New GST Rules: ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನು ಪಾನೀಯ ಆಹಾರ ದರ ಅಗ್ಗ, ಜಿಎಸ್‌ಟಿ ಹೊಸ ನಿಯಮದಿಂದ ವಾಹನ ಆನ್‌ಲೈನ್ ಗೇಮಿಂಗ್ ಮೇಲೂ ಪರಿಣಾಮ
New GST Rules India: ಜಿಎಸ್‌ಟಿ ಕೌನ್ಸಿಲ್ ಘೋಷಿಸಿದ ಹೊಸ ಬದಲಾವಣೆಗಳಿಂದ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್‌ಗಳಲ್ಲಿ ಆಹಾರ ಮತ್ತು ಪಾನೀಯದ ದರ ಕಡಿಮೆಯಾಗಲಿದೆ. ಇಲ್ಲಿನ ಆಹಾರ ಮತ್ತು ಪಾನೀಯವನ್ನು ರೆಸ್ಟೂರೆಂಟ್ ಸೇವೆಯಡಿ ತರಲಾಗಿದ್ದು, ಶೇಕಡ 5 ಜಿಎಸ್‌ಟಿ ವಿಧಿಸಲಾಗಿದೆ. ಇದೇ ರೀತಿ, ವಾಹನ ವಲಯ ಮತ್ತು ಆನ್‌ಲೈನ್ ಗೇಮಿಂಗ್‌ಗೂ ಹೊಸ ನಿಯಮ ತರಲಾಗಿದೆ.
ನವದೆಹಲಿ: ಭಾರತದ ಜಿಎಸ್‌ಟಿ ಕೌನ್ಸಿಲ್ ಒಂದಿಷ್ಟು ಹೊಸ ನಿಯಮಗಳನ್ನು ಪರಿಚಯಿಸಿದ್ದು, ವಿವಿಧ ವಲಯಗಳ ಮೇಲೆ ಪರಿಣಾಮ ಬೀರಲಿದೆ. ಹೊಸ ಜಿಎಸ್‌ಟಿ ನಿಯಮದ ಪ್ರಕಾರ ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೋಗಳಿಗೆ ಶೇಕಡ 28 ಜಿಎಸ್‌ಟಿ ತೆರಿಗೆ ವಿಧಿಸಲಾಗಿದೆ. ಇದೇ ಸಮಯದಲ್ಲಿ ಸಿನಿಮಾ ನೋಡಲು ಮಲ್ಟಿಫ್ಲೆಕ್ಸ್‌ಗಳಿಗೆ ಭೇಟಿ ನೀಡುವವರಿಗೂ ಖುಷಿ ಕೊಡೋ ಸುದ್ದಿ ಜಿಎಸ್‌ಟಿ ಕೌನ್ಸಿಲ್‌ನಿಂದ ಬಂದಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾರಾಟ ಮಾಡುವ ಆಹಾರ ಮತ್ತು ಪಾನೀಯಗಳಿಗೆ ತೆರಿಗೆ ಕಡಿತ ಮಾಡುವುದಾಗಿ ಜಿಎಸ್‌ಟಿ ಕೌನ್ಸಿಲ್ ಘೋಷಿಸಿದೆ.
ಜಿಎಸ್‌ಟಿ ಕೌನ್ಸಿಲ್ ಘೋಷಿಸಿದ ಪ್ರಮುಖ ಬದಲಾವಣೆಗಳು
ಆನ್‌ಲೈನ್ ಗೇಮಿಂಗ್‌ಗೆ ತೆರಿಗೆ
ಯುವ ಜನರು ಆನ್‌ಲೈನ್ ಗೇಮಿಂಗ್‌ಗೆ ಅಡಿಕ್ಟ್ ಆಗುತ್ತಿದ್ದಾರೆ. ಇದನ್ನು ಕಡಿಮೆ ಮಾಡುವ ಸಲುವಾಗಿ ಆನ್‌ಲೈನ್ ಸೈಟ್‌ಗಳಲ್ಲಿ ಬೆಟ್ ಕಟ್ಟುವ ಫೇಸ್‌ವ್ಯಾಲ್ಯೂನ ಮೇಲೆ ಶೇಕಡ 18ರಷ್ಟು ತೆರಿಗೆ ವಿಧಿಸುವುದಾಗಿ ಜಿಎಸ್‌ಟಿ ಕೌನ್ಸಿಲ್ ಘೋಷಿಸಿದೆ. ಕೌಶಲ ಅಥವಾ ಅದೃಷ್ಟದ ಮೇಲೆ ಅವಲಂಬಿತವಾಗುವ ಗೇಮ್‌ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲದೆ ಈ ತೆರಿಗೆಯನ್ನು ಆನ್‌ಲೈನ್ ಗೇಮಿಂಗ್ ಕಂಪನಿಗಳ ಮೇಲೆ ಹಾಕಲಾಗಿದೆ.
ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳ ಮೇಲೆ ಗರಿಷ್ಠ ತೆರಿಗೆ ವಿಧಿಸುವ ನಿರ್ಧಾರವು ಗೇಮಿಂಗ್ ಉದ್ಯಮವನ್ನು ನಾಶಪಡಿಸುವಂತಹ ಉದ್ದೇಶವನ್ನು ಹೊಂದಿಲ್ಲ. ಆದರೆ, ಇವುಗಳಿಗೆ ಅಗತ್ಯ ಸರಕುಗಳಿಗೆ ಸಮಾನವಾಗಿ ತೆರಿಗೆ ವಿಧಿಸಲಾಗುವುದಿಲ್ಲ ಎಂಬ ನೈತಿಕ ಪ್ರಶ್ನೆಯನ್ನು ಪರಿಗಣಿಸಿ ತೆರಿಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಾಹನ ಕ್ಷೇತ್ರಕ್ಕೆ ಜಿಎಸ್‌ಟಿ
ಜಿಎಸ್‌ಟಿ ಕೌನ್ಸಿಲ್ ಎಸ್‌ಯುವಿ ಅಥವಾ ಸ್ಪೋಟ್ಸ್ ಯುಟಿಲಿಟಿ ವಾಹನದ ಕುರಿತು ಮರುವ್ಯಾಖ್ಯಾನ ಮಾಡಿದೆ. ಎಸ್‌ಯುವಿ ಎಂದರೆ 4 ಮೀಟರ್ ಮತ್ತು ಅದಕ್ಕಿಂತ ಹೆಚ್ಚು ಉದ್ದ ಹೊಂದಿರಬೇಕು. ಎಂಜಿನ್ ಸಾಮರ್ಥ್ಯವು 1500 ಸಿಸಿ ಅಥವಾ ಅದಕ್ಕಿಂತ ಹೆಚ್ಚು ಹೊಂದಿರಬೇಕು. ಗ್ರೌಂಡ್ ಕ್ಲಿಯರೆನ್ಸ್ 170 ಮಿ.ಮೀ. ಅಥವಾ ಹೆಚ್ಚು ಇರಬೇಕು. ಇವುಗಳನ್ನು ಮಾತ್ರ ಎಸ್‌ಯುವಿಯಾಗಿ ಜಿಎಸ್‌ಟಿಯಲ್ಲಿ ಪರಿಗಣಿಸಲಾಗುತ್ತದೆ ಎಂದು ಜಿಎಸ್‌ಟಿ ಕೌನ್ಸಿಲ್ ಘೋಷಿಸಿದೆ. ಇದರಿಂದಾಗಿ ತೆರಿಗೆ ರಚನೆ ಸ್ಪಷ್ಟವಾಗಿದ್ದು, ಎಸ್‌ಯುವಿ ತಯಾರಕರಿಗೆ ಉಪಯೋಗವಾಗಲಿದೆ.
ಸಿನಿಮಾ ಹಾಲ್‌ನಲ್ಲಿ ಆಹಾರ ಮತ್ತು ಪಾನೀಯಕ್ಕೆ ತೆರಿಗೆ ಕಡಿತ
ಸಿನಿಮಾ ಹಾಲ್‌ಗಳಲ್ಲಿ, ಮಲ್ಪಿಫ್ಲೆಕ್ಸ್‌ಗಳಲ್ಲಿ ಆಹಾರ ಮತ್ತು ಪಾನೀಯ ಖರೀದಿಗೆ ಜಿಎಸ್‌ಟಿ ಕಡಿಮೆಯಾಗಿದೆ. ಈಗ ಶೇಕಡ 5 ಜಿಎಸ್‌ಟಿ ವಿಧಿಸಲಾಗಿದೆ. ಅಂದರೆ, ಹೋಟೆಲ್ ಮತ್ತು ರೆಸ್ಟೂರೆಂಟ್‌ಗಳಲ್ಲಿ ಪಾವತಿಸಿದಷ್ಟೇ ತೆರಿಗೆ ಪಾವತಿಸಿದರೆ ಸಾಕು. ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಜಿಎಸ್‌ಟಿ ಶೇಕಡ 18 ಕಡಿತವಾಗುತ್ತಿತ್ತು. ಇನ್ನು ಮುಂದೆ ಮಲ್ಟಿಪ್ಲೆಕ್ಸ್‌ಗಳ ಆಹಾರ ದರ ತುಸು ಕಡಿಮೆಯಾಗುವ ನಿರೀಕ್ಷೆಯಿದೆ. ಈ ನಿರ್ಧಾರವನ್ನು ಮಲ್ಟಿಪ್ಲೆಕ್ಸ್ ಮಾಲೀಕರು ಸ್ವಾಗತಿಸಿದ್ದಾರೆ. ಇದರಿಂದ ಥಿಯೆಟರ್ ವ್ಯವಹಾರ ಉತ್ತಮಗೊಳ್ಳಲಿದೆ ಎಂದಿದ್ದಾರೆ. "ಸಿನಿಮಾಗಳಲ್ಲಿ ವಿತರಿಸುವ ಆಹಾರ ಮತ್ತು ಪಾನೀಯವನ್ನು ರೆಸ್ಟೂರೆಂಟ್ ಸರ್ವೀಸ್ ಆಗಿ ವ್ಯಾಖ್ಯಾನಿಸಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಲಭ್ಯತೆ ಇಲ್ಲದೆ ಶೇಕಡ 5 ಜಿಎಸ್‌ಟಿ ವಿಧಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಮುಖ ಮಲ್ಟಿಪ್ಲೆಕ್ಸ್ ಚೇನ್‌ವೊಂದರ ಮುಖ್ಯಸ್ಥರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.