ಕನ್ನಡ ಸುದ್ದಿ  /  Nation And-world  /  India News Nation S First Toilet Fitted Wap7 Train Engine Rolled Out From Kanpur Electric Loco Shed Uks

ರೈಲು ಎಂಜಿನ್‌ ಬೋಗಿಯಲ್ಲೇ ಟಾಯ್ಲೆಟ್‌, ಮೊದಲ ಮೂಲ ಮಾದರಿ ಕಾನ್ಪುರದಲ್ಲಿ ಸಿದ್ಧ; ರೈಲು ಚಾಲಕಿಯರ ಬಹುಕಾಲದ ಸಂಕಷ್ಟಕ್ಕೆ ಪರಿಹಾರ

Indian Railways: ಭಾರತೀಯ ರೈಲ್ವೆ ಇತಿಹಾಸದಲ್ಲಿ ರೈಲ್ವೆ ಚಾಲಕಿ/ಚಾಲಕರ ಯೋಗಕ್ಷೇಮದ ಕಡೆಗೆ ಗಮನಹರಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಅದರ ಭಾಗವಾಗಿ ರೈಲು ಎಂಜಿನ್‌ ಬೋಗಿಯಲ್ಲೇ ಟಾಯ್ಲೆಟ್‌ ಇರುವಂತಹ ಮೊದಲ ಮೂಲ ಮಾದರಿ ಕಾನ್ಪುರದಲ್ಲಿ ಸಿದ್ಧವಾಗಿದೆ. ರೈಲು ಚಾಲಕಿಯರ ಬಹುಕಾಲದ ಸಂಕಷ್ಟಕ್ಕೆ ಪರಿಹಾರ ಸಿಕ್ಕುವ ನಿರೀಕ್ಷೆ ಹೆಚ್ಚಾಗಿದೆ.

ಹೊಸ ಡಬ್ಲ್ಯುಎಪಿ 7 (WAP7) ರೈಲು ಎಂಜಿನ್. ರೈಲು ಎಂಜಿನ್‌ ಬೋಗಿಯಲ್ಲೇ ಟಾಯ್ಲೆಟ್‌ ಹೊಂದಿರುವ ಮೊದಲ ಮೂಲ ಮಾದರಿ ಕಾನ್ಪುರದಲ್ಲಿ ಸಿದ್ಧವಾಗಿದೆ.
ಹೊಸ ಡಬ್ಲ್ಯುಎಪಿ 7 (WAP7) ರೈಲು ಎಂಜಿನ್. ರೈಲು ಎಂಜಿನ್‌ ಬೋಗಿಯಲ್ಲೇ ಟಾಯ್ಲೆಟ್‌ ಹೊಂದಿರುವ ಮೊದಲ ಮೂಲ ಮಾದರಿ ಕಾನ್ಪುರದಲ್ಲಿ ಸಿದ್ಧವಾಗಿದೆ. (trainwalebhaiya)

ನಿತ್ಯವೂ ಲಕ್ಷಾಂತರ ಜನ ರೈಲಿನಲ್ಲಿ ಸಂಚರಿಸುತ್ತಾರೆ. ಆದರೆ, ಇವರಲ್ಲಿ ಬಹುತೇಕರಿಗೆ ರೈಲು ಚಾಲಕಿ/ಚಾಲಕರ ಸಂಕಷ್ಟದ ಅರಿವು ಇರಲಾರದು. ರೈಲು ಬೋಗಿಗಳಲ್ಲಿ ಟಾಯ್ಲೆಟ್ ಇದೆ. ಆದರೆ ರೈಲು ಎಂಜಿನ್‌ ಬೋಗಿಯಲ್ಲಿ ಟಾಯ್ಲೆಟ್ ಇಲ್ಲ. ಹೀಗಾಗಿ ರೈಲು ಚಾಲಕಿ/ಚಾಲಕರು ದೀರ್ಘ ಪ್ರಯಾಣದ ವೇಳೆ ಕನಿಷ್ಠ 9 ಗಂಟೆ ಕಾಲ ಮೂತ್ರ ವಿಸರ್ಜನೆ ಮಾಡದೇ ಕರ್ತವ್ಯ ನಿರತರಾಗಿರುತ್ತಾರೆ!

ಟಾಯ್ಲೆಟ್ ಫಿಟ್ ಮಾಡಿರುವ ರೈಲು ಎಂಜಿನ್‌ನ ಮೂಲ ಮಾದರಿಯೊಂದು ಕಾನ್ಪುರ ಎಲೆಕ್ಟ್ರಿಕ್ ಲೋಕೋ ಶೆಡ್‌ನಲ್ಲಿ ಸಿದ್ಧವಾಗಿದೆ. ಇದು ಭಾರತದ ಮೊದಲ ಟಾಯ್ಲೆಟ್‌ ಫಿಟ್ ಮಾಡಿದ ರೈಲು ಎಂಜಿನ್‌. ಇದನ್ನು ಡಬ್ಲ್ಯುಎಪಿ7 ಮೂಲ ಮಾದರಿಯ ಎಂಜಿನ್‌ನಲ್ಲಿ ಅಳವಡಿಸಲಾಗಿದೆ. ಇದರ ಕೆಲವು ಫೋಟೋಸ್ ಮತ್ತು ಒಂದು ವಿಡಿಯೋ ಎಕ್ಸ್‌ನಲ್ಲಿ ಶೇರ್ ಆಗಿದೆ.

ಟಾಯ್ಲೆಟ್ ಫಿಟ್ ಮಾಡಿರುವ ರೈಲು ಎಂಜಿನ್‌ನ ಮೂಲ ಮಾದರಿ

ಸೌರಭ್ ಎನ್ನುವವರು ಈ ವಿದ್ಯುತ್ ಚಾಲಿತ ರೈಲು ಎಂಜಿನ್‌ನ ಮೂಲ ಮಾದರಿಯ ಫೋಟೋಸ್ ಮತ್ತು ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ. “ಭಾರತದ ಮೊದಲ ಟಾಯ್ಲೆಟ್ ಅಳವಡಿಸಿದ WAP7 ಅನ್ನು ಕಾನ್ಪುರ್ ಎಲೆಕ್ಟ್ರಿಕ್ ಲೊಕೊ ಶೆಡ್‌ನಲ್ಲಿ ಸಿದ್ಧಪಡಿಸಲಾಗಿದೆ. ಟಾಯ್ಲೆಟ್ ಅಳವಡಿಸಲಾದ ಲೋಕೋಗಳ ಮೂಲಮಾದರಿಯನ್ನು ವಿನ್ಯಾಸ ಇದಾಗಿದ್ದು, ಇತರೆ ಲೋಕೋ ಶೆಡ್‌ಗಳಲ್ಲೂ ಇತರೆ ಮಾದರಿಗಳು ಸಿದ್ಧವಾಗುತ್ತಿವೆ. ಅವುಗಳ ಮಾದರಿಯೂ ಶೀಘ್ರವೇ ಬಹಿರಂಗವಾಗಲಿವೆ” ಎಂದು ಬರೆದುಕೊಂಡಿದ್ದಾರೆ.

ಈಗ ಅದರ ಮೂಲ ಮಾದರಿ ಕಾನ್ಪುರದ ಎಲೆಕ್ಟ್ರಿಕ್ ಲೋಕೋ ಶೆಡ್‌ನಲ್ಲಿ ಸಿದ್ಧವಾಗಿದೆ. ಕೆಲವು ಫೋಟೋಸ್ ಮತ್ತು ವಿಡಿಯೋ ಲೀಕ್ ಆಗಿದೆ. ಭಾರತೀಯ ರೈಲ್ವೆ ಇನ್ನೂ ಇದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಟಾಯ್ಲೆಟ್ ಫಿಟ್ ಮಾಡಿರುವ ರೈಲು ಎಂಜಿನ್‌ನ ಫೀಚರ್‌ಗಳೇನು ಎಂಬಿತ್ಯಾದಿ ವಿವರ ಇನ್ನಷ್ಟೆ ಸಿಗಬೇಕಿದೆ.

ರೈಲು ಎಂಜಿನ್‌ ಬೋಗಿಗಳಲ್ಲಿ ಟಾಯ್ಲೆಟ್; ಯಾಕಿಷ್ಟು ಮಹತ್ವ

ಭಾರತದಲ್ಲಿ ರೈಲು ಸಂಪರ್ಕ ಜಾಲ ಬಹಳಷ್ಟು ವಿಸ್ತರಣೆಯಾಗಿದೆ. ಸಾರ್ವಜನಿಕರ ಸಂಚಾರ ವ್ಯವಸ್ಥೆ, ಜನರ ಸುರಕ್ಷಿತ ಮತ್ತು ಕೈಗೆಟಕುವ ದರದ ಪ್ರಯಾಣ ಸುವ್ಯವಸ್ಥೆಗಾಗಿ ಭಾರತೀಯ ರೈಲ್ವೆ ಕೆಲಸ ಮಾಡುತ್ತಿದೆ. ಭಾರತೀಯ ರೈಲ್ವೆಯು ಅದರ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸುತ್ತಿದೆಯಾದರೂ, ರೈಲ್ವೆ ಚಾಲಕಿ/ಚಾಲಕರ ಬಹುದಶಕಗಳ ಬೇಡಿಕೆಯನ್ನು ಈಡೇರಿಸಲಾಗಿಲ್ಲ.

ಭಾರತೀಯ ರೈಲ್ವೆಯ ಅಧಿಕೃತ ಮಾಹಿತಿಯನ್ನು ಉಲ್ಲೇಖಿಸಿ ದ ಇಂಡಿಯನ್ ಎಕ್ಸ್‌ಪ್ರೆಸ್ 2023ರ ಅಕ್ಟೋಬರ್ 8ರಂದು ವರದಿ ಮಾಡಿರುವ ಪ್ರಕಾರ ಭಾರತೀಯ ರೈಲ್ವೆಯಲ್ಲಿ 65000 ಲೋಕೋ ಪೈಲಟ್ (ರೈಲು ಚಾಲಕಿ/ಚಾಲಕರು) ಇದ್ದಾರೆ. ಈ ಪೈಕಿ 1350 ಚಾಲಕಿಯರು. ಉಗಿಬಂಡಿ, ಕಲ್ಲಿದ್ದಲು ಎಂಜಿನ್, ಡೀಸೆಲ್ ಎಂಜಿನ್ ಬಳಕೆ ಮಾಡುತ್ತಿದ್ದ ರೈಲ್ವೆಯಲ್ಲಿ ಈಗ ನಿಧಾನವಾಗಿ ವಿದ್ಯುತ್ ಚಾಲಿತ ರೈಲು ಎಂಜಿನ್‌ಗಳ ಬಳಕೆ ಹೆಚ್ಚಾಗತೊಡಗಿದೆ. ಈ ಎಲ್ಲ ರೈಲು ಚಾಲಕರ ಸಮಸ್ಯೆಗಳಲ್ಲಿ ಬಹುಮುಖ್ಯವಾದುದು ಮೂಲಸೌಕರ್ಯ ಕೊರತೆ. ಅವುಗಳಲ್ಲಿ ಪ್ರಮುಖವಾದುದು ರೈಲು ಎಂಜಿನ್ ಬೋಗಿಗಳಲ್ಲಿ ಟಾಯ್ಲೆಟ್ ವ್ಯವಸ್ಥೆ ಇಲ್ಲದೇ ಇರುವುದು. ಹೀಗಾಗಿ ದೀರ್ಘ ಪ್ರಯಾಣದ ವೇಳೆ 9 ಗಂಟೆ ಮೂತ್ರ ವಿಸರ್ಜನೆ ಮಾಡದೇ ಇರಬೇಕಾದ ಕಷ್ಟಕರ ಸನ್ನಿವೇಶ ಅವರದ್ದು. ಸುರೇಶ್ ಪ್ರಭು ಅವರು ರೈಲ್ವೆ ಸಚಿವರಾಗಿದ್ದಾಗ ಈ ವಿಚಾರಕ್ಕೆ ಹೆಚ್ಚಿನ ಮಹತ್ವ ಸಿಕ್ಕಿತು.

ಇದಲ್ಲದೆ, ರೈಲು ಎಂಜಿನ್‌ಗಳಲ್ಲಿ ಎಸಿ ಮತ್ತು ಟಾಯ್ಲೆಟ್ ಅಳವಡಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2016ರಲ್ಲಿ ಆದೇಶ ನೀಡಿತ್ತು. ಇಷ್ಟಾದ ಬಳಿಕವೂ ಹಳೆಯ ಎಂಜಿನ್‌ಗಳಿಗೆ ಈ ವ್ಯವಸ್ಥೆ ಜೋಡಿಸುವುದು ಕಷ್ಟ ಎಂಬ ಕಾರಣ, ಹೊಸ ರೈಲು ಎಂಜಿನ್‌ಗಳಲ್ಲಿ ಇದನ್ನು ಸರ್ಕಾರ ಜೋಡಿಸತೊಡಗಿದೆ. 2022ರ ಕೊನೆಗೆ ವಂದೇ ಭಾರತ್ ಸೇರಿ ಹೊಸದಾಗಿ ಪರಿಚಯಿಸಿದ 200ರಷ್ಟು ರೈಲು ಎಂಜಿನ್‌ಗಳಲ್ಲಿ ಟಾಯ್ಲೆಟ್ ಅನ್ನು ಒದಗಿಸಿದೆ.

ಡಬ್ಲ್ಯುಎಪಿ 7 (WAP7) ರೈಲು ಎಂಜಿನ್ ಇತಿಹಾಸ

ಭಾರತೀಯ ರೈಲ್ವೆಯಲ್ಲಿ ಅತ್ಯಂತ ಯಶಸ್ವಿಯಾಗಿ ಚಾಲ್ತಿಯಲ್ಲಿರುವ ಎಂಜಿನ್ ಡಬ್ಲ್ಯುಎಪಿ 7 (WAP7). ಕಳೆದ 23 ವರ್ಷಗಳಿಂದ ಪ್ರಯಾಣಿಕ ರೈಲುಗಳ ಎಂಜಿನ್ ಆಗಿ ಕೆಲಸ ಮಾಡುತ್ತಿವೆ. ಇದರ ವೇಗ ಹೆಚ್ಚು. ಇದು ಡಬ್ಲ್ಯುಎಜಿ-9 (WAG-9) ಸರಕು ಸಾಗಣೆ ರೈಲು ಎಂಜಿನ್‌ನ ಸುಧಾರಿತ ರೂಪಾಂತರ. ಇದನ್ನು ವಿಶೇಷವಾಗಿ ಪ್ರಯಾಣಿಕರ ರೈಲುಗಳಿಗೆ ಬಳಸುವುದಕ್ಕೆಂದೇ ವಿನ್ಯಾಸಗೊಳಿಸಲಾಗಿದೆ. ಇದು 6125HP ಯ ಶಕ್ತಿಯದ್ದಾಗಿದ್ದು, ಭಾರತೀಯ ರೈಲ್ವೇ ಫ್ಲೀಟ್‌ನಲ್ಲಿ ಅತ್ಯಂತ ಶಕ್ತಿಶಾಲಿ ಪ್ರಯಾಣಿಕ ರೈಲು ಎಂಜಿನ್‌ ಆಗಿದೆ. ಇದು ಗಂಟೆಗೆ 110-140 ಕಿ.ಮೀ. 24 ಕೋಚ್ ರೈಲುಗಳನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಇದು ವಿದ್ಯುತ್ ಚಾಲಿತ ಎಂಜಿನ್ ಆಗಿದ್ದು, ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್, ಬನಾರಸ್ ಲೋಕೋಮೋಟಿವ್ ವರ್ಕ್ಸ್, ಪಟಿಯಾಲಾ ಲೋಕೋಮೋಟಿವ್ ವರ್ಕ್ಸ್‌ಗಳಲ್ಲಿ ತಯಾರಾಗುತ್ತದೆ. 1999ರಲ್ಲಿ ಮೊದಲ ಎಂಜಿನ್ ತಯಾರಾಗಿತ್ತು. 2024ರ ಮಾರ್ಚ್ ಹೊತ್ತಿಗೆ ಭಾರತೀಯ ರೈಲ್ವೆಯಲ್ಲಿ 1609 ಡಬ್ಲ್ಯುಎಪಿ 7 ಎಂಜಿನ್‌ಗಳು ಕೆಲಸ ಮಾಡುತ್ತಿವೆ.

ಈಗ ಟಾಯ್ಲೆಟ್ ಫಿಟ್ ಮಾಡಿದ ವಿದ್ಯುತ್ ಚಾಲಿತ ಎಂಜಿನ್‌ಗಳು ಬರತೊಡಗಿರುವುದರಿಂದ ರೈಲು ಚಾಲಕಿ/ಚಾಲಕರ ಬಹುವರ್ಷಗಳ ಮೂಲಸೌಕರ್ಯದ ಬೇಡಿಕೆ ಈಡೇರತೊಡಗಿದೆ. ಈಗ ಬಹಿರಂಗವಾಗಿರುವ ಡಬ್ಲ್ಯುಎಪಿ 7 (WAP7) ಮೂಲ ಮಾದರಿಯು ಹಳೆಯದರ ಬದಲಿಗೆ ಯಾವಾಗ ಬರಲಿದೆ ಎಂಬುದು ಸದ್ಯ ಅವರೆಲ್ಲರ ನಿರೀಕ್ಷೆ.