Maharashtra Politics: ಕಾಂಗ್ರೆಸ್ ತೊರೆದ ಮರುದಿನವೇ ಬಿಜೆಪಿ ಸೇರಿ ಮಹಾರಾಷ್ಟ್ರ ಮಾಜಿ ಸಿಎಂ ಆಶೋಕ್ ಚೌಹಾಣ್
ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹಾಣ್ ಮಂಗಳವಾರ ಅಧಿಕೃತವಾಗಿ ಬಿಜೆಪಿ ಸೇರಿದರು.
ಮುಂಬೈ: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇರುವಾಗ ರಾಷ್ಟ್ರ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಅದೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಬಿಡುವವರ ಸಂಖ್ಯೆ ಅಧಿಕವಾಗಿದೆ. ಸೋಮವಾರವಾಷ್ಟೇ ಕಾಂಗ್ರೆಸ್‌ಗೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಶೋಕ್ ಚೌಹಾಣ್ ಬಿಜೆಪಿ ಸೇರಿದ್ದಾರೆ.ಮುಂಬೈನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅವರನ್ನು ಬಿಜೆಪಿಗೆ ಬರ ಮಾಡಿಕೊಳ್ಳಲಾಯಿತು.
ಪಕ್ಷದ ಕಚೇರಿಯಲ್ಲಿ ಸ್ವಾಗತ
ಮುಂಬೈನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬವಂಕುಲ್ ಅವರು ಅಶೋಕ್ ಚೌಹಾಣ್ ಅವರನ್ನು ಬರ ಮಾಡಿಕೊಂಡರು.
ಪಕ್ಷದ ಕಚೇರಿಯಲ್ಲಿ ಸದಸ್ಯತ್ವವನ್ನು ಸ್ವೀಕರಿಸಿದ ಅಶೋಕ್ ಚೌಹಾಣ್ ಕೆಲಹೊತ್ತು ನಾಯಕರೊಂದಿಗೆ ಚರ್ಚಿಸಿದರು. ಈ ವೇಳೆ ಮಹಾರಾಷ್ಟ್ರ ಬಿಜೆಪಿ ಪ್ರಮುಖ ನಾಯಕರು ಚೌಹಾಣ್‌ಗೆ ಸಾಥ್ ನೀಡಿದರು.
ಮೂರನೇ ನಾಯಕ
ನಾನು ಹೊಸ ರಾಜಕೀಯ ಪರ್ವ ಶುರು ಮಾಡುತ್ತಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದ ಅಶೋಕ್ ಚೌಹಾಣ್ ಮಂಗಳವಾರ ಬಿಜೆಪಿ ಸೇರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಿಂಗಳ ಅಂತರದೊಳಗೆ ಮೂವರು ಹಿರಿಯ ನಾಯಕರು ತೊರೆದಿದ್ದಾರೆ. ಅಶೋಕ್ ಚೌಹಾಣ್ ಬಿಜೆಪಿ ಸೇರಿದರೆ, ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದ ಮಿಲಿಂದ್ ದಿಯೋರಾ ಅವರು ಕಳೆದ ತಿಂಗಳು ಶಿಂದೆ ಬಣದ ಶಿವಸೇನೆ ಸೇರಿದ್ದರು. ಮತ್ತೊಬ್ಬ ಬಾಬಾ ಸಿದ್ದಕಿ ಅವರು ಅಜಿತ್ ಪವಾರ್ ಬಣದ ಎನ್‌ಸಿಪಿಯನ್ನು ಸೇರಿಕೊಂಡಿದ್ದರು.
ಇವರ ತಂದೆ ಶಂಕರರಾವ್ ಚೌಹಾಣ್ ಕೂಡ ಮುಖ್ಯಮಂತ್ರಿಯಾಗಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್‌ನಲ್ಲಿಯೇ ಸಕ್ರಿಯವಾಗಿದ್ದ ಅಶೋಕ್ ಚೌಹಾಣ್ ಈ ಹಿಂದೆ ನಾಂದೇಡ್ ಸಂಸದರೂ ಆಗಿದ್ದರು. ವಿಲಾಸ್‌ರಾವ್ ದೇಶಮುಖ್ ರಾಜೀನಾಮೆ ನೀಡಿದಾಗ 2008 ರಲ್ಲಿ ಅಶೋಕ್ ಚೌಹಾಣ್ ಅವರನ್ನು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನೇಮಿಸಿತ್ತು. ಮರು ವರ್ಷವೇ ಆದರ್ಶ ಹೌಸಿಂಗ್ ಹಗರಣದಲ್ಲಿ ಸಿಲುಕಿದ ಚೌಹಾಣ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೂ ಪಕ್ಷದಲ್ಲೇ ಮುಂದುವರೆದಿದ್ದರು.
ಕಾಂಗ್ರೆಸ್ ಸ್ಪಷ್ಟನೆ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಪಕ್ಷದ ನಾಯಕರು ತಮ್ಮ ಸಿದ್ದಾಂತವನ್ನು ಬಿಟ್ಟು ಪಕ್ಷ ತೊರೆಯುತ್ತಿದ್ದಾರೆ. ಇದು ನಿಜಕ್ಕೂ ಬೇಸರದಾಯಕ ಎಂದು ಹೇಳಿದರು.
ಈ ನಡುವೆ ಮುಂಬೈ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಮಾತನಾಡಿ, ಅಶೋಕ್ ಚೌಹಾಣ್ ಅವರು ಸ್ಥಳೀಯ ನಾಯಕರ ವಿರುದ್ದ ವರಿಷ್ಠರಿಗೆ ದೂರು ನೀಡಿದ್ದರು. ಆದರೆ ವರಿಷ್ಠರು ಅವರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ಮಾತುಕತೆ ನಡೆಸಿದ್ದರೆ ಗೊಂದಲ ಬಗೆಹರಿಸಬಹುದಿತ್ತು. ಅದನ್ನು ಮಾಡದ್ದರಿಂದ ಅಶೋಕ್ ಚೌಹಾಣ್ ಪಕ್ಷ ತೊರೆಯುವಂತಾಯಿತು ಎಂದು ತಿಳಿಸಿದರು.
ಅಶೋಕ್ ಚೌಹಾಣ್ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವುದರಿಂದ ಸದ್ಯವೇ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ಧಾರೆ. ಇಂದೇ ಅವರ ಹೆಸರನ್ನು ಬಿಜೆಪಿ ವರಿಷ್ಠರು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.