ಸುಪ್ರೀಂಕೋರ್ಟ್‌ನ ನೂತನ ಸಿಜೆಐ ಬಿಆರ್ ಗವಾಯಿ ಅವರ ತಂದೆ ಅಂಬೇಡ್ಕರ್‌ವಾದಿ ಆರ್‌ಎಸ್ ಗವಾಯಿ ಬಗ್ಗೆ ನಿಮಗೆಷ್ಟು ಗೊತ್ತು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸುಪ್ರೀಂಕೋರ್ಟ್‌ನ ನೂತನ ಸಿಜೆಐ ಬಿಆರ್ ಗವಾಯಿ ಅವರ ತಂದೆ ಅಂಬೇಡ್ಕರ್‌ವಾದಿ ಆರ್‌ಎಸ್ ಗವಾಯಿ ಬಗ್ಗೆ ನಿಮಗೆಷ್ಟು ಗೊತ್ತು?

ಸುಪ್ರೀಂಕೋರ್ಟ್‌ನ ನೂತನ ಸಿಜೆಐ ಬಿಆರ್ ಗವಾಯಿ ಅವರ ತಂದೆ ಅಂಬೇಡ್ಕರ್‌ವಾದಿ ಆರ್‌ಎಸ್ ಗವಾಯಿ ಬಗ್ಗೆ ನಿಮಗೆಷ್ಟು ಗೊತ್ತು?

ಸುಪ್ರೀಂಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ ಅವರ ತಂದೆ ದಾದಾಸಾಹೇಬ್ ಎಂದೇ ಕರೆಸಿಕೊಳ್ಳುತ್ತಿದ್ದವರು. ಅಂಬೇಡ್ಕರ್‌ವಾದಿ ಆರ್‌ಎಸ್ ಗವಾಯಿ ಪರಿಚಯ ಇಲ್ಲಿದೆ (ಬರಹ: ಪರಿಣಿತಾ, ಬೆಂಗಳೂರು)

ಆರ್‌ಎಸ್ ಗವಾಯಿ (ಎಡಚಿತ್ರ) ಸುಪ್ರೀಂಕೋರ್ಟ್‌ ಸಿಜೆಐ ಭೂಷಣ್ ರಾಮಕೃಷ್ಣ ಗವಾಯಿ (ಬಲ ಚಿತ್ರ)
ಆರ್‌ಎಸ್ ಗವಾಯಿ (ಎಡಚಿತ್ರ) ಸುಪ್ರೀಂಕೋರ್ಟ್‌ ಸಿಜೆಐ ಭೂಷಣ್ ರಾಮಕೃಷ್ಣ ಗವಾಯಿ (ಬಲ ಚಿತ್ರ)

ಸುಪ್ರೀಂಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿ (CJI) ಆಗಿ ಭೂಷಣ್ ರಾಮಕೃಷ್ಣ ಗವಾಯಿ ಮೇ 14 ರಂದು ಪ್ರಮಾಣ ವಚನ ಸ್ವೀಕರಿಸಿದ್ದು, ಭಾರತೀಯ ನ್ಯಾಯಾಂಗದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಎರಡನೇ ದಲಿತ ವ್ಯಕ್ತಿಯಾಗಿದ್ದಾರೆ.

ಕಳೆದ ವರ್ಷ ಭಾಷಣವೊಂದರಲ್ಲಿ ಡಾ ಬಿಆರ್ ಅಂಬೇಡ್ಕರ್ ಅವರ ಪ್ರಯತ್ನದಿಂದಲೇ ನನಗೆ ಈ ಸ್ಥಾನ ಸಿಗಲು ಸಾಧ್ಯವಾಯಿತು, ನಾನು ಕೊಳಚೆ ಪ್ರದೇಶದಲ್ಲಿರುವ ಮುನ್ಸಿಪಲ್ ಶಾಲೆಯಲ್ಲಿ ಓದಿದವನು ಎಂದು ಅವರು ಹೇಳಿದ್ದರು. ತಮ್ಮ ಭಾಷಣವನ್ನು ಅವರು ಜೈ ಭೀಮ್ ಘೋಷಣೆಯಿಂದಲೇ ಮುಕ್ತಾಯ ಮಾಡಿದ್ದರು.

ಅಂದಹಾಗೆ, ನ್ಯಾಯಮೂರ್ತಿ ಗವಾಯಿ ಅವರ ಕುಟುಂಬ ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧ ಹೊಂದಿದೆ. ಇದನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದರು.

ನ್ಯಾಯಮೂರ್ತಿ ಗವಾಯಿ ಅವರ ಕುಟುಂಬಕ್ಕೂ ಕಾಂಗ್ರೆಸ್‌ಗೂ ಏನು ಸಂಬಂಧ?

ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆ ನೀಡದಿರುವ ಗುಜರಾತ್ ಹೈಕೋರ್ಟ್‌ನ ನಿರ್ಧಾರಕ್ಕೆ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾಯಮೂರ್ತಿ ಗವಾಯಿ ಮುಂದಾಗಿದ್ದರು.

'ನನ್ನ ತಂದೆಗೆ ಕಾಂಗ್ರೆಸ್ ಜತೆ ಸಂಬಂಧವಿತ್ತು. ಅವರು ಕಾಂಗ್ರೆಸ್ ಸದಸ್ಯರಲ್ಲದಿದ್ದರೂ, ಅವರು ಕಾಂಗ್ರೆಸ್‌ನೊಂದಿಗೆ ತುಂಬಾ ನಿಕಟವಾಗಿ ಸಂಬಂಧ ಹೊಂದಿದ್ದರು. ಅವರು 40 ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದರು. ಅವರು ಕಾಂಗ್ರೆಸ್ ಬೆಂಬಲದೊಂದಿಗೆ ಸಂಸತ್ ಸದಸ್ಯರಾಗಿದ್ದರು, ಶಾಸಕರಾಗಿದ್ದರು. ನನ್ನ ಸಹೋದರ ಇನ್ನೂ ರಾಜಕೀಯದಲ್ಲಿದ್ದಾರೆ. ಅವರು ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ' ಎಂದು ಗವಾಯಿ ಹೇಳಿದ್ದರು.

ನ್ಯಾಯಮೂರ್ತಿ ಗವಾಯಿ ಅವರ ಅಪ್ಪ ರಾಮಕೃಷ್ಣ ಗವಾಯಿ ಪರಿಚಯ

ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿಕಟವರ್ತಿ ಮತ್ತು ನಾಗ್ಪುರದ ದೀಕ್ಷಭೂಮಿ ಸ್ಮಾರಕ ಸಮಿತಿಯ ಅಧ್ಯಕ್ಷರಾಗಿದ್ದ ರಾಮಕೃಷ್ಣ ಸೂರ್ಯಭನ್ ಗವಾಯಿ (1929-2015) ಅವರ ಮಗನೇ ನ್ಯಾಯಮೂರ್ತಿ ಗವಾಯಿ.

ಅನುಯಾಯಿಗಳು ಮತ್ತು ಅಭಿಮಾನಿಗಳು ರಾಮಕೃಷ್ಣ ಸೂರ್ಯಭನ್ ಗವಾಯಿ ಅವರನ್ನು 'ದಾದಾಸಾಹೇಬ್' ಎಂದೇ ಕರೆಯುತ್ತಿದ್ದರು. 1964 ರಿಂದ 1998 ರವರೆಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಗವಾಯಿ) ಎಂಬ ಅಂಬೇಡ್ಕರ್‌ವಾದಿ ಸಂಘಟನೆಯನ್ನು ಸ್ಥಾಪಿಸಿದ್ದರು.

1998 ರಲ್ಲಿ ರಾಮಕೃಷ್ಣ ಗವಾಯಿ ಅವರು ಆರ್‌ಪಿಐ ಅಭ್ಯರ್ಥಿಯಾಗಿ ಅಮರಾವತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ನಂತರ ಅವರು 2006 ಮತ್ತು 2011 ರ ನಡುವೆ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬಿಹಾರ, ಸಿಕ್ಕಿಂ ಮತ್ತು ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.

2009 ರಲ್ಲಿ, ಕೇರಳದ ರಾಜ್ಯಪಾಲರಾಗಿದ್ದ ರಾಮಕೃಷ್ಣ ಗವಾಯಿ ಆಗಿನ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ನೇತೃತ್ವದ ರಾಜ್ಯ ಸಚಿವ ಸಂಪುಟದ ಶಿಫಾರಸನ್ನು ಉಲ್ಲಂಘಿಸಿ, ರಾಜ್ಯದಲ್ಲಿ ಜಲವಿದ್ಯುತ್ ಮೂಲಸೌಕರ್ಯವನ್ನು ಆಧುನೀಕರಿಸುವ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಎಸ್‌ಎನ್‌ಸಿ-ಲಾವಲಿನ್ ಪ್ರಕರಣದಲ್ಲಿ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಪ್ರಾಸಿಕ್ಯೂಷನ್ ಕ್ರಮಗಳನ್ನು ಪ್ರಾರಂಭಿಸಲು ಕೇಂದ್ರ ತನಿಖಾ ದಳಕ್ಕೆ ಅನುಮತಿ ನೀಡಿದ್ದರು.

ರಾಜ್ಯಪಾಲರ ನಿರ್ಧಾರವನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ನ್ಯಾಯಾಲಯದಲ್ಲಿ ಬೆಂಬಲಿಸಿತ್ತು. ಆಗ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರೋಧ ಪಕ್ಷದಲ್ಲಿತ್ತು. ಆರ್‌ಎಸ್ ಗವಾಯಿ 2015ರಲ್ಲಿ ನಿಧನರಾದರು.

ನ್ಯಾಯಮೂರ್ತಿ ಗವಾಯಿ ಅವರ ಸಹೋದರ ಯಾರು?

ನ್ಯಾಯಮೂರ್ತಿ ಗವಾಯಿ ಅವರ ಸಹೋದರ ಡಾ. ರಾಜೇಂದ್ರ ಗವಾಯಿ. 2009ರಲ್ಲಿ ಮೂಲ ಆರ್‌ಪಿಐನ ವಿವಿಧ ಬಣಗಳನ್ನು ಒಟ್ಟುಗೂಡಿಸುವ ಪ್ರಯತ್ನವಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಅಧ್ಯಕ್ಷ ರಾಮದಾಸ್ ಅಠಾವಳೆ ಅವರೊಂದಿಗೆ ರಾಜೇಂದ್ರ ಗವಾಯಿ ಕೈಜೋಡಿಸಿದ್ದರು.

ಆದಾಗ್ಯೂ, ನಾಯಕರ ನಡುವಿನ ಭಿನ್ನಾಭಿಪ್ರಾಯಗಳಿಂದ ಪಕ್ಷ ವಿಭಜನೆಯಾಗಿ ಗವಾಯಿ ನೇತೃತ್ವದ ಬಣ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತು. ಇತ್ತ ಅಠಾವಳೆ ನೇತೃತ್ವದ ಗುಂಪು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು.

ಆರ್‌ಪಿಐ (ಎ) ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಿದೆ. ಅಠಾವಳೆ ಈಗ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿದ್ದಾರೆ.

(ಬರಹ: ಪರಿಣಿತಾ, ಬೆಂಗಳೂರು)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.