ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಒಂದು ದೇಶ ಒಂದು ಚುನಾವಣೆ ಸಾಧಕ ಬಾಧಕ ಪರಿಶೀಲನೆಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಸಮಿತಿ ರಚನೆ

ಒಂದು ದೇಶ ಒಂದು ಚುನಾವಣೆ ಸಾಧಕ ಬಾಧಕ ಪರಿಶೀಲನೆಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಸಮಿತಿ ರಚನೆ

ಒಂದು ದೇಶ ಒಂದು ಚುನಾವಣೆ ವಿಚಾರ ದಶಕಗಳಿಂದ ಚರ್ಚೆಯಲ್ಲಿದೆ. ಕಳೆದ ಲೋಕಸಭಾ ಚುನಾವಣೆಗೆ ಮೊದಲೇ ಈ ವಿಚಾರ ಬೇಗನೆ ಜಾರಿಯಾಗಲಿದೆ ಎಂಬ ಮಾತು ಕೇಳಿತ್ತು. ಆದರೆ, ಅದು ಆಗಿರಲಿಲ್ಲ. ಈಗ ಮತ್ತೊಂದು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಈ ವ್ಯವಸ್ಥೆಯ ಸಾಧಕ, ಬಾಧಕ ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ನೇತೃತ್ವದ ಸಮಿತಿಯನ್ನು ರಚಿಸಿದೆ.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ (Samir Jana/ Hindustan Times)

ಭಾರತದ ಚುನಾವಣಾ ಪ್ರಕ್ರಿಯೆಯನ್ನು ಮರುಪರಿಶೀಲಿಸುವ ಉದ್ದೇಶದ ಮಹತ್ವದ ಬೆಳವಣಿಗೆಯೊಂದರಲ್ಲಿ, ಇದಕ್ಕೆ ಸಂಬಂಧಿಸಿದ ಸಮಿತಿಯ ನೇತೃತ್ವವನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ (Former president Ramanath Kovind) ಅವರಿಗೆ ವಹಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಒಂದು ದೇಶ ಒಂದು ಚುನಾವಣೆ (One Nation One Election) ವ್ಯವಸ್ಥೆಯನ್ನು ಜಾರಿಗೊಳಿಸುವುದರ ಸಾಧಕ ಬಾಧಕಗಳನ್ನು ಪರಿಶೀಲಿಸುವುದು ಈ ಸಮಿತಿಯ ಉದ್ದೇಶ. ಒಂದು ದೇಶ ಒಂದು ಚುನಾವಣೆ ವ್ಯವಸ್ಥೆಯು ದೇಶದ ಮೇಲಿನ ಆರ್ಥಕ ಹೊರೆ ಕಡಿಮೆ ಮಾಡುವುದು, ಚುನಾವಣಾ ವ್ಯವಸ್ಥೆಯನ್ನು ಸರಗೊಳಿಸುವುದಾಗಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಲ್ಲಿ ಮೂಡಿದೆ.

ಲೋಕಸಭೆಮತ್ತು ವಿವಿಧ ರಾಜ್ಯಗಳ ಅಸೆಂಬ್ಲಿಗಳಿಗೆ ಚುನಾವಣಾ ಸಮಯಾವಧಿಯನ್ನು ಮರುಹೊಂದಿಸುವ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಹೆಚ್ಚಿವೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 18ರಿಂದ 22ರ ತನಕ ವಿಶೇಷ ಅಧಿವೇಶನ ನಡೆಸುವುದಾಗಿ ಘೋಷಿಸಿದೆ ಬೆನ್ನಿಗೆ ಈ ವಿದ್ಯಮಾನ ನಡೆದಿರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಮುಂಬರುವ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಐದು ರಾಜ್ಯಗಳು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವಂತೆಯೇ ಸಮಿತಿಯ ರಚನೆ ಆಗಿದೆ. ಪಂಚ ರಾಜ್ಯ ಚುನಾವಣೆ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ನಡೆಯುತ್ತವೆ. ಲೋಕಸಭೆ ಚುನಾವಣೆ ಮೇ-ಜೂನ್ 2024 ರಲ್ಲಿ ನಿರೀಕ್ಷಿಸಲಾಗಿದೆ. ಆದ್ದರಿಂದ ಸರ್ಕಾರದ ಇತ್ತೀಚಿನ ನಡೆಗಳು ಲೋಕಸಭೆ ಚುನಾವಣೆಗೆ ಹೊಂದಿಕೆಯಾಗುವಂತೆ ಈ ಕೆಲವು ಚುನಾವಣೆಗಳನ್ನು ನಡೆಸಲು ಸರ್ಕಾರವು ಆಲೋಚನೆ ನಡೆಸುತ್ತಿದೆ ಎಂಬುದನ್ನು ಸೂಚಿಸುವಂತೆ ಇದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳೆರಡಕ್ಕೂ ಚುನಾವಣಾ ಚಕ್ರಗಳನ್ನು ಏಕೀಕರಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಬೆಂಬಲಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಪರಿಶೋಧನಾ ಸಮಿತಿಯ ನೇತೃತ್ವ ವಹಿಸಲು ಕೋವಿಂದ್ ಅವರನ್ನು ನಾಮನಿರ್ದೇಶನ ಮಾಡುವ ನಿರ್ಧಾರವು ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸರ್ಕಾರಕ್ಕೆ ಇರುವ ಶ್ರದ್ಧೆಯನ್ನು ದೃಢೀಕರಿಸುತ್ತದೆ. ಚುನಾವಣೆಗಳ ಸರಣಿಯು ಮುಂದಿರುವ ಕಾರಣ ಇದು ವಿಶೇಷ ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ.

ಏನಿದು ಒಂದು ದೇಶ ಒಂದು ಚುನಾವಣೆ

ಭಾರತದಲ್ಲಿ "ಒಂದು ರಾಷ್ಟ್ರ, ಒಂದು ಚುನಾವಣೆ" ಪರಿಕಲ್ಪನೆಯು ಲೋಕಸಭೆಗೆ ಮತ್ತು ಎಲ್ಲಾ ರಾಜ್ಯ ಅಸೆಂಬ್ಲಿಗಳಿಗೆ ಚುನಾವಣೆಗಳನ್ನು ಹೊಂದಿಸುವ ಗುರಿಯನ್ನು ಇಟ್ಟುಕೊಂಡಿದೆ. ಈ ಚುನಾವಣೆಗಳನ್ನು ಒಂದೇ ದಿನದಲ್ಲಿ ಅಥವಾ ನಿರ್ದಿಷ್ಟ ಕಾಲಮಿತಿಯೊಳಗೆ ಏಕಕಾಲದಲ್ಲಿ ನಡೆಸುವ ಆಲೋಚನೆ ಇದೆ.

ಒಂದು ದೇಶ ಒಂದು ಚುನಾವಣೆಯ ಪ್ರಯೋಜನ

ಯಾವಾಗಲೂ ಚುನಾವಣಾ ಮೂಡ್‌ನಲ್ಲಿರುವುದಕ್ಕಿಂತ ಹೆಚ್ಚಾಗಿ ಸರ್ಕಾರವು ಆಡಳಿತದ ಮೇಲೆ ಹೆಚ್ಚು ಗಮನಹರಿಸಬಹುದು. ಇದು ಆಗಾಗ್ಗೆ ನೀತಿ ಅನುಷ್ಠಾನಕ್ಕೆ ಅಡ್ಡಿಯಾಗುತ್ತದೆ. ಅದೂ ಅಲ್ಲದೆ, ಚುನಾವಣೆಗಳನ್ನು ನಡೆಸುವ ವೆಚ್ಚವನ್ನು ಕಡಿಮೆ ಮಾಡುವುದು ಪ್ರಾಥಮಿಕ ಪ್ರಯೋಜನಗಳಲ್ಲಿ ಒಂದಾಗಿದೆ. ಪ್ರತ್ಯೇಕ ಪ್ರತ್ಯೇಕ ಚುನಾವಣೆ ನಡೆಸಲು ಹೆಚ್ಚಿನ ಹಣಕಾಸಿನ ಸಂಪನ್ಮೂಲಗಳು ಬೇಕಾಗುತ್ತವೆ. ಏಕಕಾಲಿಕ ಚುನಾವಣೆಗಳು ಆಡಳಿತಾತ್ಮಕ ಮತ್ತು ಭದ್ರತಾ ಪಡೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಇಲ್ಲದಿದ್ದರೆ ಅವರು ಚುನಾವಣಾ ಕರ್ತವ್ಯಗಳಲ್ಲಿ ಹಲವಾರು ಬಾರಿ ತೊಡಗಿಸಿಕೊಳ್ಳುವುದು ತಪ್ಪುವುದಿಲ್ಲ.

ಒಂದು ದೇಶ ಒಂದು ಚುನಾವಣೆ ಸವಾಲುಗಳೇನು

ಒಂದು ದೇಶ ಒಂದು ಚುನಾವಣೆ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು, ಸಂವಿಧಾನ ಮತ್ತು ಇತರ ಕಾನೂನು ಚೌಕಟ್ಟುಗಳಲ್ಲಿ ಬದಲಾವಣೆಗಳ ಅಗತ್ಯವಿದೆ. ಅಲ್ಲದೆ, ಪ್ರಾದೇಶಿಕ ಸಮಸ್ಯೆಗಳು ರಾಷ್ಟ್ರೀಯ ಸಮಸ್ಯೆಗಳಿಂದ ಮುಚ್ಚಿಹೋಗಿ ರಾಜ್ಯ ಮಟ್ಟದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಎಲ್ಲಾ ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡಿಸುವುದು ಗಮನಾರ್ಹ ಸವಾಲಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.