ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi's Big Claim: ಎನ್‌ಡಿಎ ಸೇರಬಯಸಿದ್ದರು ಕೆಸಿಆರ್, ನಾನೇ ಬೇಡ ಅಂದೆ ಎಂದ ಪ್ರಧಾನಿ ನರೇಂದ್ರ ಮೋದಿ

PM Modi's Big Claim: ಎನ್‌ಡಿಎ ಸೇರಬಯಸಿದ್ದರು ಕೆಸಿಆರ್, ನಾನೇ ಬೇಡ ಅಂದೆ ಎಂದ ಪ್ರಧಾನಿ ನರೇಂದ್ರ ಮೋದಿ

ತೆಲಂಗಾಣದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ತೆಲಂಗಾಣ ಸರ್ಕಾರ, ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಎನ್‌ಡಿಎಗೆ ಸೇರಲು ಕೆಸಿಆರ್ ಬಯಸಿದ್ದ ವಿಚಾರವನ್ನೂ ಅವರು ಬಹಿರಂಗಪಡಿಸಿದರು.

ಪ್ರಧಾನಿ ನರೇಂದ್ರಮೋದಿ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್
ಪ್ರಧಾನಿ ನರೇಂದ್ರಮೋದಿ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೇರಲು ಬಯಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತೆಲಂಗಾಣದಲ್ಲೇ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಾಗ, ಕೆಸಿಆರ್‌ಗೆ ಬೆಂಬಲದ ಅಗತ್ಯ ಇತ್ತು. ಈ ಚುನಾವಣೆಯ ಮೊದಲು, ಅವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿದ್ದರು. ಆದರೆ ನಂತರ ಇದ್ದಕ್ಕಿದ್ದಂತೆ ಅವರು ಸ್ವಾಗತಿಸಲು ಬರುವುದನ್ನು ನಿಲ್ಲಿಸಿದರು ಎಂದು ನಿಜಾಮಾಬಾದ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ನಂತರ, ಕೆಸಿಆರ್ ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಲು ಬಂದರು, ಎನ್‌ಡಿಎ ಸೇರಲು ಬಯಸುತ್ತಿರುವುದಾಗಿ ಹೇಳಿದರು. ಅವರಿಗೆ ಬೆಂಬಲ ನೀಡುವಂತೆಯೂ ಕೇಳಿಕೊಂಡರು. ನಾನು ಅವರಿಗೆ (ಕೆಸಿಆರ್) ಹೇಳಿದ್ದೇನೆ. ಅವರ ಈ ಹಿಂದಿನ ಕಾರ್ಯಗಳಿಂದಾಗಿ ಎನ್‌ಡಿಎಗೆ ತಮ್ಮನ್ನು ಸೇರಿಸಲಾಗದು ಎಂದು ಹೇಳಿರುವುದಾಗಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ತಿಳಿಸಿದರು.

ಕೇಂದ್ರದ ಬಿಜೆಪಿ ಸರ್ಕಾರವು ತೆಲಂಗಾಣದ ಅಭಿವೃದ್ಧಿಗಾಗಿ ಇಲ್ಲಿನ ಬಿಆರ್‌ಎಸ್ ನೇತೃತ್ವದ ಸರ್ಕಾರಕ್ಕೆ ಹಣವನ್ನು ನೀಡಿತ್ತು. ಆದರೆ ದುರದೃಷ್ಟವಶಾತ್, ಬಿಆರ್‌ಎಸ್ ರಾಜ್ಯದ ಕಲ್ಯಾಣಕ್ಕಾಗಿ ಕಳುಹಿಸಿದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಯಾವಾಗ ನಡೆದಿತ್ತು

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ 2020ರಲ್ಲಿ ನಡೆದಿತ್ತು. ಈ ಚುನಾವಣೆಯಲ್ಲಿ ಬಿಆರ್‌ಎಸ್‌ (ಹಿಂದಿನ ಟಿಆರ್‌ಎಸ್‌) 56 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆಲ್ ಇಂಡಿಯಾ ಮಜ್ಲಿಸ್ ಏ ಇತ್ತೇಹಾದ್ ಮುಸ್ಲಿಮೀನ್ (ಎಐಎಂಐಎಂ) 43 ಸ್ತಾನಗಳನ್ನು, ಬಿಜೆಪಿ 48 ಸ್ಥಾನಗಳನ್ನು ಗೆದ್ದುಕೊಂಡಿದ್ದವು.

ಇಂಡಿಯಾ ಮೈತ್ರಿ ಕೂಟದ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣದ ಬಿಆರ್‌ಎಸ್ ಸರ್ಕಾರದ ವಿರುದ್ಧ ಮಾತ್ರವಲ್ಲದೇ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಇಂಡಿಯಾ ಮೈತ್ರಿಕೂಟದ ವಿರುದ್ಧವೂ ವಾಗ್ದಾಳಿ ನಡೆಸಿದರು. ಮಹಿಳಾ ಮಸೂದೆಯನ್ನು ಹಲವಾರು ವರ್ಷಗಳ ಕಾಲ ಬಾಕಿ ಉಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

ಕೆಲವು ದಿನಗಳ ಹಿಂದೆ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಕಾಂಗ್ರೆಸ್ ಮತ್ತು ಅದರ ಇಂಡಿಯಾ ಮೈತ್ರಿ - ಈ 'ಘಮಾಂಡಿಯ' ಮೈತ್ರಿ - ಕಳೆದ 30 ವರ್ಷಗಳಿಂದ ಈ ಮಸೂದೆಯನ್ನು ಸ್ಥಗಿತಗೊಳಿಸಿತ್ತು. ಮಹಿಳೆಯರ ಸಾಮೂಹಿಕ ಶಕ್ತಿಯಿಂದಾಗಿ, ಈ ಒಕ್ಕೂಟವು ಈ ಮಸೂದೆಯನ್ನು ಅಂಗೀಕರಿಸುವುದನ್ನು ಬೆಂಬಲಿಸಬೇಕಾಗಿ ಬಂತು. ತೆಲಂಗಾಣದ ನನ್ನ ಸಹೋದರಿಯರು ದೊಡ್ಡ ಕ್ರಾಂತಿಯ ಭಾಗವಾಗಿದ್ದಾರೆ. ಇತಿಹಾಸವನ್ನು ಸೃಷ್ಟಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ತೆಲಂಗಾಣ ರಾಜ್ಯ 2014ರಲ್ಲಿ ರಚನೆಯಾದ ಅಂದಿನಿಂದ ಕೆ ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಆಡಳಿತ ಚಾಲ್ತಿಯಲ್ಲಿದೆ. ಈ ವರ್ಷ ಕೊನೆಗೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ಮಿಜೋರಾಂ ಜತೆಗೆ ತೆಲಂಗಾಣದಲ್ಲೂ ಚುನಾವಣೆ ನಡೆಯಲಿದೆ.

ಟಿ20 ವರ್ಲ್ಡ್‌ಕಪ್ 2024