ಕನ್ನಡ ಸುದ್ದಿ  /  Nation And-world  /  India News Nhai S One Vehicle One Fastag Rule Comes Into Effect Here Is What You Should Know Explained Uks

Explained: ಒಂದು ವಾಹನ ಒಂದು ಫಾಸ್‌ಟ್ಯಾಗ್ ಉಪಕ್ರಮ ಜಾರಿ, ತಿಳಿದುಕೊಂಡಿರಬೇಕಾದ ಕೆಲವು ಅಂಶಗಳು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕ ಪಡೆಯುವುದಕ್ಕೆ ಅನುಕೂಲವಾಗುವಂತೆ ಒಂದು ವಾಹನ ಒಂದು ಫಾಸ್‌ಟ್ಯಾಗ್ ಉಪಕ್ರಮ ನಿನ್ನೆ (ಏಪ್ರಿಲ್ 1) ಆರಂಭವಾಗಿದೆ. ಈ ಉಪಕ್ರಮದ ಉದ್ದೇಶ, ಅನುಷ್ಠಾನಕ್ಕೆ ಸಂಬಂಧಿಸಿದ ವಿವರಣೆ ಈ ವರದಿಯಲ್ಲಿದೆ.

ಒಂದು ವಾಹನ ಒಂದು ಫಾಸ್‌ಟ್ಯಾಗ್ ಉಪಕ್ರಮ ಜಾರಿ (ಸಾಂಕೇತಿಕ ಚಿತ್ರ)
ಒಂದು ವಾಹನ ಒಂದು ಫಾಸ್‌ಟ್ಯಾಗ್ ಉಪಕ್ರಮ ಜಾರಿ (ಸಾಂಕೇತಿಕ ಚಿತ್ರ) (HT News)

ನವದೆಹಲಿ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸೋಮವಾರದಿಂದ 'ಒಂದು ವಾಹನ, ಒಂದು ಫಾಸ್‌ಟ್ಯಾಗ್ ' (One Vehicle, One FASTag) ಎಂಬ ನಿಯಮವನ್ನು ಜಾರಿಗೆ ತಂದಿದೆ. ಈ ಉಪಕ್ರಮವು ಬಹು ವಾಹನಗಳಿಗೆ ಒಂದೇ ಫಾಸ್ಟ್‌ಟ್ಯಾಗ್‌ನ ಬಳಕೆಯನ್ನು ತಡೆಯುವುದು ಅಥವಾ ಒಂದೇ ವಾಹನಕ್ಕೆ ಹೆಚ್ಚಿನ ಫಾಸ್ಟ್‌ಟ್ಯಾಗ್‌ಗಳನ್ನು ಲಿಂಕ್ ಮಾಡುವುದನ್ನು ತಡೆಯುವ ಗುರಿಯನ್ನು ಹೊಂದಿದೆ.

ಎನ್‌ಎಚ್‌ಎಐ ಪ್ರಕಾರ, ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

"ಒಂದು ವಾಹನಕ್ಕೆ ಹೆಚ್ಚಿನ ಫಾಸ್‌ಟ್ಯಾಗ್ಗಳನ್ನು ಹೊಂದಿರುವ ಜನರು ಏಪ್ರಿಲ್ 1 ರಿಂದ ಎಲ್ಲವನ್ನೂ ಬಳಸಲು ಸಾಧ್ಯವಾಗುವುದಿಲ್ಲ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪೇಟಿಎಂ ಫಾಸ್‌ಟ್ಯಾಗ್ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಎನ್‌ಎಚ್‌ಎಐ 'ಒಂದು ವಾಹನ, ಒಂದು ಫಾಸ್‌ಟ್ಯಾಗ್' ಉಪಕ್ರಮದ ಅನುಸರಣೆಯ ಗಡುವನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಿತ್ತು. ಕಳೆದ ತಿಂಗಳು, ಗ್ರಾಹಕರು ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ವ್ಯಾಪಾರಿಗಳು ತಮ್ಮ ಖಾತೆಗಳನ್ನು ಮಾರ್ಚ್ 15 ರೊಳಗೆ ಇತರ ಬ್ಯಾಂಕ್‌ಗಳಿಗೆ ಬದಲಾಯಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಲಹೆ ನೀಡಿತ್ತು.

ಬ್ಯಾಂಕ್‌ಗಳ ಮೂಲಕ ಫಾಸ್‌ಟ್ಯಾಗ್ ರೀಚಾರ್ಜ್‌

'ಒಂದು ವಾಹನ ಒಂದು ಫಾಸ್ಟ್‌ಟ್ಯಾಗ್' ಉಪಕ್ರಮವು ಪ್ರತಿ ವಾಹನವು ಒಂದೇ ಸಕ್ರಿಯ ಫಾಸ್ಟ್‌ಟ್ಯಾಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸುತ್ತದೆ. ವಾಹನವು ಹೆಚ್ಚಿನ ಫಾಸ್ಟ್‌ಟ್ಯಾಗ್‌ಗಳನ್ನು ಹೊಂದಿದ್ದರೆ, ತೀರಾ ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಒಂದನ್ನು ಹೊರತುಪಡಿಸಿ ಎಲ್ಲವನ್ನೂ ನಿಷ್ಕ್ರಿಯಗೊಳಿಸಲಾಗುತ್ತದೆ. ಈ ಕ್ರಮವು ಒಂದು ವಾಹನಕ್ಕೆ ಹಲವಾರು ಫಾಸ್ಟ್ಯಾಗ್‌ಗಳ ಮಾಲೀಕತ್ವವನ್ನು ತಡೆಯುತ್ತದೆ. ಮುಖ್ಯವಾಗಿ, ವಾಹನ ಮಾಲೀಕರು ತಮ್ಮ ಫಾಸ್ಟ್‌ಟ್ಯಾಗ್ ಅನ್ನು ಯಾವುದೇ ಬ್ಯಾಂಕ್ ಮೂಲಕ ಅಥವಾ ಬಿಬಿಪಿಎಸ್, ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಸೇರಿ ವಿವಿಧ ಪಾವತಿ ವಿಧಾನಗಳ ಮೂಲಕ ರೀಚಾರ್ಜ್ ಮಾಡಲು ಸ್ವತಂತ್ರರು. ಇದು ನಿರ್ವಹಣೆಗೆ ಸುಲಭ.

ಒಂದಕ್ಕಿಂತ ಹೆಚ್ಚಿನ ಫಾಸ್ಟ್ಯಾಗ್ ಇದೆಯೇ ಎಂಬುದನ್ನು ಪರಿಶೀಲಿಸಲು ಬಳಕೆದಾರರು, ಇಂಡಿಯನ್ ಹೈವೇ ಮ್ಯಾನೇಜ್‌ಮೆಂಟ್ ಕಂಪನಿ (ಐಎಚ್‌ಸಿಎಂಎಲ್‌) ಒದಗಿಸುವ ಅಧಿಕೃತ ವೆಬ್‌ಸೈಟ್‌ನಲ್ಲಿ (https://fastag.ihmcl.com) ತಮ್ಮ ವಾಹನ ಸಂಖ್ಯೆ ನಮೂದಿಸಿ ತಿಳಿದುಕೊರ್ಳಳಬಹುದು.

ಫಾಸ್‌ಟ್ಯಾಗ್ ಕೆವೈಸಿ ಅಪ್ಡೇಟ್ ಮಾಡುವುದು ಹೇಗೆ

ಒಂದೊಮ್ಮೆ ಫಾಸ್‌ಟ್ಯಾಗ್ ಕೆವೈಸಿ ಪೂರ್ಣವಾಗಿಲ್ಲ ಎಂದಾದರೆ, ಅಪೂರ್ಣ ಕೆವೈಸಿ ಕುರಿತು ಬಳಕೆದಾರರಿಗೆ ಅವರ ಇಮೇಲ್, ಎಸ್‌ಎಂಎಸ್‌ ಅಥವಾ ಅವರ ಬ್ಯಾಂಕ್‌ನ ಅಪ್ಲಿಕೇಶನ್ ಇಂಟರ್ಫೇಸ್ ಮೂಲಕ ಅಧಿಸೂಚನೆಗಳು ಬರುತ್ತವೆ. ಕೆವೈಸಿಯನ್ನು ಅಪ್‌ಡೇಟ್ ಮಾಡಲು, ಎನ್‌ಎಚ್‌ಎಐ ಅಥವಾ ಬೇರೆ ಬೇರೆ ಬ್ಯಾಂಕ್‌ಗಳು ನೀಡಿದ ಫಾಸ್ಟ್‌ಟ್ಯಾಗ್‌ಗಳಿಗಾಗಿ ಉಲ್ಲೇಖಿಸಲಾದ ಕಾರ್ಯವಿಧಾನಗಳನ್ನು ಅನುಸರಿಸಬಹುದು.

ಎನ್‌ಎಚ್‌ಎಐ ಒದಗಿಸಿದ ಫಾಸ್ಟ್ಯಾಗ್‌ ಆದರೆ, ಐಎಚ್‌ಎಂಸಿಎಲ್ ಗ್ರಾಹಕ ಪೋರ್ಟಲ್‌ (https://fastag.ihmcl.com)ಗೆ ಲಾಗ್‌ ಇನ್ ಆಗಬೇಕು. ಅಲ್ಲಿ ಮೈ ಪ್ರೊಫೈಲ್‌ ಆಯ್ಕೆ ಮಾಡಿಕೊಂಡು, ನಂತರ ಕೆವೈಸಿ ಆಯ್ಕೆ ಮಾಡಬೇಕು. ಅದರಲ್ಲಿ ನಿಮ್ಮ ಐಡಿ, ವಿಳಾಸ ಪುರಾವೆ, ಭರ್ತಿ ಮಾಡಬೇಕು. ಇದಾಗಿ 7 ದಿನಗಳ ಒಳಗೆ ಕೆವೈಸಿ ಪ್ರಕ್ರಿಯೆ ಪೂರ್ಣವಾಗುತ್ತದೆ.

ಬ್ಯಾಂಕುಗಳಿಂದ ಪಡೆದ ಫಾಸ್ಟ್ಯಾಗ್ ಆದರೆ, ಎನ್‌ಇಟಿಸಿ ವೆಬ್‌ತಾಣ (https://www.netc.org.in/request-for-netc-fastag) ವನ್ನು ತೆರೆದುಕೊಂಡು ಅದರಲ್ಲಿ ನೀವು ಯಾವ ಬ್ಯಾಂಕ್‌ನಿಂದ ಫಾಸ್ಟ್ಯಾಗ್ ಖರೀದಿಸಿದ್ದೀರೋ ಅದರ ಹೆಸರು ನಮೂದಿಸಿ ಬಳಿಕ ನಿಮ್ಮ ಕೆವೈಸಿ ಅಪ್ಡೇಟ್ ಮಾಡಬಹುದು.

IPL_Entry_Point