ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mumbai Dust Storm 2024: ಮುಂಬೈನಲ್ಲಿ ಭಾರೀ ಗಾಳಿಗೆ ಹೋರ್ಡಿಂಗ್‌ ಕುಸಿದು ನಾಲ್ವರ ಸಾವು, ಹಲವರ ಸ್ಥಿತಿ ಗಂಭೀರ, ಹೇಗಿತ್ತು ಸನ್ನಿವೇಶ

Mumbai Dust Storm 2024: ಮುಂಬೈನಲ್ಲಿ ಭಾರೀ ಗಾಳಿಗೆ ಹೋರ್ಡಿಂಗ್‌ ಕುಸಿದು ನಾಲ್ವರ ಸಾವು, ಹಲವರ ಸ್ಥಿತಿ ಗಂಭೀರ, ಹೇಗಿತ್ತು ಸನ್ನಿವೇಶ

ಭಾರೀ ಧೂಳಿನ ಗಾಳಿಯ ನಡುವೆ ಬೃಹತ್‌ ಗಾತ್ರದ ಹೋರ್ಡಿಂಗ್‌ ಕುಸಿದು ಬಿದ್ದು ನಾಲ್ವರು ಮೃತಪಟ್ಟರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ ಮಹಾನಗರದಲ್ಲಿ ಭಾರೀ ಗಾಳಿಗೆ ಕುಸಿದು ಬಿದ್ದಿರುವ ಹೋರ್ಡಿಂಗ್‌
ಮುಂಬೈ ಮಹಾನಗರದಲ್ಲಿ ಭಾರೀ ಗಾಳಿಗೆ ಕುಸಿದು ಬಿದ್ದಿರುವ ಹೋರ್ಡಿಂಗ್‌

ಮುಂಬೈ: ಮುಂಬೈ ಮಹಾನಗರದಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಧೂಳು ಮಿಶ್ರಿತ ಬಿರುಗಾಳಿ ದೊಡ್ಡ ಗಾತ್ರದ ಹೋರ್ಡಿಂಗ್‌ ಕುಸಿದು ಬಿದ್ದು ಅದರಡಿ ಸಿಲುಕಿದ್ದ ನೂರಕ್ಕೂ ಹೆಚ್ಚು ಮಂದಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು ಜೀವನ್ಮರಣದ ನಡುವೆ ಹೋರಾಟ ನ

ಟ್ರೆಂಡಿಂಗ್​ ಸುದ್ದಿ

ಡೆಸಿದ್ದಾರೆ. ಉರುಳಿಬಿದ್ದ ಹೋರ್ಡಿಂಗ್‌ ಅನ್ನು ತೆರವುಗೊಳಿಸುವ ಕಾರ್ಯ ಮುಂದುವರೆದಿದ್ದು. ಇನ್ನೂ ಹಲವರು ಅದರಡಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ.ಮುಂಬೈನ ಘಾಟಕೋಪರ್‌ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಇದು ಜನಜಂಗುಳಿ ಪ್ರದೇಶವಾಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಮುಂಬೈ ನಗರದಲ್ಲಿ ಧೂಳು ಮಿಶ್ರಿತ ಗಾಳಿಯ ವಾತಾವರಣ ಸೋಮವಾರ ಮಧ್ಯಾಹ್ನದಿಂದಲೇ ಇತ್ತು. ಸಂಜೆಯಾಗುತ್ತಲೇ ಧೂಳು ಗಾಳಿಯ ಪ್ರಮಾಣ ಹೆಚ್ಚಾಯಿತು. ಮುಂಬೈ ನಗರದ ಹಲವು ಭಾಗಗಳಲ್ಲಿ ಧೂಳು ಮುಗಿಲವರೆಗೂ ಕಾಣುತ್ತಲೇ ಇತ್ತು. ಗಾಳಿಯೂ ಇದ್ದುದರಿಂದ ಜನ ಭೀತಿಗೊಂಡಿದ್ದರು. ಇದೇ ವೇಳೆ ಘಾಟ್‌ಕೋಪರ್‌ ಭಾಗದಲ್ಲಿ ಭಾರೀ ಗಾತ್ರದ ಹೋರ್ಡಿಂಗ್‌ ಗಾಳಿಯ ರಭಸಕ್ಕೆ ಏಕಾಏಕಿ ಕುಸಿದು ಬಿದ್ದಿತು. ಕಬ್ಬಿಣದ ರಾಡ್‌ಗಳು ಮುರಿದು ಕಬ್ಬಿಣ, ಸಿಮೆಂಟ್‌ನಿಂದ ತಯಾರಿಸಿದ್ದ ಹೋರ್ಡಿಂಗ್‌ ಒಮ್ಮೆಲೆ ಕುಸಿದು ಬಿದ್ದೇ ಬಿಟ್ಟಿತು.

ಪಕ್ಕದಲ್ಲಿಯೇ ನೂರಾರು ವಾಹನಗಳು ನಿಂತಿದ್ದವು. ಕಾರುಗ್ ಸಂಖ್ಯೆಯೂ ಅಧಿಕವಾಗಿತ್ತು. ಕೆಲವರು ಕಾರಿನಲ್ಲಿ ಕುಳಿತಿದ್ದರೆ, ಇನ್ನು ಕೆಲವರು ಹೊರಗಡೆ ಇದ್ದರು. ಅಲ್ಲಿಯೇ ಪೆಟ್ರೋಲ್‌ ಬಂಕ್‌ ಕೂಡ ಇದ್ದುದರಿಂದ ಪಕ್ಕದಲ್ಲಿಯೇ ಹೋರ್ಡಿಂಗ್‌ ಉರುಳಿ ಬಿದ್ದಿತು. ಬಿದ್ದ ರಭಸಕ್ಕೆ ಹಲವರಿಗೆ ಏಟು ಬಿದ್ದರೆ, ಕೆಲವರು ಅಲ್ಲಿಂದ ತಪ್ಪಿಸಿಕೊಂಡರು. ಹಲವರು ಅದರಡಿ ಸಿಲುಕಿ ಜೀವ ಬಿಟ್ಟರು. ಈಗಾಗಲೇ ನಾಲ್ವರ ದೇಹಗಳನ್ನು ತೆಗೆಯಲಾಗಿದ್ದು. 59 ಮಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಇತರೆ ರಕ್ಷಣಾ ಪಡೆಗಳು ಹೋರ್ಡಿಂಗ್‌ ಅಡಿ ಸಿಲುಕಿದವರನ್ನು ಹೊರ ತೆಗೆಯಲು ಹರಸಾಹಸ ಪಟ್ಟರು. ಸೋಮವಾರ ರಾತ್ರಿವರೆಗೂ ಕಾರ್ಯಾಚರಣೆ ಮುಂದುವರಿದಿತ್ತು.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮುಂಬೈ ಮಹಾನಗರದಲ್ಲಿ ಅನಧಿಕೃತ ಹೋರ್ಡಿಂಗ್‌ಗಳು. ಸಂಚಾರ ದಟ್ಟಣೆ ನಡುವೆ ಜನರಿಗೆ ತೊಂದರೆಯಾಗುವ ರೀತಿ ಇರುವ ಹೋರ್ಡಿಂಗ್‌ಗಳ ನಿಗ್ರಹಕ್ಕೆ ಕ್ರಮ ವಹಿಸಲಾಗುವುದು ಎಂದು ಫಡ್ನವೀಸ್‌ ಹೇಳಿದರು.

ಮುಂಬೈನಲ್ಲಿನ ಧೂಳು ಮಿಶ್ರಿತ ಬಿರುಗಾಳಿ, ಹೋರ್ಡಿಂಗ್‌ಗೆ ಕುಸಿದು ಬಿದ್ದ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಮುಂಬೈ ನಗರದಲ್ಲಿ ಧೂಳು ಮಿಶ್ರಿತ ಗಾಳಿಯಿಂದಾಗಿ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಥಾಣೆ ಹಾಗೂ ಮುಳುಂದ್‌ ಭಾಗದಲ್ಲೂ ಹೆಚ್ಚಿನ ಅಡಚಣೆಯಾಗಿದೆ. ಕೆಲವು ಭಾಗದಲ್ಲಿ ಮೆಟ್ರೋ ಸೇವೆಯನ್ನೂ ಬಂದ್‌ ಮಾಡಲಾಗಿದೆ.

ಮುಂಬೈನಲ್ಲಿ ಭಾರೀ ಪ್ರಮಾಣದ ಬಿರುಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು. ಕೆಲವು ಕಡೆಗಳಲ್ಲಿ ಮಳೆಯಾಗುವ ಮುನ್ನೆಚ್ಚರಿಕೆಯನ್ನೂ ನೀಡಿತ್ತು.

ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ