ಮುತ್ತುಪಿಲಕಾಡು ದೇವಾಲಯದಲ್ಲಿ ಕೇಸರಿ ಧ್ವಜ ಬಳಕೆಗೆ ಅನುಮತಿ ನಿರಾಕರಿಸಿದ ಕೇರಳ ಹೈಕೋರ್ಟ್
ಕೇರಳದ ಕೊಲ್ಲಂನ ಮುತ್ತುಪಿಲಕಾಡು ದೇವಾಲಯದಲ್ಲಿ ಕೇಸರಿ ಧ್ವಜ ಬಳಕೆಗೆ ಕೇರಳ ಹೈಕೋರ್ಟ್ ಅನುಮತಿ ನಿರಾಕರಿಸಿದೆ. ದೇವಸ್ಥಾನಗಳು ರಾಜಕೀಯದ ನೆಲೆಗಳಾಗಿ ಬದಲಾಗಬಾರದು ಎಂದು ಕೋರ್ಟ್ ಹೇಳಿದೆ.
ಕೊಲ್ಲಂನ ಮುತ್ತುಪಿಲಕಾಡು ಶ್ರೀ ಪಾರ್ಥಸಾರಥಿ ದೇವಸ್ಥಾನದ ಆವರಣದಲ್ಲಿ ವಿಶೇಷ ಸಂದರ್ಭಗಳಲ್ಲಿ ಕೇಸರಿ ಧ್ವಜವನ್ನು ಹಾಕಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.
ದೇವಾಲಯಗಳು ಆಧ್ಯಾತ್ಮಿಕ ಸಾಂತ್ವನ ಮತ್ತು ನೆಮ್ಮದಿಯ ದಾರಿದೀಪಗಳಾಗಿ ಸಮುದಾಯದಲ್ಲಿ ನೆಲೆಗೊಂಡಿವೆ. ಅಂತಹ ಪವಿತ್ರ ಆಧ್ಯಾತ್ಮಿಕ ನೆಲೆಗಳ ಮೌಲ್ಯ ರಾಜಕೀಯ ತಂತ್ರಗಳಿಂದ ಕಡಿಮೆಯಾಗಬಾರದು. ಅರ್ಜಿದಾರರ ಕ್ರಮ ಮತ್ತು ಉದ್ದೇಶಗಳು ದೇವಾಲಯದ ಪ್ರಶಾಂತ ಮತ್ತು ಪವಿತ್ರ ವಾತಾವರಣಕ್ಕೆ ವಿರುದ್ಧವಾಗಿರುವುದು ಗಮನಕ್ಕೆ ಬಂದಿದೆ ಎಂದು ನ್ಯಾಯಪೀಠ ಹೇಳಿದ್ದಾಗಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಉತ್ಸವಗಳಲ್ಲಿ ಕೇಸರಿ ಧ್ವಜ ಬಳಕೆಗೆ ಅನುಮತಿ ಕೋರಿದವರ ವಾದ
ಕೊಲ್ಲಂನ ಮುತ್ತುಪಿಲಕಾಡು ಶ್ರೀ ಪಾರ್ಥಸಾರಥಿ ದೇವಸ್ಥಾನದ ಭಕ್ತರಿಬ್ಬರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. 2022ರಲ್ಲಿ ದೇವಸ್ಥಾನ ಮತ್ತು ಅದರ ಭಕ್ತರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಪಾರ್ಥಸಾರಥಿ ಭಕ್ತ ಜನ ಸಮಿತಿಯನ್ನು ರಚಿಸಲಾಗಿದೆ.
ದೇವಸ್ಥಾನದ ಹಬ್ಬ, ಉತ್ಸವಗಳ ವೇಳೆ ಕೇಸರಿ ಧ್ವಜ, ಬಂಟಿಂಗ್ಸ್ ಬಳಕೆಗೆ ಪ್ರತಿವಾದಿಗಳು ಬಿಡುತ್ತಿಲ್ಲ. ರಾಜಕೀಯ ಅಧಿಕಾರ ಬಳಸಿಕೊಂಡು ತಡೆಯುತ್ತಿದ್ದಾರೆ. ಉತ್ಸವ ನಡೆಸುವುದಕ್ಕೆ ಅನುಮತಿ ನೀಡಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಎಂದು ಅರ್ಜಿದಾರರು ದಾವೆ ಹೂಡಿದ್ದರು.
ಕೇರಳ ಸರ್ಕಾರ ಕೋರ್ಟ್‌ಗೆ ಹೇಳಿರುವುದೇನು
ಅರ್ಜಿದಾರರ ಮನವಿಯನ್ನು ವಿರೋಧಿಸಿದ ಕೇರಳ ಸರ್ಕಾರ, ಅರ್ಜಿದಾರರು ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಧ್ವಜಗಳು ಮತ್ತು ಪುಷ್ಪಗಳಿಂದ ದೇವಸ್ಥಾನವನ್ನು ಅಲಂಕರಿಸಲು ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಆ ರೀತಿ ಮಾಡಿದರೆ ದೇವಸ್ಥಾನ ರಾಜಕೀಯ ರಣರಂಗವಾಗಿ ಬಳಸಲು ಅನುಮತಿಸಿದಂತಾಗುತ್ತದೆ ಎಂದು ವಾದಿಸಿದೆ.
ಅಲ್ಲದೆ, ಅರ್ಜಿದಾರರ ಕ್ರಮಗಳಿಂದಾಗಿ ದೇವಾಲಯದ ಆವರಣದಲ್ಲಿ ಹಲವಾರು ಘರ್ಷಣೆಗಳು ನಡೆದಿವೆ, ಅವರಲ್ಲಿ ಒಬ್ಬರು ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದರ ವಿವರವನ್ನೂ ಸರ್ಕಾರ ಕೋರ್ಟ್‌ಗೆ ನೀಡಿತು.
ಎಲ್ಲದಕ್ಕೂ ಮಿಗಿಲಾಗಿ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದ ಸುತ್ತಲಿನ 100 ಮೀಟರ್ ವ್ಯಾಸದಲ್ಲಿ ಯಾವುದೇ ರಾಜಕೀಯ ಸಂಘಟನೆ, ಅಥವಾ ಸಂಘ ಸಂಸ್ಥೆಗಳ ಬಾವುಟ, ಬ್ಯಾನರ್, ಬಂಟಿಂಗ್ಸ್ ಬಳಸುವುದನ್ನು ನಿಷೇಧಿಸಿ ನಿರ್ಣಯ ತೆಗೆದುಕೊಂಡಿರುವುದರ ಕಡೆಗೂ ಕೋರ್ಟ್‌ನ ಗಮನವನ್ನು ಸರ್ಕಾರ ಸೆಳೆಯಿತು.
ಕೇರಳ ಹೈಕೋರ್ಟ್ ತೀರ್ಪು ಏನು ಹೇಳಿತು
ಎರಡೂ ಕಡೆಯ ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಕೇರಳ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ತಳ್ಳಿಹಾಕಿತು. ಅಲ್ಲದೆ, ದೇವಸ್ಥಾನಗಳು ಆಧ್ಯಾತ್ಮಿಕ ಸಾಂತ್ವನದ ನೆಲೆ ಎಂಬುದನ್ನು ಎತ್ತಿಹಿಡಿದು, ರಾಜಕೀಯ ತಂತ್ರಗಳಿಗೆ ದೇವಸ್ಥಾನಗಳನ್ನು ಬಳಸುವುದು ಬೇಡ ಎಂದು ಹೇಳಿತು.
ನ್ಯಾಯಮೂರ್ತಿ ರಾಜಾ ವಿಜಯರಾಘವನ್ ವಿ ಈ ತೀರ್ಪು ನೀಡಿದ್ದು, ಅರ್ಜಿದಾರರು ಪ್ರಾರ್ಥಿಸಿದಂತೆ ದೇವಾಲಯದ ಆಚರಣೆಗಳನ್ನು ನಡೆಸಲು ಅವರಿಗೆ ಕಾನೂನುಬದ್ಧವಾದ ಯಾವುದೇ ಅಧಿಕಾರ ಇಲ್ಲ. ಇದಲ್ಲದೆ, ಈ ನ್ಯಾಯಾಲಯವು ಹೊರಡಿಸಿದ ಆದೇಶಗಳು ಮತ್ತು ಆಡಳಿತಾತ್ಮಕ ಸಮಿತಿಯು ತೆಗೆದುಕೊಂಡ ನಿರ್ಧಾರದ ಬೆಳಕಿನಲ್ಲಿ ದೇವಸ್ಥಾನದ ಸುತ್ತಲೂ ಅಥವಾ ಅದರ ಸುತ್ತಲೂ ಕೇಸರಿ ಧ್ವಜಗಳು ಅಥವಾ ಬಂಟಿಂಗ್ಸ್ ಸ್ಥಾಪಿಸಲು ಅನುಮತಿಸಲಾಗುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಿರುವುದಾಗಿ ಬಾರ್ ಆಂಡ್ ಬೆಂಚ್ ವರದಿ ಹೇಳಿದೆ.