ಸಂಸತ್ತಿನ ವಿಶೇಷ ಅಧಿವೇಶನ ಸೆಪ್ಟೆಂಬರ್ 18 ರಿಂದ 5 ದಿನ, ಕಾರ್ಯಸೂಚಿ ಮತ್ತು ಇತರೆ ವಿವರ ಹೀಗಿದೆ
ಸಂಸತ್ತಿನ ವಿಶೇಷ ಅಧಿವೇಶನ ಸೆಪ್ಟೆಂಬರ್ 18ರಿಂದ ಶುರುವಾಗಲಿದೆ. ಐದು ದಿನದ ಅಧಿವೇಶನವು ಸಂವಿಧಾನ್ ಸಭಾ ಕಾರ್ಯಕ್ರಮದೊಂದಿಗೆ ಶುರುವಾಗಲಿದೆ. ಸಂಸತ್ ಕಲಾಪಕ್ಕೆ 75 ವರ್ಷದ ಹಿನ್ನೆಲೆಯಲ್ಲಿ ಈ ವಿಶೇಷ ಅಧಿವೇಶನ ನಡೆಯಲಿದ್ದು, ಕಾರ್ಯಸೂಚಿ ಮತ್ತು ಇತರೆ ವಿವರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಸಂಸತ್ತಿನ ವಿಶೇಷ ಅಧಿವೇಶನ (Parliament Special Session) ಸೆಪ್ಟೆಂಬರ್ 18ರಿಂದ ಐದು ದಿನಗಳ ಕಾಲ ನಡೆಯಲಿದ್ದು, ‘ಸಂವಿಧಾನ್ ಸಭಾ’(Samvidhan Sabha)ದೊಂದಿಗೆ ಅಧಿವೇಶನದ ಕಲಾಪ ಶುರುವಾಗಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ (ಸೆ.14) ತಿಳಿಸಿದೆ. ಇದೇ ವೇಳೆ ವಿಶೇಷ ಅಧಿವೇಶದ ಕಾರ್ಯಸೂಚಿಯನ್ನು ಅದು ಬಹಿರಂಗಪಡಿಸಿದೆ.
ಇದರಂತೆ, ಸಂಸತ್‌ನ ವಿಶೇಷ ಅಧಿವೇಶನವು ಸಂಸತ್ತಿನ 75 ವರ್ಷಗಳ ಪ್ರಯಾಣವನ್ನು ನೆನಪಿಸುವ ರೀತಿ ಇರಲಿದೆ. 1946ರ ಡಿಸೆಂಬರ್ 9ರಂದು ನಡೆದ ಮೊದಲ ಅಧಿವೇಶನದಿಂದ ಇಲ್ಲಿ ತನಕ ಆಗಿರುವ 75 ವರ್ಷಗಳ ಅಧಿವೇಶನ ಕಲಾಪಗಳ ಮೇಲಿನ ಚರ್ಚೆ, ನೆನಪುಗಳು ಈ ಅಧಿವೇಶನದಲ್ಲಿ ಗಮನಸೆಳೆಯಲಿವೆ.
ಕಾರ್ಯಸೂಚಿಯಲ್ಲಿದೆ 4 ಪ್ರಮುಖ ಮಸೂದೆ ಅಂಗೀಕಾರದ ವಿಚಾರ
ಇದಲ್ಲದೆ, ನಾಲ್ಕು ಮಸೂದೆಗಳನ್ನು ಅಂಗೀಕರಿಸುವ ವಿಚಾರವೂ ವಿಶೇಷ ಅಧಿವೇಶನದ ಕಾರ್ಯಸೂಚಿಯಲ್ಲಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿಯನ್ನು ನಿಯಂತ್ರಿಸುವ ಮಸೂದೆ ಕೂಡ ಈ ಕಾರ್ಯಸೂಚಿಯಲ್ಲಿದೆ. ಈ ಮಸೂದೆ ಈಗಾಗಲೇ ಆಗಸ್ಟ್ 10ರಂದು ಮುಂಗಾರು ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಂಡನೆ ಆಗಿತ್ತು.
ಇದನ್ನೂ ಓದಿ| ಸಂಸತ್ ಸಿಬ್ಬಂದಿಗೆ ಹೊಸ ಯೂನಿಫಾರಂ: ಕಮಲ ಚಿಹ್ನೆ ಬಳಕೆಗೆ ಪ್ರತಿಪಕ್ಷಗಳ ಆಕ್ಷೇಪ
ಅದೇ ರೀತಿ ಅಡ್ವೋಕೇಟ್ಸ್ (ತಿದ್ದುಪಡಿ) ಮಸೂದೆ 2023, ದ ಪ್ರೆಸ್ ಆಂಡ್ ರಿಜಿಸ್ಟ್ರೇಶನ್ ಆಫ್ ಪಿರಿಯಾಡಿಕಲ್ಸ್ ಬಿಲ್ 2023 ಅನ್ನು ರಾಜ್ಯಸಭೆ 2023ರ ಆಗಸ್ಟ್ 3 ರಂದು ಅಂಗೀಕರಿಸಿತ್ತು. ಇದು ಕೂಡ ಈ ಲೋಕಸಭೆ ಅಧಿವೇಶನದ ಕಾರ್ಯಸೂಚಿಯಲ್ಲಿದೆ. ಇದರಲ್ಲಿ ವಕೀಲರ ತಿದ್ದುಪಡಿ ಮಸೂದೆಯು 1961ರ ಕಾಯ್ದೆಯನ್ನು ಮತ್ತು ಪ್ರೆಸ್ ಆಂಡ್ ರಿಜಿಸ್ಟ್ರೇಶನ್ ಆಫ್ ಪಿರಿಯಾಡಿಕಲ್ಸ್ ಮಸೂದೆಯು 1867ರ ಪ್ರೆಸ್ ಆಂಡ್ ರಿಜಿಸ್ಟ್ರೇಶನ್ ಆಫ್ ಬುಕ್ಸ್ ಕಾಯ್ದೆಯ ಸ್ಥಾನವನ್ನು ತುಂಬಲಿದೆ. ಹಾಗೆಯೇ, 189ರ ಇಂಡಿಯನ್ ಪೋಸ್ಟ್ ಆಫೀಸ್ ಕಾಯ್ದೆ ಜಾಗಕ್ಕೆ ಪೋಸ್ಟ್ ಆಫೀಸ್ ಬಿಲ್ 2023 ಅಂಗೀಕಾರವಾಗಿ ಜಾರಿಗೆ ಬರಲಿದೆ.
ಇದನ್ನೂ ಓದಿ| ಹೆಚ್ ಡಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ಸಮನ್ಸ್, ಮಧ್ಯಂತರ ತಡೆ ಕೋರಿದ ಪ್ರಜ್ವಲ್ ರೇವಣ್ಣ; ಇಕ್ಕಟ್ಟಿಗೆ ಸಿಲುಕಿದ ಅಪ್ಪ, ಮಗ
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಕಳೆದ ಸಂಸತ್ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯನ್ನು ಮಂಡಿಸಿದ್ದರು.
ಚುನಾವಣಾ ಆಯುಕ್ತರ ನೇಮಕದ ಸಮಿತಿ
ಈ ಮಸೂದೆಯು ಚುನಾವಣಾ ಆಯೋಗದ ವ್ಯವಹಾರದ ವಹಿವಾಟಿನ ಕಾರ್ಯವಿಧಾನದ ಬಗ್ಗೆಯೂ ವಿವರಣೆ ಹೊಂದಿದೆ. ಅಲ್ಲದೆ, ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಸಂಪುಟ ಸಚಿವರನ್ನು ಒಳಗೊಂಡ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಚುನಾವಣಾ ಆಯುಕ್ತರನ್ನು ನೇಮಿಸುತ್ತಾರೆ ಎಂಬುದನ್ನು ಪ್ರಸ್ತಾಪಿಸಿದೆ. ಪ್ರಧಾನಮಂತ್ರಿಯು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಇದನ್ನೂ ಓದಿ| ಗಣೇಶ ಹಬ್ಬದ ವೇಳೆ ಸಂಸತ್ ವಿಶೇಷ ಅಧಿವೇಶನ: ಹಿಂದೂ ಭಾವನೆಗಳಿಗೆ ವಿರುದ್ಧವಾದುದು ಎಂದು ಪ್ರತಿಪಕ್ಷಗಳು ಕಿಡಿ
ಮಸೂದೆ ಜಾರಿಗೆ ಬಂದರೆ, ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಚುನಾವಣಾ ಆಯುಕ್ತರ ನೇಮಕವನ್ನು ರಾಷ್ಟ್ರಪತಿಗಳು ಮಾಡುತ್ತಾರೆ ಎಂಬ ಸುಪ್ರೀಂ ಕೋರ್ಟ್‌ನ 2023ರ ಮಾರ್ಚ್ ತಿಂಗಳ ತೀರ್ಪನ್ನು ಅನೂರ್ಜಿತಗೊಳಿಸುತ್ತದೆ.
ವಿಶೇಷ ಅಧಿವೇಶನ ಶುರುವಾಗುವ ಮುನ್ನಾದಿನ ಸೆ.17ರಂದು ಸರ್ವಪಕ್ಷ ನಾಯಕರ ಸಭೆಯನ್ನೂ ಕೇಂದ್ರ ಸರ್ಕಾರ ಆಯೋಜಿಸಿದೆ.