Accident: ನಿಲ್ಲಿಸಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ, ನಾಲ್ವರು ಮಹಿಳೆಯರು ಸೇರಿ 6 ಮಂದಿ ದುರ್ಮರಣ
ಹರಿಯಾಣದ ರೇವಾರಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯರು ಸೇರಿ ಆರು ಮಂದಿ ಮೃತಪಟ್ಟಿದ್ದು, ಇನ್ನೂ ಹಲವರಿಗೆ ಗಾಯಗಳಾಗಿವೆ.
ರೇವಾರಿ(ಹರಿಯಾಣ): ಅವರ ಕಾರಿನ ಟೈಯರ್ ಸಮಸ್ಯೆಯಾಗಿತ್ತು ಎಂದು ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದರು. ಟೈಯರ್ ಬದಲಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಕಾರಿಯಲ್ಲಿದ್ದ ಮಹಿಳೆಯರೂ ಸೇರಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು. ಇನ್ನೂ ಆರು ಮಂದಿಗೆ ಗಾಯಗಳಾಗಿವೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿ ಅದರೊಳಗಿದ್ದವರ ದೇಹಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು.
ಇಂತಹ ಭೀಕರ ಘಟನೆ ನಡೆದಿರುವುದು ಹರಿಯಾಣ ರಾಜ್ಯದ ರೇವಾರಿ ಬಳಿ. ಭಾನುವಾರ ಮಧ್ಯರಾತ್ರಿ ದುರ್ಘಟನೆ ನಡೆದಿದ್ದು, ರೇವಾರಿ ಪೊಲೀಸರು ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.
ಮಹಿಳೆಯರೇ ಇದ್ದ ಕಾರಿನೊಂದಿಗೆ ಹೆದ್ದಾರಿಯಲ್ಲಿ ಹೊರಟಿದ್ದಾಗ ಏಕಾಏಕಿ ಕಾರಿನ ಟೈಯರ್ ಸಿಡಿದು ಹೋಗಿದೆ. ಇದರಿಂದ ಟೈಯರ್ ಬದಲಿಸಬೇಕು ಎಂದು ಅದೇ ರಸ್ತೆಯಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಇದೇ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಇನ್ನೊಂದು ಕಾರು ಚಾಲಕ ಕಾರು ನಿಂತಿರುವುದನ್ನು ಕತ್ತಲಲ್ಲಿ ಗಮನಿಸಲಾಗದೇ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಚಾಲಕ ಸೇರಿ ಕಾರಿನಲ್ಲಿದ್ದ ಆರು ಮಂದಿಯೂ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಮೃತಪಟ್ಟವರ ವಿವರವನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಕೂಡಲೇ ಹಿಂದೆ ಬಂದ ವಾಹನದವರು ಪೊಲೀಸರಿಗೆ ಮಾಹಿತಿ ನೀಡಿ ಗಾಯಗೊಂಡವರನ್ನು ಹಾಗೂ ಮೃತಪಟ್ಟವರ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಇದರಿಂದಾಗಿ ರಸ್ತೆಯಲ್ಲಿ ಸಂಚಾರ ಕೆಲ ಹೊತ್ತು ವ್ಯತ್ಯಯವಾಗಿತ್ತು.
ಈ ಕುರಿತು ಎಎನ್‌ಐಗೆ ಮಾಹಿತಿ ನೀಡಿರುವ ರೇವಾರಿ ಆರೋಗ್ಯಾಧಿಕಾರಿ, ನಮಗೆ ನೀಡಿದ ವಿವರದಂತೆ ಕಾರು ಟೈಯರ್ ಸಿಡಿದಿದ್ದರಿಂದ ನಿಲ್ಲಿಸಲಾಗಿತ್ತು. ಆಗ ಡಿಕ್ಕಿ ಹೊಡೆಯಲಾಗಿದೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟು ಅವರ ದೇಹಗಳನ್ನು ಆಸ್ಪತ್ರೆಗೆ ತರಲಾಗಿತ್ತು. ಇನ್ನೂ ಇಬ್ಬರು ಆಸ್ಪತ್ರೆಯಲ್ಲಿ ಮೃತಟ್ಟಿದ್ದಾರೆ. ಎಲ್ಲರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಟುಂಬದವರ ವಿವರ ಪತ್ತೆ ಮಾಡಿ ಮೃತ ದೇಹಗಳನ್ನು ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಿಭಾಗ