No-Confidence Motion: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಪ್ರಧಾನಿ ಮೋದಿಗೆ 3 ಪ್ರಶ್ನೆ ಮುಂದಿಟ್ಟ ಸಂಸದ ಗೊಗೊಯ್
No-Confidence Motion: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ಮೈತ್ರಿ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದ ಚರ್ಚೆಗೆ ಚಾಲನೆ ನೀಡಿದ ಗೌರವ್ ಗೊಗೊಯ್, ಕೇಂದ್ರ ಸರ್ಕಾರ ಒಂದು ಭಾರತದ ಬಗ್ಗೆ ಮಾತನಾಡುತ್ತಿದೆ. ಆದರೆ 2 ಮಣಿಪುರಗಳನ್ನು ಸೃಷ್ಟಿಸಿದೆ. ಒಂದು ಬೆಟ್ಟ ಪ್ರದೇಶದಲ್ಲದಾರೆ, ಇನ್ನೊಂದು ಕಣಿವೆ ಪ್ರದೇಶದಲ್ಲಿ ಎಂದು ವಾಗ್ದಾಳಿ ನಡೆಸಿದರು.
ನವದೆಹಲಿ: ಮಣಿಪುರ ಹಿಂಸಾಚಾರ (Manipur Violence) ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೌನ ವ್ರತ ಮುರಿಯಬೇಕು ಎಂಬ ಕಾರಣಕ್ಕೆ ಸರ್ಕಾರದ ವಿರುದ್ಧ ವಿಪಕ್ಷ ಮೈತ್ರಿಯ ಅವಿಶ್ವಾಸ ನಿರ್ಣಯವನ್ನು (No-confidence motion) ಮಂಡಿಸಲಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ ಲೋಸಕಭೆಯಲ್ಲಿ ಹೇಳಿದರು.
ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದ ಚರ್ಚೆಗೆ ಚಾಲನೆ ನೀಡಿದ ಗೊಗೊಯ್, ಕೇಂದ್ರ ಸರ್ಕಾರ ಒಂದು ಭಾರತದ ಬಗ್ಗೆ ಮಾತನಾಡುತ್ತಿದೆ. ಆದರೆ ಎರಡು ಮಣಿಪುರಗಳನ್ನು ಸೃಷ್ಟಿಸಿದೆ. ಒಂದು ಬೆಟ್ಟ ಪ್ರದೇಶದಲ್ಲದಾರೆ, ಇನ್ನೊಂದು ಕಣಿವೆ ಪ್ರದೇಶದಲ್ಲಿ ಎಂದು ವಾಗ್ದಾಳಿ ನಡೆಸಿದರು.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡದೇ ಇರುವಂತಹ ಮೌನ ವ್ರತದ ಮೊರೆ ಹೋಗಿದ್ದಾರೆ. ಅವರ ಈ ಮೌನ ವ್ರತವನ್ನು ಮುರಿಯುವುದಕ್ಕಾಗಿಯೇ ಈ ಅವಿಶ್ವಾಸ ನಿಲುವಳಿ ಮಂಡಿಸಲಾಗಿದೆ ಎಂದು ಗೊಗೊಯ್ ಪ್ರತಿಪಾದಿಸಿದರು.
ಪ್ರಧಾನಿ ಮೋದಿಯವರಿಗೆ 3 ಪ್ರಶ್ನೆಗಳನ್ನು ಮುಂದಿಟ್ಟ ಗೊಗೊಯ್
ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದ ಚರ್ಚೆ ಶುರುಮಾಡಿದ ಗೊಗೊಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಣಿಪುರದ ವಿಚಾರವಾಗಿ ಮೂರು ಪ್ರಶ್ನೆಗಳನ್ನು ಮುಂದಿಟ್ಟರು. ಆ ಮೂರು ಪ್ರಶ್ನೆಗಳು ಹೀಗಿವೆ -
- ಇದುವರೆಗೂ ಪ್ರಧಾನಿ ಮೋದಿ ಯಾಕೆ ಮಣಿಪುರಕ್ಕೆ ಭೇಟಿ ನೀಡಿಲ್ಲ.
- ಮಣಿಪುರದ ವಿಚಾರವಾಗಿ ಮಾತನಾಡುವುದಕ್ಕೆ ಸುದೀರ್ಘ 80 ದಿನ ಯಾಕೆ ತಗೊಂಡದ್ದು
- ಮಣಿಪುರ ಮುಖ್ಯಮಂತ್ರಿಯವರನ್ನು ಪ್ರಧಾನಿ ಮೋದಿಯವರು ಇದುವರೆಗೆ ಯಾಕೆ ವಜಾಗೊಳಿಸಿಲ್ಲ
ಪ್ರಮುಖ ಭಾಷಣಕಾರ ರಾಹುಲ್ ಗಾಂಧಿ ಎಂದಿತ್ತಲ್ಲ- ಪ್ರಲ್ಹಾದ್ ಜೋಶಿ ಪ್ರಶ್ನೆ
ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿಲುವಳಿ ಮಂಡನೆಯ ಚರ್ಚೆ ಶುರುಮಾಡುವುದಕ್ಕಾಗಿ ಸಂಸದ ಗೊಗೊಯ್ ಎದ್ದು ನಿಂತಾಗ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು, ʻಪ್ರಮುಖ ಭಾಷಣಕಾರ ಎಂದು ರಾಹುಲ್ ಗಾಂಧಿ ಅವರ ಹೆಸರು ನಮೂದಾಗಿತ್ತು. ಕೊನೇ ಘಳಿಗೆಯಲ್ಲಿ ಅವರ ಹೆಸರು ಹಿಂಪಡೆಯಲು ಕಾರಣವೇನು?" ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಜೋಶಿಯವರ ಮಾತು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಚೇಂಬರ್‌ನಲ್ಲಿ ಪ್ರಧಾನಿ ಮಾಡಿದ ಟೀಕೆಗಳನ್ನು ಗೊಗೊಯ್ ಸದನದಲ್ಲಿ ಬಹಿರಂಗಪಡಿಸಿದರು. ಗೊಗೊಯ್ ಅವರ ಈ ಹೇಳಿಕೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಕಟುಟೀಕೆಗೆ ಗುರಿಯಾಯಿತು. ಸದಸ್ಯರು ಪ್ರಧಾನಿಯ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಇದು ನಂಬರ್ ಗೇಮ್‌ನ ಅವಿಶ್ವಾಸ ನಿಲುವಳಿ ಅಲ್ಲ ಎಂದ ಗೊಗೊಯ್
ಮಣಿಪುರಕ್ಕೆ ನ್ಯಾಯ ಒದಗಿಸುವ ಸಲುವಾಗಿ ವಿಪಕ್ಷ ಮೈತ್ರಿ ಇಂಡಿಯಾ ಈ ಅವಿಶ್ವಾಸ ನಿಲುವಳಿ ಮಂಡಿಸಿದೆ. ಇದು ನಂಬರ್‌ಗೆ ಸಂಬಂಧಿಸಿದ್ದಲ್ಲ ಎಂದು ಗೊಗೊಯ್ ಹೇಳಿದರು.
ಎಲ್ಲಿಯಾದರೂ ಅನ್ಯಾಯವು ಎಲ್ಲೆಡೆ ನ್ಯಾಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದರು. ಮಣಿಪುರವು ನ್ಯಾಯವನ್ನು ಕೇಳುತ್ತದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಇಡೀ ಭಾರತವೇ ಉರಿಯುತ್ತಿದೆ, ಮಣಿಪುರ ಇಬ್ಭಾಗವಾದರೆ ದೇಶವೇ ಇಬ್ಭಾಗವಾಗುತ್ತದೆ. ದೇಶದ ನಾಯಕರಾಗಿ, ಪ್ರಧಾನಿ ಮೋದಿ ಅವರು ಸದನಕ್ಕೆ ಬಂದು ಮಣಿಪುರದ ಬಗ್ಗೆ ಮಾತನಾಡಬೇಕು… ಎಂಬುದು ನಮ್ಮ ಬೇಡಿಕೆಯಾಗಿತ್ತು” ಎಂದು ಗೊಗೊಯ್ ಹೇಳಿದರು.
ಮಣಿಪುರಕ್ಕೆ ರಾಹುಲ್ ಗಾಂಧಿ ಹೋಗಿದ್ದರು. ಗೃಹ ಸಚಿವ ಶಾ ಮತ್ತು ಗೃಹ ಖಾತೆ ರಾಜ್ಯ ಸಚಿವ (ನಿತ್ಯಾನಂದ ರೈ) ಅವರು ಏಕೆ ಹೋಗಲಿಲ್ಲ ಎಂದು ಪ್ರಧಾನಿಯವರನ್ನು ಕೇಳಲು ಬಯಸುತ್ತೇನೆ ಎಂದು ಗೊಗೊಯ್ ಹೇಳಿದರು.
ವಿಭಾಗ