ಕನ್ನಡ ಸುದ್ದಿ  /  Nation And-world  /  India News Lok Sabha Poll Date Announcement Likely After March 9 Eci Final Checks In States Underway Uks

ಲೋಕಸಭೆ ಚುನಾವಣೆ 2024; ಮಾರ್ಚ್ 9ರ ನಂತರ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ, ರಾಜ್ಯಗಳಲ್ಲಿ ಭರದ ಸಿದ್ಧತೆ

ಲೋಕಸಭೆ ಚುನಾವಣೆ 2024: ಭಾರತದ ಚುನಾವಣಾ ಆಯೋಗವು ಮಾರ್ಚ್ 9ರ ನಂತರ ಲೋಕಸಭಾ ಚುನಾವಣಾ ದಿನಾಂಕ ಪ್ರಕಟ ಮಾಡುವ ಸಾಧ್ಯತೆ ಇದೆ. ರಾಜ್ಯಗಳಲ್ಲಿ ಭರದ ಸಿದ್ಧತೆ ನಡೆದಿದ್ದು, ಅವುಗಳ ಪರಿಶೀಲನೆ ನಡೆದಿದೆ.

ಲೋಕಸಭೆ ಚುನಾವಣೆ 2024: ಮಾರ್ಚ್ 9ರ ನಂತರ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ರಾಜ್ಯಗಳಲ್ಲಿ ಚುನಾವಣೆಗೆ ಭರದ ಸಿದ್ಧತೆ ನಡೆದಿರುವುದನ್ನು ಪರಿಶೀಲಿಸುತ್ತಿದ್ದಾರೆ. (ಸಾಂಕೇತಿಕ ಚಿತ್ರ)
ಲೋಕಸಭೆ ಚುನಾವಣೆ 2024: ಮಾರ್ಚ್ 9ರ ನಂತರ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ರಾಜ್ಯಗಳಲ್ಲಿ ಚುನಾವಣೆಗೆ ಭರದ ಸಿದ್ಧತೆ ನಡೆದಿರುವುದನ್ನು ಪರಿಶೀಲಿಸುತ್ತಿದ್ದಾರೆ. (ಸಾಂಕೇತಿಕ ಚಿತ್ರ)

ಭಾರತದ ಚುನಾವಣಾ ಆಯೋಗದ ಅಧಿಕಾರಿಗಳು ತಂಡ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವುದಕ್ಕೆ ಅಗತ್ಯ ಅಂತಿಮ ಪರಿಶೀಲನೆ ನಡೆಸುತ್ತಿದೆ. ಆದ್ದರಿಂದ ಚುನಾವಣಾ ಆಯೋಗವು ಮಾರ್ಚ್ 9 ರ ನಂತರ ಲೋಕಸಭಾ ಚುನಾವಣೆ 2024ರ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. 18ನೇ ಲೋಕಸಭೆಗೆ 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.

ಲೋಕಸಭೆ ಚುನಾವಣೆ 2024 ಮತ್ತು ಕೆಲವು ರಾಜ್ಯಗಳಲ್ಲಿ ಏಕಕಾಲದಲ್ಲಿ ಅಸೆಂಬ್ಲಿ ಚುನಾವಣೆಯ ಸಿದ್ಧತೆಗಳು ಮುಂದುವರೆದಿದೆ. ಇಂತಹ ಸನ್ನಿವೇಶದಲ್ಲೇ, ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಎಲ್ಲ ರಾಜ್ಯಗಳಿಗೆ ಬೆನ್ನು ಬೆನ್ನಿಗೆ ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲಿಸಿದೆ. ಮಾರ್ಚ್‌ 8ರ ಒಳಗೆ ಈ ಭೇಟಿ ಮುಗಿಯಲಿದ್ದು, ಮಾರ್ಚ್ 9 ರ ನಂತರ ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಆಯೋಗವು ಘೋಷಿಸಲಿದೆ ಎಂದು ನ್ಯೂಸ್ 18 ವರದಿ ತಿಳಿಸಿದೆ.

ಜಮ್ಮು - ಕಾಶ್ಮೀರ ಭೇಟಿ ನಂತರ ಚುನಾವಣಾ ದಿನಾಂಕ ಘೋಷಣೆ ಎಂದ ಮುಖ್ಯ ಚುನಾವಣಾ ಆಯುಕ್ತ

ಲೋಕಸಭೆ ಮತ್ತು ಕೆಲವು ರಾಜ್ಯಗಳ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವ ಮೊದಲು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ತಂಡವು ಅಲ್ಲಿನ ಚುನಾವಣಾ ಸಿದ್ಧತೆಯ ಮೌಲ್ಯಮಾಪನ ಮಾಡಲು ಭೇಟಿ ನೀಡಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಬುಧವಾರ ಹೇಳಿದ್ದರು.

ರಾಜೀವ್‌ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ತಂಡವು ಈಗಾಗಲೇ ಜನವರಿಯಲ್ಲಿ ಆಂಧ್ರಪ್ರದೇಶ ಮತ್ತು ಶುಕ್ರವಾರದಿಂದ ಒಡಿಶಾ ಮತ್ತು ಬಿಹಾರಕ್ಕೆ ಸತತ ಭೇಟಿ ನೀಡಿದೆ. ಈ ತಂಡ ಬುಧವಾರ ಬಿಹಾರ ಪ್ರವಾಸ ಮುಗಿಸಿ ಗುರುವಾರ (ಫೆ.22) ತಮಿಳುನಾಡು ಪ್ರವಾಸ ಆರಂಭಿಸಿದೆ.

“ನಾವು ನಾಳೆಯಿಂದ ನಮ್ಮ ತಮಿಳುನಾಡು ಪ್ರವಾಸವನ್ನು ಪ್ರಾರಂಭಿಸುತ್ತಿದ್ದೇವೆ. ಬೆನ್ನು ಬೆನ್ನಿಗೆ ವಿವಿಧ ರಾಜ್ಯ ಪ್ರವಾಸಗಳನ್ನು ಯೋಜಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಲು ನಾವು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೂ ಹೋಗುತ್ತೇವೆ ಮತ್ತು ಅದರ ನಂತರವೇ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ರಾಜೀವ್‌ ಕುಮಾರ್ ಪಾಟ್ನಾದಲ್ಲಿ ಬುಧವಾರ (ಫೆ.21) ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

ಚುನಾವಣಾ ಆಯೋಗದ ಮೂಲಗಳ ಪ್ರಕಾರ, ರಾಜೀವ್ ಕುಮಾರ್ ಅವರ ತಂಡ ಈ ಸಲ ಮಾರ್ಚ್‌ 12, 13ರಂದು ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಲಿದೆ. ಅದಾದ ಬಳಿಕ ಒಂದು ಅಥವಾ ಎರಡು ದಿನಗಳ ಒಳಗೆ ಚುನಾವಣೆ ಘೋಷಣೆಯಾಗಲಿದೆ.

ಲೋಕಸಭಾ ಚುನಾವಣೆ ಜೊತೆಗೆ 4 ರಾಜ್ಯಗಳ ಚುನಾವಣೆ

ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಅವಧಿ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ಈ ನಾಲ್ಕು ರಾಜ್ಯಗಳ ಚುನಾವಣೆಯೂ ಲೋಕಸಭೆ ಚುನಾವಣೆಯ ಜೊತೆಗೆ ಏಕಕಾಲಕ್ಕೆ ನಡೆಯಲಿವೆ. 2019 ರಲ್ಲಿ, ಮಾರ್ಚ್ 10 ರಂದು ಸಂಸತ್ತಿನ ಚುನಾವಣೆಯ ದಿನಾಂಕ ಘೋಷಣೆಯಾಗಿತ್ತು. ಮೇ 23ರಂದು ಫಲಿತಾಂಶ ಪ್ರಕಟವಾಗಿತ್ತು. 2019 ರಲ್ಲಿ, ಏಪ್ರಿಲ್ 11 ಮತ್ತು ಮೇ 19 ರ ನಡುವೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಿತು.

ಸಾರ್ವತ್ರಿಕ ಚುನಾವಣಾ ಹಂತಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ರಾಷ್ಟ್ರದ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಇದರಲ್ಲಿ, ಪ್ರಾದೇಶಿಕ ಹವಾಮಾನ, ಪರೀಕ್ಷೆಗಳು, ರಜಾದಿನಗಳು, ಭದ್ರತಾ ಪಡೆಯ ನಿಯೋಜನೆ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಹಂತಗಳನ್ನು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಸಾಧ್ಯವಾದಷ್ಟೂ ಕಡಿಮೆ ಸಂಖ್ಯೆಯ ಹಂತಗಳಲ್ಲಿ ಚುನಾವಣೆ ನಡೆಸಲು ಪ್ರಯತ್ನಿಸುವುದಾಗಿ ರಾಜೀವ್ ಕುಮಾರ್ ಪಾಟ್ನಾದಲ್ಲಿ ಸುದ್ದಿಗಾರರ ಜತೆಗೆ ಮಾತನಾಡುತ್ತ ತಿಳಿಸಿದರು.

(This copy first appeared in Hindustan Times Kannada website. To read more like this please logon to kannada.hindustantimes.com)