Kannada News  /  Nation And-world  /  India News Mallikarjuna Kharge Talks About Lok Sabha Election Santan Dharma India Vs Bharat Ht Interview In Kannada Uks

ಲೋಕಸಭೆ ಚುನಾವಣೆ, ಸನಾತನ ಧರ್ಮ, ಇಂಡಿಯಾ ಭಾರತ ವಿಚಾರಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮುಕ್ತಮಾತು, ಇಲ್ಲಿದೆ ಹೆಚ್‌ಟಿ ಸಂದರ್ಶನದ ಆಯ್ದ ಭಾಗ

ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ (HT_PRINT / PTI)

ವರ್ಷದ ಕೊನೆಗೆ ಪಂಚರಾಜ್ಯ ಚುನಾವಣೆ, ಲೋಕಸಭಾ ಚುನಾವಣೆ ಎಲ್ಲದರ ನಡುವೆ ರಾಜಕೀಯ ಚಟುವಟಿಕೆಗಳು ಬಿರುಸುಪಡೆಯತೊಡಗಿವೆ. ಇಂದು ಮತ್ತು ನಾಳೆ ಕಾಂಗ್ರೆಸ್ ಪಕ್ಷದ ಸಿಡಬ್ಲ್ಯುಸಿ ಮೀಟಿಂಗ್ ಹೈದರಾಬಾದಲ್ಲಿ ನಡೆಯುತ್ತಿದೆ. ಈ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಚ್‌ಟಿ ಜತೆಗೆ ಮುಕ್ತ ಮಾತುಕತೆ ನಡೆಸಿದ್ದು ಅದರ ಆಯ್ದ 7 ಅಂಶ HT ಕನ್ನಡದ ಓದುಗರಿಗಾಗಿ ಇಲ್ಲಿದೆ.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಮುಂದಿನ ತಿಂಗಳಿಗೆ ಒಂದು ವರ್ಷ ಪೂರ್ತಿಯಾಗಲಿದೆ. ಅವರು ಅಧಿಕಾರಾವಧಿಯ ಮೊದಲ 11 ತಿಂಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಕಂಡು ಅಧಿಕಾರ ಚುಕ್ಕಾಣಿ ಹಿಡಿದಿದೆ. 81 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರ ಹುಮ್ಮಸ್ಸು ಇದರಿಂದ ಹೆಚ್ಚಾಗಿದ್ದು, ಇಂಡಿಯಾ ಮೈತ್ರಿಕೂಟದ ನಡುವೆ ಅತ್ಯುತ್ತಮ ಸಮನ್ವಯ ಸಾಧನೆಯಾದರೆ ಈ ವರ್ಷದ ಕೊನೆಗೆ ಬರುವ ಪಂಚ ರಾಜ್ಯ ಚುನಾವಣೆಗಳನ್ನು ಗೆಲ್ಲಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೆಚ್‌ಟಿ ಕನ್ನಡದ ಮಾತೃತಾಣ ಹಿಂದೂಸ್ತಾನ್ ಟೈಮ್ಸ್‌ನ ಸುನೇತ್ರಾ ಚೌಧರಿ ಮತ್ತು ಸೌಭದ್ರಾ ಚಟರ್ಜಿ ಜತೆಗಿನ ಸಂದರ್ಶನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ. ಆ ಸಂದರ್ಶನದ ಆಯ್ದ ಭಾಗ ಪ್ರಶ್ನೋತ್ತರ ಮಾದರಿಯಲ್ಲಿ ಇಲ್ಲಿದೆ.

1. ಸಂಸತ್‌ನ ವಿಶೇಷ ಅಧಿವೇಶನ ಸೆ.18ರಿಂದ ಶುರುವಾಗುತ್ತಿದ್ದು, ನಿಮ್ಮ ಕಾರ್ಯ ಯೋಜನೆ ಏನು?

ಎರಡು ಸಾಲಿನ ಅಜೆಂಡಾ ಇತ್ತೀಚೆಗೆ ಬಂದಿದೆ. ಅವರು ಅದನ್ನೇಕೆ ಅಷ್ಟಕ್ಕೇ ಇಡ ಬಯಸಿದರೆಂಬುದು ನನಗೆ ಅರ್ಥವಾಗಿಲ್ಲ. ನೀವು 15 ದಿನಗಳು ಅಥವಾ ಒಂದು ತಿಂಗಳ ಅಜೆಂಡಾ ಅಥವಾ ಅದಕ್ಕಿಂತ ಹೆಚ್ಚಿನದನ್ನು ಮಾಡಬಹುದಿತ್ತು. ಆದರೆ ಇದು G20 ಮತ್ತು ಆಡಳಿತ ಸಮಸ್ಯೆಗಳನ್ನು ಹೇಗೆ ನಿರ್ವಹಿಸಿದರು ಎಂಬುದನ್ನು ಮರೆಮಾಚುವುದಕ್ಕೆ ಇರುವ ಪ್ರಚಾರದ ಸ್ಟಂಟ್ ಆಗಿರಬಹುದು. ಪ್ರಧಾನಮಂತ್ರಿಯವರು ‘ಪ್ರಚಾರ-ಮಾಧ್ಯಮ’ವನ್ನು ಬಯಸುತ್ತಾರೆ. ಹಾಗಾಗಿ ಪೂರ್ವ ಮಾಹಿತಿ ನೀಡದೆ ಹೆಚ್ಚು ಕಡಿಮೆ ತಮ್ಮನ್ನು ತಾವೇ ಹೊಗಳಿಕೊಳ್ಳುವ ಅಧಿವೇಶನವಾಗಿರಬಹುದು.

2. 2024 ರ ಲೋಕಸಭೆ ಚುನಾವಣೆ ಗೆಲ್ಲುವ ವಿಶ್ವಾಸ ಹೊಂದಿದ್ದೀರಾ?

ಸಹಜವಾಗಿಯೇ ಅಂಕಿಅಂಶಗಳು ಮತ್ತು ಮತದಾನದ ಮಾದರಿಯು ನಾವು ಒಟ್ಟಾಗಿ ಹೋರಾಡಿದರೆ, ನಾವು ಯಶಸ್ವಿಯಾಗಲಿದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ, ನಾವು ಸುಮ್ಮನಿರಲು ಸಾಧ್ಯವಿಲ್ಲ, ನಾವು ಅವರ ನ್ಯೂನತೆಗಳನ್ನು ಎತ್ತಿ ತೋರಿಸಬೇಕು, ನಾವು ಒಟ್ಟಾಗಿ ಹೋರಾಡುತ್ತಿದ್ದೇವೆ. ಈ ಸಲ ನಾವು ಎನ್‌ಡಿಎ ಮೇಲೆ ವಿಜಯ ಸಾಧಿಸುತ್ತೇವೆ ಎಂಬ ನಂಬಿಕೆ, ವಿಶ್ವಾಸವಿದೆ.

3. ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಇಂಡಿಯಾ ಮೈತ್ರಿಗೆ ಸಂಬಂಧಿಸಿ ಮುಂದಿನ ಐದು ತಿಂಗಳ ಯೋಜನೆ ಏನು

ಮುಂದಿನ ಐದು ತಿಂಗಳ ಯೋಜನೆ ಏನು ಎಂಬುದನ್ನು ಈಗಲೇ ಹೇಳಲಾರೆ. ನಾವು ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಿದ್ದೇವೆ. ಸೆಪ್ಟೆಂಬರ್ 16-17 ರಂದು ಹೈದರಾಬಾದ್‌ನಲ್ಲಿ ಚುನಾವಣಾ ಸಮಿತಿ ಸಭೆಯೂ ಇದೆ. ಅಲ್ಲಿ ನಾವು ಕೆಲವು ವಿಷಯಗಳನ್ನು ನಿರ್ಧರಿಸುತ್ತೇವೆ. ಆದರೆ ನಾವು ಒಗ್ಗಟ್ಟಿನಿಂದ ಹೋರಾಡುತ್ತಿದ್ದೇವೆ. ಅದಕ್ಕಾಗಿಯೇ ನಾವು ಎಂಟರಿಂದ ಒಂಬತ್ತು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದೇವೆ. ತಾತ್ಕಾಲಿಕವಾಗಿ, ಭೋಪಾಲ್ ಎಂದು ಹೇಳಿದ್ದೇವೆ, ಆದರೆ ಅಲ್ಲಿ ವ್ಯವಸ್ಥೆ ಏನು ಎಂದು ನೋಡಿಕೊಂಡು ಮುಂದುವರಿಯುತ್ತೇವೆ. ನಾವು ಒಟ್ಟಿಗೆ ಹೋರಾಡಿದಾಗ, ಖಂಡಿತವಾಗಿಯೂ ಉತ್ತಮ ಫಲಿತಾಂಶ ಪಡೆಯುತ್ತೇವೆ. ನಾವು ಹಲವು ಬಾರಿ ಎಲ್ಲ ನಾಯಕರ ಜತೆಗೆ ಅಂದರೆ ಶರದ್ ಪವಾರ್, ನಿತೀಶ್ ಕುಮಾರ್, ತೇಜಸ್ವಿ ಯಾದವ್ ಮತ್ತು ಟಿಆರ್ ಬಾಲು ಎಲ್ಲರ ಜತೆಗೂ ಮಾತುಕತೆ ನಡೆಸಿದ್ದೇವೆ. ಕೊನೆಗೆ ನಾವು ಒಟ್ಟಾಗಿ ಪ್ರತಿ ರಾಜ್ಯಕ್ಕೂ ಹೋಗಬಹುದು ಎಂದು ಭಾವಿಸಿದ್ದೇವೆ. ಈ ಒಗ್ಗಟ್ಟಿನ ಪರಿಣಾಮವೇ ಪಾಟ್ನಾ, ಬೆಂಗಳೂರು, ಮುಂಬೈನಲ್ಲಿ ನಡೆದ ಮೈತ್ರಿಕೂಟದ ಸಭೆಗಳು. ಆದ್ದರಿಂದ ಸಂಪೂರ್ಣ ಒಗ್ಗಟ್ಟು ಮತ್ತು ವಿಶ್ವಾಸ ಎರಡೂ ಇದೆ. ಚುನಾವಣೆ ಎದುರಿಸುವುದಕ್ಕೆ ಬೇಕಾದ ಕಸರತ್ತು, ಸಮೀಕ್ಷೆಗಳು ನಡೆಯುತ್ತಿವೆ.

4. ಇಂಡಿಯಾ ಮೈತ್ರಿಯೊಳಗೆ ಸೀಟು ಹಂಚಿಕೆಯನ್ನು ಸುಲಭವಾಗಿ ಮಾಡಲಾಗುತ್ತದೆಯೇ?

ಎಲ್ಲವೂ ಅಷ್ಟು ಸುಲಭವಲ್ಲ. ಆದರೆ, ನಾವು ಹೇಗಾದರೂ ನಿಭಾಯಿಸುತ್ತೇವೆ. ನಾವು 100 ಪರ್ಸೆಂಟ್ ಯಶಸ್ವಿಯಾಗಲು ಸಾಧ್ಯವಿಲ್ಲ. ಆದಾಗ್ಯೂ ಅದು 99 ಪ್ರತಿಶತವಾಗಿದ್ದರೂ, ಒಳ್ಳೆಯದೆಂದೇ ಭಾವಿಸುತ್ತೇವೆ. ಏಕೆಂದರೆ ಯಾವುದಾದರೂ ಉತ್ತಮವೇ ಆಗಿದೆ. ಅಷ್ಟು ಸಾಧ್ಯವಾದರೆ ಸೀಟು ಹಂಚಿಕೆಯೂ ಸುಲಭವಾಗಿ ಆದೀತು.

5. ಸನಾತನ ಧರ್ಮ ಇತ್ತೀಚಿನ ದಿನಗಳಲ್ಲಿ ದೊಡ್ಡ ವಿವಾದವಾಗಿದೆ. ನಿಮ್ಮ ಆಲೋಚನೆಗಳೇನು?

ನಾನು ರಾಜಕೀಯದಲ್ಲಿರುವುದರಿಂದ ನಾನು ಧರ್ಮದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಾನು ಈ ವಿವಾದಗಳನ್ನು ರಾಜಕೀಯವಾಗಿ ನಿಭಾಯಿಸುತ್ತೇನೆ. ಇವೆರಡೂ ಪ್ರತ್ಯೇಕವಾಗಿರುವ ವಿಚಾರ. ಆದ್ದರಿಂದ ಧಾರ್ಮಿಕ ವಿಚಾರಗಳನ್ನು ರಾಜಕೀಯದೊಂದಿಗೆ ಬೆರೆಸಲು ನಾನು ಬಯಸುವುದಿಲ್ಲ.

6. ಭಾರತ್ ವರ್ಸಸ್ ಇಂಡಿಯಾದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕಾಂಗ್ರೆಸ್ ಸದಸ್ಯರು ಭಾರತ್ ಮಾತಾ ಕಿ ಜೈ ಎಂದು ಹೇಳಿದಾಗ, ನಾವು ಅದನ್ನು ಅರ್ಥೈಸುವುದಿಲ್ಲವೇ? ನಾವು ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದ್ದೇವೆ, ನಾವು ಅದನ್ನು ಯಾರದೋ ಸೂಚನೆಯ ಮೇರೆಗೆ ಮಾಡಿದ್ದೇವೆಯೇ? ನಾವು ಭಾರತ್ ಜೋಡೋ ಯಾತ್ರೆಯನ್ನು ಹಳ್ಳಿಯಿಂದ ಹಳ್ಳಿಗೆ 4,500 ಕಿಲೋಮೀಟರ್ ಪಾದಯಾತ್ರೆ ಎಂದು ಪ್ರಚಾರ ಮಾಡಿದ್ದೇವೆ. ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಮುಂತಾದವುಗಳನ್ನು ಮುಂದಿಟ್ಟುಕೊಂಡು ಮತಗಳಿಕೆಗಾಗಿ ಪ್ರಯತ್ನಿಸಬಹುದು. ಅಲ್ಲೆಲ್ಲ ಇಂಡಿಯಾ ಹೆಸರು ಬಳಸಬಹುದು. ಈಗ ಭಾರತದ ಹೆಸರನ್ನು ಪ್ರಸ್ತಾಪಿಸಿ ಪ್ರಚಾರ ಮಾಡುತ್ತಾರೆ. ಇಂಡಿಯಾ ಹೆಸರನ್ನು ದ್ವೇಷಿಸುತ್ತಿದ್ದಾರೆ.

7. ವಿಶೇಷ ಅಧಿವೇಶನದಲ್ಲಿ ಭಾರತದ ಹೆಸರನ್ನು ಭಾರತ್ ಎಂದು ಬದಲಾಯಿಸುವ ನಿರ್ಣಯವೇನಾದರೂ ಬಂದರೆ ಅದನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ?

ಇಲ್ಲ ಅದು ನನಗೆ ಗೊತ್ತಿಲ್ಲ. ಬರಲಿ, ನೋಡೋಣ

(ಅನುವಾದ - ಉಮೇಶ್ ಕುಮಾರ್ ಶಿಮ್ಲಡ್ಕ)

ಹಿಂದೂಸ್ತಾನ್ ಟೈಮ್ಸ್‌ಗೆ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಸಂದರ್ಶನದ ಪೂರ್ಣ ಓದಿಗೆ - HT Interview: If Opposition fights together, we are going to succeed, says Congress chief Kharge