Security Breach: ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಕರ್ನಾಟಕ ನಂಟು- ನಮಗೆ ತಿಳಿದಿರುವ 5 ಅಂಶಗಳು
ಲೋಕಸಭೆಯಲ್ಲಿ ಭದ್ರತಾ ಲೋಪ ನಡೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಪೈಕಿ ಇಬ್ಬರು ಕರ್ನಾಟಕದವರು. ಅವರಿಗೆ ಪಾಸ್ ನೀಡಿದ್ದು ಮೈಸೂರು ಸಂಸದ ಪ್ರತಾಪ್ ಸಿಂಹ ಎಂದು ಹೇಳಲಾಗಿದ್ದು, ಈ ಕುರಿತು ತನಿಖೆ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದ ಇತ್ತೀಚಿನ 5 ಮುಖ್ಯ ಅಂಶಗಳು ಹೀಗಿವೆ.
ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಎಸಗಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರ ವಿಚಾರಣೆ ವೇಳೆ ಇಬ್ಬರು ಕರ್ನಾಟಕದವರು. ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದು ಲೋಕಸಭೆ ಕಲಾಪ ವೀಕ್ಷಿಸಲು ತೆರಳಿದ್ದರು ಎಂದು ತಿಳಿದುಬಂದಿದೆ.
ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಸಂಸತ್ ದಾಳಿ ನಡೆದು 22 ವರ್ಷ ಇಂದಿಗೆ ಪೂರ್ಣವಾಗಿದ್ದು, ಇದೇ ದಿನ ಈ ಭದ್ರತಾ ಲೋಪ ಜರುಗಿರುವುದು ಕಳವಳಕಾರಿ ಎಂದು ಸಂಸದರು ಹೇಳಿದ್ದಾರೆ. ಭದ್ರತಾ ಲೋಪದ ಬಳಿಕ ಸಂಸತ್ ಕಲಾಪ ಮುಂದುವರಿದಿದೆ. ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಸ್ಪೀಕರ್ ಲೋಕಸಭೆಯ ಸದಸ್ಯರಿಗೆ ಭರವಸೆ ನೀಡಿದ್ದಾರೆ.
ಭದ್ರತಾ ಲೋಪ ಪ್ರಕರಣದಲ್ಲಿ ಕರ್ನಾಟಕದ ನಂಟು - ಗಮನಿಸಬೇಕಾದ 5 ಅಂಶಗಳು
1. ಲೋಕಸಭೆಯ ಕಲಾಪ ಸ್ಥಳಕ್ಕೆ ನುಗ್ಗಿದ ಯುವಕ ಮತ್ತು ಸಂಗಡಿಗರ ಪೈಕಿ ಇಬ್ಬರು ಕರ್ನಾಟಕದವರು. ಒಬ್ಬನ ಹೆಸರು ಸಾಗರ್ ಶರ್ಮಾ ಮತ್ತು ಇನ್ನೊಬ್ಬ ಇಂಜಿನಿಯರ್ ಆಗಿದ್ದು ಮನೋರಂಜನ್ ಎಂದು ಗುರುತಿಸಲಾಗಿದೆ. ಲೋಕಸಭೆ ಕಲಾಪ ಸ್ಥಳಕ್ಕೆ ನುಗ್ಗಿ ದಾಂದಲೆ ಮಾಡಿದಾತ ಸಾಗರ್ ಶರ್ಮಾ. ಮೈಸೂರಿನಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಂಸತ್ ಒಳಗಿದ್ದ ಇವರಿಬ್ಬರೂ ಈಗ ಪೊಲೀಸ್ ವಶದಲ್ಲಿದ್ದು ವಿಚಾರಣೆ ಎದುರಿಸಿದ್ದಾರೆ.
2. ಮನೋರಂಜನ್ ಇಂಜಿನಿಯರ್ ಆಗಿದ್ದು, 2014ರಲ್ಲಿ ಶಿಕ್ಷಣ ಮುಗಿಸಿ ಕೆಲ ವರ್ಷ ಕೆಲಸ ಮಾಡಿ ಬಳಿಕ ಸ್ವತಂತ್ರವಾಗಿ ವೃತ್ತಿ ಜೀವನ ನಡೆಸುತ್ತಿದ್ದ. ಈ ಕುರಿತು ಅವರ ತಂದೆ ದೇವರಾಜ್ ಗೌಡ ಮಾತನಾಡಿದ್ದು, ಮಗ ಒಳ್ಳೆಯವನು. ಸಂಸತ್ತಿನ ಭದ್ರತಾ ಲೋಪದ ಕೇಸ್‌ನಲ್ಲಿ ಮನೋರಂಜನ್ ತಪ್ಪಿತಸ್ಥ ಎಂದಾದರೆ ಆತನಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ವಿವರ ಓದಿಗೆ - ಲೋಕಸಭೆ ಭದ್ರತಾ ಲೋಪ ಕೇಸ್‌ನಲ್ಲಿ ಬಂಧಿತ ಮನೋರಂಜನ್ ಯಾರು, ತಂದೆ ದೇವರಾಜ್ ಹೇಳಿಕೆಯ 5 ಮುಖ್ಯ ಅಂಶಗಳು
3. ಸಾಗರ್ ಶರ್ಮಾ ಎಂಬಾತನಿಗೆ ನೀಡಲಾಗಿದ್ದ ಸಂಸತ್ ಪ್ರವೇಶದ ಪಾಸ್‌ನಲ್ಲಿ ಪ್ರತಾಪ್ ಸಿಂಹ ಹೆಸರಿದೆ. ಸಾಗರ್ ಮತ್ತು ಮನೋರಂಜನ್‌ಗೆ ಪ್ರತಾಪ್ ಸಿಂಹ ಅವರು ಪಾಸ್ ನೀಡಿದ್ದಾರೆ ಎಂದು ಹೇಳಲಾಗಿದೆ. ಪ್ರತಾಪ್ ಸಿಂಹ ಅವರ ಆಪ್ತ ಕಾರ್ಯದರ್ಶಿ ಹೆಸರು ಕೂಡ ಸಾಗರ್ ಎಂದು ಹೇಳಲಾಗುತ್ತಿದ್ದು, ಸ್ಪಷ್ಟ ವಿವರ ಇನ್ನೂ ಬಹಿರಂಗವಾಗಿಲ್ಲ.
4. ಪ್ರತಾಪ್ ಸಿಂಹ ದೆಹಲಿಯಲ್ಲಿ ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ್ದಾರೆ ಎಂದು ಟಿವಿ9 ಕನ್ನಡ ವರದಿ ಮಾಡಿದ್ದು, ಮೈಸೂರು ಕಚೇರಿಯಿಂದ ಪಾಸ್ ನೀಡುವಂತೆ ಕೇಳಲಾಗಿತ್ತು. ಬಹಳ ಒತ್ತಡ ಹೇರಿದ ಕಾರಣ ಪಾಸ್ ನೀಡಲಾಗಿತ್ತು ಎಂದು ಪ್ರತಾಪ್ ಸಿಂಹ ಹೇಳಿದ್ದಾಗಿ ವರದಿ ಹೇಳಿದೆ.
5. ಸಂಸತ್ ಠಾಣೆಯ ಪೊಲೀಸರು ನಾಲ್ವರ ವಿಚಾರಣೆ ಮುಂದುವರಿಸಿದ್ದು, ಸಂಸದ ಪ್ರತಾಪ್ ಸಿಂಹ ಮತ್ತು ಅವರ ಆಪ್ತ ಕಾರ್ಯದರ್ಶಿಯ ಹೇಳಿಕೆಯನ್ನು ದಾಖಲಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಭದ್ರತಾಲೋಪದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ)
ಸಂಸತ್ತಿನ ಭದ್ರತಾ ಲೋಪದ ಕುರಿತು ಎಫ್‌ಎಸ್ಎಲ್, ಎಸ್‌ಐಟಿ ಮತ್ತು ವಿವಿಧ ತನಿಖಾ ಸಂಸ್ಥೆಗಳ ತನಿಖೆ ನಡೆಸುತ್ತಿವೆ. ಲೋಕಸಭೆ ಕಲಾಪ ಸ್ಥಳದಲ್ಲಿ ಯುವಕ ತೇಲಿಬಿಟ್ಟ ಹಳದಿ ಹೊಗೆ ಯಾವುದರದ್ದು, ಆತನ ಬಳಿ ಇದ್ದ ವಸ್ತು ಯಾವುದು, ಬಿಗಿ ಭದ್ರತೆ ಮೀರಿ ಆತ ಅದನ್ನು ಒಳಗೆ ತೆಗೆದುಕೊಂಡು ಹೋಗಿದ್ದು ಹೇಗೆ ಎಂಬಿತ್ಯಾದಿ ವಿಚಾರಗಳು ತನಿಖೆ ವೇಳೆ ಮುನ್ನೆಲೆಗೆ ಬಂದಿವೆ.
ಈ ನಡುವೆ, ಇನ್ನು ಮುಂದೆ ಪ್ರೇಕ್ಷಕರಿಗೆ ಸಂಸತ್ ಕಲಾಪ ನೋಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಪ್ರಕಟಿಸಿದರು.