ಲೋಕಸಭಾ ಚುನಾವಣೆ 2024; ಮಾರ್ಚ್ 14ರಂದು ಚುನಾವಣಾ ದಿನಾಂಕ ಪ್ರಕಟಿಸುವ ಸಾಧ್ಯತೆ ಎನ್ನುತ್ತಿದೆ ವರದಿ
ನವದೆಹಲಿ: ಚುನಾವಣಾ ಆಯೋಗವು ಮಾರ್ಚ್ 14 ರ ಸುಮಾರಿಗೆ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯೊಂದು ತಿಳಿಸಿದೆ.
ನವದೆಹಲಿ: ದೇಶಕ್ಕೆ ದೇಶವೂ ಲೋಕಸಭಾ ಚುನಾವಣೆ (Lok Sabha Election 2024) ದಿನಾಂಕ ಘೋಷಣೆಯನ್ನು ಎದುರುನೋಡುತ್ತಿದೆ. ಈ ನಿರೀಕ್ಷೆಯ ನಡುವೆ, ಮಾರ್ಚ್ 14 ಅಥವಾ 15ರಂದು ಲೋಕಸಭಾ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗ ಘೋಷಿಸಬಹುದು ಎಂದು ವರದಿಯಾಗಿದೆ.
ಭಾರತದ ಚುನಾವಣಾ ಆಯೋಗವು ಮಾರ್ಚ್ 14 -15ರ ಸುಮಾರಿಗೆ ಲೋಕಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಚುನಾವಣಾ ಆಯೋಗದ ತಂಡವು ಸೋಮವಾರ (ಮಾರ್ಚ್ 11) ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿಲಿದೆ. ಆ ನಂತರ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಬಹುದು ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾಗಿ ವರದಿ ವಿವರಿಸಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಯಾವಾಗ ಚುನಾವಣೆ ನಡೆಸಬಹುದು ಎಂಬುದನ್ನು ನಿರ್ಣಯಿಸಲು ಚುನಾವಣಾ ಆಯೋಗ ತಂಡವು ಬುಧವಾರದವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇರಲಿದೆ. ಅದರ ನಂತರ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ
2024 ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವಂತೆ ಮತ್ತು ಆದಷ್ಟು ಬೇಗ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವಂತೆ ಭಾರತದ ಸುಪ್ರೀಂ ಕೋರ್ಟ್ 2023 ರ ಡಿಸೆಂಬರ್ 11 ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
"2024 ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸಲು ಭಾರತದ ಚುನಾವಣಾ ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ನಿರ್ದೇಶಿಸುತ್ತೇವೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಹೇಳಿದ್ದರು.
ಗೊಂದಲ ಬೇಡ, ಚುನಾವಣಾ ದಿನಾಂಕ ಘೋಷಣೆ ಆಗಿಲ್ಲ
ಲೋಕಸಭಾ ಚುನಾವಣೆಗೆ ಇನ್ನೂ ಯಾವುದೇ ದಿನಾಂಕಗಳನ್ನು ಘೋಷಿಸಲಾಗಿಲ್ಲ ಎಂದು ಚುನಾವಣಾ ಆಯೋಗ ಶುಕ್ರವಾರ ಸ್ಪಷ್ಟಪಡಿಸಿದೆ. ಚುನಾವಣಾ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಾಟ್ಸ್‌ಆಪ್‌ನಲ್ಲಿ ನಕಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಆಯೋಗವು ಪತ್ರಿಕಾಗೋಷ್ಠಿಯ ಮೂಲಕ ದಿನಾಂಕಗಳನ್ನು ಘೋಷಿಸುತ್ತದೆ ಎಂದು ಹೇಳಿದೆ.
ಲೋಕಸಭಾ ಚುನಾವಣಾ ವೇಳಾಪಟ್ಟಿ ಎಂದು ವಾಟ್ಸ್ಆಪ್‌ನಲ್ಲಿ ನಕಲಿ ಸಂದೇಶ ಶೇರ್ ಆಗುತ್ತಿದೆ. ಚುನಾವಣಾ ಆಯೋಗವು ಇದುವರೆಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿಲ್ಲ ಎಂದು ಆಯೋಗ ಟ್ವೀಟ್ ಮಾಡಿದೆ.
ಫೆಬ್ರವರಿಯಲ್ಲಿ, ಚುನಾವಣಾ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳಿಗೆ ಸಾರ್ವಜನಿಕ ಪ್ರಚಾರದಲ್ಲಿ ಸಭ್ಯತೆ ಮತ್ತು ಅತ್ಯಂತ ಸಂಯಮವನ್ನು ಕಾಪಾಡಿಕೊಳ್ಳಲು ಮತ್ತು ಚುನಾವಣಾ ಪ್ರಚಾರದ ಮಟ್ಟವನ್ನು "ವಿಷಯ ಆಧಾರಿತ" ಚರ್ಚೆಗೆ ಹೆಚ್ಚಿಸಲು ಸಲಹೆ ನೀಡಿತು. ಮತದಾರರ ಜಾತಿ ಅಥವಾ ಕೋಮು ಭಾವನೆಗಳ ಆಧಾರದ ಮೇಲೆ ಮನವಿ ಮಾಡದಂತೆ ಅದು ಪಕ್ಷಗಳನ್ನು ಒತ್ತಾಯಿಸಿತ್ತು.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)
ವಿಭಾಗ