ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಂಗಳೂರು, ಚೆನ್ನೈ ನಗರಗಳಲ್ಲಿ ಅಪ್‌ಸ್ಕಿಲ್ಲಿಂಗ್ ಮನೋಭಾವ ಹೆಚ್ಚು, ಶೇಕಡ 80ಕ್ಕೂ ಹೆಚ್ಚು ವೃತ್ತಿಪರರಲ್ಲಿ ಕೌಶಲಾಭಿವೃದ್ಧಿ ಚಿಂತನೆ- ವರದಿ

ಬೆಂಗಳೂರು, ಚೆನ್ನೈ ನಗರಗಳಲ್ಲಿ ಅಪ್‌ಸ್ಕಿಲ್ಲಿಂಗ್ ಮನೋಭಾವ ಹೆಚ್ಚು, ಶೇಕಡ 80ಕ್ಕೂ ಹೆಚ್ಚು ವೃತ್ತಿಪರರಲ್ಲಿ ಕೌಶಲಾಭಿವೃದ್ಧಿ ಚಿಂತನೆ- ವರದಿ

ವೃತ್ತಿ ಕ್ಷೇತ್ರಗಳಲ್ಲಿ ಕೌಶಲಾಭಿವೃದ್ದಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ನಿರಂತರ ಬದಲಾಗುತ್ತಿರುವ ಕಾರ್ಯಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲು ಇದು ಅನಿವಾರ್ಯ. ಗ್ರೇಟ್‌ ಲರ್ನಿಂಗ್ ವರದಿ ಪ್ರಕಾರ, ಬೆಂಗಳೂರು, ಚೆನ್ನೈ ನಗರಗಳಲ್ಲಿ ಅಪ್‌ಸ್ಕಿಲ್ಲಿಂಗ್ ಮನೋಭಾವ ಹೆಚ್ಚು, ಶೇಕಡ 80ಕ್ಕೂ ಹೆಚ್ಚು ವೃತ್ತಿಪರರಲ್ಲಿ ಕೌಶಲಾಭಿವೃದ್ಧಿ ಚಿಂತನೆ ಇದೆ. ಇದವರ ವಿವರ ಇಲ್ಲಿದೆ.

ಬೆಂಗಳೂರು, ಚೆನ್ನೈ ನಗರಗಳಲ್ಲಿ ಅಪ್‌ಸ್ಕಿಲ್ಲಿಂಗ್ ಮನೋಭಾವ ಹೆಚ್ಚು, ಶೇಕಡ 80ಕ್ಕೂ ಹೆಚ್ಚು ವೃತ್ತಿಪರರಲ್ಲಿ ಕೌಶಲಾಭಿವೃದ್ಧಿ ಚಿಂತನೆ- ವರದಿ (ಸಾಂಕೇತಿಕ ಚಿತ್ರ)
ಬೆಂಗಳೂರು, ಚೆನ್ನೈ ನಗರಗಳಲ್ಲಿ ಅಪ್‌ಸ್ಕಿಲ್ಲಿಂಗ್ ಮನೋಭಾವ ಹೆಚ್ಚು, ಶೇಕಡ 80ಕ್ಕೂ ಹೆಚ್ಚು ವೃತ್ತಿಪರರಲ್ಲಿ ಕೌಶಲಾಭಿವೃದ್ಧಿ ಚಿಂತನೆ- ವರದಿ (ಸಾಂಕೇತಿಕ ಚಿತ್ರ)

ನವದೆಹಲಿ: ಬೆಂಗಳೂರು ಮತ್ತು ಚೆನ್ನೈನ ವೃತ್ತಿಪರರ ಪೈಕಿ ಶೇಕಡ 87 ಉದ್ಯೋಗಿಗಳು 2024-25ರಲ್ಲಿ ಉನ್ನತ ಕೌಶಲ ಗಳಿಸುವ ಉದ್ದೇಶ ಹೊಂದಿರುವುದಾಗಿ ಗ್ಲೋಬಲ್ ಎಡ್-ಟೆಕ್ ಗ್ರೇಟ್ ಲರ್ನಿಂಗ್ ಸೋಮವಾರ ಬಿಡುಗಡೆ ಮಾಡಿದ ಅಪ್‌ಸ್ಕಿಲ್ಲಿಂಗ್ ವರದಿ ವಿವರಿಸಿದೆ.

ಗ್ರೇಟ್ ಲರ್ನಿಂಗ್ ತನ್ನ ಮೂರನೇ ಆವೃತ್ತಿಯ 'ಅಪ್‌ಸ್ಕಿಲ್ಲಿಂಗ್ ಟ್ರೆಂಡ್ಸ್ ರಿಪೋರ್ಟ್ 2024-25' ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ, ಸಮೀಕ್ಷೆಗೊಳಪಟ್ಟವರ ಪೈಕಿ 79% ವೃತ್ತಿಪರರು ಆರ್ಥಿಕ ವರ್ಷ 25ರಲ್ಲಿ ತಮ್ಮ ಭವಿಷ್ಯದ ವೃತ್ತಿಜೀವನವನ್ನು ಭದ್ರ ಪಡಿಸಿಕೊಳ್ಳಲು ಕೌಶಲ್ಯಾಭಿವೃದ್ಧಿಯ ಅಗತ್ಯವನ್ನು ಮನಗಂಡಿರುವುದು ಕಂಡುಬಂದಿದೆ.

ಸಂಶೋಧನಾ ಏಜೆನ್ಸಿಯ ಸಹಯೋಗದೊಂದಿಗೆ ಗ್ರೇಟ್ ಲರ್ನಿಂಗ್ ಸಂಸ್ಥೆಯು ಮುಂದಿನ ವರ್ಷದಲ್ಲಿ ಭಾರತೀಯ ವೃತ್ತಿಪರರ ಕೌಶಲ್ಯಾಭಿವೃದ್ಧಿ ಆದ್ಯತೆಗಳ ಮೇಲೆ ಪ್ರಭಾವ ಬೀರುವ ಪ್ರಮುಖ ಟ್ರೆಂಡ್ ಗಳು ಮತ್ತು ಅಂಶಗಳನ್ನು ಪತ್ತೆಹಚ್ಚಲು ಪ್ರಮುಖ ವಲಯಗಳಾದ್ಯಂತ 1000 ವೃತ್ತಿಪರರೊಂದಿಗೆ ಸಮಗ್ರ ಅಧ್ಯಯನವನ್ನು ನಡೆಸಿತು. ಈ ವರದಿಯು ಟ್ರೆಂಡ್‌ಗಳು ಉದ್ಯೋಗಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಯಾವ ಕೌಶಲ್ಯಗಳ ಅಗತ್ಯವಿದೆ ಎಂಬುದನ್ನು ಊಹಿಸಲು ಮತ್ತು ಸ್ಪರ್ಧೆಯಲ್ಲಿ ಉಳಿಯಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ವೃತ್ತಿಪರರು ಮತ್ತು ಬಿಸಿನೆಸ್ ಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.

ಟ್ರೆಂಡಿಂಗ್​ ಸುದ್ದಿ

ಐಟಿ/ಟೆಲಿಕಾಂ/ಟೆಕ್ ವಲಯದಲ್ಲಿ ಕೌಶಲಾಭಿವೃದ್ಧಿ ಮುಖ್ಯ ಎಂಬ ಭಾವನೆ

ಉದ್ಯೋಗಿಗಳ ಪೈಕಿ 17 ವರ್ಷಗಳ ಅನುಭವ ಹೊಂದಿರುವ ವೃತ್ತಿಪರರು ಕೂಡ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂಬುದಾಗಿ ಪ್ರತಿಕ್ರಿಯಿಸಿದವರಲ್ಲಿ ಶೇಕಡ 92 ರಷ್ಟು ಮಂದಿ ತಿಳಿಸಿದ್ದಾರೆ. ಇಂಜಿನಿಯರಿಂಗ್ ಪದವಿಗಳನ್ನು ಹೊಂದಿರುವ ವೃತ್ತಿಪರರು ಮತ್ತು ಐಟಿ/ಟೆಲಿಕಾಂ/ಟೆಕ್ ವಲಯದಲ್ಲಿ ಉದ್ಯೋಗದಲ್ಲಿರುವವರು ಅವರಿಗೆ ಕೌಶಲ್ಯಾಭಿವೃದ್ಧಿ ಬಹಳ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ವರದಿ ಹೇಳಿದೆ.

ಇದಕ್ಕೆ ಪೂರಕವಾಗಿ, ನೌಕ್ರಿ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಐಟಿ ವಲಯದಲ್ಲಿನ ನೇಮಕಾತಿ ಶೇಕಡ 16 ರಷ್ಟು ಕಡಿಮೆಯಾಗಿದೆ. ತಂತ್ರಜ್ಞಾನದ ಸವಾಲುಗಳು ಮತ್ತು ಬದಲಾಗುತ್ತಿರುವ ಮಾರುಕಟ್ಟೆ ಏರುಪೇರುಗಳಿಂದಾಗಿ ಭಾರತದಲ್ಲಿನ ಕೈಗಾರಿಕೆಗಳು ಕ್ಷಿಪ್ರ ಬದಲಾವಣೆಗೆ ಸಾಕ್ಷಿಯಾಗುತ್ತಿವೆ ಮತ್ತು ಉದ್ಯೋಗದಾತರ ನಿರೀಕ್ಷೆಗಳನ್ನು ಪೂರೈಸಲು ಹೊಸ ವಿಶೇಷ ಕೌಶಲ್ಯಗಳನ್ನು ಪಡೆಯುವ ಅಗತ್ಯತೆಯ ಬಗ್ಗೆ ವೃತ್ತಿಪರರು ಹೆಚ್ಚು ಜಾಗೃತರಾಗುತ್ತಿದ್ದಾರೆ. ಇನ್ನೊಂದೆಡೆ, ತಾಂತ್ರಿಕ ಅಡಚಣೆಗಳು ಮತ್ತು ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಕಾರಣದಿಂದ ಭಾರತೀಯ ವೃತ್ತಿಪರರಲ್ಲಿ ಉದ್ಯೋಗ ಧಾರಣ ವಿಶ್ವಾಸವು ಶೇಕಡ 62ಕ್ಕೆ ಕುಸಿತ ಕಂಡಿದೆ ಎಂದು ವರದಿ ವಿವರಿಸಿದೆ.

ಭಾರತೀಯ ವೃತ್ತಿಪರರಲ್ಲಿ ತಮ್ಮ ಉದ್ಯೋಗಗಳನ್ನು ಉಳಿಸಿಕೊಳ್ಳುವ ವಿಶ್ವಾಸವು ಗಮನಾರ್ಹವಾಗಿ ಕುಸಿದಿದೆ. ವಿಶೇಷವಾಗಿ ಹಿಂದಿನ ವರ್ಷಕ್ಕಿಂತ ಶೇಕಡ 9 ಕಡಿಮೆ ಆಗಿದೆ. ಕಳೆದ ವರ್ಷದ ಅಧ್ಯಯನದಲ್ಲಿ ಶೇಕಡ 71 ವೃತ್ತಿಪರರು ಉದ್ಯೋಗದಲ್ಲಿ ಉಳಿಯುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದರು, ಆದರೆ ಈ ವರ್ಷ ಆ ಅಂಕಿಅಂಶವು ಶೇಕಡ 62ಕ್ಕೆ ಇಳಿದಿರುವುದನ್ನು ತೋರಿಸಿದೆ.

ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇಕಡ 85 ವೃತ್ತಿಪರರು ಪ್ರಸಕ್ತ ವರ್ಷ ಕೌಶಲ್ಯಾಭಿವೃದ್ಧಿ ಮಾಡಲು ಯೋಜಿಸುತ್ತಿದ್ದಾರೆ. ಬೆಂಗಳೂರು ಮತ್ತು ಚೆನ್ನೈನ ವೃತ್ತಿಪರರಲ್ಲಿ ಈ ಕುರಿತು ಹೆಚ್ಚು ಆಸಕ್ತಿ ಕಾಣಬಹುದು ಎಂದು ವರದಿ ವಿವರಿಸಿದೆ.ಕುತೂಹಲದ ವಿಚಾರವೆಂದರೆ ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ಫ್ರೆಶರ್‌ಗಳ ಸಂಖ್ಯೆಯಲ್ಲಿ ಶೇ.8 ಹೆಚ್ಚಳ ಆಗಿದೆ. ಆರ್ಥಿಕ ವರ್ಷ 24ರಲ್ಲಿ ಶೇಕಡ 75 ಇದ್ದ ಸಂಖ್ಯೆ ಈ ವರ್ಷ ಶೇಕಡ 83ಕ್ಕೆ ಏರಿದೆ.

ಗ್ರೇಟ್ ಲರ್ನಿಂಗ್ ಕೂಡ ಆರ್ಥಿಕ ವರ್ಷ 24ರಲ್ಲಿ ಕೌಶಲ್ಯಾಭಿವೃದ್ಧಿ ಹಂಬಲ ಹೊಂದಿರುವ ಫ್ರೆಷರ್‌ಗಳು ಮತ್ತು ಪ್ರಾರಂಭಿಕ ಹಂತದ ವೃತ್ತಿಪರರ (0-3 ವರ್ಷಗಳ ಕೆಲಸದ ಅನುಭವ ಹೊಂದಿರುವವರು) ಸಂಖ್ಯೆಯಲ್ಲಿ ಶೇಕಡ 18 ಹೆಚ್ಚಳ ಉಂಟಾಗಿರುವುದನ್ನು ಗಮನಿಸಿದೆ. ಆರ್ಥಿಕ ವರ್ಷ 25 ರಲ್ಲಿ ಕೌಶಲ್ಯವನ್ನು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿರುವ ವೃತ್ತಿಪರರು ಉತ್ಪಾದನೆ, ಇಂಜಿನಿಯರಿಂಗ್, ಕ್ಯಾಪಿಟಲ್ ಗೂಡ್ಸ್ ಮತ್ತು ಬಿಎಫ್ಎಸ್ಐ ವಲಯಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ.

ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಅಪ್‌ಸ್ಕಿಲ್ಲಿಂಗ್ ಮನೋಭಾವ ಹೆಚ್ಚು

ಭಾರತದ ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಮತ್ತು ಚೆನ್ನೈ ಈ ವರ್ಷ ಕೌಶಲ್ಯಾಭಿವೃದ್ಧಿಯ ಕುರಿತು ಹೆಚ್ಚಿನ ಉತ್ಸಾಹ ಪ್ರದರ್ಶಿಸಿವೆ. ಈ ಎರಡೂ ನಗರಗಳಲ್ಲಿ ಶೇಕಡ 87 ವೃತ್ತಿಪರರು ಆರ್ಥಿಕ ವರ್ಷ 25 ರಲ್ಲಿ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳಲು ಯೋಜಿಸಿದ್ದಾರೆ. ಸಾಫ್ಟ್‌ ವೇರ್ ಡೆವಲಪ್ಮೆಂಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳ ವೃತ್ತಿಪರರ ನಂತರ ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಕ್ಷೇತ್ರದ ವೃತ್ತಿಪರರು ಆರ್ಥಿಕ ವರ್ಷ 25ರಲ್ಲಿ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳಲು ಬಯಸುತ್ತಿರುವವರಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ. ನೇಮಕಾತಿ ಪಾಲುದಾರರ ಸಮೀಕ್ಷೆಯ ಪ್ರಕಾರ ಈ ಮೂರು ಕ್ಷೇತ್ರಗಳು ಆರ್ಥಿಕ ವರ್ಷ 25ರಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ದೇಶಿಸಿರುವ ಉದ್ಯಮಗಳಾಗಿವೆ.

ಸಂಸ್ಥೆಯೊಳಗೆ ಉಂಟಾಗುವ ವೃತ್ತಿ ಬೆಳವಣಿಗೆಯು ಕೌಶಲ್ಯಾಭಿವೃದ್ಧಿಗೆ ಉತ್ತಮ ಪ್ರೇರಣೆ ಒದಗಿಸುತ್ತದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 17 ಮಂದಿ ವೈಯಕ್ತಿಕ ಆಸಕ್ತಿಗಾಗಿ ಕೌಶಲ್ಯಾಭಿವೃದ್ಧಿ ಆಸಕ್ತಿ ತೋರಿದರೆ, ಶೇಕಡ 39 ವೃತ್ತಿಪರರು ತಾವು ಪ್ರಸ್ತುತ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ವೃತ್ತಿಜೀವನದಲ್ಲಿ ಬೆಳವಣಿಗೆ ಹೊಂದುವ ಕಾರಣಕ್ಕೆ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಕೌಶಲಗಳು ಔಟ್ ಡೇಟೆಡ್ ಆಗುವ ಭಯವು ಶೇಕಡ 15 ವೃತ್ತಿಪರರನ್ನು ಕೌಶಲ್ಯಾಭಿವೃದ್ಧಿಗೆ ಪ್ರೇರೇಪಣೆ ನೀಡುತ್ತದೆ. ಶೇಕಡ 13 ಮಂದಿ ಉದ್ಯೋಗದಾತರ ನಿರೀಕ್ಷೆಗಳನ್ನು ಪೂರೈಸಲು ಕೌಶಲ್ಯಾಭಿವೃದ್ಧಿ ಪ್ರೇರಣೆ ಪಡೆಯುವುದಾಗಿ ತಿಳಿಸಿದ್ದಾರೆ. ಕೌಶಲ್ಯಾಬಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಇರುವ ಸವಾಲುಗಳ ವಿಚಾರಕ್ಕೆ ಬಂದರೆ, ಶೇಕಡ 34 ಮಂದಿ ವೃತ್ತಿಪರರು ಕಛೇರಿ ಕೆಲಸ ಸಿಕ್ಕಾಪಟ್ಟೆ ಇರುವುದೇ ಅತ್ಯಂತ ಮಹತ್ವದ ಅಡಚಣೆಯಾಗಿದೆ ಎಂದು ಹೇಳುತ್ತಾರೆ. ಶೇಕಡ 19 ವೃತ್ತಿಪರರು ಹಣಕಾಸಿನ ನಿರ್ಬಂಧಗಳನ್ನು ತಮ್ಮ ತಡೆಗೋಡೆಗಳಾಗಿ ಹೇಳಿಕೊಂಡಿದ್ದಾರೆ. ಹೆಚ್ಚುವರಿಯಾಗಿ ಶೇಕಡ 14 ಮಂದಿ ಕುಟುಂಬ ಮತ್ತು ಇತರ ಸಾಮಾಜಿಕ ಬದ್ಧತೆಗಳಲ್ಲಿ ಸಮಯ ವ್ಯಯಿಸಬೇಕಾಗಿರುವುದರಿಂದ ಕೌಶಲ್ಯಾಭಿವೃದ್ಧಿಗೆ ಸಮಯ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣವನ್ನು ನೀಡುತ್ತಾರೆ.

“ಕಳೆದ ವರ್ಷದಿಂದ, ಸವಾಲಿನ ಆರ್ಥಿಕ ಪರಿಸ್ಥಿತಿಗಳು ಮತ್ತು ಅಸ್ಥಿರವಾದ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಕಾರಣದಿಂದ ಅನೇಕ ವ್ಯವಹಾರಗಳಿಗೆ ಬಂಡವಾಳವನ್ನು ಗಳಿಸುವುದು ಮತ್ತು ಲಾಭ ಹೆಚ್ಚಿಸುವುದು ಕಷ್ಟಕರವಾಗಿದೆ. ಈ ಕ್ರಿಯಾತ್ಮಕ ವಾತಾವರಣದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ನಿರಂತರ ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿ ಬಹಳ ಮುಖ್ಯ. ವಿಕಸನಗೊಳ್ಳುತ್ತಿರುವ ಉದ್ಯೋಗದಾತರ ಬೇಡಿಕೆಗಳನ್ನು ಪೂರೈಸಲು ವಿಶೇಷ ಕೌಶಲ್ಯಗಳನ್ನು ಪಡೆದುಕೊಳ್ಳುವ ಮೂಲಕ ಈ ಸವಾಲುಗಳನ್ನು ನಿಭಾಯಿಸಲು ವೃತ್ತಿಪರರು ಪೂರ್ವಭಾವಿ ವಿಧಾನವನ್ನು ಅಳವಡಿಸಿಕೊಳ್ಳಬಹುದಾಗಿದೆ. ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಉಪಕ್ರಮಗಳು ಈ ಕುರಿತು ಅರಿವನ್ನು ಹೆಚ್ಚಿಸಿವೆ" ಎಂದು ಗ್ರೇಟ್ ಲರ್ನಿಂಗ್ ಸಹ-ಸಂಸ್ಥಾಪಕ ಹರಿ ಕೃಷ್ಣನ್ ನಾಯರ್ ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.