India Bloc Meet: ಸೂಕ್ತ ಸಮಯದಲ್ಲಿ ನಿರ್ಧಾರ, ಕಾದು ನೋಡುವ ತಂತ್ರಕ್ಕೆ ಶರಣಾದ ಇಂಡಿಯಾ ಕೂಟ
Lok sabha elections ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಮರು ದಿನವೇ ಸಭೆ ಸೇರಿರುವ ಇಂಡಿಯಾ ಒಕ್ಕೂಟ( India bloc ) ಮುಂದಿನ ತೀರ್ಮಾನವನ್ನು ಸೂಕ್ತ ರೀತಿಯಲ್ಲಿ ತೆಗೆದುಕೊಳ್ಳಲು ಮುಂದಾಗಿದೆ.
ದೆಹಲಿ: ಬಹುಮತ ಸಿಗದೇ ಇದ್ದರೂ ಮತದಾರ ನೀಡಿರುವ ಪೂರಕ ಫಲಿತಾಂಶದಿಂದ ಪುಟಿದೆದ್ದಿರುವ ಇಂಡಿಯಾ ಒಕ್ಕೂಟವು ಅಧಿಕಾರ ಹಿಡಿಯುವ ಆಸೆಯನ್ನೂ ಇನ್ನೂ ಕೈ ಬಿಟ್ಟಿಲ್ಲ. ಚುನಾವಣೆ ಫಲಿತಾಂಶ ಬಂದ ಮರು ದಿನವೇ ದೆಹಲಿಯಲ್ಲಿ ಸೇರಿದ ಇಂಡಿಯಾ ಒಕ್ಕೂಟದ ಪ್ರಮುಖರು ಎರಡು ಗಂಟೆಗೂ ಹೆಚ್ಚು ಕಾಲ ಫಲಿತಾಂಶ, ಸರ್ಕಾರ ರಚನೆ ಸಾಧ್ಯಾ ಸಾಧ್ಯತೆ, ಪ್ರತಿಪಕ್ಷವಾಗಿ ಹೇಗೆ ಕಾರ್ಯನಿರ್ವಹಿಸಹುದು ಎನ್ನುವ ಹಲವು ಆಯಾಮಗಳಲ್ಲಿ ಚರ್ಚಿಸಿದ್ದಾರೆ. ಎನ್‌ಡಿಎ ಮುಂದಿನ ನಡೆ ಏನಿದೆ. ಅಲ್ಲಿ ಏನಾದರೂ ಮಿತ್ರ ಪಕ್ಷಗಳಲ್ಲಿ ವ್ಯತ್ಯಾಸವಾದರೆ ಅಧಿಕಾರ ಸ್ಥಾಪಿಸಬಹುದಾ, ಇದಕ್ಕಾಗಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವ ನಿರ್ಧಾರಕ್ಕೆ ಇಂಡಿಯಾ ಮಿತ್ರ ಕೂಟ ಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಚರ್ಚೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಎನ್‌ಸಿಪಿಯ ಶರದ್ ಪವಾರ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಡಿಎಂಕೆಯ ಎಂ.ಕೆ.ಸ್ಟಾಲಿನ್, ಟಿ.ಆರ್.ಬಾಲು, ಆರ್ ಜೆಡಿಯ ತೇಜಸ್ವಿಯಾದವ್, ಶಿವಸೇನೆಯ ಸಂಜಯ್ ರಾವುತ್, ಸಿಪಿಐ ಸೀತಾರಾಮ ಯಚೂರಿ,ಡಿ.ರಾಜಾ ಸಹಿತ ಹಲವರು ಭಾಗಿಯಾದರು.
ನಾವು ಪ್ರತಿಪಕ್ಷಗಳ ಸಾಲಿನಲ್ಲಿ ಕೂರೋಣ, ಜನ ನಮಗೂ ಮತ ನೀಡಿ ಶಕ್ತಿ ತುಂಬಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳನ್ನು ಎದುರಿಸಿ ಸಂವಿಧಾನವನ್ನು ಉಳಿಸುವ ಕೆಲಸ ಮಾಡೋಣ ಎನ್ನುವ ಕುರಿತು ಹೆಚ್ಚಿನ ಚರ್ಚೆಯಾಗಿದೆ. ಎನ್‌ಡಿಎ ಜತೆಗಿದ್ದ ಟಿಡಿಪಿ ಹಾಗೂ ಜೆಡಿಯು ಅವರೊಂದಿಗೆ ಗುರುತಿಸಿಕೊಂಡಿದ್ದ ಕಾರಣ ಸದ್ಯಕ್ಕೆ ಅಧಿಕಾರ ಹಿಡಿಯುವ ಸ್ಥಿತಿಯಂತೂ ಬಾರದು. ಮುಂದೆ ಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಕೊಳ್ಳೋಣ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಡಿಯಾ ಮೈತ್ರಿ ಕೂಟವು ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ಹೋರಾಟ ಮುಂದುವರೆಸಲಿದೆ. ಫ್ಯಾಸಿಸ್ಟ್ ಆಡಳಿತವನ್ನೂ ಸಹಿಸಿಕೊಳ್ಳುವುದಿಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಜನರ ಆಶಯದಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶಿವಸೇನಾ ವಕ್ತಾರ ಸಂಜಯ್ ರಾವುತ್, ಸಂವಿಧಾನವನ್ನು ನಾಶ ಮಾಡುವವರ ವಿರುದ್ದ ನಾವು ಎಚ್ಚರಿಕೆಯಿಂದ ಇದ್ದು ಕೆಲಸ ಮಾಡುತ್ತೇವೆ. ಇದನ್ನೇ ಸಭೆಯಲ್ಲೂ ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.