Nipah virus: ಕೇರಳದಲ್ಲಿ ನಿಫಾ ಸೋಂಕು ಹರಡುವ ಭೀತಿ; ಸೆ. 24ರವರೆಗೆ ಕೊಯಿಕ್ಕೋಡ್ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಕೇರಳದಲ್ಲಿ ನಿಫಾ ವೈರಸ್ ಸದ್ದು ಮಾಡುತ್ತಿದ್ದು, ಈಗಾಗಲೇ ಇಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಶಂಕೆ ಏರಿಕೆಯಾಗುತ್ತಿದ್ದು, 1080 ಮಂದಿ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿದ್ದಾರೆ. ರಾಜ್ಯದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸೆ.24ರ ವರೆಗೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದೆ.
ಕೇರಳ: ಕಳೆದೊಂದು ವಾರದಿಂದ ಕೇರಳದಲ್ಲಿ ನಿಫಾ ವೈರಸ್ ಸೋಂಕು ಸುದ್ದಿಯಾಗುತ್ತಿದೆ. ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದು, ನಿಫಾ ವೈರಸ್ ಕಾರಣ ಎಂದು ಶಂಕಿಸಲಾಗಿದೆ. ಇದೀಗ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುವ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮುಂದಿನ ಭಾನುವಾರ ಅಂದರೆ ಸೆಪ್ಟೆಂಬರ್ 24ರವರೆಗೆ ರಜೆ ಘೋಷಿಸಲಾಗಿದೆ. ಶಾಲೆಗಳು, ಟ್ಯೂಷನ್ ಸೆಂಟರ್, ಕಾಲೇಜು ಸೇರಿ ಎಲ್ಲರಿಗೂ ರಜೆ ಘೋಷಿಸಲಾಗಿದೆ.
ಟ್ರೆಂಡಿಂಗ್ ಸುದ್ದಿ
ರಜೆ ಘೋಷಿಸಿರುವ ಕಾರಣ ವಾರವಿಡೀ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು ಎಂದು ಇಲ್ಲಿನ ಜಿಲ್ಲಾಡಳಿತ ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಪ್ರಸ್ತುತ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿ 1080 ಜನರಿದ್ದು, ಇಂದು 130 ಜನರನ್ನು ಹೊಸದಾಗಿ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಈ ಪಟ್ಟಿಯಲ್ಲಿ 327 ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ.
ಕೇರಳದ ಇತರೆ ಜಿಲ್ಲೆಗಳಲ್ಲಿ ಒಟ್ಟು 29 ಮಂದಿ ನಿಫಾ ಸೋಂಕಿತರ ಪಟ್ಟಿಯಲ್ಲಿದ್ದಾರೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ಅವರಲ್ಲಿ 22 ಮಂದಿ ಮಲಪ್ಪುರಂ, ಒಬ್ಬರು ವಯನಾಡ್ ಮತ್ತು ತಲಾ ಮೂವರು ಕಣ್ಣೂರು ಮತ್ತು ತ್ರಿಶೂರ್‌ನವರು ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ಹೈ ರಿಸ್ಕ್ ವಿಭಾಗದಲ್ಲಿ 175 ಮಂದಿ ಸಾಮಾನ್ಯ ಜನರು ಮತ್ತು 122 ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ.
ಆಗಸ್ಟ್ 30 ರಂದು ಸಾವನ್ನಪ್ಪಿದ ವ್ಯಕ್ತಿಗೆ ನಿಫಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ನಿಫಾ ಸೂಚ್ಯಂಕ ಪ್ರಕರಣವಾಗಿರುವುದರಿಂದ ಸಂಪರ್ಕ ಪಟ್ಟಿಯಲ್ಲಿ ಇರುವವರ ಸಂಖ್ಯೆ ಇನ್ನೂ ಏರಿಕೆಯಾಗಬಹುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೇರಳದಲ್ಲಿ ಈವರೆಗೆ ಆರು ನಿಫಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 30 ರಂದು ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 17 ಜನರನ್ನು ಪ್ರತ್ಯೇಕಿಸಲಾಗಿದೆ. ಸಕ್ರಿಯ ಪ್ರಕರಣಗಳಲ್ಲಿ ನಾಲ್ವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಫಾ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಎಲ್ಲಾ ಆಸ್ಪತ್ರೆಗಳು ದಿನಕ್ಕೆ ಎರಡು ಬಾರಿ ವೈದ್ಯಕೀಯ ಮಂಡಳಿಯನ್ನು ರಚಿಸಬೇಕು ಮತ್ತು ವರದಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕು. ರಾಜ್ಯದ ಸಾಂಕ್ರಾಮಿಕ ರೋಗ ನಿಯಂತ್ರಣ ಪ್ರೋಟೋಕಾಲ್‌ಗಳ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ
Nipah: ಕೇರಳದಲ್ಲಿ ನಿಫಾ ಸೋಂಕಿತರ ಸಂಖ್ಯೆ ಏರಿಕೆ: ಕೊರೊನಾ ಮಾದರಿ ಕಂಟೈನ್ಮೆಂಟ್ ಝೋನ್
Kerala Nipah virus ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಅವರ ಸಂಪರ್ಕಿತರ ತಪಾಸಣೆಯೂ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೋಜಿಕ್ಕೋಡ್ ಜಿಲ್ಲೆಯ ಕೆಲವು ಪಂಚಾಯಿತಿಗಳನ್ನು ಕೊರೊನಾ ಮಾದರಿಯಲ್ಲಿಯೇ ಕಂಟೈನ್‌ಮೆಂಟ್ ಪ್ರದೇಶಗಳನ್ನು ರೂಪಿಸಲಾಗಿದೆ.