ಚರ್ಚ್‌ ಆರ್ಫ್ ನಾರ್ತ್ ಇಂಡಿಯಾ ಸೇರಿ 5 ಎನ್‌ಜಿಒಗಳ ವಿದೇಶಿ ದೇಣಿಗೆ ಪರವಾನಗಿ ರದ್ದುಗೊಳಿಸಿದ ಕೇಂದ್ರ ಸರ್ಕಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚರ್ಚ್‌ ಆರ್ಫ್ ನಾರ್ತ್ ಇಂಡಿಯಾ ಸೇರಿ 5 ಎನ್‌ಜಿಒಗಳ ವಿದೇಶಿ ದೇಣಿಗೆ ಪರವಾನಗಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಚರ್ಚ್‌ ಆರ್ಫ್ ನಾರ್ತ್ ಇಂಡಿಯಾ ಸೇರಿ 5 ಎನ್‌ಜಿಒಗಳ ವಿದೇಶಿ ದೇಣಿಗೆ ಪರವಾನಗಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಚರ್ಚ್‌ ಆರ್ಫ್ ನಾರ್ತ್ ಇಂಡಿಯಾ ಸೇರಿ 5 ಎನ್‌ಜಿಒಗಳ ವಿದೇಶಿ ದೇಣಿಗೆ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ವಿದೇಶಿ ಧನ ಸಹಾಯ ಕಾನೂನು ಉಲ್ಲಂಘಿಸಿದ ಆರೋಪ ಈ ಸಂಸ್ಥೆಗಳ ಮೇಲಿದ್ದು, ಇದೇ ರೀತಿ ಹಲವು ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿ ರದ್ದಾಗಿವೆ. ಈ ಕುರಿತ ವಿವರ ವರದಿ ಇಲ್ಲಿದೆ.

ಕೇಂದ್ರ ಗೃಹ ಸಚಿವಾಲಯ 5 ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ವಿದೇಶಿ ದೇಣಿಗೆ ನೋಂದಣಿ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ರದ್ದುಗೊಳಿಸಿದೆ. (ಸಾಂಕೇತಿಕ ಚಿತ್ರ)
ಕೇಂದ್ರ ಗೃಹ ಸಚಿವಾಲಯ 5 ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ವಿದೇಶಿ ದೇಣಿಗೆ ನೋಂದಣಿ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ರದ್ದುಗೊಳಿಸಿದೆ. (ಸಾಂಕೇತಿಕ ಚಿತ್ರ) (HT News)

ನವದೆಹಲಿ: ವಿದೇಶಿ ಧನ ಸಹಾಯ ಕಾನೂನು ಉಲ್ಲಂಘಿಸಿದ ಆರೋಪದ ಕಾರಣ ಚರ್ಚ್‌ ಆರ್ಫ್ ನಾರ್ತ್ ಇಂಡಿಯಾ (ಸಿಎನ್‌ಐ-ಎಸ್‌ಬಿಎಸ್‌ಎಸ್‌) ಸೇರಿ 5 ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ವಿದೇಶಿ ದೇಣಿಗೆ ನೋಂದಣಿ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ಗೃಹ ಸಚಿವಾಲಯ ರದ್ದುಗೊಳಿಸಿದೆ.

ಈ ವಿದ್ಯಮಾನದ ಅರಿವು ಹೊಂದಿರುವ ಸಚಿವಾಲಯದ ಜನರು ಈ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ಬುಧವಾರ ನೀಡಿದ್ದಾರೆ. ಇದಕ್ಕೂ ಮೊದಲು, ಗೃಹ ಸಚಿವಾಲಯವು 2020ರಿಂದೀಚೆಗೆ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೆಬಲ್ ಟ್ರಸ್ಟ್ ಸೇರಿ ಹಲವು ಎನ್‌ಜಿಒಗಳ ವಿದೇಶಿ ದೇಣಿಗೆ ನೋಂದಣಿ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಗಳನ್ನು ರದ್ದುಗೊಳಿಸಿತ್ತು.

ಸಿಎನ್ಐ ಸಿನೋಡಿಕಲ್ ಬೋರ್ಡ್ ಆಫ್ ಸೋಷಿಯಲ್ ಸರ್ವಿಸ್‌ (ಸಿಎನ್ಐ-ಎಸ್ಬಿಎಸ್ಎಸ್) ಗೆ ಸಂಬಂಧಿಸಿದ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸುವ ಕಾರ್ಯವು ಕೆಲವು ವಾರಗಳ ಹಿಂದೆ ನಡೆದಿತ್ತು. ಇದಲ್ಲದೆ, ವಾಲೆಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ (ವಿಎಚ್ಎಐ), ಇಂಡೋ-ಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ (ಐಜಿಎಸ್ಎಸ್ಎಸ್), ಚರ್ಚ್ ಆಕ್ಸಿಲರಿ ಫಾರ್ ಸೋಷಿಯಲ್ ಆಕ್ಷನ್ (ಸಿಎಎಸ್ಎ) ಮತ್ತು ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ (ಇಎಫ್ಒಐ) ವಿದೇಶಿ ಧನಸಹಾಯ ಪರವಾನಗಿಗಳನ್ನು ರದ್ದುಪಡಿಸಿದ ಇತರ ಎನ್‌ಜಿಒಗಳಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಎಫ್‌ಸಿಆರ್‌ಎ ಪರವಾನಗಿ ರದ್ದು ಕ್ರಮ ಯಾವಾಗ?

ವಿದೇಶಿ ದೇಣಿಗೆ ನೋಂದಣಿ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ಗೃಹ ಸಚಿವಾಲಯವು ರದ್ದುಗೊಳಿಸಬೇಕಾದರೆ ಕೆಲವು ಮಾನದಂಡಗಳನ್ನು ಅನುಸರಿಸುತ್ತದೆ. ಇದರಂತೆ, ಎಫ್‌ಸಿಆರ್‌ಎಗೆ ಸಂಬಂಧಿಸಿದ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ಸಂಘಟನೆ ಅಥವಾ ಸರ್ಕಾರೇತರ ಸಂಸ್ಥೆಯು ಈ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಸ್ಪಷ್ಟಪಡಿಸಿದೆ.

ಈ ವರ್ಷದ ಆರಂಭದಲ್ಲಿ, ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ಪರವಾನಗಿಯನ್ನು ಸಹ ರದ್ದುಗೊಳಿಸಿದೆ. ಈ ಸಂಸ್ಥೆ ಎಫ್‌ಸಿಆರ್‌ಎ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಪರವಾನಗಿಯನ್ನು ಗೃಹ ಸಚಿವಾಲಯ ರದ್ದುಗೊಳಿಸಿತು.

ಎಫ್‌ಸಿಆರ್‌ಎ ನಿಯಮ ಪರಿಷ್ಕರಣೆ, ತಿದ್ದುಪಡಿಗಳ ಪರಿಣಾಮ

ಕೇಂದ್ರ ಸರ್ಕಾರವು 2020ರಿಂದೀಚೆಗೆ ಎಫ್‌ಸಿಆರ್‌ಎ ನಿಯಮ ಬಿಗಿಗೊಳಿಸಿದೆ. ಹಲವು ತಿದ್ದುಪಡಿಗಳನ್ನು ಮಾಡಿದ್ದು, ರಾಜೀವ್ ಗಾಂಧಿ ಫೌಂಡೇಶನ್ (ಆರ್ಜಿಎಫ್), ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ (ಆರ್ಜಿಸಿಟಿ) ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ಸೇರಿ ವಿವಿಧ ಎನ್‌ಜಿಒಗಳ ಪರವಾನಗಿಗಳನ್ನು ರದ್ದುಗೊಳಿಸಿದೆ.

ಗೃಹ ಸಚಿವಾಲಯದ ಎಫ್‌ಸಿಆರ್‌ಎ ಘಟಕವು 2019 ಮತ್ತು 2022ರ ನಡುವೆ ಎಫ್‌ಸಿಆರ್‌ಎ ನೋಂದಾಯಿತ ಅಥವಾ ಪೂರ್ವಾನುಮತಿ ಪಡೆದ ಕನಿಷ್ಠ 335 ಎನ್‌ಜಿಒಗಳು ಮತ್ತು ಸಂಘಗಳ ತಪಾಸಣೆ, ಲೆಕ್ಕಪರಿಶೋಧನೆ ನಡೆಸಿತು. ಈ ಸಂದರ್ಭದಲ್ಲಿ ಅನೇಕ ಸಂಸ್ಥೆಗಳು, ಎನ್‌ಜಿಒಗಳು ನಿಯಮ ಉಲ್ಲಂಘಸಿರುವುದು ಗಮನಸೆಳೆದಿದೆ. ಹೀಗಾಗಿ ಅವುಗಳ ವಿರುದ್ಧ ಕ್ರಮ ತೆಗೆದುಕೊಂಡು ಕೆಲವು ಸಂಸ್ಥೆಗಳ, ಸಂಘಟನೆಗಳ ಎಫ್‌ಸಿಆರ್‌ಎ ನೋಂದಣಿ ಪರವಾನಗಿ ರದ್ದುಗೊಳಿಸಿತು.

ಇನ್ನು 2020ರ ಸೆಪ್ಟೆಂಬರ್‌ನಲ್ಲಿ ಎಫ್‌ಸಿಆರ್‌ಎ ಕಾಯ್ದೆ ತಿದ್ದುಪಡಿಯಾಗಿದ್ದು, ಸರ್ಕಾರಿ ನೌಕರರು ವಿದೇಶಿ ಧನ ಸಹಾಯ ಪಡೆಯುವುದನ್ನು ನಿಷೇಧಿಸಿತು. ಎನ್‌ಜಿಒಗಳ ಪ್ರತಿಯೊಬ್ಬ ಪದಾಧಿಕಾರಿಗೆ ಆಧಾರ್ ಕಡ್ಡಾಯ ಮಾಡಿತು. ಆಡಳಿತಾತ್ಮಕ ಉದ್ದೇಶಗಳಿಗಾಗಿ ವಿದೇಶಿ ನಿಧಿಯ ಶೇಕಡ 20 ಕ್ಕಿಂತ ಹೆಚ್ಚು ಬಳಸುವುದನ್ನು ತಿದ್ದುಪಡಿ ಮಾಡಿದ ಕಾನೂನು ನಿರ್ಬಂಧಿಸುತ್ತದೆ. ಈ ಮಿತಿ ಇಲ್ಲಿಯವರೆಗೆ ಶೇಕಡ 50 ಆಗಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.