಧವಾಗಿದೆ. ಕಪ್ಪುಕುಳಿಗಳ ಅಧ್ಯಯನಕ್ಕಾಗಿ ಇರುವ ಎಕ್ಸ್‌ಪೋಸ್ಯಾಟ್ (XPoSat (X-ray Polarimeter Satellite)) ಅನ್ನು ತನ್ನ ಪಿಎಸ್‌ಎಲ್‌ವಿ ಸಿ58 (PSLV-C58) ರಾಕೆಟ್ ಮೂಲಕ ಉಡಾವಣೆ ಮಾಡಲಿದೆ.

ಎಕ್ಸ್‌ಪೋಸ್ಯಾಟ್ ಎಂಬುದು ಭಾರತದ ಮಟ್ಟಿಗೆ ಮೊದಲ ಪೋಲಾರಿಮೆಟ್ರಿ ಮಿಷನ್ ಆಗಿದ್ದು, ಇದು ವಿಪರೀತವೆನಿಸುವ ವಾತಾವರಣದಲ್ಲಿ ಪ್ರಕಾಶಮಾನ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಲಿದೆ.

ಎಕ್ಸ್‌ಪೋಸ್ಯಾಟ್‌ ಅನ್ನು ಪಿಎಸ್‌ಎಲ್‌ವಿ ಸಿ 58 ಮೂಲಕ ಇಂದು (ಜನವರಿ 1) ಬೆಳಗ್ಗೆ 9.10ಕ್ಕೆ ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್‌ ಸೆಂಟರ್‌ನ ಮೊದಲ ಉಡಾವಣಾ ವೇದಿಕೆಯಿಂದ ಈ ಉಪಗ್ರಹ ಉಡಾವಣೆ ನಡೆಯಲಿದೆ.

ಎಕ್ಸ್‌ಪೋಸ್ಯಾಟ್ ಉಡಾವಣೆ ನೇರ ಪ್ರಸಾರ: ಈ ಉಡಾವಣಾ ಕಾರ್ಯದ ನೇರ ಪ್ರಸಾರವನ್ನು ಇಸ್ರೋ ಬೆಳಗ್ಗೆ 8:40ಕ್ಕೆ ಶುರು ಮಾಡಲಿದೆ. ಇದನ್ನು ವೀಕ್ಷಿಸುವುದಕ್ಕೆ ಓದುಗರು ಈ ಕೆಳಗಿನ ಲಿಂಕ್‌ಗಳನ್ನು ಗಮನಿಸಬಹುದು.

ಎಕ್ಸ್‌ಪೋಸ್ಯಾಟ್ ಕುರಿತಾದ ಒಂದಿಷ್ಟು ಮಾಹಿತಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕಪ್ಪು ಕುಳಿಗಳಂತಹ ಆಕಾಶ ವಸ್ತುಗಳ ಒಳನೋಟ ನೀಡುವ ತನ್ನ ಮೊದಲ ಎಕ್ಸ್‌-ರೇ ಪೋಲಾರಿಮೀಟರ್ ಉಪಗ್ರಹವನ್ನು ಇಂದು (ಜ.1) ಉಡಾವಣೆ ಮಾಡುತ್ತಿದೆ. ಪಿಎಸ್‌ಎಲ್‌ವಿ ತನ್ನ 60 ನೇ ಮಿಷನ್‌ನಲ್ಲಿ ಪಿಎಸ್‌ಎಲ್‌ವಿ ಸಿ 58 ರಾಕೆಟ್ ಎಕ್ಸ್ ಫೋಸ್ಯಾಟ್ ಮತ್ತು 10 ಇತರ ಉಪಗ್ರಹಗಳನ್ನು ಭೂಮಿಯ ಕಕ್ಷೆಗಳಲ್ಲಿ ನಿಯೋಜಿಸಲು ಯೋಜಿಸಿದೆ.

ಎಕ್ಸ್‌ಪೋ ಸ್ಯಾಟ್ ಅಥವಾ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವು ಬಾಹ್ಯಾಕಾಶದಲ್ಲಿ ತೀವ್ರವಾದ ಎಕ್ಸ್- ರೇ ಮೂಲಗಳ ಧ್ರುವೀಕರಣದ ಕುರಿತು ಅಧ್ಯಯನ ಮಾಡುವ ಗುರಿ ಹೊಂದಿದೆ. ಇದು ಆಕಾಶ ಮೂಲಗಳಿಂದ ಎಕ್ಸ್-ರೇ ಹೊರ ಸೂಸುವಿಕೆಯ ಬಾಹ್ಯಾಕಾಶ ಆಧಾರಿತ ಧ್ರುವೀಕರಣ ಮಾಪನಗಳಲ್ಲಿ ಸಂಶೋಧನೆ ಕೈಗೊಳ್ಳಲು ಇಸ್ರೋದ ಮೊದಲ ಉಪಗ್ರಹ ಎಂದು ಇಸ್ರೋ ಹೇಳಿದೆ.

ಎಕ್ಸ್‌ಪೋ ಸ್ಯಾಟ್‌ನ ಪೇಲೋಡ್‌ಗಳಲ್ಲಿ ಒಂದಾದ ಎಕ್ಸ್‌ಎಸ್‌ಪೆಕ್ಟ್‌, "ಎಲ್‌ಎಮ್‌ಎಕ್ಸ್‌ಬಿಗಳು, ಎಜಿಎನ್‌ಗಳು ಮತ್ತು ಮ್ಯಾಗ್ನೆಟಾರ್‌ಗಳಲ್ಲಿ ಎಕ್ಸ್-ರೇ ಪಲ್ಸರ್‌ಗಳು, ಬ್ಲ್ಯಾಕ್‌ಹೋಲ್ ಬೈನರಿಗಳು, ಕಡಿಮೆ ಮ್ಯಾಗ್ನೆಟಿಕ್ ಫೀಲ್ಡ್ ನ್ಯೂಟ್ರಾನ್ ಸ್ಟಾರ್ (ಎನ್‌ಎಸ್) ಹಲವಾರು ರೀತಿಯ ಮೂಲಗಳನ್ನು ಗಮನಿಸುತ್ತದೆ".

ಮತ್ತೊಂದು ಪೇಲೋಡ್ ಪೋಲಿಕ್ಸ್‌ “ ಎಕ್ಸ್‌ಪೋಸ್ಯಾಟ್‌ ಮಿಷನ್‌ನ ಯೋಜಿತ 5 ವರ್ಷಗಳ ಜೀವಿತಾವಧಿಯಲ್ಲಿ ವಿವಿಧ ವರ್ಗಗಳ ಸುಮಾರು 40 ಪ್ರಕಾಶಮಾನವಾದ ಖಗೋಳ ಮೂಲಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ” ಎಂದು ಇಸ್ರೋ ವಿವರಿಸಿದೆ.

ತಿರುಪತಿಯಲ್ಲಿ ಪೂಜೆ: ಈ ಮಿಷನ್‌ನ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳಾದ ಅಮಿತ್ ಕುಮಾರ್ ಪಾತ್ರ, ವಿಕ್ಟರ್ ಜೋಸೆಫ್, ಯಶೋದಾ ಮತ್ತು ಶ್ರೀನಿವಾಸ್ ಅವರು ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.