Padmanabha Acharya: ಈಶಾನ್ಯ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದ ಉಡುಪಿ ಮೂಲದ ಪದ್ಮನಾಭ ಬಾಲಕೃಷ್ಣ ಆಚಾರ್ಯ ನಿಧನ
ಈಶಾನ್ಯ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದ ಉಡುಪಿ ಮೂಲದ ಪದ್ಮನಾಭ ಬಾಲಕೃಷ್ಣ ಆಚಾರ್ಯ (ಪಿ.ಬಿ.ಆಚಾರ್ಯ) ಅವರು ಮುಂಬೈನಲ್ಲಿ ಶುಕ್ರವಾರ (ನ.10) ನಿಧನರಾದರು.
ಮುಂಬಯಿ: ಈಶಾನ್ಯ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದ ಉಡುಪಿ ಮೂಲದ ಪದ್ಮನಾಭ ಬಾಲಕೃಷ್ಣ ಆಚಾರ್ಯ (ಪಿ.ಬಿ.ಆಚಾರ್ಯ) ಅವರು ಇಂದು (ನ.10) ಮುಂಬಯಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ. ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯಪಾಲರಾಗುವ ಮುನ್ನ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಅವರು ಬಿಜೆಪಿಯ ನಾಯಕರಾಗಿದ್ದರು.
ಬಾಲಕೃಷ್ಣ ಆಚಾರ್ಯ ಮತ್ತು ರಾಧಾ ದಂಪತಿಯ ಪುತ್ರನಾಗಿ ಉಡುಪಿ ಜಿಲ್ಲೆಯಲ್ಲಿ 1931ರ ಅಕ್ಟೋಬರ್ 8ರಂದು ಜನಿಸಿದರು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಮೆಟ್ರಿಕ್ಯುಲೇಶನ್ ಉತ್ತೀರ್ಣರಾದ ಅವರು, ಎಂಜಿಎಂ ಕಾಲೇಜಿನಲ್ಲಿ ಪದವಿ ಪಡೆದರು. ಕಾಲೇಜು ಕಲಿಕೆಯ ವೇಳೆ ಎಬಿವಿಪಿಯಲ್ಲಿ ತಮ್ಮನ್ನು ತೊಡಗಿಸಿದ್ದರು. ಮುಂಬಯಿ ವಿವಿಯ ಸೆನೆಟ್ ಮೆಂಬರ್ ಆಗಿದ್ದರು. ಮುಂಬಯಿ ವಿವಿಯಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು.
ರಾಜ್ಯಪಾಲರು ಎಲ್ಲೆಲ್ಲಿ ಯಾವಾಗ
ಆಚಾರ್ಯ ಅವರು ಬಿಜೆಪಿಯಲ್ಲಿ ಹಲವಾರು ಪ್ರಮುಖ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದರು. ಜುಲೈ 2014 ರಲ್ಲಿ ನಾಗಾಲ್ಯಾಂಡ್ ರಾಜ್ಯಪಾಲರಾಗಿ ನೇಮಕಗೊಂಡರು. ವಿವಿಧ ಸಂದರ್ಭಗಳಲ್ಲಿ, ಅವರು ವಿವಿಧ ಅವಧಿಗಳಿಗೆ ಅಸ್ಸಾಂ, ತ್ರಿಪುರಾ, ಮಣಿಪುರ ಮತ್ತು ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಹೆಚ್ಚುವರಿ ಪ್ರಭಾರವನ್ನು ಹೊಂದಿದ್ದರು. ಪಿ.ಬಿ. ಆಚಾರ್ಯ ಅವರು ಈಶಾನ್ಯ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದರು.
ಮಣಿಪುರದ ರಾಜ್ಯಪಾಲ - 27.06.2019ರಿಂದ 23.07.2019
ನಾಗಾಲ್ಯಾಂಡ್ ರಾಜ್ಯಪಾಲ - 19.07.2014ರಿಂದ 31.07.2019
ಅರುಣಾಚಲಪ್ರದೇಶ ರಾಜ್ಯಪಾಲ- 28.01.2017ರಿಂದ 03.10.2017
ತ್ರಿಪುರಾ ರಾಜ್ಯಪಾಲ - 21.07.2014ರಿಂದ 19.05.2015
ಸಂಘ ಪರಿವಾರ ಮತ್ತು ಬಿಜೆಪಿ ಜತೆಗೆ ಸಮಾಜಮುಖಿಯಾಗಿ ಬೆಳೆದವರು
ಉಡುಪಿಯಲ್ಲಿ ತಮ್ಮ ವಿದ್ಯಾರ್ಥಿ ದಿನಗಳಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ವಿವಿಧ ಸಾಮರ್ಥ್ಯಗಳಲ್ಲಿ ಸಂಬಂಧ ಹೊಂದಿದ್ದರು. ಅವರು 1980 ರಲ್ಲಿ ಬಿಜೆಪಿಗೆ ಸೇರಿದರು.
ನಂತರ, ಅವರನ್ನು ಭಾರತೀಯ ಜನತಾ ಪಾರ್ಟಿಯ ಮುಂಬೈ ವಾಯುವ್ಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿ ಮತ್ತು ಈಶಾನ್ಯ ರಾಜ್ಯಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಅಲ್ಲಿ ಅವರು ಹಲವಾರು ಸಾಮಾಜಿಕ ಮತ್ತು ಸಮುದಾಯ ಯೋಜನೆಗಳನ್ನು ಕೈಗೊಂಡರು.
ಅಗಲಿದ ಸಮಾಜಮುಖಿ ನಾಯಕನಿಗೆ ಅಂತಿಮ ನಮನ
ಪಿ.ಬಿ.ಆಚಾರ್ಯ ಅವರಿಗೆ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಮುಂಬಯಿನಲ್ಲೇ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ, ಉಡುಪಿ ಮೂಲದವರಾದ ಶ್ರೀ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ಇಂದು ನಿಧನರಾದ ಸುದ್ಧಿ ದುಃಖ ತಂದಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸಂಘಟನೆಗೆ ದುಡಿದಿದ್ದ ಶ್ರೀಯುತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಬಿಜೆಪಿಯ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.