No-Confidence Motion: ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ಶುರು; ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಾಗ್ದಾಳಿ
No-Confidence Motion: ವಿಪಕ್ಷ ಮೈತ್ರಿಕೂಟ ಇಂಡಿಯಾ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಬಿಜೆಪಿ ಪರವಾಗಿ ಸಂಸದ ನಿಶಿಕಾಂತ್ ದುಬೆ ಶುರುಮಾಡಿದರು. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಇಂಡಿಯಾ ಮೈತ್ರಿಕೂಟ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಲೋಕಸಭೆಯಲ್ಲಿ ನಡೆಯುತ್ತಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸಾವರ್ಕರ್ ಕುರಿತ ರಾಹುಲ್ ಗಾಂಧಿ ಹೇಳಿಕೆ ಮತ್ತು ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುವುದರೊಂದಿಗೆ ಅವಿಶ್ವಾಸ ನಿರ್ಣಯ ಕುರಿತಾದ ಪಕ್ಷದ ಚರ್ಚೆಗೆ ಚಾಲನೆ ನೀಡಿದರು.
'ಮೋದಿ' ಉಪನಾಮ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ವಿಷಯವನ್ನು ಪ್ರಸ್ತಾಪಿಸಿದ ನಿಶಿಕಾಂತ್ ದುಬೆ, "ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ, ಅದು ತಡೆಯಾಜ್ಞೆ ನೀಡಿದೆ ... ರಾಹುಲ್ ಗಾಂಧಿ ಅವರು ಕ್ಷಮೆ ಕೇಳುವುದಿಲ್ಲ ಎಂದು ಹೇಳುತ್ತಲೇ ಇದ್ದಾರೆ.… ಅಲ್ಲದೆ, 'ನಾನು ಸಾವರ್ಕರ್ ಅಲ್ಲ ಎಂದೂ ಹೇಳುತ್ತಿದ್ದಾರೆ. ನಿಜ, ರಾಹುಲ್ ಗಾಂಧಿ, ನೀವು ಎಂದಿಗೂ ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ..." ಎಂದು ಹೇಳಿದರು.
ಅವಿಶ್ವಾಸ ನಿರ್ಣಯದ ಹಿಂದಿದೆ 2 ಉದ್ದೇಶ
ಮಾಜಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ ನಿಶಿಕಾಂತ್ ದುಬೆ, “ಈ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ. ಯಾಕೆ ಎಂಬ ಪ್ರಶ್ನೆ ಸಹಜ. ಸೋನಿಯಾ ಗಾಂಧಿಯವರು ಇಲ್ಲಿ ಕುಳಿತಿದ್ದಾರೆ. ನನಗನಿಸುತ್ತಿದೆ ಅವರ ಮೇಲೆ ಎರಡು ಹೊಣೆಗಾರಿಕೆಗಳಿವೆ. ಅದುವೇ ಈ ಅವಿಶ್ವಾಸ ನಿರ್ಣಯದ ಹಿಂದಿನ 2 ಉದ್ದೇಶಗಳು. ಮೊದಲನೇಯದು ಮಗನನ್ನು ಸರಿಯಾದ ಸ್ಥಾನದಲ್ಲಿ ಕೂರಿಸಬೇಕು. ಎರಡನೇಯದು ಅಳಿಯನಿಗೂ ಒಂದು ಕೊಡುಗೆ ಕೊಡಬೇಕು. ಇದು ಈ ಅವಿಶ್ವಾಸ ನಿರ್ಣಯದ ಹಿಂದಿನ ಉದ್ದೇಶಗಳೆಂದು ನನಗೆ ತೋರುತ್ತಿದೆ” ಎಂದು ಟೀಕಿಸಿದರು.
ನಿಶಿಕಾಂತ್ ದುಬೆ ಅವರ ಈ ಟೀಕೆ ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರ ಕುರಿತಾಗಿಯೆ ಇರುವುದು ಎಂಬುದು ಸುಸ್ಪಷ್ಟ.
ಲೋಕಸಭೆಯಲ್ಲಿ ಆಗಸ್ಟ್ 8 ಮತ್ತು 9ರಂದು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ
ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಲೋಕಸಭೆಯಲ್ಲಿ ಆಗಸ್ಟ್ 8 ಮತ್ತು 9 ರಂದು ನಡೆಯುತ್ತಿದ್ದು, ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡುವ ನಿರೀಕ್ಷೆಯಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಂದು ಆರಂಭವಾದಾಗಿನಿಂದ ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ಚರ್ಚೆಗೆ ವಿರೋಧ ಪಕ್ಷದ ಸದಸ್ಯರು ಪ್ರಯತ್ನಿಸುತ್ತಿದ್ದಾರೆ.
ಪ್ರಧಾನಿ ಮೋದಿ ಮೌನ ಮುರಿಯಲಿ ಎಂದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್
ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ಪ್ರತಿಜ್ಞೆಯನ್ನು ಮುರಿಯಬೇಕು ಎಂದು ವಿಪಕ್ಷ ಮೈತ್ರಿ ಇಂಡಿಯಾ, ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದ ನಂತರ ದುಬೆ ಮಾತನಾಡಿದರು.
ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾಪದ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ ಗೊಗೊಯ್, "ಒಂದು ಭಾರತವು ಎರಡು ಮಣಿಪುರಗಳನ್ನು ಸೃಷ್ಟಿಸಿದೆ - ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿದೆ" ಎಂದು ಮಾತನಾಡುತ್ತಾರೆ ಎಂದು ಆರೋಪಿಸಿದರು.
ಗೊಗೊಯ್ ಅವರು ಮಂಡಿಸಿದ ಪ್ರಸ್ತಾವನೆಯನ್ನು ಕೆಳಮನೆ ಕೈಗೆತ್ತಿಕೊಂಡಾಗ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು, ಕೊನೆಯ ಕ್ಷಣದಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ಮುಖ್ಯಮಾತುಗಾರನ ಸ್ಥಾನದಿಂದ ಹಿಂಪಡೆಯಲಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಅವರ ಈ ಮಾತು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.