NIA Raids: ಐಇಡಿ ಸ್ಫೋಟ ಸಂಚು ವಿಫಲಗೊಳಿಸಿದ ಎನ್‌ಐಎ, ಬಳ್ಳಾರಿ ಐಸಿಸ್ ಮಾಡ್ಯೂಲ್‌ನ ನಾಯಕ ಮಿನಾಜ್‌ ಸೇರಿ 8 ಶಂಕಿತರ ಬಂಧನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nia Raids: ಐಇಡಿ ಸ್ಫೋಟ ಸಂಚು ವಿಫಲಗೊಳಿಸಿದ ಎನ್‌ಐಎ, ಬಳ್ಳಾರಿ ಐಸಿಸ್ ಮಾಡ್ಯೂಲ್‌ನ ನಾಯಕ ಮಿನಾಜ್‌ ಸೇರಿ 8 ಶಂಕಿತರ ಬಂಧನ

NIA Raids: ಐಇಡಿ ಸ್ಫೋಟ ಸಂಚು ವಿಫಲಗೊಳಿಸಿದ ಎನ್‌ಐಎ, ಬಳ್ಳಾರಿ ಐಸಿಸ್ ಮಾಡ್ಯೂಲ್‌ನ ನಾಯಕ ಮಿನಾಜ್‌ ಸೇರಿ 8 ಶಂಕಿತರ ಬಂಧನ

ಭಾರತದಲ್ಲಿ ಹಲವೆಡೆ ಐಇಡಿ ಸ್ಫೋಟಗೊಳಿಸುವ ಐಸಿಸ್‌ನ ಬಳ್ಳಾರಿ ಮಾಡ್ಯೂಲ್ ಉಗ್ರರ ಸಂಚನ್ನು ಎನ್‌ಐಎ ವಿಫಲಗೊಳಿಸಿದೆ. ಬಳ್ಳಾರಿ ಮಾಡ್ಯೂಲ್‌ನ ನಾಯಕ ಮಿನಾಜ್ ಸೇರಿ 8 ಶಂಕಿತ ಉಗ್ರರನ್ನು ಎನ್‌ಐಎ ಬಂಧಿಸಿದೆ.

ಐಸಿಸ್‌ನ ಬಳ್ಳಾರಿ ಮಾಡ್ಯೂಲ್ ನಾಯಕ ಮಿಲಾಜ್ ಸೇರಿ 8 ಶಂಕಿತ ಆರೋಪಿಗಳನ್ನು ಬಂಧಿಸಿದ ಎನ್‌ಐಎ (ಸಾಂಕೇತಿಕ ಚಿತ್ರ)
ಐಸಿಸ್‌ನ ಬಳ್ಳಾರಿ ಮಾಡ್ಯೂಲ್ ನಾಯಕ ಮಿಲಾಜ್ ಸೇರಿ 8 ಶಂಕಿತ ಆರೋಪಿಗಳನ್ನು ಬಂಧಿಸಿದ ಎನ್‌ಐಎ (ಸಾಂಕೇತಿಕ ಚಿತ್ರ) (HT_PRINT)

ಮಹತ್ವದ ಭದ್ರತಾ ಕಾರ್ಯಾಚರಣೆಯೊಂದರಲ್ಲಿ ನ್ಯಾಷನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿ (ಎನ್‌ಐಎ) ಸೋಮವಾರ (ಡಿ.18) ಬೆಳಗ್ಗೆಯೇ ನಾಲ್ಕು ರಾಜ್ಯಗಳ 19 ಕಡೆ ದಾಳಿ ನಡೆಸಿ ಐಸಿಸ್‌ನ ಬಳ್ಳಾರಿ ಮಾಡ್ಯೂಲ್‌ (ISIS Ballari Module) ನ ನಾಯಕ ಮಿನಾಜ್‌ ಸೇರಿ 8 ಶಂಕಿತರನ್ನು ಬಂಧಿಸಿದೆ.

ಎನ್‌ಐಎ ಅಧಿಕಾರಿಗಳ ತಂಡ ಕರ್ನಾಟಕದ ಬೆಂಗಳೂರು, ಬಳ್ಳಾರಿ, ಮಹಾರಾಷ್ಟ್ರದ ಅಮರಾವತಿ, ಮುಂಬಯಿ, ಪುಣೆ, ಜಾರ್ಖಂಡ್‌ನ ಬೊಕಾರೊ, ಜಮ್‌ಶೆಡ್‌ಪುರ, ದೆಹಲಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

ಬಂಧಿತ 8 ಶಂಕಿತ ಐಎಸ್‌ಐಎಸ್ ಉಗ್ರರ ಪೈಕಿ ಐಎಸ್‌ಐಎಸ್ ಬಳ್ಳಾರಿ ಮಾಡ್ಯೂಲ್‌ನ ನಾಯಕ ಮಿನಾಜ್‌ ಅಲಿಯಾದ್ ಮೊಹಮ್ಮದ್ ಸುಲೈಮಾನ್‌ ಮತ್ತು ಸೈಯದ್ ಸಮೀರ್ ಅನ್ನು ಬಳ್ಳಾರಿಯಿಂದ ಅನಾಸ್ ಇಕ್ಬಾಲ್‌ ಶೇಖ್‌ನನ್ನು ಮುಂಬಯಿಯಿಂದ, ಮೊಹಮ್ಮದ್‌ ಮುನಿರುದ್ದೀನ್‌, ಸೈಯದ್‌ ಸಮಿಯುಲ್ಲಾ ಅಲಿಯಾಸ್‌ ಸಮಿ, ಮೊಹಮ್ಮದ್ ಮುಝಾಮಿಲ್‌ ಅನ್ನು ಬೆಂಗಳೂರಿನಿಂದ, ಶಯಾನ್ ರಹಮಾನ್ ಅಲಿಯಾಸ್ ಹುಸೇನ್ ಅನ್ನು ದೆಹಲಿಯಿಂದ, ಮೊಹಮ್ಮದ್‌ ಶಾಹ್‌ಬಾಸ್‌ ಅಲಿಯಾಸ್ ಝುಲ್ಫಿಕರ್ ಅಲಿಯಾಸ್ ಗುಡ್ಡುವನ್ನು ಜಮ್‌ಶೆಡ್‌ಪುರದಿಂದ ಬಂಧಿಸಲಾಗಿದೆ.

ಈ 8 ಶಂಕಿತ ಐಸಿಸ್ ಉಗ್ರರನ್ನು, ಅವರು ಭಯೋತ್ಪಾದನಾ ಚಟುವಟಿಕೆ ಉತ್ತೇಜಿಸುವುದು, ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಮತ್ತು ನಿಷೇಧಿತ ಐಸಿಸ್‌ನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಖಚಿತವಾದ ಕಾರಣ ಬಂಧಿಸಲಾಗಿದೆ. ಈ ಎಂಟೂ ಉಗ್ರರು ಮಿನಾಜ್ ನಾಯಕತ್ವದಲ್ಲಿ ಕಾರ್ಯಾಚರಿಸುತ್ತಿದ್ದರು.

ಸ್ಫೋಟಕ ಕಚ್ಚಾ ಸಾಮಗ್ರಿಗಳಾದ ಸಲ್ಫರ್, ಪೊಟ್ಯಾಸಿಯಮ್ ನೈಟ್ರೇಟ್, ಇದ್ದಿಲು, ಗನ್‌ಪೌಡರ್, ಸಕ್ಕರೆ ಮತ್ತು ಎಥೆನಾಲ್, ತೀಕ್ಷ್ಣ ಆಯುಧಗಳು, ಭಾರಿ ಪ್ರಮಾಣದ ನಗದು ಮತ್ತು ಹಲವು ಮಹತ್ವದ ದಾಖಲೆಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದವು. ಈ ಸಾಕ್ಷ್ಯಗಳ ಆಧಾರದ ಮೇಲೆ ಈ 8 ಜನರನ್ನು ಬಂಧಿಸಲಾಗಿದೆ.

ಆರಂಭಿಕ ತನಿಖೆಯ ಪ್ರಕಾರ, ಆರೋಪಿಗಳು ಸ್ಫೋಟಕ ಕಚ್ಚಾ ವಸ್ತುಗಳನ್ನು ಐಇಡಿ ತಯಾರಿಕೆಗೆ ಬಳಸಲು ಯೋಜಿಸಿದ್ದರು. ಅದನ್ನು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಬಳಸಲು ಸಂಚು ರೂಪಿಸಿದ್ದರು. ಈ ಆರೋಪಿಗಳು, ಹಿಂಸಾತ್ಮಕ ಜಿಹಾದ್, ಖಿಲಾಫತ್, ಐಸಿಸಿಸ್‌ ಇತ್ಯಾದಿಗಳ ಮಾರ್ಗವನ್ನು ಅನುಸರಿಸಿ, ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿದ್ದರು. ಜಿಹಾದ್‌ಗಾಗಿ ಮುಜಾಹಿದೀನ್‌ಗಳ ನೇಮಕ ನಡೆಸಿದ್ದ ಇವರು ಇದಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ಈ ಕುರಿತು ಪ್ರಚಾರವನ್ನೂ ಮಾಡಿದ್ದರು.

ಐಸಿಸ್‌ ಭಾರತದಲ್ಲಿ ಮಾಡಲು ಉದ್ದೇಶಿಸಿದ್ದ ಉಗ್ರ ಚಟುವಟಿಕೆಗಳನ್ನು ನಿಗ್ರಹಿಸುವ ಉದ್ದೇಶದೊಂದಿಗೆ ಎನ್‌ಐಎ ಕಾರ್ಯಾಚರಣೆ ಮುಂದುವರಿಸಿದೆ. ಅದರ ಭಾಗವಾಗಿ, ಕರ್ನಾಟಕ ಪೊಲೀಸರು, ಮಹಾರಾಷ್ಟ್ರ ಪೊಲೀಸರು, ಜಾರ್ಖಂಡ್ ಪೊಲೀಸರು ಮತ್ತು ದೆಹಲಿ ಪೊಲೀಸರ ಭಾಗಿಧಾರಿಕೆಯಲ್ಲಿ ಎನ್‌ಐಎ ತಂಡ ಸೋಮವಾರ ಕಾರ್ಯಾಚರಣೆ ನಡೆಸಿತ್ತು. ಡಿ.14ರಂದೇ ಬಳ್ಳಾರಿ ಮಾಡ್ಯುಲ್‌ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿತ್ತು. ಅದಾದ ಬಳಿಕ ಈ ಕಾರ್ಯಾಚರಣೆ ಶುರುಮಾಡಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.