ಲೋಕಸಭಾ ಚುನಾವಣೆ; 350ಕ್ಕೂ ಹೆಚ್ಚು ಮತದಾರರ ದೊಡ್ಡ ಮತಬ್ಯಾಂಕ್ ಈ ಅಸ್ಸಾಂನ ಈ ಥಾಪಾ ಕುಟುಂಬ, ಕೆಲವರು ಬೆಂಗಳೂರಲ್ಲಿದ್ದಾರೆ
ಲೋಕಸಭಾ ಚುನಾವಣೆ ಪ್ರಗತಿಯಲ್ಲಿದ್ದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಸೊಂಟಿಪುರ ಕ್ಷೇತ್ರದಲ್ಲಿ 350ಕ್ಕೂ ಹೆಚ್ಚು ಮತದಾರರ ದೊಡ್ಡ ಮತಬ್ಯಾಂಕ್ ಈ ಅಸ್ಸಾಂನ ಈ ಥಾಪಾ ಕುಟುಂಬ. ಈ ಕುಟುಂಬದ ಕೆಲವರು ಬೆಂಗಳೂರಲ್ಲಿದ್ದಾರೆ. ಯಾವುದು ಈ ಕುಟುಂಬ - ಇಲ್ಲಿದೆ ಪೂರ್ಣ ವಿವರ.

ಸೊಂಟಿಪುರ (ಅಸ್ಸಾಂ): ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹಲವು ವಿಶೇಷ, ಗಮನಸೆಳೆಯುವ ವಿಚಾರಗಳು ಸುದ್ದಿಯಲ್ಲಿವೆ. ಈ ಪೈಕಿ ದಿವಂಗತ ರೋಣ್ ಬಹದೂರ್ ಥಾಪಾ ಅವರ ಕೂಡುಕುಟುಂಬವೂ ಒಂದು. ಈ ಕುಟುಂಬ ದೊಡ್ಡ ಸಂಖ್ಯೆಯ ಮತದಾರರ ಕಾರಣಕ್ಕೆ ಗಮನಸೆಳೆದಿದೆ.
ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಏಪ್ರಿಲ್ 19ಕ್ಕೆ ಮತದಾನ ನಡೆಯಲಿದೆ. ರೋಣ್ ಬಹದೂರ್ ಥಾಪಾ ಕುಟುಂಬ ಅಸ್ಸಾಂನ ಸೊಂಟಿಪುರ ಜಿಲ್ಲೆಯ ಫುಲೋಗುರಿ ನೇಪಾಳಿ ಪಾಮ್ನಲ್ಲಿದ್ದು, 350ರ ಆಸುಪಾಸು ಮತದಾರರು ಇದೊಂದೇ ಕುಟುಂಬದಲ್ಲಿ ಇದ್ದಾರೆ.
ಈ ಕುಟುಂಬ ಇರುವ ಪ್ರದೇಶವು ರಂಗಪಾರಾ ವಿಧಾನಸಭಾ ಕ್ಷೇತ್ರ ಮತ್ತು ಸೊಂಟಿಪುರ ಸಂಸತ್ ಕ್ಷೇತ್ರದಲ್ಲಿದೆ. ಈ ಕುಟುಂಬ ಸದಸ್ಯರು ಏಪ್ರಿಲ್ 19ರಂದು ಸೊಂಟಿಪುರ ಲೋಕಸಭಾ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತಚಲಾಯಿಸಲಿದೆ. ಸೊಂಟಿಪುರ ಲೋಕಸಭಾ ಕ್ಷೇತ್ರದ ಫುಲೋಗುರಿ ನೇಪಾಳಿ ಪಾಮ್ನಲ್ಲಿ 300 ಕುಟುಂಬಗಳು ಪೂರ್ವಜರು ಕಟ್ಟಿದ್ದ ಮನೆಗಳಲ್ಲಿ ಅದೇ ಪ್ರದೇಶದಲ್ಲಿ ಬಹಳ ವರ್ಷಗಳಿಂದ ನೆಲೆಸಿದ್ದಾರೆ.
1200 ಸದಸ್ಯರ ಥಾಪಾ ಕುಟುಂಬದಲ್ಲಿ 350ಕ್ಕೂ ಹೆಚ್ಚು ಮತದಾರರು
ದಿವಂಗತ ರೋಣ್ ಬಹಾದೂರ್ ಥಾಪಾಗೆ 5 ಪತ್ನಿಯರಿದ್ದರು. ಈ ದಾಂಪತ್ಯದಲ್ಲಿ ಅವರಿಗೆ 12 ಪುತ್ರರು ಮತ್ತು 9 ಪುತ್ರಿಯರು. ಮೊಮ್ಮಕ್ಕಳ ಸಂಖ್ಯೆ 150ಕ್ಕೂ ಹೆಚ್ಚು. ಈ ಕುಟುಂಬ ಬೆಳೆದು ಈಗ ಒಟ್ಟು 1200 ಸದಸ್ಯರಿದ್ದು, ಈ ಪೈಕಿ 350ರಷ್ಟು ಸದಸ್ಯರು ಈ ಬಾರಿ ಮತಚಲಾಯಿಸಲಿದ್ದಾರೆ.
ನೇಪಾಳಿ ಪಾಮ್ ಗ್ರಾಮದ ಮುಖ್ಯಸ್ಥ ಮತ್ತು ದಿವಂಗತ ರೋಣ್ ಬಹದ್ದೂರ್ ಅವರ ಪುತ್ರ ತಿಲ್ ಬಹದೂರ್ ಥಾಪಾ, ಇಡೀ ಕುಟುಂಬದಲ್ಲಿ ಸುಮಾರು 350 ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
"ನನ್ನ ತಂದೆ ಅವರ ತಂದೆಯೊಂದಿಗೆ 1964 ರಲ್ಲಿ ಇಲ್ಲಿಗೆ ಬಂದು ನೆಲೆಸಿದರು. ನನ್ನ ತಂದೆಗೆ ಐದು ಹೆಂಡತಿಯರಿದ್ದರು. ನಾವು 12 ಸಹೋದರರು ಮತ್ತು 9 ಸಹೋದರಿಯರು. ತಂದೆಗೆ ಅವರ ಪುತ್ರರಿಂದ 56 ಮೊಮ್ಮಕ್ಕಳನ್ನು ಹೊಂದಿದ್ದರು. ಪುತ್ರಿಯರ ಕಡೆಯಿಂದ ಮೊಮ್ಮಕ್ಕಳ ಸಂಖ್ಯೆ ಗೊತ್ತಿಲ್ಲ. ಈ ಚುನಾವಣೆಯಲ್ಲಿ ನೇಪಾಳಿ ಪಾಮ್ನಲ್ಲಿ ಥಾಪಾ ಕುಟುಂಬದ ಸುಮಾರು 350 ಸದಸ್ಯರು ಮತ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ನಾವು ಎಲ್ಲಾ ಮಕ್ಕಳನ್ನು ಲೆಕ್ಕ ಹಾಕಿದರೆ, ನಮ್ಮ ಕುಟುಂಬದ ಒಟ್ಟು ಸದಸ್ಯರು 1,200 ಕ್ಕಿಂತ ಹೆಚ್ಚಿದ್ದಾರೆ" ಎಂದು ತಿಲ್ ಬಹದ್ದೂರ್ ಥಾಪಾ ತಿಳಿಸಿದ್ದಾಗಿ ವರದಿ ಹೇಳಿದೆ.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದಾರೆ ಥಾಪಾ ಕುಟುಂಬ ಸದಸ್ಯರು
ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಲ್ಯಾಣ ಯೋಜನೆಗಳ ಲಾಭವನ್ನು ಕುಟುಂಬಕ್ಕೆ ಇನ್ನೂ ಪಡೆಯಲು ಸಾಧ್ಯವಾಗಿಲ್ಲ ಎಂದು ತಿಲ್ ಥಾಪಾ ಅಸಮಾಧಾನ ವ್ಯಕ್ತಪಡಿಸಿದರು.
"ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದರು. ಆದರೆ ಯಾವುದೇ ಸರ್ಕಾರಿ ಕೆಲಸ ಸಿಗಲಿಲ್ಲ. ನಮ್ಮ ಕುಟುಂಬದ ಕೆಲವರು ಬೆಂಗಳೂರಿಗೆ ಹೋಗಿ ಖಾಸಗಿ ಉದ್ಯೋಗ ಕಂಡುಕೊಂಡರು. ಕೆಲವರು ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ನಾನು 1989 ರಿಂದ ಗ್ರಾಮ ಪ್ರಧಾನನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 8 ಗಂಡು ಮತ್ತು 3 ಹೆಣ್ಣು ಮಕ್ಕಳಿದ್ದಾರೆ" ಎಂದು ತಿಲ್ ಬಹದ್ದೂರ್ ಹೇಳಿದರು.
ಹೆಚ್ಚು ಮತದಾರರು ಇರುವ ದೊಡ್ಡ ಕುಟುಂಬ ನಮ್ಮದು. ಅಪ್ಪ ರೋಣ್ ಬಹದೂರ್ ಥಾಪಾ 1997ರಲ್ಲಿ ಮೃತಪಟ್ಟರು. ನನಗೆ ಈಗ 64 ವರ್ಷ. ಮೂವರು ಪತ್ನಿಯರು 12 ಮಕ್ಕಳಿದ್ದಾರೆ ಎಂದು ರೋಣ್ ಬಹದೂರ್ ಥಾಪಾ ಅವರ ಇನ್ನೊಬ್ಬ ಪುತ್ರ ಸರ್ಕಿ ಬಹದೂರ್ ಥಾಪಾ ಹೇಳಿದ್ದಾರೆ.
ಸೊಂಟಿಪುರ ಲೋಕಸಭಾ ಕ್ಷೇತ್ರದಲ್ಲಿ 16.25 ಲಕ್ಷ ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ 9 ವಿಧಾನಸಭಾ ಕ್ಷೇತ್ರಗಳಿವೆ. ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಅಂದರೆ ಏಪ್ರಿಲ್ 19, ಏಪ್ರಿಲ್ 26, ಮೇ 7 ರಂದು ಮತದಾನ ನಡೆಯದಲಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.