Kannada News  /  Nation And-world  /  India News Narendra Modi Birthday Pm Modi Will Turn 73 Sept 17 How He Celebrated Birthday Last 5year News In Kannada Uks

Narendra Modi Birthday: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ, ಕಳೆದ 5 ವರ್ಷ ಅವರ ಜನ್ಮದಿನಾಚರಣೆ ಹೀಗಿತ್ತು

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಭಾನುವಾರ (ಸೆ.17). ಅವರಿಗೆ ಇನ್ನು 73 ವರ್ಷ. (ಕಡತ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಭಾನುವಾರ (ಸೆ.17). ಅವರಿಗೆ ಇನ್ನು 73 ವರ್ಷ. (ಕಡತ ಚಿತ್ರ) (PTI)

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾಳೆಯಿಂದ 73 ವರ್ಷ. ಹೌದು ನಾಳೆ ಅವರ ಜನ್ಮದಿನ. ತನ್ನಿಮಿತ್ತ ಅವರು ನಾಳೆ (ಸೆ.17) ದ್ವಾರಕಾದಲ್ಲಿರುವ ಯಶೋಭೂಮಿ ಕನ್‌ವೆನ್ಶನ್ ಸೆಂಟರ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕಳೆದ 5 ವರ್ಷಗಳ ಅವಧಿಯಲ್ಲಿ ಅವರ ಹುಟ್ಟುಹಬ್ಬ ಆಚರಣೆಯ ಕಡೆಗೊಂದು ನೋಟ.

ನವದೆಹಲಿಯಲ್ಲಿ ಜಿ20 ಶೃಂಗ ಆಯೋಜನೆಯ ಯಶಸ್ಸು ಮತ್ತು ನಾಯಕತ್ವದ ಜನಪ್ರಿಯತೆ ಹೆಚ್ಚಳದ ಖುಷಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಇದೇ ಭಾನುವಾರ (ಸೆ.17) ದಿಂದ 73 ವರ್ಷ.

ಟ್ರೆಂಡಿಂಗ್​ ಸುದ್ದಿ

ಮಾರ್ನಿಂಗ್ ಕನ್ಸಲ್ಟ್‌ನ ಇತ್ತೀಚಿನ ಸಮೀಕ್ಷೆಯ ಪ್ರಕಾರ ಚುನಾಯಿತ ನಾಯಕರಲ್ಲಿ ಜಾಗತಿಕವಾಗಿ ಹೆಚ್ಚಿನ ಅನುಮೋದನೆ ರೇಟಿಂಗ್ ಅನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಪಡೆದುಕೊಂಡರು. ಶೇಕಡ 76 ರಷ್ಟು ಜನ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಅನುಮೋದಿಸಿದರೆ ಶೇಕಡ 18 ಜನ ಅಸಮ್ಮತಿ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಸತತವಾಗಿ ಜನಪ್ರಿಯತೆಯ ಸಮೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಅನುಮೋದನೆಯ ರೇಟಿಂಗ್ ಹೆಚ್ಚಾಗಿ 70ರ ದಶಕದ ಆಸುಪಾಸಿನಲ್ಲಿ ಸುಳಿದಾಡುತ್ತಿದೆ.

ಪಿಎಂ ಮೋದಿ ಜನ್ಮದಿನಾಚರಣೆ ಬಿಜೆಪಿ ಪ್ಲಾನ್‌ ಏನು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯನ್ನು ಬಿಜೆಪಿ ವಿಭಿನ್ನ ರೀತಿಯಲ್ಲಿ ಆಯೋಜಿಸಲು ಮುಂದಾಗಿದೆ. ಉದಾಹರಣೆಗೆ ತ್ರಿಪುರಾದಲ್ಲಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಆಚರಣೆಗೆ ‘ನಮೋ ವಿಕಾಸ್ ಉತ್ಸವ್’ ಎಂದು ಬಿಜೆಪಿ ಘೋಷಿಸಿದೆ. ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಕುಮಾರಘಾಟ್‌ ಪಿಡಬ್ಲ್ಯುಡಿ ಗ್ರೌಂಡ್‌ನಲ್ಲಿ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಆಚರಣೆಗೆ ಚಾಲನೆ ಸಿಗಲಿದೆ. ದೆಹಲಿ ಮತ್ತು ತ್ರಿಪುರಾದ ಪಕ್ಷದ ನಾಯಕರು ಭಾಗವಹಿಸುತ್ತಾರೆ.

ಮೋದಿ ಅವರಿಗೆ 73 ವರ್ಷ ಆಗುತ್ತಿರುವ ಕಾರಣ 73 ಆದ್ಯತಾ ಕುಟುಂಬಗಳಿಗೆ ಪಿಜಿ ರೇಷನ್‌ ಕಾರ್ಡ್, ವಿದ್ಯಾರ್ಥಿಗಳಿಗೆ 73 ಭಗವದ್ಗೀತೆ ಪ್ರತಿ, 73 ವಿಶೇಷ ಚೇತನರಿಗೆ ಅವರಿಗೆ ಅಗತ್ಯ ಉಪಕರಣಗಳನ್ನು ಒದಗಿಸಲು ಬಿಜೆಪಿ ಮುಂದಾಗಿದೆ.

ಗುಜರಾತ್‌ನಲ್ಲಿ ಮೋದಿ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 17ರಂದು ಶುರುಮಾಡಿ, ಗಾಂಧಿ ಜಯಂತಿ ದಿನ ಕೊನೆಗೊಳಿಸಲಿದೆ. ನವಸಾರಿ ಜಿಲ್ಲೆಯಲ್ಲಿ 30,000 ಶಾಲಾ ಬಾಲಕಿಯರಿಗೆ ಬ್ಯಾಂಕ್ ಖಾತೆ ತೆರೆಯುವ ಯೋಜನೆ ರೂಪಿಸಿಕೊಂಡಿದೆ. ಇದಲ್ಲದೆ, ಎಲ್ಲ ಜಿಲ್ಲೆಗಳಲ್ಲೂ ರಕ್ತದಾನ ಶಿಬಿರವನ್ನು ಬಿಜೆಪಿ ಯುವ ಮೋರ್ಚಾ ಆಯೋಜಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಹಿಂದಿನ 5 ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬ ಆಚರಿಸಿಕೊಂಡು ಬಂದಿರುವುದು ಹೀಗೆ…

ಪ್ರಧಾನಿ ನರೇಂದ್ರ ಮೋದಿಯವರು 1950ರ ಸೆಪ್ಟೆಂಬರ್ 17 ರಂದು ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಗುಜರಾತ್‌ನ ವಡ್‌ನಗರದಲ್ಲಿ ಜನಿಸಿದರು.

2022ರಲ್ಲಿ ಪ್ರಧಾನಿ ಮೋದಿ ಜನ್ಮದಿನಾಚರಣೆ

ಪ್ರಧಾನಿ ಮೋದಿ ಕಳೆದ ವರ್ಷ (2022ರಲ್ಲಿ) ಹುಟ್ಟುಹಬ್ಬದ ದಿನ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಮದು ಮಾಡಿದ ಎಂಟು ಚಿರತೆಗಳನ್ನು ಬಿಡುಗಡೆ ಮಾಡಿದರು.

2021ರಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬ ಆಚರಣೆ

ಪ್ರಧಾನಿ ಮೋದಿ ಅವರ 2021ರ ಜನ್ಮದಿನದಂದು, ವಿಶೇಷ ಅಭಿಯಾನದ ಭಾಗವಾಗಿ ಭಾರತವು 2.26 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಿದೆ. ಇದಲ್ಲದೆ, ಪ್ರಧಾನ ಮಂತ್ರಿಗೆ ಉಡುಗೊರೆಯಾಗಿ ನೀಡಿದ ಸ್ಮರಣಿಕೆಗಳ ಇ-ಹರಾಜನ್ನು ಸಹ ನಡೆಸಲಾಯಿತು.

2020ರಲ್ಲಿ ಪ್ರಧಾನಿ ಮೋದಿ ಜನ್ಮದಿನಾಚರಣೆ

ಪ್ರಧಾನಿ ಮೋದಿಯವರ 2020 ರ ಜನ್ಮದಿನದ ಸಂದರ್ಭದಲ್ಲಿ ಕೋವಿಡ್ ಇದ್ದ ಕಾರಣ ವಿಶೇಷ ಆಚರಣೆ ಇರಲಿಲ್ಲ. ಆದಾಗ್ಯೂ, ಬಿಜೆಪಿ ಈ ಸಂದರ್ಭವನ್ನು 'ಸೇವಾ ಸಪ್ತಾಹ' ಎಂದು ಗುರುತಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತು. ಪಕ್ಷದ ಕಾರ್ಯಕರ್ತರು ನಿರ್ಗತಿಕರಿಗೆ ಪಡಿತರ ವಿತರಿಸಿದರು ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಿದರು. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಮೋದಿ ಸರ್ಕಾರದ 243 "ಅಭೂತಪೂರ್ವ" ಸಾಧನೆಗಳನ್ನು ಎತ್ತಿ ತೋರಿಸುವ "ಲಾರ್ಡ್ ಆಫ್ ರೆಕಾರ್ಡ್ಸ್" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.

2019ರಲ್ಲಿ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಆಚರಣೆ

ಪ್ರಧಾನಿ ಮೋದಿ ಅವರು ಈ ಜನ್ಮದಿನದಂದು, ಮೊದಲು ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದವನ್ನು ಪಡೆದರು. ನಂತರ ಅವರು ಕೆವಾಡಿಯಾ ಗುಜರಾತ್‌ನಲ್ಲಿ ನಡೆದ 'ನಮಾಮಿ ನರ್ಮದಾ' ಉತ್ಸವದಲ್ಲಿ ಭಾಗವಹಿಸಿದರು. ‘ಏಕತಾ ಪ್ರತಿಮೆ’ಯ ಪಕ್ಕದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

2018ರಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬ

ಪ್ರಧಾನಿ ನರೇಂದ್ರ ಮೋದಿ ಅವರ 68ನೇ ಹುಟ್ಟುಹಬ್ಬದ ದಿನ ತಮ್ಮ ಸಂಸತ್ ಕ್ಷೇತ್ರ ವಾರಾಣಸಿಗೆ ಹೋಗಿ ಅಲ್ಲಿ ಕಾಶಿ ವಿಶ್ವನಾಥನ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಕಾಶಿ ವಿದ್ಯಾಪೀಠ ಬ್ಲಾಕ್‌ನ ನರೌರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಜತೆಗೆ ಒಡನಾಡಿದರು.